ಬೆಂಗಳೂರು,ಡಿಸೆಂಬರ್,27,2021(www.justkannada.in): ನಿನ್ನೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ನಿನ್ನೆ ನಡೆಸಿದ ಯುಜಿಸಿ- ಎನ್ಇಟಿ ಕನ್ನಡ ಐಚ್ಛಿಕ ಭಾಷೆಯ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕನ್ನಡ ಭಾಷೆಗಿಂತ ಹೆಚ್ಚು ಹಿಂದಿ ಭಾಷೆಯಿಂದ ಕೂಡಿತ್ತು. ಎನ್ ಇಟಿ ಕನ್ನಡ ಐಚ್ಛಿಕ ಭಾಷಾ ಪ್ರಶ್ನೆ ಪತ್ರಿಕೆಯಲ್ಲಿ ಹಿಂದಿ ಭಾಷೆಯಲ್ಲಿ ಪ್ರಶ್ನೆಗಳನ್ನು ಕೇಳಲಾಗಿತ್ತು. ಇದನ್ನು ಕಂಡ ಅಭ್ಯರ್ಥಿಗಳು ಗೊಂದಲಕ್ಕೀಡಾಗಿ, ಪರೀಕ್ಷೆಯನ್ನು ಬಹಿಷ್ಕರಿಸಿದ್ದಲ್ಲದೇ ಪ್ರತಿಭಟನೆ ನಡೆಸಿದ್ದರು. ಈ ಕುರತು ಟ್ವಿಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ ಎಂದು ಕಿಡಿಕಾರಿದ್ದಾರೆ.
ಟ್ವಿಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ಹೆಚ್.ಡಿ ಕುಮಾರಸ್ವಾಮಿ, ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ. ನಾನು ಮೊದಲಿನಿಂದಲೂ ಹೇಳುತ್ತಿರುವ ಮಾತಿದು. ಈ ಮಾತು ಪದೇಪದೆ ಮರುಕಳಿಸುತ್ತಿರುವುದು ನನಗೆ ಬಹಳ ನೋವುಂಟು ಮಾಡಿದೆ. ಕೇಂದ್ರ ಸರಕಾರದ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕುವ ಮತ್ತು ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಇದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇದು ಕನ್ನಡದ ಮೇಲಿನ ತಾತ್ಸಾರ ಹಾಗೂ ಹಿಂದಿ ಹೇರಿಕೆಯ ವಿಪರೀತ. ಅಲ್ಲದೆ, ಪರೀಕ್ಷೆ ನಡೆಸಿದ ಸಂಸ್ಥೆ ಮಾಡಿರುವ ಕನ್ನಡ ದ್ರೋಹ. ಉದ್ದೇಶಪೂರ್ವಕವಾಗಿಯೇ ಇಂಥ ಕೃತ್ಯಗಳನ್ನು ಕನ್ನಡದ ವಿರುದ್ಧ ಎಸಗಲಾಗುತ್ತಿದೆ ಎಂದು ಹೆಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಕನ್ನಡಿಗರ ಬಗ್ಗೆ ಈ ಕಠಿಣತೆ ಏಕೆ? ಎಂದು ಪ್ರಶ್ನಿಸಿರುವ ಕುಮಾರಸ್ವಾಮಿ, ರೈಲ್ವೆ, ಬ್ಯಾಂಕಿಂಗ್ ಸೇರಿದಂತೆ ಕೇಂದ್ರ ಸರಕಾರದ ಇನ್ನು ಹಲವಾರು ಉದ್ಯೋಗ ಅವಕಾಶಗಳಲ್ಲಿ ಕನ್ನಡದ ಪ್ರತಿಭಾವಂತ ಯುವಜನರಿಗೆ ಅನ್ಯಾಯ ಆಗುತ್ತಿದೆ. ಕನ್ನಡಿಗರ ಕಡೆಗಣನೆ ದೇಶಕ್ಕೆ ಒಳ್ಳೆಯದಲ್ಲ. ನಮ್ಮ ಮೌನ. ನಮ್ಮ ದೌರ್ಬಲ್ಯವಲ್ಲ ಎಂಬುದು ನೆನಪಿರಲಿ. ಈ ಅನ್ಯಾಯವನ್ನು ಸಹಿಸುವ ಪ್ರಶ್ನೆಯೇ ಇಲ್ಲ. ಕೂಡಲೇ ಪರಿಕ್ಷಾ ಸಂಸ್ಥೆಯು ಆಗಿರುವ ಲೋಪ ಸರಿಮಾಡಿ ಮರು ಪರೀಕ್ಷೆ ನಡೆಸಬೇಕು. ಎರಡು ವರ್ಷಗಳಿಂದ ಪರಿಕ್ಷೆಗಾಗಿ ತಯಾರಿ ನಡೆಸಿರುವ ಅಭ್ಯರ್ಥಿಗಳಿಗೆ ನ್ಯಾಯ ಸಿಗುವಂತೆ ಕ್ರಮ ವಹಿಸಬೇಕು.
ಪರೀಕ್ಷೆ ಅವ್ಯವಸ್ಥೆ ಆಗರವಾಗಿತ್ತು ಎನ್ನುವುದು ತಿಳಿದುಬಂದಿದೆ. ಅದನ್ನು ಸರಿಪಡಿಸಿ ಉತ್ತಮ ರೀತಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
Key words: Former CM- HD Kumaraswamy -outrage – Hindi -use – NET test