ಹೆಚ್ಚಿಸಿರುವ ತೆರಿಗೆ ಕಡಿಮೆ ಮಾಡಿ: ಜಿಎಸ್‌ಟಿ ಪರಿಹಾರ ಮುಂದುವರೆಸುವಂತೆ ಸಿದ್ಧರಾಮಯ್ಯ ಒತ್ತಾಯ.

ನವದೆಹಲಿ,ಜೂನ್,30,2022(www.justkannada.in): ಹೆಚ್ಚು ಮಾಡಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಮತ್ತು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು 5 ವರ್ಷಗಳ ವರೆಗೆ ಮುಂದುವರೆಸಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದರು.

ಮೊನ್ನೆ ನಡೆದ ಜಿಎಸ್‌ಟಿ ಕೌನ್ಸಿಲ್‌ ಸಭೆಯಲ್ಲಿ ತೆರಿಗೆ ಹೆಚ್ಚಳ ಮಾಡಿರುವ ಕುರಿತು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಹೇಳಿದ್ದಿಷ್ಟು:

ಈ ತಿಂಗಳ 28-29ನೇ ತಾರೀಖಿನಂದು ಎರಡು ದಿನ ಚಂಡೀಘಡದಲ್ಲಿ ಜಿಎಸ್‌ಟಿ ಕೌನ್ಸಿಲ್‌ ಸಭೆ ನಡೆಯಿತು. ಅದರಲ್ಲಿ ಭಾಗವಹಿಸಿದ್ದ ರಾಜ್ಯ ಸರ್ಕಾರದ ಪ್ರತಿನಿಧಿಗಳು ಜಿಎಸ್‌ ಟಿ ಮುಂದುವರೆಸುವಂತೆ ಒತ್ತಾಯ ಮಾಡಿಲ್ಲ. ಇಂದಿನ ದಿನಾಂಕಕ್ಕೆ ಜಿಎಸ್‌ಟಿ ಪರಿಹಾರ ನೀಡುತ್ತಿದ್ದದ್ದು ಕೊನೆಯಾಗುತ್ತಿದೆ. ಜಿಎಸ್‌ ಟಿ ಜಾರಿಯಾದ ಮೇಲೆ ರಾಜ್ಯಗಳಿಗೆ ನಷ್ಟವಾಗುತ್ತದೆ ಎಂದು ಆ ನಷ್ಟ ಭರಿಸಿ ಕೊಡಲು 14% ಪರಿಹಾರ ನೀಡಬೇಕು ಎಂದು ಹಿಂದೆ ತೀರ್ಮಾನವಾಗಿತ್ತು. 2017 ರ ಜುಲೈ 1 ರಿಂದ ಇದು ಆರಂಭವಾಗಿತ್ತು. ಈ ಅವಧಿ ಇಂದಿಗೆ ಕೊನೆಯಾಗಲಿದೆ. ನಾನು ಅನೇಕ ಬಾರಿ ಸದನದಲ್ಲಿ ಮತ್ತು ಹೊರಗಡೆ ಪರಿಹಾರ ಮುಂದುವರೆಸುವಂತೆ ಒತ್ತಾಯ ಮಾಡಿದ್ದೆ, ರಾಜ್ಯಗಳು ಆರ್ಥಿಕವಾಗಿ ಕಷ್ಟದಲ್ಲಿ ಇದ್ದಾವೆ, ಜಿಎಸ್‌ಟಿ ಬರುವ ಮೊದಲು ರಾಜ್ಯದ ತೆರಿಗೆ ಬೆಳವಣಿಗೆ ದರ 14% ಇತ್ತು, ಈಗ ಪರಿಹಾರ ಕೊಡುವುದನ್ನು ನಿಲ್ಲಿಸಿದ್ರೆ ನಮ್ಮ ರಾಜ್ಯವೊಂದಕ್ಕೆ ವರ್ಷಕ್ಕೆ 20,000 ಕೋಟಿ ರೂಪಾಯಿ ನಷ್ಟವಾಗುತ್ತದೆ. ಇದನ್ನು ಬಹಳ ಜನ 3 ವರ್ಷ ಅಥವಾ 5 ವರ್ಷ ಮುಂದುವರೆಸಬೇಕು ಎಂದಿದ್ದಾರೆ. ನನ್ನ ಪ್ರಕಾರ 5 ವರ್ಷ ಮುಂದುವರೆಸಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಹಣಕಾಸು ಸಚಿವರು ಕೇಂದ್ರ ಸರ್ಕಾರದ ತೀರ್ಮಾನಕ್ಕೆ ತಲೆಬಾಗಿ ಒಪ್ಪಿಕೊಳ್ತಾರೆ. ರಾಜ್ಯಗಳಿಗೆ ಅನ್ಯಾಯವಾದರೂ ಅದನ್ನು ಕೇಂದ್ರದ ಮುಂದೆ ಹೇಳುವ ಶಕ್ತಿ ಅವರಿಗೆ ಇಲ್ಲ, ಬಿಜೆಪಿಯೇತರ ರಾಜ್ಯಗಳು ಇದನ್ನು ಮುಂದುವರೆಸಬೇಕು ಎಂದು ಹೆಚ್ಚು ಒತ್ತಾಯ ಮಾಡಿವೆ. ನಿನ್ನೆ ಕೂಡ ಈ ಬಗ್ಗೆ ಯಾವ ತೀರ್ಮಾನವಾಗಿಲ್ಲ. ಜಿಎಸ್‌ಟಿ ಪರಿಹಾರ ನೀಡಲು ಸೆಸ್‌ ಹಾಕುತ್ತಿದ್ದಾರೆ. ಇದನ್ನು ಕೊಡೋದು ರಾಜ್ಯಗಳೇ. ಐಷಾರಾಮಿ ವಸ್ತುಗಳು ಮತ್ತು ಹಾನಿಕಾರಕ ವಸ್ತುಗಳ ಮೇಲೆ ಸೆಸ್‌ ಹಾಕಿ ಕೇಂದ್ರ ಸರ್ಕಾರವೇ ಹಣ ಸಂಗ್ರಹಿಸಿಕೊಳ್ಳುತ್ತದೆ. ಈ ಹಣದಲ್ಲಿ ಇಷ್ಟು ದಿನ ಪರಿಹಾರ ನೀಡುತ್ತಿದ್ದರು. 2026ರ ವರೆಗೆ ಸೆಸ್‌ ಸಂಗ್ರಹ ಮುಂದುವರೆದರೂ ರಾಜ್ಯಗಳಿಗೆ ಪಾಲು ಸಿಗಲ್ಲ. ಈ ರೀತಿ ಸೆಸ್‌ ಸಂಗ್ರಹ ಮಾಡಿದ್ರೂ ತೊಂದರೆಯಲ್ಲಿರುವ ರಾಜ್ಯಗಳಿಗೆ ಪರಿಹಾರ ನೀಡುತ್ತಿಲ್ಲ, ಇದಕ್ಕೆ ನನ್ನ ವಿರೋಧವಿದೆ. ಜಿಎಸ್‌ಟಿ ಪರಿಹಾರವನ್ನು ಮುಂದಿನ 5 ವರ್ಷಗಳ ವರೆಗೆ ಮುಂದುವರೆಸಬೇಕು ಎಂದು ಒತ್ತಾಯ ಮಾಡುತ್ತೇನೆ ಎಂದರು.

ಜಿಎಸ್‌ಟಿ ಜಾರಿ ಮೊದಲು 14% ಇದ್ದ ತೆರಿಗೆ ಬೆಳವಣಿಗೆ ಈಗ 6% ಇದೆ. ಇದಕ್ಕೆ ಕೊವಿಡ್‌ ಕಾರಣ ಎಂದು ಹೇಳಿದರೂ, ರಾಜ್ಯಗಳಿಗೆ ತೆರಿಗೆ ಸಂಗ್ರಹ ಕಡಿಮೆ ಆಗಿರುವುದರಿಂದ ಈ ನಷ್ಟ ತುಂಬಿಕೊಡಬೇಕಾದವರು ಯಾರು? ಕೇಂದ್ರ ಸರ್ಕಾರ ಅಲ್ಲವೇ? ಬಸವರಾಜ ಬೊಮ್ಮಾಯಿ ಅವರು ಜಿಎಸ್‌ಟಿ ಸಭೆಗೆ ಹೋಗಿದ್ದರೂ ಕೂಡ ಬೇಡಿಕೆಯನ್ನೇ ಇಟ್ಟಿಲ್ಲ. ಇದು ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ. ಇದನ್ನು ಸರಿಪಡಿಸುವ ಪ್ರಯತ್ನವನ್ನು ಬೊಮ್ಮಾಯಿ ಅವರು ಮಾಡಿಲ್ಲ ಎಂದು ಸಿದ್ಧರಾಮಯ್ಯ ಟೀಕಿಸಿದರು.

