ಬೆಂಗಳೂರು,ಏಪ್ರಿಲ್,28,2021(www.justkannada.in): ಪಡಿತರ ಅಕ್ಕಿ ಕೇಳಿದ ವ್ಯಕ್ತಿಗೆ ಸಾಯಿರಿ ಎಂದ ಆಹಾರ ಸಚಿವ ಉಮೇಶ್ ಕತ್ತಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಹೇಳಿಕೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಜನರು ಸಂಕಷ್ಟ ಹೇಳಿಕೊಳ್ಳಲು ಕರೆ ಮಾಡುತ್ತಾರೆ. ಆದರೆ ಈ ರೀತಿ ಹೇಳಿಕೆ ನೀಡಲು ಅವರಿ ಪಶ್ಚಾತಾಪವಾಗಲ್ವಾ..? ಇಂತಹ ಸಚಿವರನ್ನ ಸಂಪುಟದಿಂದ ಒದ್ದು ಹೊರಗೆ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರನ್ನ ಹೆದರಿಸಿ ವೋಟ್ ಹಾಕಿಸಿಕೊಂಡು ಬಂದವರು. ಬೆಳಗಾವಿಯಲ್ಲಿ ಹೆದರಿಸಿ ವೋಟ್ ಹಾಕಿಸಿಕೊಂಡಿದ್ದಾರೆ. ವೋಟ್ ಹಾಕದಿದ್ದರೇ ನಿಮ್ಮ ಕಬ್ಬು ಖರೀದಿಸಲ್ಲ ಎಂದು ಜನರನ್ನ ಬೆದರಿಸಿದ್ದಾರೆ. ಇಂತಹ ಸಚಿವರನ್ನ ಆ ದೇವರೇ ಕಾಪಾಡಬೇಕು. ಹಂಚಿ ತಿನ್ನುವುದು ನಮ್ಮ ಸಂಸ್ಕೃತಿ. ಆದರೆ ಬಿಜೆಪಿಯುವರು ಬಾಚಿ ತಿನ್ನುವ ಬಕಾಸೂರರು ಎಂದು ಹೆಚ್.ಡಿ ಕುಮಾರಸ್ವಾಮಿ ಹರಿಹಾಯ್ದರು.
ಈ ಕುರಿತು ಟ್ವೀಟ್ ಮಾಡಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಕೊರೋನಾ ಸಂಕಷ್ಟದಲ್ಲಿ ಹಸಿವಿನಿಂದ ಬಳಲುವ ಜನರ ನೆರವಿಗೆ ಬರಬೇಕಾದ ಆಹಾರ ಸಚಿವರೇ ದರ್ಪದ ಉತ್ತರ ನೀಡಿ ಮಾನಸಿಕ ವಿಕೃತಿ ಮೆರೆದಿದ್ದಾರೆ. ರಾಜ್ಯ ಸರ್ಕಾರ ಪಡಿತರ ಅಕ್ಕಿ ಕಡಿತಗೊಳಿಸಿದನ್ನು ಸಚಿವರಿಗೆ ಕರೆ ಮಾಡಿ ಪ್ರಶ್ನಿಸಿದ ವ್ಯಕ್ತಿಯೊಬ್ಬರಿಗೆ ಸಾಯೋದು ಒಳ್ಳೆಯದು ಎಂದು ಆಹಾರ ಸಚಿವ ಉಮೇಶ್ ಕತ್ತಿ ಹೇಳಿರುವುದು ಅತ್ಯಂತ ಅಮಾನವೀಯ. ಇದನ್ನು ತೀವ್ರವಾಗಿ ಖಂಡಿಸುವೆ. ಜನಸಾಮಾನ್ಯರ ಬಗ್ಗೆ ಕನಿಷ್ಠ ಕಾಳಜಿ ಇಲ್ಲದ ಇಂತಹ ಸಚಿವರನ್ನು ಸಂಪುಟದಿಂದ ಕಿತ್ತೊಗೆಯುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Key words: Former CM- HD kumaraswamy-outrage –minister- Umesh katti