ಬೆಂಗಳೂರು,ಫೆಬ್ರವರಿ,21,2022(www.justkannada.in): ರಾಷ್ಟ್ರೀಯ ಪಕ್ಷಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಅಮಾಯಕರ ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತವೆ ಹಾಗೂ ರಾಜ್ಯದಲ್ಲಿ ಶಾಂತಿ ಭದ್ರತೆ ಹಾಳಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಗುಪ್ತಚರ ವ್ಯವಸ್ಥೆ ಸಂಪೂರ್ಣ ವೈಫಲ್ಯವಾಗಿದೆ. ಗುಪ್ತಚರ ವಿಭಾಗ ಇದೆಯೇ ಎಂಬ ಅನುಮಾನ ಉಂಟಾಗಿದೆ ಎಂದು ಅವರು ಸರಕಾರದ ಮೇಲೆ ತೀವ್ರ ಪ್ರಹಾರ ನಡೆಸಿದರು. ವಿಧಾನಸೌಧದ ಬಳಿ ಮಾಧ್ಯಮಗಳ ಜತೆ ಮಾತನಾಡಿದ ಹೆಚ್.ಡಿಕೆ ಅವರು, ಹಿಜಾಬ್ ಮತ್ತು ಕೇಸರಿ ಶಾಲುಗಳ ಗಲಾಟೆ ಇಡೀ ರಾಜ್ಯಕ್ಕೆ ವ್ಯವಸ್ಥಿತವಾಗಿ ಹಬ್ಬಿಸಿದಾಗಲೆ ಅಮಾಯಕ ಮಕ್ಕಳನ್ನು ಬಲಿ ನೀಡುವ ಹುನ್ನಾರ ನಡೆದಿದೆ ಎಂಬ ಸಂಶಯ ಉಂಟಾಗಿತ್ತು. ಶಿವಮೊಗ್ಗದಲ್ಲಿ ನಡೆದ ಕೊಲೆಯೂ ಈ ಷಡ್ಯಂತ್ರದ ಒಂದು ಭಾಗ ಎಂಬ ಅನುಮಾನವಿದೆ ಎಂದರು.
ಮಕ್ಕಳು ತಮ್ಮ ಕುಟುಂಬದ ಬಗ್ಗೆ ಯೋಚಿಸಬೇಕು. ಪೋಷಕರ ಕೂಡ ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಎಲ್ಲ ಅದ ಮೇಲೆ ನಿಮ್ಮ ಕುಟುಂಬಗಳ ಕಡೆ ಯಾರು ನೋಡುವುದಿಲ್ಲ. ಇದನ್ನು ಮಕ್ಕಳು, ತಂದೆ ತಾಯಿ ಅರ್ಥ ಮಾಡಿಕೊಂಡರೆ ಸಾಕು ಎಂದು ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ರಾಷ್ಟ್ರೀಯ ಪಕ್ಷಗಳು ಅಭಿವೃದ್ಧಿಯ ವಿಷಯದಲ್ಲಿ ರಾಜಕಾರಣ ಮಾಡುವುದು ಬಿಟ್ಟು ಕೋಮು ದ್ವೇಷ ಕೆರಳಿಸುವ ಹಾಗೂ ಸಮಾಜದ ಶಾಂತಿಯನ್ನು ಕದಡುವ ಶಕ್ತಿಗಳನ್ನು ಪ್ರೋತ್ಸಾಹಿಸುತ್ತಿವೆ ಎಂದು ಅವರು ದೂರಿದರು.
ಅಮಾಯಕ ಮಕ್ಕಳ ಬಲಿ ಆಗುತ್ತಿದೆ. ಈಗ ಶಿವಮೊಗ್ಗದಲ್ಲಿ ಅಶಾಂತಿ ಉಂಟಾಗಿದೆ. ರಾಜಕೀಯ ನಾಯಕರು ಆ ಯುವಕನ ಮನೆಗೆ ಹೋಗುವುದು, ಸಾಂತ್ವನ ಹೇಳುವುದು ಮಾಡುತ್ತಾರೆ. ಹೋದ ಜೀವದ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಮೂರು ದಿನ ಅದ ಮೇಲೆ ಅತ್ತ ಯಾರೂ ಸುಳಿಯಲ್ಲ. ಆ ಅಮಾಯಕನ ಕುಟುಂಬದ ಬಗ್ಗೆ ಕೇಳುವವರು ದಿಕ್ಕಿರುವುದಿಲ್ಲ ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.
