ಬೆಂಗಳೂರು,ಸೆ,23,2019(www.justkannada.in): ರಾಜ್ಯದ ಉಪಚುನಾವಣೆಯಲ್ಲಿ ನಮ್ಮ ಕುಟುಂಬದಿಂದ ಯಾರೂ ಸ್ಪರ್ಧಿಸಲ್ಲ. ಎಷ್ಟೇ ಒತ್ತಡ ಇದ್ದರೂ ಸರಿಸ್ಥಳೀಯರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರ್ತೀವಿ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಪರೇಷನ್ ಕಮಲದ ಎರಡನೇ ಆವೃತ್ತಿ ಇದು. 2008ರಲ್ಲಿ ಒಮ್ಮೆ ಆಗಿತ್ತು. ಈಗ 2019 ರಲ್ಲಿ ಮತ್ತೆ ನಡೆದಿದೆ. ಅಧಿಕಾರಕ್ಕಾಗಿ ಶಾಸಕರ ರಾಜೀನಾಮೆ ಹಿನ್ನೆಲೆಯಲ್ಲಿ ೧೫ ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಆಗಿದೆ. ಪಕ್ಷ ಚುನಾವಣೆ ಎದುರಿಸಲು ಸಜ್ಜಾಗಿದೆ. ಎಲ್ಲ ಜಿಲ್ಲೆಗಳ ಮುಖಂಡರ ಸಭೆಯನ್ನು ಈಗಾಗಲೇ ಜೆಡಿಎಸ್ ವರಿಷ್ಠರು ಸಭೆ ನಡೆಸಿದ್ದಾರೆ. ಇನ್ನು ಎರಡು ದಿನಗಳಲ್ಲಿ ಎಲ್ಲ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡ್ತೀವಿ ಎಂದು ತಿಳಿಸಿದರು.
ದೇವೇಗೌಡರ ಕುಟುಂಬ ಈ ತನಕ ಅನುಭವಿಸಿರುವ ನೋವು ಸಾಕಾಗಿದೆ. ಕೆಲವು ಮಾಧ್ಯಮಗಳಲ್ಲಿ ಮತ್ತೆ ಗೌಡರ ಕುಟುಂಬದ ಸದಸ್ಯರು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡ್ತಾರೆ ಎಂಬ ಸುದ್ದಿ ಇದೆ. ಆದ್ರೆ ಒತ್ತಡ ಇದ್ದರೂ ಸ್ಥಳೀಯರಿಗೇ ಟಿಕೆಟ್ ನೀಡಲಾಗುತ್ತದೆ. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲಿಸಿಕೊಂಡು ಬರ್ತೀವಿ. ನಮ್ಮ ಕುಟುಂಬ ಸದಸ್ಯರು ಯಾರೂ ಉಪ ಕದನ ಆಗಲಿ, ದೊಡ್ಡ ಕದನ ಆಗಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ಸ್ಪಷ್ಟನೆ ನೀಡಿದರು.
ಕೈ ಮತ್ತು ಬಿಜೆಪಿಗಿಂತ ಹೆಚ್ಚು ಸ್ಥಾನ ಗೆಲ್ಲುತ್ತೇವೆ..
ಉಪಚುನಾವಣೆಯಲ್ಲಿ ಎಲ್ಲ ಕ್ಷೇತ್ರವನ್ನೂ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಬಿಜೆಪಿ ಆಡಳಿತದಲ್ಲಿ ಜನ ಈಗಾಗಲೇ ಬೇಸತ್ತಿದ್ದಾರೆ. ನೆರೆ ವಿಷಯದಲ್ಲಿ ಬಿಜೆಪಿ ವರ್ತನೆ ಜನರಲ್ಲಿ ಆಕ್ರೋಶ ಮೂಡಿಸಿದೆ. ಇನ್ನು ಕಾಂಗ್ರೆಸ್ ನಾಯಕರ ಕಿತ್ತಾಟ ಜನರಿಗೆ ಬೇಸರ ಮೂಡಿಸಿದೆ. ಈ ಮಧ್ಯೆ ಜನರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡುತ್ತೇವೆ. ಸ್ವತಂತ್ರ ಸ್ಪರ್ಧೆಯಿಂದ ಜೆಡಿಎಸ್ ಎರಡೂ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚು ಸ್ಥಾನ ಪಡೆಯುತ್ತೇವೆ ಎಂದು ಹೆಚ್.ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.
