ಬೆಂಗಳೂರು,ಅ,25,2019(www.justkannada.in): ಕೇಂದ್ರ ಸರ್ಕಾರದ ಕೇಂದ್ರ ಸರ್ಕಾರದ ಮುಕ್ತ ವ್ಯಾಪಾರ ಒಪ್ಪಂದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ದೇಶದ ರೈತರನ್ನು ಮತ್ತೊಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮುಕ್ತ ವ್ಯಾಪಾರ ನೀತಿ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ. 2012ರಿಂದ ಇದರ ಚರ್ಚೆ ನಡೆಯುತ್ತಿದೆ. ಇಲ್ಲಿಯವರೆಗೆ 27 ಸಭೆಗಳನ್ನ ನಡೆಸಿದ್ದಾರೆ. ನವೆಂಬರ್ ೪ ರಂದು ರಾಷ್ಟ್ರಗಳ ಸಹಿ ಮಟ್ಟಕ್ಕೆ ತಲುಪಿದೆ. ಏಷ್ಯನ್ ಒಕ್ಕೂಟ ರಾಷ್ಟ್ರಗಳು ಮಲೇಶ್ಯಾ ಕಾಂಬೋಡಿಯಾ, ಇಂಡೋನೇಷ್ಯಾ, ಫಿಲಿಪೈನ್ಸ್, ವಿಯಟ್ನಾಂ ಮಯನ್ಮಾರ್ ಸೇರಿ ಹಲವು ದೇಶಗಳ ನಡುವೆ ಒಪ್ಪಂದವಾಗಿದೆ. ಭಾರತ,ಚೀನಾ,ಆಸ್ಟ್ರೇಲಿಯಾ,ನ್ಯೂಜಿಲೆಂಡ್ ಜಪಾನ್, ಸೌಥ್ ಕೋರಿಯಾಗಳು ಇದಕ್ಕೆ ಒಪ್ಪಿಗೆ ಸೂಚಿಸಿವೆ. ವಿಶ್ವ ಮುಕ್ತಮಾರುಕಟ್ಟೆ ನೀತಿಗೆ ಒಪ್ಪಿಕೊಂಡಿವೆ. ಈ ನೀತಿಯಿಂದ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದರು.
ಕೆಲವು ದೇಶಗಳಲ್ಲಿ ಕೃಷಿ ಉತ್ಪನ್ನ ಹೆಚ್ಚಿದೆ. ಅಂತಹ ರಾಷ್ಟ್ರಗಳು ಈ ನೀತಿಗೆ ಹೊಂಚುಹಾಕುತ್ತಿವೆ. ನಮ್ಮ ದೇಶದಲ್ಲಿ ಅತ್ಯಂತ ಹೆಚ್ಚಿನ ಜನಸಂಖ್ಯೆಯಿದೆ. ಹೀಗಾಗಿ ಇಲ್ಲಿ ವ್ಯಾಪಾರಕ್ಕೆ ಅತೊರೆಯುತ್ತಿದ್ದಾರೆ. ಇದರಿಂದ ನಮ್ಮ ಕೃಷಿ ಕ್ಷೇತ್ರಕ್ಕೆ ಭಾರಿ ಹೊಡೆತ ಬೀಳಲಿದೆ. ಈಗಲೇ ರಫ್ತು ಪ್ರಮಾಣ ನಮ್ಮಲ್ಲಿ ಕಡಿಮೆಯಾಗಿದೆ. ಬೇರೆ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುವುದೇ ಹೆಚ್ಚಿದೆ. ಈ ನೀತಿ ಜಾರಿಗೆ ಬಂದರೆ ಹಾಲಿನ ಉತ್ಪನ್ನ ಆಮದಾಗಲಿವೆ. ಕಡಿಮೆ ದರಕ್ಕೆ ಆಮದಾಗುವುದರಿಂದ ರೈತರಿಗೆ ಹೊಡೆತ ಬೀಳಲಿದೆ. ನಮ್ಮ ರಾಜ್ಯದಲ್ಲಿ ೧೬ ಸಾವಿರ ಹಾಲು ಉತ್ಪನ್ನ ಸಂಘಗಳಿವೆ. ಕೆಎಂಎಫ್ ಗೆ ೭೭ ಲಕ್ಷ ಲೀಟರ್ ಪ್ರತಿದಿನ ಹಾಲು ಸಿಗಲಿದೆ. ಈ ನೀತಿ ಒಪ್ಪಿದರೆ ಕಡಿಮೆ ದರಕ್ಕೆ ಹಾಲು ಸಿಗಲಿದೆ. ಇಲ್ಲಿನ ಹಾಲಿಗೆ ಬೇಡಿಕೆ ಕುಸಿಯಲಿದೆ. ಇದು ರೈತರು ಹೈನುಗಾರಿಕೆ ಹೊಡೆತ ಬೀಳಲಿದೆ ಎಂದು ಮುಕ್ತ ವ್ಯಾಪಾರ ನೀತಿಗೆ ಆಕ್ಷೇಪ ವ್ಯಕ್ತಪಡಿಸಿದರು.