ಕೆಲವು ವಸ್ತುಗಳ ಮೇಲಿನ ಜಿಎಸ್‌ಟಿ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ. 12% ಇಂದ 18%, ಇನ್ನು ಕೆಲವು 0% ಇಂದ 18%, 5% ಇದ್ದದ್ದನ್ನು 12% ಗೆ ಏರಿಕೆ ಮಾಡಿದ್ದಾರೆ. ರೈತರು ಹಾಗೂ ಜನ ಸಾಮಾನ್ಯರು ಹೊಲ ಗದ್ದೆಗಳಲ್ಲಿ ಬಳಸುವ ಸಬ್‌ ಮೆರಿನ್‌ ಪಂಪ್‌ ಗಳ ಮೇಲೆ 12% ಇದ್ದ ತೆರಿಗೆಯನ್ನು 15% ಗೆ ಏರಿಸಿದ್ದಾರೆ. ಹಣ್ಣು, ತರಕಾರಿ ಮತ್ತು ಮೊಟ್ಟೆಗಳನ್ನು ಪ್ರತ್ಯೇಕಗೊಳಿಸುವ, ಗ್ರೇಡಿಂಗ್‌ ಹಾಗೂ ಹಾಲು ಕರೆಯುವ ಯಂತ್ರಗಳ ಮೇಲೆ ಇದ್ದ ತೆರಿಗೆಯನ್ನು 12% ಇಂದ 18% ಗೆ ಏರಿಕೆ ಮಾಡಿದ್ದಾರೆ. ಇದರಿಂದ ರೈತರಿಗೆ, ಸಾಮಾನ್ಯ ಜನರಿಗೆ ಹಾಗೂ ಮಧ್ಯಮ ವರ್ಗದ ಜನರಿಗೆ ತೊಂದರೆಯಾಗಲ್ವೇ? ಎಂದು ಪ್ರಶ್ನಿಸಿದರು.