ಕಳೆದ ಲೋಕಸಭೆ ಚುನಾವಣೆಯಲ್ಲಿ ನಾವು ಶಕ್ತಿ ಮೀರಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ನೆರವು ನೀಡಿ ಹೃದಯ ವೈಶಾಲ್ಯ ಮೆರೆದವು. ಆದ್ರೆ ಕಾಂಗ್ರೆಸ್ ಇಂದ ಈ ಸಹಾಯ ನಮಗೆ ಸಿಗಲಿಲ್ಲ. ಹೀಗಾಗಿ ಯಾರ ಸಹವಾಸವೂ ಬೇಡ ಅಂತ ಸ್ವತಂತ್ರವಾಗಿಯೇ ನಾವು ಉಪ ಚುನಾವಣೆ ಎದುರಿಸುತ್ತೇವೆ ಎಂದರು.
ಮೈಸೂರು ಕಾಂಗ್ರೆಸ್ ಸೋಲು ಸಿದ್ದರಾಮಯ್ಯ ಅವ್ರ ಸ್ವಯಂಕೃತ ಅಪರಾಧ…
ಮೈಸೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲು ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ಮೈಸೂರು ಕಾಂಗ್ರೆಸ್ ಸೋಲು ಸಿದ್ದರಾಮಯ್ಯ ಅವ್ರ ಸ್ವಯಂಕೃತ ಅಪರಾಧ. ಲೋಕಸಭೆ ಸೋಲಿಗೆ ಕಾಂಗ್ರೆಸ್ ಸೋಲು ಅಂತ ನಾನು ಹೇಳೊಲ್ಲ. ನಾನು ಮಾಡಿದ ತಪ್ಪಿನಿಂದ ಸೋಲಾಯ್ತು ಅಂತ ಹೇಳ್ತೀನಿ. ನಿನ್ನೆ ಸಿದ್ಧರಾಮಯ್ಯ ಸ್ವಾಭಿಮಾನದ ಭಾಷಣ ಮಾಡಿದ್ರು. ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಸಾಯ್ತಿದ್ದಾರೆ. ಈಗ ಸಿದ್ದರಾಮಯ್ಯ ಅವ್ರ ಸ್ವಾಭಿಮಾನ ಎಲ್ಲಿ ಹೋಯ್ತು..? ಇವ್ರ ನಾಟಕ ಎಲ್ಲಾ ನನಗೆ ಗೊತ್ತಿದೆ. ಮಂಡ್ಯದಲ್ಲಿ ಬಿಜೆಪಿ ಜೊತೆ ಸೇರಿಕೊಂಡು ಏನ್ ಏನ್ ಮಾಡ್ತಿದ್ದಾರೆ ನನಗೆ ಗೊತ್ತಿದೆ ಎಂದು ಸಿದ್ದರಾಮಯ್ಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಹೊಸಕೋಟೆಯಲ್ಲಿ ಕಾಂಗ್ರೆಸ್ ನವರು ಸಮಾವೇಶ ಮಾಡಿದ್ರು. ಆ ವೇಳೆ ಸಿದ್ದರಾಮಯ್ಯ ಅವರ ಹೇಳಿಕೆ ಗಮನಿಸಿದ್ದೇನೆ. ಕಾಂಗ್ರೆಸ್ ಸ್ಥಳೀಯ ನಾಯಕರೇ ಸಿದ್ದರಾಮಯ್ಯ ನೇತೃತ್ವದಲ್ಲಿ ನಮ್ಮ ಮಂಡ್ಯ ಸೋಲು, ದೇವೇಗೌಡರ ಸೋಲು, ಕೋಲಾರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಕಾರಣ. ಹದ್ದಾಗಿ ಕುಕ್ಕಿತಲ್ಲೊ ಅಂತ ನಿನ್ನೆ ಯಾರೋ ಭಾಷಣ ಮಾಡಿದ್ದಾರೆ. ಮುನಿಯಪ್ಪರನ್ನ ಕುಕ್ಕಿದ್ದು ಯಾರು ಅಂತ ಅವ್ರೇ ಹೇಳಲಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಲೋಕಸಭೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿ ಪರವಾಗಿ ಕಾಂಗ್ರೆಸ್ ಸರಿಯಾಗಿ ಕೆಲಸ ಮಾಡಿಲ್ಲ. ನಾನು ಹೇಗೆ ಕಾಂಗ್ರೆಸ್ ಅಭ್ಯರ್ಥಿ ಪರ ಕೆಲಸ ಮಾಡಿದೆ ಅಂತ ಎಲ್ಲರಿಗೂ ಗೊತ್ತು. ಕಾಂಗ್ರೆಸ್ ಅವ್ರು ಅವ್ರ ಆತ್ಮಕ್ಕೆ ಪ್ರಶ್ನೆ ಮಾಡಿಕೊಳ್ಳಲಿ. ಪ್ರಾಮಾಣಿಕವಾಗಿ ನಾವು ಕೆಲಸ ಮಾಡಿದ್ವಿ ಎಂದು ಹೆಚ್.ಡಿ ಕೆ ಹೇಳಿದರು.
Key words: Former CM- HD Kumaraswamy- clarified – our family – member- not contesting – by-election.