ಮೋದಿಯವರ ಸ್ಟಾರ್ಟ್ ಆಪ್ ಇಂಡಿಯಾ ಮೇಕ್ ಇನ್ ಇಂಡಿಯಾ, ಸ್ಕಿಲ್ ಡೆವಲಪ್ ಮೆಂಟ್ ಉಪಯೋಗವಿಲ್ಲ. ಅವು ಬರೀ ಭಾಷಣದಲ್ಲಷ್ಟೇ ಉಳಿದು ಬಿಟ್ಟಿವೆ. ಹೀಗಾಗಿ ಹೊಸ ನೀತಿಗೆ ಕೇಂದ್ರ ಸರ್ಕಾರ ಒಪ್ಪಬಾರದು. ಸಾರ್ವಜನಿಕರ ಚರ್ಚೆಗೆ ಈ ವಿಚಾರ ಬಿಡಬೇಕು. ಚರ್ಚೆಯಿಲ್ಲದೆ ಒಪ್ಪಂದ ಮಾಡಿಕೊಂಡರೆ ದ್ರೋಹ ಬಗೆದಂತೆ ಎಂದು ಕೇಂದ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಸಲಹೆ ನೀಢಿದರು.
ಮುಕ್ತ ವ್ಯಾಪಾರ ಒಪ್ಪಂದದ ಬಗ್ಗೆ ಸಿದ್ದರಾಮಯ್ಯನವರ ಪತ್ರಿಕಾಗೋಷ್ಠಿಯ ಹೇಳೀದ್ದಿಷ್ಟು……
- ಏಷ್ಯಾದ ಹತ್ತು ಅಸಿಯಾನ್ ದೇಶಗಳು ( ಬ್ರೂನೈ, ಕಾಂಬೋಡಿಯಾ, ಸಿಂಗಾಪುರ, ಫಿಲಿಫ್ಫಿನ್ಸ್, ಇಂಡೋನೇಷಿಯಾ, ಲಾವೋಸ್, ಥೈಲಾಂಡ್,ಮಲೇಷಿಯಾ,ವಿಯೆಟ್ನಾಂ ಮತ್ತು ಮ್ಯಾನ್ಮಾರ್) ಮತ್ತು ಈ ದೇಶಗಳ ಜೊತೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿರುವ ಅಸ್ಟ್ರೇಲಿಯಾ, ಭಾರತ, ಚೀನಾ, ಜಪಾನ್, ಕೊರಿಯಾ ಮತ್ತು ನ್ಯೂಜಿಲೇಂಡ್ ದೇಶಗಳ ನಡುವೆ ‘’ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ( RCEP)ದ ಅಡಿಯಲ್ಲಿ ನಡೆಯಲಿರುವ ಮುಕ್ತ ವ್ಯಾಪಾರ ಒಪ್ಪಂದ (FTA)ದ ಬಗ್ಗೆ ಮಾತುಕತೆಗಳು ಅಂತಿಮ ಹಂತದಲ್ಲಿವೆ.
