ಬೆಂಗಳೂರು,ಜನವರಿ,10,2022(www.justkannada.in): ಕನ್ನಡ ಸಾಹಿತ್ಯ ಲೋಕದ ದಿಗ್ಗಜ, ನೇರಾನೇರ ನುಡಿಯ ಪ್ರಭುತ್ವ ವಿರೋಧಿ ಪ್ರತಿಭಟನಾ ಧ್ವನಿಯಾಗಿದ್ದ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ್ ಪಾಟೀಲ್ (ಚಂಪಾ) ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ ಎಂದು ತಿಳಿದು ಅತೀವ ಆಘಾತ ಆಗಿದೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.
ಚಂಪಾ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಿದ್ಧರಾಮಯ್ಯ, ಚಂಪಾ ಅವರಿಗೆ 83 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳ ಜತೆ ಇತ್ತೀಚಿಗೆ ಮನೆಯೊಳಗೆ ಸಣ್ಣ ಅಪಘಾತವಾಗಿ ಬೆನ್ನಿಗೆ ನೋವು ಮಾಡಿಕೊಂಡಿದ್ದರು. ಕೆಲ ವಾರಗಳ ಹಿಂದಷ್ಟೆ ಅವರ ಜತೆ ಮಾತನಾಡಿ ಚೇತರಿಸಿಕೊಳ್ಳಿ ಎಂದು ಹಾರೈಸಿದ್ದೆ.
ಅರ್ಧ ಶತಮಾನ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿದ್ದು ನಾಲ್ಕು ದಶಕಗಳ ಕಾಲ ಕನ್ನಡ ನೆಲದ ವಿವೇಕವನ್ನು ಹೆಚ್ಚಿಸಲು, ಈ ನೆಲದ ಸೌಹಾರ್ಧ ಪರಂಪರೆಯನ್ನು ಮುನ್ನಡೆಸಿದ್ದಾರೆ.
ಕನ್ನಡ ನೆಲ-ಜಲ- ಸಂಸ್ಕೃತಿ-ಭೂಮಿ- ಭಾಷೆ ಯನ್ನು ಕಾಪಾಡುವ ಹೋರಾಟದಲ್ಲಿ ನಾಲ್ಕು ದಶಕಗಳ ಕಾಲ ನಮ್ಮ ನಡುವೆ ರಾಜಿರಾಹಿತವಾಗಿ ಹೋರಾಡಿದ್ದಾರೆ. ಇವರ ಕಾಳಜಿ, ಶ್ರಮ, ಪ್ರತಿರೋಧದ ವ್ಯಕ್ತಿತ್ವ ಕನ್ನಡ ನಾಡಿನ ಹೋರಾಟ ಪರಂಪರೆಯನ್ನು ಉಜ್ವಲಗೊಳಿಸಿದೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ, ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ, ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ಕಾಯಕ ಜೀವಿಯಾಗಿ ಮೆರೆದಿದ್ದಾರೆ.
1939 ಜೂನ್ 18ರಂದು ಹತ್ತಿಮತ್ತೂರಿನಲ್ಲಿ ಜನಿಸಿದ ಪ್ರೊ. ಚಂದ್ರಶೇಖರ್ ಪಾಟೀಲ್, ಎಂಎ ಪದವೀಧರರು. ಬದುಕಿನುದ್ದಕ್ಕೂ ಬಂಡಾಯ ಸಾಹಿತಿಯಾಗಿಯೇ ಗುರುತಿಕೊಂಡಿದ್ದು ಪಡೆದಿರುವ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗಳಿಗೆ ಲೆಕ್ಕವಿಲ್ಲ.
ಪ್ರೊ. ಚಂಪಾ ಅವರು ಈ ಇಳಿವಯಸ್ಸಿನಲ್ಲಿ ಸದಾ ಸ್ಪಟಿಕದಂತೆ ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಮೈಸೂರು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ “ಕನ್ನಡ ಕನ್ನಡ ಬನ್ನಿ ನಮ್ಮ ಸಂಗಡ…” ಎಂದು ಇಡೀ ಕರುನಾಡನ್ನೇ ಕನ್ನಡ ಸಂಸ್ಕೃತಿ ಪರವಾಗಿ ಬಡಿದೆಬ್ಬಿಸಿದ್ದರು.
ಹಾಸ್ಯದ ಮೂಲಕವೂ ಕ್ರಾಂತಿಕಾರಕ ವಿಚಾರ ಹೇಳುವುದರಲ್ಲಿ ಹೆಚ್ಚು ಪ್ರಚಲಿತವಾಗಿದ್ದ ಚಂಪಾ ತಮ್ಮ ಮೂಲ ಉತ್ತರ ಕರ್ನಾಟಕ ಭಾಷೆಯಲ್ಲಿಯೇ ಎಲ್ಲರನ್ನೂ ವಿಡಂಭನೆ ಮಾಡುತ್ತಲೇ ತಿದ್ದಿದವರು.
ಇವರ ಅಗಲಿಕೆ ನನಗೆ ವೈಯುಕ್ತಿಕವಾಗಿ ಮತ್ತು ಕನ್ನಡ ನಾಡಿನ ಸೌಹಾರ್ಧ ಪರಂಪರೆಗೆ ತುಂಬಲಾರದ ನಷ್ಟ. ಕುಟುಂಬ ವರ್ಗಕ್ಕೆ, ಅಪಾರ ಅಭಿಮಾನಿಗಳಿಗೆ, ಬಂಧು ಬಳಗದವರಿಗೆ ಇವರ ಅಗಲಿಕೆಯನ್ನು ಸಹಿಸುವ ಶಕ್ತಿ ನೀಡಲಿ ಎಂದು ತಾಯಿ ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
Key words: Former CM –Siddaramaiah- condoles – death – Champa