ಕೂಡಲೇ ಎನ್ ಡಿಆರ್ ಎಫ್ ನಿಯಮಗಳ ತಿದ್ದುಪಡಿ ಹಾಗೂ ಪರಿಹಾರ ಬಿಡುಗಡೆಗೆ ಮಾಜಿ ಸಿಎಂ ಸಿದ‍್ಧರಾಮಯ್ಯ ಒತ್ತಾಯ.

ಬೆಂಗಳೂರು,ಜೂನ್,21,2022(www.justkannada.in): ಎನ್ ಡಿಆರ್ ಎಫ್ ನಿಯಮಗಳನ್ನು ಕೂಡಲೇ ತಿದ್ದುಪಡಿ ಮಾಡಿ ಪ್ರಕೃತಿ ವಿಕೋಪದಿಂದ ಆಗಿರುವ ಹಾನಿಗೆ ಸಮರ್ಪಕವಾದ ಪರಿಹಾರ ನೀಡುವಂತೆ ವಿಧಾನಸಭೆಯ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಸಿದ್ದರಾಮಯ್ಯ ಅವರು ಪತ್ರಿಕಾ ಹೇಳಿಕೆ ಬಿಡುಗಡೆ  ಮಾಡಿ ಹೇಳಿರುವುದಿಷ್ಟು….

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರವನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ಬಿಡುಗಡೆ ಮಾಡುತ್ತದೆ. ಪ್ರತಿ 5 ವರ್ಷಗಳಿಗೆ ಒಮ್ಮೆ  ಎನ್‍ಡಿಆರ್‍ ಎಫ್ ನಿಯಮಗಳನ್ನು ತಿದ್ದುಪಡಿ ಮಾಡಿ  ರೈತರ ಬೆಳೆಗಳಿಗೆ ಇನ್‍ ಪುಟ್ ಸಬ್ಸಿಡಿಯ ಮೊತ್ತ, ಮೀನುಗಾರರ ದೋಣಿಗಳಿಗೆ ಆದ ಹಾನಿ, ಜನ ಜಾನುವಾರುಗಳಿಗೆ ಉಂಟಾದ ತೊಂದರೆ, ಮನೆ ಹಾನಿ, ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಆದ ನಷ್ಟಗಳಿಗೆ ನೀಡುವ ಪರಿಹಾರದ ಮೊತ್ತವನ್ನು ಪರಿಷ್ಕರಿಸಲಾಗುತ್ತದೆ. ಆದರೆ 2015-20ಕ್ಕೆ ಅನ್ವಯವಾಗುವಂತೆ ರೂಪಿಸಿದ ನಿಯಮಗಳನ್ನು  2015 ರಲ್ಲಿ ಪರಿಷ್ಕರಿಸಲಾಗಿತ್ತು. ಸಹಜವಾಗಿ ಇದು 2020 ರಲ್ಲಿ ಮತ್ತೆ ಪರಿಷ್ಕರಿಸಬೇಕಾಗಿತ್ತು. ಇದುವರೆಗೂ ಪರಿಷ್ಕರಣೆ ಮಾಡಿಲ್ಲ.