- ಇದೇ ನವಂಬರ್ 4ರಂದು ಅಂತಿಮ ಸಹಿ ಬೀಳುವ ನಿರೀಕ್ಷೆ ಇದೆ. ಈ ಒಪ್ಪಂದ ನಡೆದುಹೋದರೆ ಈ ಗುಂಪಿನ ಹದಿನಾರು ದೇಶಗಳು ಶೇಕಡಾ 80ರಿಂದ 90ರಷ್ಟು ಸರಕುಗಳನ್ನು ಯಾವುದೇ ಆಮದು ಸುಂಕ ಇಲ್ಲದೆ/ಕಡಿಮೆ ಆಮದು ಸುಂಕ ತೆತ್ತು ಆಮದು ಮಾಡಿಕೊಳ್ಳಬಹುದಾಗಿದೆ. ಈ ವ್ಯಾಪಾರ ಒಪ್ಪಂದ ಮುಂದಿನ ದಿನಗಳಲ್ಲಿ ಬಹುತೇಕ ಕೃಷಿ ಸರಕುಗಳ ಮೇಲಿನ ಆಮದು ಸುಂಕವನ್ನು ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ.
- ಈ ಗುಂಪಿನಲ್ಲಿರುವ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ಭಾರತಕ್ಕೆ ರಫ್ತು ಮಾಡುತ್ತವೆ. ಇದರಿಂದಾಗಿ ಕೇವಲ ಹೈನುಗಾರಿಕೆ ಮಾತ್ರವಲ್ಲ, ಗದ್ದೆಯ ಮತ್ತು ತೋಟದ ಬೆಳೆಗಳು, ಸಾಂಬಾರ ಪದಾರ್ಥಗಳು ಹೀಗೆ ಎಲ್ಲ ಬಗೆಯ ಕೃಷಿ ಉತ್ಪನ್ನಗಳ ಮೇಲೆಯೂ ಒಪ್ಪಂದ ಪರಿಣಾಮ ಬೀರಲಿದೆ. ಔಷಧಿಗಳ ಬೆಲೆ ಕೂಡಾ ಹೆಚ್ಚಾಗಲಿದೆ.
- ಈಗ ಲಭ್ಯ ಇರುವ ಮಾಹಿತಿಗಳ ಪ್ರಕಾರ ಮುಕ್ತ ವ್ಯಾಪಾರ ಒಪ್ಪಂದದಿಂದ ಬಹಳ ದೊಡ್ಡ ಪ್ರಮಾಣದಲ್ಲಿ ಬಾದಿತವಾಗುವುದು ಹೈನುಗಾರಿಕೆ. ಪ್ರಸ್ತುತ ನಮ್ಮ ದೇಶದಲ್ಲಿ ಉಳಿದೆಲ್ಲ ದೇಶಗಳಿಗಿಂತ ಹೆಚ್ಚು ಅಂದರೆ ಸುಮಾರು ಒಂದುವರೆ ಕೋಟಿ ಕುಟುಂಬಗಳು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿವೆ. ನಮ್ಮ ರಾಜ್ಯದಲ್ಲಿಯೇ ಪ್ರತಿದಿನ ಸುಮಾರು 86 ಲಕ್ಷ ಲೀಟರ್ ಹಾಲು ಉತ್ಪಾಧನೆಯಾಗುತ್ತಿದೆ. ನಮ್ಮ ಲಕ್ಷಾಂತರ ಸಣ್ಣ ರೈತರು ವಿಶೇಷವಾಗಿ ಮಹಿಳೆಯರ ಜೀವನೋಪಾಯಕ್ಕೆ ದಾರಿಯಾಗಿರುವದು ಹೈನುಗಾರಿಕೆ. ಕ್ಷೇತ್ರ ಎದುರಿಸಲಿವೆ.
- ನ್ಯೂಜಿಲೇಂಡ್, ಅಸ್ಟ್ರೇಲಿಯಾದಂತಹ ದೇಶಗಳಿಂದ ಅಗ್ಗದ ದರದ ಹಾಲು ಆಮದು ಮಾಡಿಕೊಳ್ಳಲು ಅವಕಾಶ ನೀಡುವ ಆರ್ ಸಿಎಪಿ ನಮ್ಮ ರೈತರನ್ನು ಬೀದಿ ಪಾಲು ಮಾಡಲಿದೆ.
