ನನಗೆ ಏನಾದ್ರೂ ಆದ್ರೆ ಅದಕ್ಕೆ ಶಾಸಕ ಸುರೇಶ್​ಗೌಡ ಕಾರಣ:  ಮಾಜಿ ಶಾಸಕ ಡಿ.ಸಿ ಗೌರಿಶಂಕರ್

ತುಮಕೂರು, ಫೆಬ್ರವರಿ 14,2025 (www.justkannada.in):  ನನಗೆ ಏನಾದರೂ ಆದರೆ ಅದಕ್ಕೆ ಬಿಜೆಪಿ ಶಾಸಕ ಸುರೇಶ್​ಗೌಡ ಕಾರಣ ಎಂದು ಮಾಜಿ ಶಾಸಕ ಡಿಸಿ ಗೌರಿಶಂಕರ್ ಹೇಳಿದ್ದಾರೆ.

ನಗರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಡಿಸಿ ಗೌರಿಶಂಕರ್ ಅವರು ಶಾಸಕ ಸುರೇಶ್ ಗೌಡರ ವಿರುದ್ಧ ತೀವ್ರ ಆರೋಪ ಮಾಡಿದ್ದಾರೆ.

ನನ್ನ ಮರ್ಡರ್ ಮಾಡಿಸುತ್ತಿಯಾ? ನಾನು ಗೃಹ ಸಚಿವರಿಗೆ ಭೇಟಿ ಮಾಡಿ ರಕ್ಷಣೆ ಕೋರುತ್ತೇನೆ. ರಾಜಕೀಯ ಲಾಭಕ್ಕಾಗಿ ನಿಮ್ಮಿಷ್ಟ ಬಂದಂಗೆ ಹೋರಾಟ ಮಾಡಿಕೊಂಡರೆ ಅದಕ್ಕೆಲ್ಲಾ ನಾವು ಸೊಪ್ಪು ಹಾಕಲ್ಲ ಎಂದು ಕಿಡಿಕಾರಿದ್ದಾರೆ.

ಕೆಎನ್ ರಾಜಣ್ಣರ ಬಗ್ಗೆ ಮಾತನಾಡುವ ಮೂಲಕ ಕಾಂಗ್ರೆಸ್​ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬಂತೆ ಬಿಂಬಿಸಲು ಹೊರಟಿದ್ದಾರೆ. ಗೃಹ ಸಚಿವ ಜೀ. ಪರಮೇಶ್ವರ್ ಪರವಾಗಿ ನಾನು ಮಾತನಾಡುತ್ತಿದ್ದೆನೆ ಎಂದಿದ್ದಾರೆ.‌ ರಾಜಣ್ಣ ಅವರ ಆಶಿರ್ವಾದ ಇಲ್ಲದಿದ್ದರೆ, ಚುನಾವಣೆಯಲ್ಲಿ ಗೆದ್ದು ನೀನು ಶಾಸಕನಾಗಲು ಆಗುತ್ತಿರಲಿಲ್ಲ. ಸುರೇಶ್ ಗೌಡವರಿಗೆ ಯಾಕೆ‌ ಇಷ್ಟು ಬಂಡತನ ಎಂದು ವಾಗ್ದಾಳಿ ಮಾಡಿದ್ದಾರೆ.

ನನ್ನ ‌ಕ್ಷೇತ್ರದಲ್ಲಿ ಒಂದೇ ಒಂದು ರಸ್ತೆ ಗುಂಡಿ ‌ಬಿದ್ದಿಲ್ಲ‌ ಎಂದಿದ್ದಾರೆ. ಹಿರೆಹಳ್ಳಿಯಿಂದ ಹರಳೂರು ರಸ್ತೆ ಸಂಪೂರ್ಣ ಹದಗೆಟ್ಟಿದೆ. ಎಷ್ಟು ಕಮಿಷನ್ ಪಡೆದುಕೊಂಡಿದ್ದೀರಿ. ಫಿಕ್ಸಿಂಗ್ ಪಾಲಿಟಿಕ್ಸ್​ನಲ್ಲಿ ಸುರೇಶ್ ಗೌಡ ನಂ 1. ಅಧಿಕಾರ ಸಿಗುತ್ತೆ ಅಂದರೆ ಯಾರ ಮನೆಗೆ ಬೇಕಾದರೂ ಹೋಗುತ್ತಾನೆ. ನಾನು, ನಂದು ಎಂದವರು ಮಣ್ಣಾಗಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ನಾನು ಚುನಾವಣೆ ಎದುರಿಸಿದ್ದೇನೆ, ಶಾಸಕನಾಗಿದ್ದೇನೆ. ನಾನು ಹುಟ್ಟಿದಾಗಲೇ ನಮ್ಮಪ್ಪ ನನ್ನ‌ ಹಿಂದೂ ಎಂದು ಬರೆಸಿದ್ದಾರೆ. ನಿನಗೆ ಮುಸ್ಲಿಂ, ಕ್ರಿಶ್ಚಿಯನ್ ಹೆಸರು ಹೇಳದಿದ್ದರೆ ನಿದ್ದೆ ಬರಲ್ಲ. ಟೀಕೆ, ಟಿಪ್ಪಣಿಗಳು ಸಾಯ್ತವೆ, ನಾವು ಮಾಡಿದ ಕೆಲಸಗಳು ಅಜರಾಮರವಾಗಿ ಉಳಿಸುತ್ತವೆ ಎಂದು ನಮ್ಮ‌ ಕೆಪಿಸಿಸಿ ಅಧ್ಯಕ್ಷರು ಹೇಳುತ್ತಿರುತ್ತಾರೆ. ನಮ್ಮ ಪರಮೇಶ್ವರ್ ಸಾಹೇಬ್ರು ಸಜ್ಜನ ರಾಜಕಾರಣಿ, ಅವರ ಆದರ್ಶಗಳನ್ನ ನೀನು ಕಳಿತುಕೊ ಎಂದಿದ್ದಾರೆ.

ಗೃಹ ಖಾತೆಯಲ್ಲಿ ಸದ್ಯಕ್ಕೆ ಯಾರೂ ಡ್ರೈವ್ ಮಾಡುವ ಅಗತ್ಯವಿಲ್ಲ. ನಿಮ್ಮ ಕೇಂದ್ರ ಸಚಿವರೇ ಅವರ ಬಗ್ಗೆ ಹೊಗಳಿಕೆ ವ್ಯಕ್ತಪಡಿಸಿದ್ದಾರೆ. ರಾತ್ರೋರಾತ್ರಿ ಪರಮೇಶ್ವರ್ ಸಾಹೇಬ್ರು ಮನೆಗೆ ಹೋಗಿ ‌ಕಾಲಿಗೆ ಬಿದ್ದಿದ್ದೀರಿ. ನನಗೆ ನಿಮ್ಮ ಮೇಲೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ನೀವು ನಮ್ಮ ಕ್ಷೇತ್ರದ ಜನರಿಗೆ ನೀಡಿರುವ ಆಶ್ವಾಸನೆ ಕೊಟ್ಟಿರುವುದನ್ನ‌ ಈಡೇರಿಸಿ ಎಂದು ಕೇಳುತ್ತಿದ್ದೇನೆ. ನಾನು ನಂದೇ ಎಂಬ ದುರಹಂಕಾರದ ಮಾತುಗಳು ಬೇಡ ಎಂದು ಗೌರಿಶಂಕರ್ ಹರಿಹಾಯ್ದರು.

Key words: MLA, Suresh Gowda, Former MLA,  DC Gaurishankar