ಜಿಎಸ್‌ಟಿ ಮೊದಲೇ ಅವೈಜ್ಞಾನಿಕವಾಗಿದೆ, ರಾಜ್ಯಗಳು ಆರ್ಥಿಕವಾಗಿ ಕೆಟ್ಟ ಪರಿಸ್ಥಿತಿ ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ, ಜನ ಸಾಮಾನ್ಯರು ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಸಿಮೆಂಟ್‌, ಕಬ್ಬಿಣ, ಅಡುಗೆ ಎಣ್ಣೆ ದುಬಾರಿಯಾಗಿರುವ ಇಂಥಾ ಸಮಯದಲ್ಲೇ ತೆರಿಗೆ ಏರಿಕೆ ಮಾಡಿದ್ದಾರೆ. ಸೋಲಾರ್‌ ಸಿಸ್ಟಂಗಳು ಮತ್ತು ಸೋಲಾರ್‌ ವಾಟರ್‌ ಹೀಟರ್‌ ಗಳ ಮೇಲೆ 5% ಇಂದ 12% ಗೆ ತೆರಿಗೆ ಏರಿಕೆ ಮಾಡಿದ್ದಾರೆ. ಧಾನ್ಯಗಳನ್ನು ಸ್ವಚ್ಚ ಮಾಡುವ, ಹಿಟ್ಟು ಮಾಡುವ ಯಂತ್ರಗಳ ಮೇಲೆ ಇದ್ದ ತೆರಿಗೆ 12% ಇಂದ 18% ಗೆ ಹೆಚ್ಚಿಸಿದ್ದಾರೆ. ಇಟ್ಟಿಗೆ ಮಾಡುವ ಜಾಗ್‌ ವರ್ಕ್ ಗಳ ಮೇಲಿನ ತೆರಿಗೆಯನ್ನು 5% ಇಂದ 12% ಗೆ ಹೆಚ್ಚಿಸಿದ್ದಾರೆ. ಎಲ್‌ಇಡಿ ಬಲ್ಬ್‌ ಮತ್ತು ಸಂಬಂಧಿತ ವಸ್ತುಗಳ ಮೇಲೆ 12% ಇಂದ 18% ಗೆ ಏರಿಸಲಾಗಿದೆ. ಬರೆಯುವ ಮತ್ತು ಮುದ್ರಿಸುವ ಇಂಕ್‌ ಗಳ ಮೇಲಿನ ತೆರಿಗೆಯನ್ನು 12% ಇಂದ 18% ಗೆ ಹೆಚ್ಚಿಸಲಾಗಿದೆ. ಇದರಿಂದ ಪತ್ರಿಕೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೊರೆಯಾಗುತ್ತದೆ. ಮ್ಯಾಪ್‌ ಗಳು ಹಾಗೂ ಶಿಕ್ಷಣದ ಉದ್ದೇಶಕ್ಕೆ ಬಳಸುವ ಚಾರ್ಟ್‌ ಗಳು, ಗ್ಲೋಬ್‌ ಮಾದರಿಗಳಿಗೆ ಈವರೆಗೆ ತೆರಿಗೆ ವಿನಾಯಿತಿ ಇತ್ತು, ಅದನ್ನು 12% ಮಾಡಿದ್ದಾರೆ. ಬ್ಯಾಂಕುಗಳ ಚೆಕ್‌ ಬುಕ್‌ ಮೇಲೆ ತೆರಿಗೆ ಇರಲಿಲ್ಲ, ಈಗ 18% ತೆರಿಗೆ ಹಾಕಿದ್ದಾರೆ ಎಂದರು.

ಈ ರೀತಿ ಅವೈಜ್ಞಾನಿಕವಾಗಿ ಯಾರಾದರೂ ಬೆಲೆ ಏರಿಕೆ ಮಾಡುತ್ತಾರಾ?

ನನ್ನ ಪ್ರಕಾರ ಜಿಎಸ್‌ಟಿ ಮಾಡಿರುವುದೇ ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುವ ಕೆಲಸ. ತೆರಿಗೆ ಹಾಕುವುದು ರಾಜ್ಯ ಸರ್ಕಾರದ ಕೆಲಸ, ಈಗ ಜಿಎಸ್‌ಟಿ ಮಾಡಿ ಎದ್ವಾತದ್ವಾ ಏರಿಸಿದ್ರೆ ಹೇಗೆ? ಜಿಎಸ್‌ಟಿ ಕೌನ್ಸಿಲ್‌ ನಲ್ಲಿ ನಿರ್ಣಯಗಳು ಬಹುಮತದ ಮೇಲೆ ತೀರ್ಮಾನವಾಗುತ್ತೆ, ಹೆಚ್ಚಿನ ಕಡೆ ಬಿಜೆಪಿ ಸರ್ಕಾರಗಲೇ ಇವೆ, ಜಿಎಸ್‌ಟಿ ಕಮಿಟಿ ಅಧ್ಯಕ್ಷರು ಕೇಂದ್ರದ ಹಣಕಾಸು ಸಚಿವರೇ ಇರುವುದರಿಂದ ತಮಗೆ ಬೇಕಾದಂತೆ ನಿರ್ಣಯ ಮಾಡುತ್ತಾರೆ.