- ದೇಶದಲ್ಲಿ ಸಹಕಾರ ಕ್ಷೇತ್ರದ ಸುಮಾರು 1.86 ಲಕ್ಷ ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಇವುಗಳಲ್ಲಿ 32000 ಸೊಸೈಟಿಗಳು ಮಹಿಳೆಯರ ನೇತೃತ್ವದಲ್ಲಿ ನಡೆಯುತ್ತಿವೆ. ಸಹಕಾರಿ ಕ್ಷೇತ್ರದ ಹೈನೋದ್ಯಮದಲ್ಲಿ ಗುಜರಾತ್ ರಾಜ್ಯದ ಅಮುಲ್ ಮತ್ತು ನಮ್ಮ ರಾಜ್ಯದ ಕೆಎಂಎಫ್ ಯಶಸ್ವಿ ಸಂಸ್ಥೆಗಳು.
- ಪ್ರಸ್ತುತ ವಿದೇಶಿ ಕಂಪೆನಿಗಳು ಜಂಟಿ ಸಹಭಾಗಿತ್ವದಲ್ಲಿ ಮಾತ್ರ ಹೈನುಗಾರಿಕೆಯ ಕ್ಷೇತ್ರ ಪ್ರವೇಶಿಸಲು ಸಾಧ್ಯ. ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿಹಾಕಿದರೆ ವಿಶ್ವದ ಅನೇಕ ಬಹುರಾಷ್ಟ್ರೀಯ ಕಂಪೆನಿಗಳು ನೇರವಾಗಿ ಇಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲಿವೆ. ಇದರಿಂದಾಗಿ ಸಹಕಾರಿ ಕ್ಷೇತ್ರದಲ್ಲಿ ಯಶಸ್ವಿಯಾಗಿರುವ ನಮ್ಮ ಹಾಲಿನ ಒಕ್ಕೂಟಗಳು ನಾಶವಾಗಲಿವೆ. ನಮ್ಮ ಅಸಹಾಯಕ ರೈತರು ಈ ವಿದೇಶಿ ಕಂಪೆನಿಗಳ ಜೀತದಾರರಾಗಲಿದ್ದಾರೆ.
- ನಾನು ಮುಖ್ಯಮಂತ್ರಿಯಾಗಿದ್ದಾಗ ಹೈನುಗಾರಿಕೆಗೆ ಉತ್ತೇಜನ ನೀಡಲು ‘ಕ್ಷೀರಧಾರೆ’ ಯೋಜನೆಯಡಿ ಪ್ರತಿ ಲೀಟರ್ ಹಾಲಿಗೆ 5 ರೂಪಾಯಿ ಪ್ರೊತ್ಸಾಹ ಧನ ನೀಡಿದೆ. ಇದರಿಂದ ಹಾಲಿನ ಉತ್ಪಾದನೆ ಹೆಚ್ಚಿದಾಗ ಆ ಹಾಲನ್ನು ನಾಡಿನ ಶಾಲಾ ಮಕ್ಕಳಿಗೆ ನೀಡಿ ಅವರನ್ನು ಆರೋಗ್ಯವಂತರನ್ನಾಗಿ ಮಾಡುವ ‘’ಕ್ಷೀರಭಾಗ್ಯ’’ ಯೋಜನೆಯನ್ನು ಜಾರಿಗೆ ತಂದೆ. ಮೋದಿ ಸರ್ಕಾರ ಒಂದೆಡೆ ರೈತರನ್ನು, ಇನ್ನೊಂದೆಡೆ ಶಾಲಾ ಮಕ್ಕಳ ಬದುಕು ಕಸಿಯಲು ಹೊರಟಿದೆ.
- ಸಹಕಾರ ಕ್ಷೇತ್ರದ ಹಾಲಿನ ಸೊಸೈಟಿಗಳಿಂದಾಗಿ ರೈತರು ಮಧ್ಯವರ್ತಿಗಳ ಹಾವಳಿ ಇಲ್ಲದೆ ಹಾಲು ಮಾರಾಟ ದರದ ಶೇಕಡಾ 70ರಷ್ಟನ್ನು ರೈತರು ಪಡೆಯುತ್ತಿದ್ದಾರೆ.
