ಬಜರಂಗ ದಳದ ಕಾರ್ಯಕರ್ತನ ಹತ್ಯೆ ಪ್ರಕರಣ: ಬಿಜೆಪಿ, ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ.

ಬೆಂಗಳೂರು,ಫೆಬ್ರವರಿ,21,2022(www.justkannada.in): ಶಿವಮೊಗ್ಗದಲ್ಲಿ ಬಜರಂಗ ದಳದ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.

ಈ ಸಂಬಂಧ ಸರಣಿ ಟ್ವಿಟ್ ಮಾಡಿರುವ ಹೆಚ್.ಡಿ ಕುಮಾರಸ್ವಾಮಿ, ಶಿವಮೊಗ್ಗದಲ್ಲಿ ನಡೆದ ಯುವಕನ ಕೊಲೆ ಅಮಾನವೀಯ. ಆ ಯುವಕನ ಕುಟುಂಬಕ್ಕೆ ನನ್ನ ಸಾಂತ್ವನಗಳು. ಈ ಕೊಲೆಯ ಹಿಂದೆ ಯಾರೇ ಇದ್ದರೂ  ಅವರನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎನ್ನುವುದು ಸರಕಾರಕ್ಕೆ ನನ್ನ ಒತ್ತಾಯ ಎಂದಿದ್ದಾರೆ.

ರಾಜ್ಯದಲ್ಲಿ ಇಂಥ ಘಟನೆಗಳು ಪದೇ ಪದೆ ನಡೆಯುತ್ತವೆ. ಇಂಥ ಘಟನೆಗಳ ಬೆಂಕಿಯಲ್ಲಿ ರಾಷ್ಟ್ರೀಯ ಪಕ್ಷಗಳು ಚಳಿ ಕಾಯಿಸಿಕೊಳ್ಳುತ್ತವೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ರಾಜ್ಯದಲ್ಲಿ ಅಂತವೇ ಕೆಟ್ಟ, ಭಯಾನಕ  ಘಟನೆಗಳು ನಡೆಯುತ್ತಿವೆ.  ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂಥ ಘಟನೆಗಳು ನಡೆಯುತ್ತಿವೆ ಎನ್ನುವುದು ನನ್ನ ಅನುಮಾನ. ರಾಷ್ಟ್ರೀಯ ಪಕ್ಷಗಳಿಗೆ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಜನರ ಬಳಿಗೆ ಹೋಗಲು ವಿಷಯ ಇಲ್ಲ. ಕೇವಲ ಭಾವನಾತ್ಮಕ ಅಂಶಗಳ ಮೂಲಕ ‘ಹಿಂಸಾ ರಾಜಕಾರಣ’ವನ್ನು ಮಾಡಲು ಎರಡೂ ಪಕ್ಷಗಳು ಹೊರಟಿವೆ ಎಂದು ಹೆಚ್ ಡಿಕೆ ಕಿಡಿಕಾರಿದ್ದಾರೆ.

ಹತ್ಯೆಗೀಡಾದ ಯುವಕನಿಗೆ ಮೊದಲೇ ಜೀವ ಬೆದರಿಕೆ ಇತ್ತೆಂದು, ಪೊಲೀಸರಿಗೆ ದೂರು ಕೊಡಲಾಗಿತ್ತು ಎಂದು ಹೇಳುತ್ತಿದ್ದಾರೆ. ಹಾಗಾದರೆ ಆ ಯುವಕನಿಗೆ ರಕ್ಷಣೆ ಯಾಕೆ ಕೊಡಲಿಲ್ಲ. ಇದಕ್ಕೆ ಉತ್ತರ ಬೇಕಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು 2023ರ ಚುನಾವಣೆಗೆ ಸದನದಲ್ಲಿ ಗದ್ದಲ ಎಬ್ಬಿಸುವ ಮೂಲಕ ಟ್ರೈಲರ್ ಬಿಟ್ಟಿದ್ದು, ಸಿನಿಮಾ ಬಾಕಿ ಇದೆ ಎಂದಿದ್ದೆ.

ಶಿವಮೊಗ್ಗ ಘಟನೆಯ ಮೂಲಕ ರಾಷ್ಟ್ರೀಯ ಪಕ್ಷಗಳು ಹಿಂಸಾ ರಾಜಕಾರಣದ ಪೂರ್ಣ ಸಿನಿಮಾ ತೋರಿಸಲು ಹೊರಟಿದ್ದಾರೆ. ಜನರ ಸೂಕ್ಷ್ಮ ಭಾವನೆಗಳು ಹಾಗೂ ಸಮಾಜದ ಶಾಂತಿಯನ್ನು ಅಪಾಯಕ್ಕೆ ಒಡ್ಡಿ ಬೇಳೆ ಬೇಯಿಸಿಕೊಳ್ಳುತ್ತಿರುವ ‘ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣ’ಕ್ಕೆ ಕ್ಷಮೆಯೇ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಈಗ ಒಂದು ಅಮೂಲ್ಯ ಪ್ರಾಣ ಹೋಗಿದೆ. ಅದಕ್ಕೆ ಯಾರು ಹೊಣೆ? ರಾಜಕಾರಣಿಗಳು ಮೂರು ದಿನ ಹೋದ ಪ್ರಾಣದ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸಿ, ಹತ್ತು ಲಕ್ಷ ಪರಿಹಾರ ಕೊಟ್ಟರೆ ಸಾಕೇ?. ಇಂತಹ ಹಿಂಸಾ ಪ್ರವೃತ್ತಿಗೆ ಕೊನೆ ಎಂದು? ಎಂದು ಹೆಚ್.ಡಿಕೆ ಪ್ರಶ್ನಿಸಿದ್ದಾರೆ.

Key words: Former CM -HD Kumaraswamy – against -BJP -Congress