ಒಟ್ಟಾರೆ ಇಂದು ಬೆಲೆಯೇರಿಕೆ ಹೆಚ್ಚಿರುವ ಸಂದರ್ಭದಲ್ಲಿ ತೆರಿಗೆಗಳನ್ನು ಕಡಿಮೆ ಮಾಡುವ ಬದಲು ಪರೋಕ್ಷ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ, ರಾಜ್ಯಗಳಿಗೆ ಜಿಎಸ್‌ ಟಿ ಪರಿಹಾರವನ್ನು ಮುಂದುವರೆಸಿಲ್ಲ. ಕಾರ್ಪೋರೇಟ್‌ ಕಂಪೆನಿಗಳ ಮೇಲಿನ ತೆರಿಗೆಯನ್ನು 30% ಇಂದ 22% ಗೆ ಇಳಿಕೆ ಮಾಡಿದ್ದಾರೆ ಬಿಟ್ಟರೆ ಇದನ್ನು ಹೆಚ್ಚು ಮಾಡೇ ಇಲ್ಲ. ಬಡವರು, ಸಾಮಾನ್ಯ ಜನರ ಮೇಲಿನ ತೆರಿಗೆಯನ್ನು ಹೆಚ್ಚು ಮಾಡಿದ್ದಾರೆ. ಇದು ಮೋದಿ ಅವರ ಸರ್ಕಾರ ಮಾಡಿರುವ ಘೋರ ಅಪರಾಧ.

ಈಗ ಹೆಚ್ಚು ಮಾಡಿರುವ ತೆರಿಗೆಯನ್ನು ಕಡಿಮೆ ಮಾಡಬೇಕು ಮತ್ತು ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರವನ್ನು ಮುಂದುವರೆಸಬೇಕು ಎಂದು ಒತ್ತಾಯಿಸುತ್ತೇನೆ. ಬೇಕಾದರೆ ಕಾರ್ಪೋರೇಟ್‌ ತೆರಿಗೆ ಏರಿಕೆ ಮಾಡಿ. ಕೊರೊನಾ ಬಂದಾಗ ಕಾರ್ಪೋರೇಟ್‌ ಬಾಡಿಗಳ ಆದಾಯ 33 ಲಕ್ಷ ಕೋಟಿ ಹೆಚ್ಚಾಗಿದೆ. ಇವರ ಮೇಲೆ ತೆರಿಗೆ ಹೆಚ್ಚು ಹಾಕೋದು ಬಿಟ್ಟು ಬಡವರ ಜೀವನ ಯಾಕೆ ಹಾಳು ಮಾಡುತ್ತೀರ? ಈಗಾಗಲೇ ವಸ್ತುಗಳ ಬೆಲೆ ಹೆಚ್ಚಾಗಿ ಜನರಿಗೆ ಬದುಕೋದು ಕಷ್ಟವಾಗಿದೆ ಎಂದು ಕಿಡಿಕಾರಿದರು.

Key words: former CM-Siddaramaiah – continuing- GST- relief

ENGLISH SUMMARY…

Decrease the increased taxes: Siddaramaiah demands to continue GST relief
New Delhi, June 30, 2022 (www.justkannada.in): Leader of the opposition in the legislative assembly Siddaramaiah today, demanded the Government of India to lower the increased taxes and continue providing GST relief for five years.
The GST council meeting was held at Chandigarh on June 28-29. The State Govt.’s representatives who took part in the meeting did not demand to continue the GST relief, which will end as of now. “Earlier, it was decided to provide 14% relief, keeping in mind that the State would incur loss after implementation of the GST. It was introduced on July 1, 2017, and will end now. In the cabinet, I had demanded several times to continue the relief as the States are facing economical crisis. Before GST was introduced the tax increase in Karnataka was 14%. But now if they stop giving the relief, Karnataka alone itself will incur a loss of Rs. 20,000 crore. Many people have demanded to continue it for the next 3 or 5 years. According to me, it should continue for 5 years,” he observed.
“Chief Ministers and Finance Minister of BJP ruled states simply nod their heads for every decision taken by the Central Government. Nobody has the guts to oppose any decision even if it is meting out injustice to their States. However, non-BJP ruling states have urged to continue it. But no decision was taken even in yesterday’s meeting. They are imposing cess to provide GST relief. It is the States which give that also. The Central government itself is collecting the money by imposing cess on luxury items and hazardous items and were given a specific amount as a relief. Though it is continued till 2026 the States won’t get its share. Though cess is collected this way, the States are not getting the relief. I strongly oppose this and demand to continue the GST relief for 5 years,” he said.
He also expressed his view that the increase in GST on several essential commodities is unscientific.
Keywords: Former CM Siddaramaiah/ GST/ Central Govt/ increase/ condemns