- ನ್ಯೂಜಿಲೇಂಡ್ ಮತ್ತು ಅಸ್ಟ್ರೇಲಿಯಾ ದೇಶಗಳಲ್ಲಿ ಹಾಲನ್ನು ಕಾರ್ಖಾನೆಗಳ ರೀತಿಯಲ್ಲಿ ಉತ್ಪಾದಿಸುತ್ತಾರೆ. ಅಲ್ಲಿ ದನ-ಎಮ್ಮೆಗಳಿಂದ ಹೆಚ್ಚಿನ ಹಾಲು ಪಡೆಯಲು ಅಪಾಯಕಾರಿ ಔಷಧಗಳನ್ನು ನೀಡುತ್ತಿರುವ ಆರೋಪಗಳಿವೆ. ಇದರಿಂದಾಗಿ ಅವರಿಗೆ ಕಡಿಮೆ ಬೆಲೆಯಲ್ಲಿ ಹೆಚ್ಚು ಪ್ರಮಾಣದ ಹಾಲು ಪಡೆಯಲು ಸಾಧ್ಯವಾಗುತ್ತಿದೆ. ಭಾರತದಲ್ಲಿ ಹಸು-ಎಮ್ಮೆಗಳನ್ನು ಮನೆ ಸದಸ್ಯರಂತೆ ಲಾಲನೆ-ಪಾಲನೆ ಮಾಡುತ್ತಾರೆ. ಗೋವನ್ನು ದೇವರೆಂದು ಪೂಜಿಸುತ್ತೇವೆ ಎಂದು ಹೇಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಪರಿವಾರದ ನಾಯಕರು ಗೋವುಗಳನ್ನು ಪ್ರೀತಿ-ಕಾಳಜಿಯಿಂದ ಸಾಕುತ್ತಿರುವುದಕ್ಕಾಗಿ ಅವರನ್ನು ಶಿಕ್ಷಿಸಲು ಹೊರಟಿದೆಯೇ?
- ಹೊಸ ಒಪ್ಪಂದ ನಮ್ಮ ಬೆಳೆಗಳ ಬೀಜದ ಮೇಲೆಯೂ ಪರಿಣಾಮ ಬೀರಲಿದೆ. ಬೀಜ ಕಂಪನಿಗಳು ತಮ್ಮ ಬೌದ್ಧಿಕ ಆಸ್ತಿ ಹಕ್ಕುಗಳನ್ನು ರಕ್ಷಿಸಲು ಹೆಚ್ಚಿನ ಅಧಿಕಾರವನ್ನು ಪಡೆಯುತ್ತದೆ ಮತ್ತು ಬೀಜಗಳನ್ನು ಉಳಿಸಿ ವಿನಿಮಯ ಮಾಡಿಕೊಳ್ಳುವಾಗ ರೈತರು ಅಪರಾಧಿಗಳಾಗುತ್ತಾರೆ .
- ಈ ಒಪ್ಪಂದದ ಇನ್ನೊಂದು ಅಪಾಯಕಾರಿ ಷರತ್ತು ವ್ಯಾಜ್ಯ ಇತ್ಯರ್ಥಕ್ಕಾಗಿ ಇರುವ ಹೂಡಿಕೆದಾರರು ಮತ್ತು ಸಂಬಂಧಿತ ದೇಶಗಳ ನಡುವಿನ ವ್ಯಾಜ್ಯ ಇತ್ಯರ್ಥ ವ್ಯವಸ್ಥೆ ( ಐಎಸ್ ಡಿಎಸ್). ಯಾವುದೇ ದೇಶದೊಂದಿಗೆ ಹೂಡಿಕೆದಾರರಿಗೆ ವ್ಯಾಜ್ಯ ಉಂಟಾದರೆ ಅದನ್ನು ಐಎಸ್ ಡಿಎಸ್ ಮೂಲಕ ಬಗೆಹರಿಸಿಕೊಳ್ಳಬೇಕಾಗುತ್ತದೆ.