ಎರಡು ವರ್ಷದ ಹಿಂದೆಯೇ ಈ ಯುವಕನ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂದು ಅವರ ಕುಟುಂಬದವರು ಮತ್ತು ಸಂಬಂಧಿಕರು ಹೇಳುತ್ತಿದ್ದಾರೆ. ಆತನ ಕೊಲೆ ಮಾಡಿದರೆ 10 ಲಕ್ಷ ರೂಪಾಯಿ ಇನಾಮು ಕೊಡುವುದಾಗಿ ಕೆಲವರು ಘೋಷಣೆ ಮಾಡಿದ್ದರು ಎಂದು ಅವರು ಹೇಳುತ್ತಿದ್ದಾರೆ. ಇದು ಅತ್ಯಂತ ಗಂಭೀರವಾದ ಅಂಶ ಎಂದರು ಅವರು.
ಎರಡು ವರ್ಷಗಳ ಹಿಂದೆಯೇ ಆ ಯುವಕನ ಪ್ರಾಣಕ್ಕೆ ಅಪಾಯವಿದೆ ಎನ್ನುವುದು ಗೊತ್ತಾಗಿದ್ದರೂ ಆತನಿಗೆ ಯಾಕೆ ರಕ್ಷಣೆ ನೀಡಲಿಲ್ಲ? ಇದು ಬಿಜೆಪಿ ನಾಯಕರಿಗೆ ಗೊತ್ತಿರಲಿಲ್ಲವೆ? ನಿಮ್ಮ ಪಕ್ಷದ ಅಥವಾ ನಿಮ್ಮ ಸಂಘಟನೆಯ ಸದಸ್ಯನನ್ನು ರಕ್ಷಣೆ ಮಾಡಿಕೊಳ್ಳಲು ನಿಮಗೆ ಸಾಧ್ಯವಾಗಲಿಲ್ಲ ಏಕೆ? ನಿಮ್ಮ ಸದಸ್ಯನನ್ನೇ ರಕ್ಷಿಸಿಕೊಳ್ಳಲಾಗದ ನೀವು ರಾಜ್ಯ ಮತ್ತು ಜನರನ್ನು ಹೇಗೆ ರಕ್ಷಣೆ ಮಾಡುತ್ತೀರಿ ಎಂದು ಕುಮಾರಸ್ವಾಮಿ ಅವರು ಆಡಳಿತ ಪಕ್ಷವನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.
ಎರಡು ವರ್ಷಗಳ ಹಿಂದೆಯೇ ಈ ಮಾಹಿತಿ ನಿಮಗಿತ್ತು ಎನ್ನುವುದಾದರೆ ಪೊಲೀಸರು ಏನು ಮಾಡುತ್ತಿದ್ದರು? ಗುಪ್ತದಳ ಏನು ಮಾಡುತ್ತಿತ್ತು? ಯಾಕೆ ಯುವಕನ ರಕ್ಷಣೆ ಮಾಡಿಕೊಳ್ಳಲಿಲ್ಲ? ಇದು 2023ರ ಚುನಾವಣೆಯ ಸ್ಯಾಂಪಲ್ಲೋ ಏನೋ ಗೊತ್ತಿಲ್ಲ. ಆದರೆ ಈಗ ಟ್ರೈಲರ್ ಬಿಟ್ಟಿದ್ದಾರೆ. ಮುಂದೆ ಪಿಕ್ಚರ್ ಬಿಡುತ್ತಾರೆ. ಇದು ಆರಂಭಿಕ ಹಂತ ಎನಿಸುತ್ತದೆ. ಮುಂದೆ ಏನೆಲ್ಲಾ ಕಾದಿದೆಯೋ ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು
ಸರಕಾರ ಇದನ್ನು ಮೊದಲೇ ಅರ್ಥ ಮಾಡಿಕೊಳ್ಳಬೇಕಿತ್ತು. ಈಗ ಡಿಕೆ ಶಿವಕುಮಾರ್ ಪ್ರಚೋದನೆ ಮಾಡ್ತಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. ಆದರೆ, ಅವರ ಪ್ರಚೋದನೆಯನ್ನು ತಡೆಯುವ ಶಕ್ತಿ ಸರಕಾರಕ್ಕೆ ಇಲ್ಲವೇ? ಎಲ್ಲವೂ ಗೊತ್ತಿದ್ದೂ ಸರಕಾರ ಸುಮ್ಮನಾಗಿದ್ದು ಯಾಕೆ? ಎಂದು ಹೆಚ್ ಡಿಕೆ ಅವರು ಪ್ರಶ್ನೆ ಮಾಡಿದರು.
Key words: Former CM-HD Kumaraswamy- security – failure -intelligence