ಕಲಬುರಗಿ, ಮೇ, 6,2024 (www.justkannada.in): ಸೇಡಂ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಶಿಕ್ಷಣ ಪ್ರೇಮಿ, ಹಿರಿಯ ಮುತ್ಸದ್ದಿ ಡಾ.ನಾಗರೆಡ್ಡಿ ಪಾಟೀಲ್ (79) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಇಂದು ಬೆಳಗಿನ ಜಾವ ಡಾ.ನಾಗರೆಡ್ಡಿ ಪಾಟೀಲ್ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಡಾ.ನಾಗರೆಡ್ಡಿ ಪಾಟೀಲ್ 1983-85ರ ಅವಧಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಎರಡೂವರೆ ವರ್ಷ ಶಾಸಕರಾಗಿದ್ದರು. ಆಗ ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾಗಿದ್ದರು. ನಾಗರೆಡ್ಡಿ ಅವರು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿಯ ಗೌರವ ಅಧ್ಯಕ್ಷರೂ ಆಗಿದ್ದರು.
ಇನ್ನು ಡಾ.ನಾಗರೆಡ್ಡಿ ಪಾಟೀಲ್ ಅವರ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಟ್ವಿಟ್ ಮಾಡಿ ಸಂತಾಪ ಸೂಚಿಸಿದ್ದಾರೆ. ಸೇಡಂನ ಮಾಜಿ ಶಾಸಕ ಡಾ. ನಾಗರೆಡ್ಡಿ ಅವರ ನಿಧನದಿಂದ ದುಃಖಿತನಾಗಿದ್ದೇನೆ. 1983ರಲ್ಲಿ ನಾಗರೆಡ್ಡಿಯವರು ಮತ್ತು ನಾನು ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಪ್ರವೇಶ ಮಾಡಿದ್ದೆವು. ಶೈಕ್ಷಣಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಸುಶಿಕ್ಷಿತ ಸಮಾಜ ನಿರ್ಮಾಣಕ್ಕಾಗಿ ದುಡಿದ ನಾಗರೆಡ್ಡಿಯವರ ನಿಧನದಿಂದ ನಾಡು ಬಡವಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
Key words: Former MLA, Dr Nagareddy Patil, passes away