- ಇದು ನಮ್ಮ ದೇಶದ ನ್ಯಾಯಾಲಯಗಳನ್ನು ಬೈಪಾಸ್ ಮಾಡಿ ಖಾಸಗಿ ಮಧ್ಯಸ್ತಿಕೆದಾರರ ಮೂಲಕ ವ್ಯಾಜ್ಯ ಇತ್ಯರ್ಥ ಮಾಡುವ ವ್ಯವಸ್ಥೆ. ಈ ಪ್ರಕ್ರಿಯೆ ಕೂಡಾ ವಿಶ್ವಸಂಸ್ಥೆ ಇಲ್ಲವೇ ವಿಶ್ವಬ್ಯಾಂಕ್ ಕೇಂದ್ರಗಳಲ್ಲಿ ನಡೆಯಲಿದೆ. ನಮ್ಮ ಬಡ ರೈತರು ನ್ಯಾಯ ಕೇಳಲು ಅಲ್ಲಿಗೆ ಹೋಗಲು ಸಾಧ್ಯವೇ? ನಮ್ಮ ರೈತರ ಪರವಾಗಿ ನಮ್ಮ ಸರ್ಕಾರಗಳು ಎಷ್ಟು ಆಸಕ್ತಿಯಿಂದ ಆ ಕೆಲಸ ಮಾಡಲು ಸಾಧ್ಯ?
- ಈ ಒಪ್ಪಂದದ ಮೂಲಕ ಸೋರಿಕೆಯಾದ ದಾಖಲೆಗಳು ವಿದೇಶಿ ಹೂಡಿಕೆದಾರರು ಕೃಷಿ ಭೂಮಿಯನ್ನು ಖರೀದಿಸಲು ಸಾಧ್ಯವಾಗುತ್ತದೆ ಮತ್ತು ಸರಕು ಮತ್ತು ಸೇವೆಗಳು ಸರ್ಕಾರಿ ಸಾರ್ವಜನಿಕ ಸಂಗ್ರಹಣೆಯಲ್ಲಿ ವಿದೇಶಿ ಕಂಪೆನಿಗಳು ಸಹ ಬೆಂಬಲವನ್ನು ಪಡೆಯಬಹುದು ಎಂಬುದನ್ನು ಸೂಚಿಸುತ್ತದೆ. ಸೂಪರ್ ಮಾರ್ಕೆಟ್ ಮತ್ತು ದೊಡ್ಡ ಕಂಪನಿಗಳ ನೇರ ಚಿಲ್ಲರೆ ವ್ಯಾಪಾರವು ಸ್ಥಳೀಯ ಮಾರುಕಟ್ಟೆಗಳನ್ನು ನಾಶ ಮಾಡಲು ಹೆಚ್ಚಿನ ಶಕ್ತಿಯನ್ನು ಪಡೆಯಲಿದೆ.
- ಈ ಒಪ್ಪಂದದಲ್ಲಿ ಉಳಿದೆಲ್ಲ ದೇಶಗಳಿಗಿಂತ ಚೀನಾ ಸೇರಿಕೊಂಡಿರುವುದು ಭಾರತದ ಚಿಂತೆಗೆ ಕಾರಣವಾಗಿದೆ. ಒಂದೆಡೆ ಚೀನಾ ವ್ಯಾಪಾರ ವಹಿವಾಟಿಗೆ ಸಂಬಂಧಿಸಿದಂತೆ ಅಮೆರಿಕದ ಜೊತೆ ಸಂಘರ್ಷದಲ್ಲಿ ತೊಡಗಿದೆ. ಚೀನಾದ ಜೊತೆ ಭಾರತ ಮುಕ್ತ ವ್ಯಾಪಾರದ ಒಪ್ಪಂದ ವೇರ್ಪಟ್ಟರೆ ಭಾರತ ಅನಿವಾರ್ಯವಾಗಿ ಅಮೆರಿಕ ವಿರೋಧಿ ನಿಲುವನ್ನು ತೆಗೆದುಕೊಳ್ಳಬೇಕಾಗುತ್ತದೆ.
- ಈಗಾಗಲೇ ಅಗ್ಗದ ಬೆಲೆಯ ವಸ್ತುಗಳು ಚೀನಾ ದೇಶದಿಂದ ಆಮದಾಗುತ್ತಿರುವುದರಿಂದ ದೇಶದ ಸಣ್ಣ ಮತ್ತು ಬೃಹತ್ ಉದ್ಯಮಗಳು, ಗುಡಿಕೈಗಾರಿಕೆಗಳು, ಕೃಷಿ ಕ್ಷೇತ್ರ ಅನಾರೋಗ್ಯಕರವಾದ ಪೈಪೋಟಿಯನ್ನು ಎದುರಿಸಿ ನಾಶವಾಗುತ್ತಿವೆ. ಲಭ್ಯ ಇರುವ ಮಾಹಿತಿ ಪ್ರಕಾರ ಆರ್ ಸಿಇಪಿ ಒಪ್ಪಂದ ನಡೆದು ಹೋದರೆ ಚೀನಾ ದೇಶದ ಶೇಕಡಾ 80ರಷ್ಟು ಉತ್ಪನ್ನಗಳ ಮೇಲಿನ ಆಮದು ಸುಂಕ ಕಡಿಮೆಯಾಗಲಿದೆಯಂತೆ.
