ಬೆಂಗಳೂರು,ಏಪ್ರಿಲ್,17,2023(www.justkannada.in): ಟಿಕೆಟ್ ಕೈತಪ್ಪಿದ ಹಿನ್ನೆಲೆ ಬಿಜೆಪಿಯ ಮತ್ತೊಂದು ವಿಕೆಟ್ ಪತನವಾಗಿದ್ದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ಅಧಿಕೃತವಾಗಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು.
ಇಂದು ಕೆಪಿಸಿಸಿ ಕಚೇರಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದರು. ಇದರೊಂದಿಗೆ 35 ವರ್ಷಕ್ಕೂ ಹೆಚ್ಚು ಕಾಲ ಬಿಜೆಪಿಯೊಂದಿಗಿನ ನಂಟು ಕಳೆದುಕೊಂಡರು.
ಕಾಂಗ್ರೆಸ್ ಸೇರ್ಪಡೆಯಾದ ಬಳಿಕ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ಹಿಡಿತದಲ್ಲಿದೆ. ರಾಜ್ಯ ಬಿಜೆಪಿ ಬೆಳವಣಿಗೆ ವರಿಷ್ಠರ ಗಮನಕ್ಕೆ ಬಂದಿಲ್ಲ ಅನ್ನಿಸುತ್ತೆ. ಕೆಲ ಬಿಜೆಪಿ ನಾಯಕರು ತಮ್ಮ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾ ಟೀಕೆ ಮಾಡುತ್ತಿಲ್ಲ. ಲಿಂಗಾಯತ ನಾಯಕರಲ್ಲಿ ಬಿಎಸ್ವೈ ಬಿಟ್ಟರೆ ನಾನೇ ಹಿರಿಯ. ಅದಕ್ಕಾಗಿ ನನ್ನನ್ನು ಪಕ್ಷದಿಂದ ಹೊರಹಾಕಿರಬೇಕು ಎಂದು ಟೀಕಿಸಿದರು.
ರಾಜ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಿ ಬೆಳೆಸಿದ್ದೇನೆ. ಬಿಜೆಪಿ ನನಗೆ ಎಲ್ಲಾ ಗೌರವ ಹಾಗೂ ಸ್ಥಾನಮಾನ ಕೊಟ್ಟಿದೆ. ಅದಕ್ಕೆ ಪ್ರತಿಯಾಗಿ ಬಿಜೆಪಿ ಕಟ್ಟಿ ಬೆಳೆಸುವ ಕೆಲಸ ಮಾಡಿದ್ದೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಟಿಕೆಟ್ ಇಲ್ಲ ಎಂದಾಗ ನನಗೆ ಆಘಾತವಾಯಿತು. ನಾನು ಜನಸಂಘ, ಸಂಘ ಪರಿವಾರದ ಕುಟುಂಬದಿಂದ ಬಂದ ವ್ಯಕ್ತಿ. ಕಳೆದ 6 ತಿಂಗಳಿನಿಂದ ಕಡೆಗಣಿಸಿದ್ದರು, ನನಗೆ ಗೌರವ ಕೊಡಲಿಲ್ಲ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Key words: Former CM -Jagdish Shettar –left- BJP – joined -Congress.