ಕಳೆದ ಎರಡು ವರ್ಷಗಳಿಂದ ಎಲ್ಲ ಉತ್ಪನ್ನಗಳ ಬೆಲೆ ದುಪ್ಪಟ್ಟಾಗಿವೆ. ಹಣದುಬ್ಬರ ದಾಖಲೆ ಮಟ್ಟಕ್ಕೆ ತಲುಪಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಎನ್‍ ಡಿಆರ್‍ಎಫ್ ನಿಯಮಗಳನ್ನು ಪರಿಷ್ಕರಿಸಿಲ್ಲ. ಪ್ರಸ್ತುತ ಒಂದು ಎಕರೆ ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಬೆಳೆದ ಬೆಳೆ ಶೇ.33ಕ್ಕಿಂತ ಹೆಚ್ಚು  ಹಾನಿಯಾದರೆ  ಸಿಗುವ ಪರಿಹಾರ ಕೇವಲ 2720 ರೂಪಾಯಿ ಮಾತ್ರ.  ಅದರಲ್ಲೂ ಗರಿಷ್ಠ 2.5 ಹೆಕ್ಟೇರ್‍ ಗೆ ಅಂದರೆ 6800 ಮಾತ್ರ.  ಪ್ರತಿ ಗುಂಟೆಗೆ ಕೇವಲ 68 ರೂಪಾಯಿ ಸಿಗುತ್ತದೆ.  ಆದರೆ ಒಂದು ಎಕರೆ ರಾಗಿ, ಜೋಳ ಬೆಳೆಯಲು ಕನಿಷ್ಠ 25000 ರೂಪಾಯಿ ಖರ್ಚು ತಗಲುತ್ತದೆ. ಈ ಮೊತ್ತ ಪರಿಷ್ಕರಣೆಯಾಗಲೇಬೇಕಾಗಿದೆ.  ನಾನು ವಿಧಾನಸಭೆಯ ಅಧಿವೇಶನಗಳಲ್ಲಿ ಕನಿಷ್ಠ 25000 ರೂ ಕೊಡಿ ಎಂದು ಒತ್ತಾಯಿಸಿದ್ದೆ.

ಕೇಂದ್ರ ಸರ್ಕಾರ ಈ ಮೊತ್ತವನ್ನು ಪರಿಷ್ಕರಣೆ ಮಾಡದ ಕಾರಣದಿಂದ ಕಳೆದ 2 ವರ್ಷಗಳಿಂದ ರೈತರಿಗೆ ವಿಪರೀತ ಹಾನಿಯಾಗಿದೆ. ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಸಂಭವಿಸಿರುವ ನಷ್ಟದ ಪ್ರಮಾಣ ಒಂದು ಅಂದಾಜಿನ ಪ್ರಕಾರ 2 ಲಕ್ಷ ಕೋಟಿ ರೂಗಳಷ್ಟಾಗಬಹುದು. ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಮೊತ್ತ  ಕೇವಲ 3965 ಕೋಟಿ ರೂ ಮಾತ್ರ.

ರಾಜ್ಯದಲ್ಲಿ ಮೇ ತಿಂಗಳಿಂದ ನವೆಂಬರ್‍ ವರೆಗೆ ಸಂಭವಿಸಿದ ಪ್ರವಾಹದ ಹಾನಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾರ್ಚ್-2022 ರಲ್ಲಿ ಕೇವಲ 492 ಕೋಟಿ ಬಿಡುಗಡೆ ಮಾಡಿದೆ.  ಇದು ಮೋದಿ ಸರ್ಕಾರದ ವೇಗ ಮತ್ತು ರೈತ ಪರ ಕಾಳಜಿ ಎಂದು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಸಿದ‍್ಧರಾಮಯ್ಯ ಟೀಕಿಸಿದ್ದಾರೆ.

