ಹಿಸಾರ್, ಹರ್ಯಾಣ, ಅಕ್ಟೋಬರ್ 18, 2021 (www.justkannada.in): ಉಚ್ಛ ನ್ಯಾಯಾಲಯದ ಆದೇಶಗಳ ಪ್ರಕಾರ ಹರ್ಯಾಣ ರಾಜ್ಯದ ಪೊಲೀಸರು ಜಾತಿನಿಂದನೆ ಆರೋಪದ ಮೇಲೆ ಮಾಜಿ ಕ್ರಿಕೆಟಿಗ ಯುವರಾಜ ಸಿಂಗ್ ಅವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಿರುವ ಪ್ರಕರಣ ವರದಿಯಾಗಿದೆ.
ಕಳೆದ ವರ್ಷ ಇನ್ ಸ್ಟಾಗ್ರಾಂ ಚಾಟ್ ವೊಂದರಲ್ಲಿ ಖ್ಯಾತ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಜಾತಿನಿಂದನೆ ಮಾಡಿರುವ ಆರೋಪವನ್ನು ಎದುರಿಸುತ್ತಿದ್ದರು. ಈ ಸಂಬಂಧ ದೂರವಾಣಿ ಮೂಲಕ ಮಾಧ್ಯಮದೊಂದಿಗೆ ಮಾತನಾಡಿರುವ ಪೊಲೀಸ್ ವರಿಷ್ಠಾಧಿಕಾರಿ (ಹನ್ಸಿ) ನಿತಿಕಾ ಗಾಲೌಟ್ ಅವರು, “ನಾವು ಪಂಜಾಬ್ ಮತ್ತು ಹರ್ಯಾಣ ಉಚ್ಛ ನ್ಯಾಯಾಲಯದ ಆದೇಶಗಳ ಪ್ರಕಾರ ಯುವಿ ಅವರನ್ನು ಔಪಚಾರಿಕವಾಗಿ ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದೇವೆ,” ಎಂದು ತಿಳಿಸಿದ್ದಾರೆ.
“ಯುವರಾಜ್ ಸಿಂಗ್ ಅವರು ಶನಿವಾರದಂದು ಹನ್ಸಿಗೆ ಆಗಮಿಸಿದರು. ಅವರನ್ನು ಔಪಚಾರಿಕವಾಗಿ ಬಂಧಿಸಲಾಯಿತು. ಕೆಲವು ಗಂಟೆಗಳ ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆವು,” ಎಂದು ಹನ್ಸಿಯ ಡಿಎಸ್‌ಪಿ ವಿನೋದ್ ಶಂಕರ್ ಅವರು ತಿಳಿಸಿದ್ದಾರೆ.
ಯುವಿಯ ‘ಔಪಚಾರಿಕ ಬಂಧನ’ದ ಕುರಿತು ಹರ್ಯಾಣ ಪೊಲೀಸರಿಗೆ ಮಾನ್ಯ ಉಚ್ಛ ನ್ಯಾಯಾಲಯ, ಕ್ರಿಕೆಟಿಗನನ್ನು ಸೂಕ್ತ ಜಾಮೀನು ಹಾಗೂ ಶ್ಯೂರಿಟಿ ಬಾಂಡ್ ಗಳನ್ನು ಒದಗಿಸಿದರೆ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸುವಂತೆಯೂ ಸೂಚಿಸಿತ್ತು.
ಮಾನ್ಯ ಉಚ್ಛ ನ್ಯಾಯಾಲಯವು ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಈ ವರ್ಷದ ಆರಂಭದಲ್ಲಿ, ತಮ್ಮ ವಿರುದ್ಧ ಹಿಸ್ಸಾರ್ ನ ಹನ್ಸಿ ಪೊಲೀಸ್ ಠಾಣೆಯಲ್ಲಿ ವಕೀಲ ರಜತ್ ಕಲ್ಸನ್ ಅವರು ಐಪಿಸಿ ಹಾಗೂ ಎಸ್‌ಸಿ/ಎಸ್‌ಟಿ (ದೌರ್ಜನ್ಯಗಳ ತಡೆಗಟ್ಟುವಿಕೆ) ಕಾಯ್ದೆಯ ಕಲಂಗಳಡಿ ದಾಖಲಿಸಿದ್ದ ಎಫ್‌ಐಆರ್ ಅನ್ನು ರದ್ದುಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದರು. ಮಾನ್ಯ ಉಚ್ಛ ನ್ಯಾಯಾಲಯವು ಈ ಮನವಿಯ ವಿಚಾರಣೆಯನ್ನು ನಡೆಸಿತು.
ವಕೀಲ ಕಲ್ಸನ್ ಅವರು , ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ದಲಿತ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ತರುವಂತಹ ಮಾತುಗಳನ್ನಾಡಿದ್ದಾರೆ ಎಂದು ಮತ್ತು ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಬೃಹತ್ ಸಂಖ್ಯೆಯ ಜನರು ವೀಕ್ಷಿಸಿರುವುದಾಗಿ ಆರೋಪಿಸಿ ಕಳೆದ ವರ್ಷ ಈ ಕುರಿತು ಪೊಲೀಸರಿಗೆ ದೂರನ್ನು ನೀಡಿದ್ದರು.
ಈ ಸಂಬಂಧ ತಮ್ಮ ತಪ್ಪೊಪ್ಪಿಗೆ ಟ್ವೀಟ್ ನಲ್ಲಿ ಯುವರಾಜ್ ಸಿಂಗ್ ಅವರು, “ನನ್ನ ಸ್ನೇಹಿತರೊಂದಿಗೆ ನಾನು ನಡೆಸಿದಂತಹ ಸಂಭಾಷಣೆಯೊಂದರಲ್ಲಿ ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ, ಅದು ನಿಜವಾಗಿಯೂ ನನ್ನ ಉದ್ದೇಶವಾಗಿರಲಿಲ್ಲ. ಆದರೂ ಸಹ ಓರ್ವ ಜವಾಬ್ದಾರಿಯುತ ಭಾರತೀಯ ನಾಗರಿಕನಾಗಿ, ನನ್ನ ಮಾತುಗಳಿಂದ ಯಾವುದಾದರೂ ವ್ಯಕ್ತಿಯ ಭಾವನೆಗಳಿಗೆ ನೋವಾಗಿದ್ದರೆ ಅದಕ್ಕೆ ಕ್ಷಮೆಯಾಚಿಸುತ್ತೇನೆ,” ಎಂದು ಬರೆದುಕೊಂಡಿದ್ದಾರೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Former cricketer- Yuvraj Singh -arrested – Release- caste abuse