- 2001-02ರಲ್ಲಿ ಭಾರತ-ಚೀಣಾ ನಡುವೆ ವ್ಯಾಪಾರ ಪ್ರಾರಂಭವಾದ ದಿನದಿಂದ 2018-19ರ ವರೆಗೆ ಭಾರತ ನಿರಂತರವಾಗಿ ವ್ಯಾಪಾರ ಕೊರತೆಯನ್ನು ಅನುಭವಿಸುತ್ತಾ ಬಂದಿದೆ.
- ಉದಾಹರಣೆಗೆ 2001-02ರಲ್ಲಿ ಒಂದು ಶತಕೋಟಿ ಡಾಲರ್ ಇದ್ದ ವ್ಯಾಪಾರಿ ಕೊರತೆ 2017-18ರ ಹೊತ್ತಿಗೆ 63 ಶತಕೋಟಿ ಡಾಲರ್ ಗೆ ಏರಿದೆ. ಭಾರತದ ಒಟ್ಟು ವ್ಯಾಪಾರ ಕೊರತೆಯಲ್ಲಿ ಚೀನಾದ ಪಾಲು ಶೇಕಡಾ 50ರಷ್ಟಿದೆ ಇಂತಹ ಚೀನಾದೊಂದಿಗೆ ಶೇಕಡಾ 90ರಷ್ಟು ಸರಕುಗಳನ್ನು ಆಮದು ಮಾಡಿಕೊಳ್ಳಬೇಕಾದರೆ ಭಾರತ ನಿಜಕ್ಕೂ ಹಲವು ಬಾರಿ ಯೋಚನೆ ಮಾಡಬೇಕಾಗಿದೆ
- ಅಸ್ತಿತ್ವದ ಬಿಕ್ಕಟ್ಟನ್ನು ಎದುರಿಸುತ್ತಿರುವುದು ರೈತರು ಮಾತ್ರವಲ್ಲ – ರಾಷ್ಟ್ರದ ಆಹಾರ ಸಾರ್ವಭೌಮತ್ವವೂ ಇಲ್ಲಿ ಅಪಾಯಕ್ಕೆ ಸಿಲುಕಲಿದೆ . ಕೃಷಿಯನ್ನು ಎಲ್ಲಾ ಮುಕ್ತ ವ್ಯಾಪಾರ ಒಪ್ಪಂದಗಳ ವ್ಯಾಪ್ತಿಯಿಂದ ದೂರವಿರಿಸುವ ಮೂಲಕ ದೇಶವನ್ನು ರಕ್ಷಿಸಬಬೇಕಾಗಿದೆ.
- ಲಭ್ಯ ಮಾಹಿತಿ ಪ್ರಕಾರ ಆರ್ ಸಿಇಪಿಯ ಹೂಡಿಕೆಯ ಷರತ್ತುಗಳನ್ನು ಭಾರತ ಒಪ್ಪಿಕೊಂಡಿದೆಯಂತೆ. ಇದರಂತೆ ಭಾರತದಲ್ಲಿ ಬಂಡವಾಳ ಹೂಡುವ ವಿದೇಶಿ ಕಂಪೆನಿಗಳು ಭಾರತದೊಳಗಿನ ಪಾಲುದಾರರಿಗೆ ತಂತ್ರಜ್ಞಾನವನ್ನು ವರ್ಗಾಯಿಸಬೇಕಾಗಿಲ್ಲ.
