ಮೈಸೂರು,ಜೂನ್,7,2023(www.justkannada.in): ಮಾಜಿ ಸಚಿವ ಕೋಟೆ ಶಿವಣ್ಣ ಅವರ ಐಷಾರಾಮಿ ಕಾರನ್ನ ಮೂವರು ಮುಸುಕುದಾರಿಗಳು ಬಂದು ಕಳ್ಳತನ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ವಿಜಯನಗರ ಮೂರನೇ ಹಂತದಲ್ಲಿ ಈ ಘಟನೆ ನಡೆದಿದೆ. ಮಾಜಿ ಸಚಿವ ಕೋಟೆ ಶಿವಣ್ಣ ಅವರಿಗೆ ಸೇರಿದ ಇನ್ನೋವಾ ಕಾರನ್ನ ಖದೀಮರು ಕದ್ದೊಯ್ದಿದ್ದಾರೆ. ಮುಖಕ್ಕೆ ಮಾಸ್ಕ್ ಹಾಕಿ, ರಾಜಾ ರೋಷವಾಗಿ ಮನೆಗೆ ನುಗ್ಗಿದ ಕಳ್ಳರು ಈ ಕೃತ್ಯವೆಸಗಿದ್ದಾರೆ.
ಜೂನ್ 6ರ ಮಧ್ಯರಾತ್ರಿ 1 ಗಂಟೆಯಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಕಾಂಪೌಂಡ್ ಹಾರಿ ಬಂದು ಮನೆಯಲ್ಲಿ ಕೀ ಎಗರಿಸಿ ಕಾರು ಕದ್ದೊಯ್ದಿದ್ದಾರೆ. ಕಳ್ಳರ ಕರಾಮತ್ತು ಸಿಸಿ.ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಜಿ ಮಂತ್ರಿಗೆ ಈ ರೀತಿ ಆದರೆ ಜನ ಸಾಮಾನ್ಯರ ಗತಿ ಏನು…? ಮಾಜಿ ಸಚಿವ ಕೋಟೆ ಶಿವಣ್ಣ ಬೇಸರ.
ತಮ್ಮ ಕಾರು ಕಳ್ಳತನವಾಗಿರುವ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೋಟೆ ಶಿವಣ್ಣ, ಕಾರು ಕದ್ದವನು ಮತ್ತೆ ಬಂದು ಫೈಲ್ ಬಿಟ್ಟು ಹೋಗಿದ್ದಾನೆ. 20 ವರ್ಷದಲ್ಲಿ ಇಂತಹ ಘಟನೆ ನನಗೆ ಆಗಿರಲಿಲ್ಲ. ಜೂನ್ 5 ರಂದು ಹೆಚ್ಡಿ.ಕೋಟೆಗೆ ಹೋಗಿ ಬಂದು ರಾತ್ರಿ 8 ಗಂಟೆಗೆ ಕಾರು ನಿಲ್ಲಿಸಿದ್ದೆ. ಈ ರಸ್ತೆಯಲ್ಲಿ ನೂರಾರು ಕಾರುಗಳು ನಿಲ್ಲುತ್ತವೆ. ಜೂನ್ 5 ಸಂಜೆ ಕಾರು ನಿಲ್ಲಿಸಿ ಡ್ರೈವರ್ ಕೀ ಕೊಟ್ಟು ಹೋಗಿದ್ದ. ಮಾರನೇ ದಿನ ಬೆಳಿಗ್ಗೆ ಕಾರು ನೋಡಿದರೆ ಕಾಣಲಿಲ್ಲ. ಮನೆಯವರನ್ನು ವಿಚಾರಿಸಿದೆ. ಯಾರೂ ತೆಗೆದುಕೊಂಡು ಹೋಗಿರಲಿಲ್ಲ. ತಕ್ಷಣ ಪೊಲೀಸ್ ಕಮೀಷನರ್ ಗೆ ಹೇಳಿದೆ. ತಕ್ಷಣ ಪೊಲೀರು ಬಂದು ಪರಿಶೀಲನೆ ಮಾಡಿದರು. ಸಿಸಿ.ಟಿವಿ ನೋಡಿದಾಗ ಮಧ್ಯರಾತ್ರಿ 1 ಗಂಟೆಗೆ ಕಾರು ಕಳ್ಳತನ ಆಗಿರೋದು ಗೊತ್ತಾಗಿದೆ. ಆತ ಕಾಂಪೌಂಡ್ ಹಾರಿ ಬಂದಿದ್ದಾನೆ. ಆತನ ಹಿಂದೆ ಯಾರೋ ಸೇರಿಕೊಂಡು ವ್ಯವಸ್ಥಿತಿವಾಗಿ ಕಳ್ಳತನ ಮಾಡಿದ್ದಾರೆ. ಕಾರು ಕದ್ದವನು ಮತ್ತೆ ಬಂದು ಫೈಲ್ ಗಳು ಹಾಗೂ ಗಣಪತಿ ವಿಗ್ರಹ ಇಟ್ಟು ಹೋಗಿದ್ದಾನೆ. ಕೆಲವು ದಿನಗಳ ಹಿಂದೆ ಇದೇ ರೀತಿ ಕಾರು ಕಳ್ಳತನ ಆಗಿದೆ. ಮಾಜಿ ಮಂತ್ರಿಗೆ ಈ ರೀತಿ ಆದರೆ ಜನ ಸಾಮಾನ್ಯರ ಗತಿ ಏನು..? ಎಂದು ಅಸಮಾಧಾನ ಹೊರ ಹಾಕಿದರು.
ಹೊರ ರಾಜ್ಯದವರೋ, ಇಲ್ಲಿಯವರೋ ಗೊತ್ತಾಗುತ್ತಿಲ್ಲ. ಕಳುವುಗಿಂತಲೂ ಮನೆ ಪ್ರವೇಶ ಮಾಡಿರುವುದೇ ತುಂಬಾ ಭಯ ಹುಟ್ಟಿಸುತ್ತಿದೆ. ಡಿಜಿ, ಐಜಿ, ಗೃಹ ಸಚಿವರನ್ನ ಖುದ್ದು ಭೇಟಿ ಮಾಡಿ ದೂರು ನೀಡುವೆ. ನನ್ನ ಬಳಿ ಕೆಲಸ ಮಾಡಿದವರು ಯಾರೋ ಕೃತ್ಯ ಮಾಡಿದ್ದಾರೆ ಎನ್ನಿಸಿವುದಿಲ್ಲ. ಆದರೆ ವ್ಯವಸ್ಥಿತವಾಗಿ ಕಾರು ಕಳ್ಳತನ ಆಗಿದೆ ಎಂದು ಕೋಟೆ ಶಿವಣ್ಣ ಹೇಳಿದರು.
Key words: former minister-mysore- luxury car- stolen