ಬೆಂಗಳೂರು,ಮಾರ್ಚ್,8,2022(www.justkannada.in): ಗದಗ ಜಿಲ್ಲೆ ಮುಂಡರಗಿಯಲ್ಲಿ ರೈತ ಮಹಿಳೆ ನಿರ್ಮಲಾ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರ ವಿಷಯ ಪ್ರಸ್ತಾಪಕ್ಕೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸಹ ಧ್ವನಿಗೂಡಿಸಿದರು.
ಗದಗ ಜಿಲ್ಲೆ ಮುಂಡರಗಿಯಲ್ಲಿ ಬಗರ್ ಹುಕುಂ ಸಾಗುವಳಿ ರೈತರನ್ನು ಒಕ್ಕಲೆಬ್ಬಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ರೈತ ಮಹಿಳೆಯರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಚಿಕಿತ್ಸೆ ಫಲಿಸದೇ ಓರ್ವ ಮಹಿಳೆ ಸಾವನ್ನಪ್ಪಿದ್ದರೆ ಮತ್ತೋರ್ವ ರೈತ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರವನ್ನ ಇಂದು ಸದನದಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ಹೆಚ್.ಕೆ.ಪಾಟೀಲ್, ಬಗರ್ ಹುಕುಂ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ಹೆಚ್.ಕೆ.ಪಾಟೀಲ್ ಪ್ರಸ್ತಾಪಕ್ಕೆ ಧ್ವನಿಗೂಡಿಸಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಇದೊಂದು ಗಂಭೀರ ಪ್ರಕರಣವಾಗಿದೆ. ಬಗರ್ ಹುಕುಂ ಸಮಸ್ಯೆಯನ್ನು ಸಿಎಂ ಬೊಮ್ಮಾಯಿ ಆದಷ್ಟು ಬೇಗ ಬಗೆಹರಿಸಬೇಕು. ಸಮಸ್ಯೆ ಮುಂದುವರೆದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರಲ್ಲ. ಅದ್ದರಿಂದ ತಕ್ಷಣ ಈ ನಿಟ್ಟಿನಲ್ಲಿ ಸಿಎಂ ಕ್ರಮ ಕೈಗೊಳ್ಳಬೇಕು. ಅಗತ್ಯವಿದ್ದರೆ ಸದನ ಸಮಿತಿ ರಚನೆ ಮಾಡಿ ಎಂದು ಸಲಹೆ ನೀಡಿದರು.
Key words: former CM-BS Yeddyurappa- Congress- MLA