ಜನರು ಮತ್ತು ವಿರೋಧ ಪಕ್ಷಗಳು ಪರಿಹಾರಕ್ಕಾಗಿ ಒತ್ತಡಗಳನ್ನು ತಂದಾಗ ರಾಜ್ಯ ಸರ್ಕಾರ 2391 ಕೋಟಿ ರೂಪಾಯಿಗಳಷ್ಟು ಪರಿಹಾರವನ್ನು ರೈತರಿಗೆ ನೀಡಿತು.  ಕೇಂದ್ರ ಸರ್ಕಾರ ನೀಡಬೇಕಾದ ಪರಿಹಾರದ ಮೊತ್ತವನ್ನು ರಾಜ್ಯ ಸರ್ಕಾರ ನೀಡಬೇಕಾಯಿತು. ಆ ಮೂಲಕ ಕೇಂದ್ರವು ರಾಜ್ಯವನ್ನು ಇನ್ನಷ್ಟು ಶೋಷಣೆ ಮಾಡಿತು. ಕಳೆದ 3 ವರ್ಷಗಳಿಂದ ರಾಜ್ಯ ಸರ್ಕಾರ 3890 ಕೋಟಿ ರೂಗಳನ್ನು ರೈತರಿಗೆ, ವಸತಿ ಹಾನಿಯಾದವರಿಗೆ ನೀಡಿದೆ. ಇದಿಷ್ಟೂ ಸೇರಿದಂತೆ ಹೆಚ್ಚುವರಿ ಹಣವನ್ನು ಕೇಂದ್ರ ಸರ್ಕಾರ ನೀಡಬೇಕಾಗಿತ್ತು. ಯಾಕೆಂದರೆ ಪರಿಹಾರ ನೀಡುವುದಕ್ಕೋಸ್ಕರವೇ ಕೇಂದ್ರದ ಬಜೆಟ್‍ ನಲ್ಲಿ ಹಣ ಮೀಸಲಿರಿಸಲಾಗುತ್ತದೆ. ಆದರೆ ಕರ್ನಾಟಕಕ್ಕೆ ಕೊಡಬೇಕಾದಷ್ಟು ಪರಿಹಾರವನ್ನು ನೀಡದೆ ಅನ್ಯಾಯ ಮಾಡಿದೆ.

ಆದ್ದರಿಂದ ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದೇನೆಂದರೆ,  ಮೊದಲು ಎನ್‍ಡಿಆರ್‍ಎಫ್  ನಿಯಮಗಳಿಗೆ 2020 ರಿಂದಲೇ ಪೂರ್ವಾನ್ವಯವಾಗುವಂತೆ ತಿದ್ದುಪಡಿ ಮಾಡಿ ಬಾಕಿ ಪರಿಹಾರವನ್ನು ಬಿಡುಗಡೆ ಮಾಡಬೇಕು. ರೈತರಿಗೆ ನಷ್ಟವಾದ ಅಷ್ಟೂ ಹಣವನ್ನು ನಷ್ಟವಾದ ಅಷ್ಟೂ ಎಕರೆಗೆ ಪರಿಹಾರ ನೀಡುವ ಹಾಗೆ ತಿದ್ದುಪಡಿ ತರಬೇಕು. ಮನೆ ಕಳೆದುಕೊಂಡವರಿಗೆ, ಮೀನುಗಾರರಿಗೆ ಹಾಗೂ ಇತರೆ ಎಲ್ಲ ಬಾಧಿತರಿಗೆ ವೈಜ್ಞಾನಿಕ ಮಾನದಂಡಗಳ ಆಧಾರದ ಮೇಲೆ ಪರಿಹಾರ ನೀಡುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.

