ಬೆಂಗಳೂರು,ಜು,30,2019(www.justkannada.in): ಮಾಜಿ ಸಿಎಂ ಎಸ್.ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ನಿಗೂಢವಾಗಿ ನಾಪತ್ತೆಯಾಗುವ ಮೂರು ದಿನಗಳ ಮೊದಲೇ ಪತ್ರವೊಂದನ್ನು ಬರೆದಿದ್ದು ಪತ್ರದಲ್ಲಿ ಐಟಿ ಅಧಿಕಾರಿಗಳ ಕಿರುಕುಳ ಮತ್ತು ವ್ಯವಹಾರದಲ್ಲಿ ನಷ್ಟದ ಬಗ್ಗೆ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಕಳೆದ ಮೂರು ದಿನಗಳ ಹಿಂದೆ ಅಂದರೇ ಜುಲೈ 27 ರಂದು ಸಿದ್ಧಾರ್ಥ್ ಪತ್ರ ಬರೆದಿದ್ದಾರೆ ಎನ್ನಲಾಗಿದ್ದು, ಪತ್ರದಲ್ಲಿ ವ್ಯವಹಾರಿಕವಾಗಿ ನನಗೆ ಸಾಕಷ್ಟು ನಷ್ಟವಾಗಿದೆ. ವ್ಯವಹಾರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗಿಲ್ಲ. ಹಾಗೆಂದು ಯಾರಿಗೂ ಮೋಸ ಮಾಡುವ ಉದ್ದೇಶ ನನಗಿಲ್ಲ. ಅಡಿಟರ್ ಗಳಿಗೆ ಕಣ್ಣುತಪ್ಪಿಸಿ ನಾನು ಹಣ ವರ್ಗಾವಣೆ ಮಾಡಿದ್ದೆ. ನಾನು ಉದ್ಯಮಿಯಾಗಿ ವಿಫಲನಾಗಿದ್ದೇನೆ. ನನ್ನೆಲ್ಲಾ ತಪ್ಪುಗಳಿಗೆ ನಾನೇ ಕಾರಣ ಎಂದು ಪತ್ರದಲ್ಲಿ ಬರೆದಿದ್ದಾರೆ.
ಇನ್ನು ಪತ್ರದಲ್ಲಿ ಐಟಿ ಅಧಿಕಾರಿಗಳ ಕಿರುಕುಳದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಐಟಿಯ ಹಿಂದಿನ ಡಿಜಿ ತಮಗೆ ಕಿರುಕುಳ ನೀಡಿದ್ದಾರೆ. 2 ಬಾರಿ ನನ್ನ ಕಂಪನಿಯ ಷೇರುಗಳನ್ನು ಜಪ್ತಿ ಮಾಡಿದರು. ಇದರಿಂದ ನನ್ನ ಮೈಂಡ್ ಟ್ರೀ ಕಂಪನಿಯ ಶೇರು ಮಾರಾಟ ಮಾಡಲು ಸಮಸ್ಯೆಯಾಯಿತು ಎಂದು ಸಿದ್ಧಾರ್ಥ್ ಪತ್ರದಲ್ಲಿ ತಿಳಿಸಿದ್ದಾರೆ. ಕೆಫೆ ಕಾಫಿ ಡೇ ವ್ಯವಹಾರದಲ್ಲಿ ಸಿದ್ಧಾರ್ಥ ಅವರಿಗೆ ಭಾರಿ ನಷ್ಟವಾಗಿತ್ತು ಎನ್ನಲಾಗಿದ್ದು, ಈ ನಡುವೆ ಸಿದ್ಧಾರ್ಥ್ ಅವರ ಪತ್ತೆಗಾಗಿ ಶೋಧಕಾರ್ಯ ನಡೆಯುತ್ತಿದೆ.
Key words: Former CM- SM Krishna’s- son-in-law -Siddharth -written – letter- before