ಮೈಸೂರು,ಡಿಸೆಂಬರ್,4,2021(www.justkannada.in): “ಜೆಡಿಎಸ್ ಅಲ್ಲ ಜೆಡಿಎಫ್ ಪಕ್ಷ ಮಾಡಿ ಎಂದು ಟೀಕಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಇಂದು ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಇವರಿಗೆ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಸಿದ್ದರಾಮಯ್ಯ ಮಗ ಶಾಸಕರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಕುಟುಂಬದ ನಾಲ್ವರು ರಾಜಕಾರಣದಲ್ಲಿದ್ದಾರೆ. ಸಿದ್ದರಾಮಯ್ಯ ಮಗ ಅಕಾಲಿಕ ಮರಣಕ್ಕೀಡಾದರು. ಅವರು ಸಹ ಸಕ್ರಿಯ ರಾಜಕಾರಣದಲ್ಲಿದ್ದರು. ರಾಜ್ಯ ರಾಷ್ಟ್ರಕಾರಣದಲ್ಲಿ ಹಲವರು ಈ ರೀತಿ ಇದ್ದಾರೆ. ಬಿಜೆಪಿ ಕಾಂಗ್ರೆಸ್ ಪಕ್ಷದವರು ಇದಕ್ಕೆ ಕಾನೂನು ಜಾರಿ ಮಾಡಲಿ. ತಮ್ಮ ಸಾಮರ್ಥ್ಯದಿಂದ ಸಂವಿಧಾನ ತಿದ್ದುಪಡಿ ಮಾಡಲಿ. ಕುಟುಂಬದ ಎಷ್ಟು ಜನ ರಾಜಕಾರಣಕ್ಕೆ ಬರಬೇಕು ಎಂಬ ನಿಯಮ ಮಾಡಲಿ ಎಂದು ಹೇಳಿದರು.
ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್.ಡಿ ಕುಮಾರಸ್ವಾಮಿ, ನಾವು ಸ್ಪರ್ಧಿಸಿರುವ 6 ಕ್ಷೇತ್ರಗಳಲ್ಲಿ ಯಾರ ಬೆಂಬಲವನ್ನು ಕೇಳಲ್ಲ. ಅವರ ಅಭ್ಯರ್ಥಿ ಸೋಲಿಸಿ ನಮಗೆ ಬೆಂಬಲ ಕೊಡಿ ಎನ್ನಲಾಗಲ್ಲ. ಆರೂ ಕ್ಷೇತ್ರಗಳಲ್ಲಿ ತ್ರಿಕೋನ ಸ್ಪರ್ಧೆ ಇದೆ. ಆದರೆ ನಾವು ಸ್ಪರ್ಧೆ ಮಾಡದ ಕ್ಷೇತ್ರದಲ್ಲಿ ಯಾರಿಗೆ ಬೆಂಬಲ ಕೊಡಬೇಕು ಎರಡು ದಿನದಲ್ಲಿ ತೀರ್ಮಾನ ಮಾಡಲಾಗುತ್ತೆ. ಮುಂದಿನ 2023ರ ಚುನಾವಣೆ ಗಮನಕ್ಕೆ ಇಟ್ಟುಕೊಂಡು ಬೆಂಬಲ ನೀಡುತ್ತೇವೆ ಎಂದರು.
ರಾಜ್ಯ ರಾಜಕಾರಣದಲ್ಲಿ ವೈಯಕ್ತಿಕ ಟೀಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ ಹೆಚ್.ಡಿಕೆ, ಮೈಸೂರು ಸೇರಿದಂತೆ ಇತರ ಕ್ಷೇತ್ರದಲ್ಲಿ ಎಲ್ಲರ ಹೇಳಿಕೆ ನೋಡಿದ್ದೇನೆ. ವೈಯಕ್ತಿಕ ಟೀಕೆ ಅವರ ಸ್ಥಾನಕ್ಕೆ ಅಗೌರವ ತೋರುತ್ತೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ನಾನೂ ಈ ಹಿಂದೆ ಅಂತಹ ಹೇಳಿಕೆಗಳನ್ನ ಕೊಟ್ಟಿದ್ದೆ. ನನ್ನ ಅಭಿಮಾನಿಗಳಲ್ಲಿ ಈ ಬಗ್ಗೆ ಚರ್ಚೆ ಮಾಡಿದ ಮೇಲೆ ನಾನು ತಿದ್ದುಕೊಂಡಿದ್ದೇನೆ. ನನ್ನ ಗುರಿ ಇರೋದು 2023ರ ಚುನಾವಣೆ. ಹಾಗಾಗಿ ವೈಯಕ್ತಿಕ ಟೀಕೆ ಯಾರಿಗೂ ಶೋಭೆ ತರಲ್ಲ ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದರು.
ಸಿದ್ದರಾಮಯ್ಯ ಈ ರೀತಿಯ ಒಂದು ಸ್ಲೇಟ್ ಕುತ್ತಿಗೆಗೆ ಹಾಕಿಕೊಳ್ಳಲಿ.
ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಟೀಕಿಸಿದ ಮಾಜಿ ಸಿಎಂ ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಹೆಚ್.ಡಿ ಕುಮಾರಸ್ವಾಮಿ, ಸಿದ್ದರಾಮಯ್ಯ ತಮ್ಮ ಬಾಯಿಗೆ ಏಕೆ ಶ್ರಮ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ಈ ರೀತಿಯ ಒಂದು ಸ್ಲೇಟ್ ಕುತ್ತಿಗೆಗೆ ಹಾಕಿಕೊಳ್ಳಲಿ ಅದನ್ನು ಕುತ್ತಿಗೆಗೆ ಹಾಕಿಕೊಂಡು ಓಡಾಡಲಿ. ಸುಮ್ಮನೆ ಪದೇ ಪದೇ ಈ ರೀತಿ ಹೇಳಿ ಬಾಯಿ ಏಕೆ ನೋಯಿಸಿಕೊಳ್ಳಬೇಕು. 2018ರಿಂದ ಇದೇ ರೀತಿ ಹೇಳಿಕೆಯನ್ನು ನೀಡುತ್ತಿದ್ದಾರೆ. ಇದು ಸಿದ್ದರಾಮಯ್ಯ ಅವರಿಗೆ ತಿರುಗುಬಾಣವಾಗಲಿದೆ. ಇದರ ಪರಿಣಾಮ 2023ರಲ್ಲಿ ಜೆಡಿಎಸ್ ಗೆ ಲಾಭವಾಗಲಿದೆ. ವಿಧಾನಪರಿಷತ್ ಚುನಾವಣೆಯಲ್ಲೂ ಜೆಡಿಎಸ್ ಗೆ ಸ್ವಲ್ಪ ಅನುಕೂಲವಾಗಲಿದೆ. ಬಿಜೆಪಿ ಅನುಕಂಪದ ಮತ ಜೆಡಿಎಸ್ಗೆ ಬರಲಿದೆ ಎಂದು ತಿಳಿಸಿದರು.
Key words: former CM-Siddaramaiah -criticized – JDS-HD Kumaraswamy