- ಪ್ರಜಾಪ್ರಭುತ್ವ ದೇಶದಲ್ಲಿ ಸರ್ಕಾರ ನೀತಿ-ನಿರ್ಧಾರಗಳಲ್ಲಿ ಪಾರದರ್ಶಕತೆಯನ್ನು ಕಾಪಾಡಿಕೊಂಡು ಬರಬೇಕಾಗುತ್ತದೆ. ಕೋಟ್ಯಂತರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ಮಹತ್ವದ ವ್ಯಾಪಾರಿ ಒಪ್ಪಂದದ ವಿವರವನ್ನು ಸಾರ್ವಜನಿಕ ಚರ್ಚೆಗೆ ಬಿಡದೆ ಗೌಪ್ಯತೆಯನ್ನು ಕಾಪಾಡಿಕೊಂಡು ಬರುತ್ತಿರುವುದು ಹಲವಾರು ಬಗೆಯ ಗುಮಾನಿಗಳಿಗೆ ಕಾರಣವಾಗಿದೆ.
- ಇನ್ನು ಕೆಲವೇ ದಿನಗಳಲ್ಲಿ (ನವಂಬರ್ 4) ಈ ಒಪ್ಪಂದಕ್ಕೆ ಭಾರತ ಕೂಡಾ ಸಹಿ ಹಾಕಬೇಕಾಗಿದೆ. ಅದಕ್ಕಿಂತ ಮೊದಲು ಒಪ್ಪಂದದ ಕರಡನ್ನು ಬಹಿರಂಗಗೊಳಿಸಬೇಕು ಮತ್ತು ರೈತರು, ವ್ಯಾಪಾರಿಗಳು, ಉದ್ಯಮಿಗಳು ಹೀಗೆ ಈ ಒಪ್ಪಂದಕ್ಕೆ ಬದ್ಧವಾಗಿರಬೇಕಾದ ಎಲ್ಲ ಪಾಲುದಾರರ ಜೊತೆ ಕೇಂದ್ರ ಸರ್ಕಾರ ಚರ್ಚೆ ನಡೆಸಬೇಕು.
- ಈ ಒಪ್ಪಂದದ ಸಾಮಾಜಿಕ, ಆರ್ಥಿಕ ಮತ್ತು ಪರಿಸರದ ಹಾನಿಗೆ ಸಂಬಂಧಿಸಿದ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಬೇಕು.
- ಯುಪಿಎ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆಯಲ್ಲಿ ಭಾಗಿಯಾಗಿದ್ದು ನಿಜ. ಆದರೆ ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ರೈತರ ಹಿತಾಸಕ್ತಿ ಕಾಪಾಡಲು ಕೆಲವು ಬದಲಾವಣೆಗಳನ್ನು ಬಯಸಿದ್ದರು. ಆದರೆ ನರೇಂದ್ರಮೋದಿಯವರು ಇಡೀ ದೇಶವನ್ನು ಕತ್ತಲಲ್ಲಿಟ್ಟು ಈ ಒಪ್ಪಂದಕ್ಕೆ ಸಹಿ ಹಾಕಲು ಹೊರಟಿದ್ದಾರೆ. ಎಲ್ಲಿದೆ ಪಾರದರ್ಶಕತೆ?
- ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮುಕ್ತ ವ್ಯಾಪಾರ ಒಪ್ಪಂದ (FTA) ವಿರೋಧಿಸಲು ಕರೆ ನೀಡಿರುವುದನ್ನು ಸ್ವಾಗತಿಸುತ್ತೇನೆ. ಭಾರತೀಯ ರೈತರನ್ನು ಮತ್ತೊಂದು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಒಳಪಡಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಇದು ಖಂಡಿತ ನಮ್ಮ ರೈತರ ಹಿತಾಸಕ್ತಿಗೆ ವಿರುದ್ಧವಾದುದು. ಆರ್.ಸಿ.ಇ.ಪಿ ಮುಕ್ತ ವ್ಯಾಪಾರ ಒಪ್ಪಂದ ನಡೆಯದಂತೆ ಇಡೀ ದೇಶ ಹೋರಾಟ ನಡೆಸಬೇಕಾದ ಅಗತ್ಯ ಇದೆ. ನಮ್ಮ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನೂ ರೈತ ವಿರೋಧಿ ಒಪ್ಪಂದದ ಹೋರಾಟದಲ್ಲಿ ತೊಡಗಿಸಿಕೊಳ್ಳಬೇಕು.
Key words: Former CM –Siddaramaiah- opposes- free trade agreement- central government.