ಜೊತೆಗೆ, ಹವಾಮಾನ ವೈಪರೀತ್ಯವು ರೈತರನ್ನು ತೀವ್ರವಾಗಿ ಬಾಧಿಸುವ ಸಂಗತಿಯಾದ ಕಾರಣ ಮುಂದಿನ ದಿನಗಳಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚಾಗುತ್ತದೆ, ರೈತರು ಇನ್ನಷ್ಟು ಹೆಚ್ಚು ಸಂಕಷ್ಟಕ್ಕೆ ಸಿಲುಕುತ್ತಾರೆ ಎಂದು ವಿಜ್ಞಾನಿಗಳು ತಜ್ಞರು ರಾಜ್ಯ ಸರ್ಕಾರಕ್ಕೆ ಹಿಂದಿನ ವರ್ಷ ವರದಿ ನೀಡಿದ್ದಾರೆ. ಸದರಿ ವರದಿಯನ್ನು ಆಧರಿಸಿ ಸರ್ಕಾರ ಸಮಗ್ರವಾದ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕಾಗಿತ್ತು. ಆದರೆ ಭ್ರಷ್ಟಾಚಾರದ ಕೂಪದಲ್ಲಿ ಮುಳುಗೇಳುತ್ತಿರುವ ಸರ್ಕಾರಕ್ಕೆ ಇದನ್ನೆಲ್ಲ ಮಾಡಲು ಪುರುಸೊತ್ತು ಇಲ್ಲವಾಗಿದೆ. ಪ್ರವಾಹ, ಬರ ಬಂದು ಜನರು ಸಂಕಷ್ಟದಲ್ಲಿದ್ದಾಗಲೂ ಸರ್ಕಾರ ನಿದ್ರೆಯಲ್ಲಿದ್ದಂತೆ ನಟಿಸಿಕೊಂಡು ಕಾಲ ಕಳೆದಿದೆ. ಜಿಲ್ಲಾ ಉಸ್ತುವಾರಿ ಸಚಿವರುಗಳಲ್ಲಿ ಬಹುಪಾಲು ಜನರು  ಜಿಲ್ಲೆಗಳಿಗೆ ಭೇಟಿ ಮಾಡದೆ ನಿರ್ಲಕ್ಷ್ಯ ಮಾಡಿದರು. ಹಾಗಾಗಿ ಸರ್ಕಾರ ಜಡತೆಯಿಂದ, ಮನುಷ್ಯರನ್ನು ದ್ವೇಷದಿಂದ ಒಡೆದು ಹಾಕುವ ಕೆಟ್ಟತನದಿಂದ ಹೊರಬಂದು ಬರ ಪ್ರವಾಹಗಳನ್ನು ವೈಜ್ಞಾನಿಕ ರೀತಿಯಲ್ಲಿ ನಿಭಾಯಿಸುವಂತಹ ವ್ಯವಸ್ಥೆ ರೂಪಿಸಬೇಕು.

ಇತ್ತೀಚೆಗೆ ಅಸಾನಿ ಚಂಡಮಾರುತದಿಂದ ತೊಂದರೆಗಳಿಗೆ ಒಳಗಾದವರಿಗೆ ತುರ್ತಾಗಿ ಪರಿಹಾರ ನೀಡಬೇಕು. ಕಳೆದ ಮೂರು ವರ್ಷಗಳಿಂದ ಹಾನಿಯಾಗಿರುವ ಸಾವಿರಾರು ಮನೆಗಳಿಗೆ ಈಗಲೂ ಸಮರ್ಪಕ ಪರಿಹಾರ ನೀಡಿಲ್ಲ.  ಶಾಶ್ವತ ನೆಲೆ ಕಲ್ಪಿಸಿಲ್ಲ. ಈ ವ್ಯವಸ್ಥೆಯನ್ನು ತುರ್ತಾಗಿ ಮಾಡಬೇಕಾಗಿದೆಯೆಂದು ಸಿದ್ಧರಾಮಯ್ಯ ಆಗ್ರಹಿಸಿದ್ದಾರೆ.

Key words: Former CM -Siddaramaiah – amendment – NDRF -rules -release -relief.

ENGLISH SUMMARY…

Former CM Siddaramaiah demands amendment NDRF rules and release compensation immediately
Bengaluru, June 21, 2022 (www.justkannada.in): Leader of the Opposition in the Legislative Assembly and former Chief Minister Siddaramaiah has demanded to amend the NDRF rules immediately and release proper compensation to the victims of floods.
In a press release, Siddaramaiah stated, “The Union Govt. releases compensation amount under the National Relief Fund to the State Governments. The NDRF rules will be amended once in five years, and the input subsidy amount provided to the farmers’ crops, the loss occurred to fishermen arising due to the damage to their boats, relief to the loss occurred by the livestock, damage of houses in natural calamities, and other public properties will be revised five years once. Likewise, the rules for the same for 2015-20 were revised. It should have been revised again in 2020, but they have not done it till now.”
“The prices of all the products have doubled in the last two years. Inflation has reached an all-time high. Even now the Union Government has not revised the NDRF rules,” he alleged and demanded its immediate revision.
Keywords: Former CM Siddaramaiah/ NDRF rules/ amend/ compensation/ revision