ಬೆಂಗಳೂರು,ನ,21,2019(www.justkannada.in): ಬಿಜೆಪಿ ನಾಯಕರು ಮಾನಸಿಕವಾಗಿ ಅವರ ಮೇಲೆ ಒತ್ತಡ ತಂದು ನಮ್ಮ ಇಬ್ಬರು ಅಭ್ಯರ್ಥಿಗಳನ್ನ ಕಣದಿಂದ ಹಿಂದೆ ಸರಿಸಿದ್ದಾರೆ. ಆದರೂ ನಾವು 12 ಕ್ಷೇತ್ರದಲ್ಲೂ ಬಿಜೆಪಿ, ಕಾಂಗ್ರೆಸ್ ವಿರುದ್ಧ ಪ್ರಬಲ ಕೊಡ್ತೇವೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಜೆಪಿಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್.ಡಿ ದೇವೇಗೌಡರು, ಅಥಣಿ,ಹಿರೇಕೆರೂರು ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ನಾಮಪತ್ರ ವಿತ್ ಡ್ರಾ ಮಾಡಿದ್ದಾರೆ. ಶಿವಲಿಂಗ ಆಚಾರ್ಯ ಸ್ವಾಮಿಯವರು ಅವರಾಗಿಯೇ ನಿಲ್ತೇವೆ ಅಂದಿದ್ದರು. ಹೀಗಾಗಿ ಅವರಿಗೆ ಬಿ-ಫಾರಂ ಕಳಿಸಿದ್ದೆವು.ಆದರೆ ಮಾನಸಿಕವಾಗಿ ಅವರ ಮೇಲೆ ಒತ್ತಡ ತಂದಿದ್ದಾರೆ. ಯಡಿಯೂರಪ್ಪನವರ ಮಗನೇ ಇದರ ನೇತೃತ್ವ ವಹಿಸಿ ಸ್ವಾಮೀಜಿ ನಾಮಪತ್ರ ವಾಪಸ್ ಪಡೆಯುವಂತೆ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿಂದೆ ಹಲವು ಸ್ವಾಮಿಗಳು ಸ್ಪರ್ಧಿಸಿದ್ದರು. ಚುನಾವಣೆಯಲ್ಲಿ ಗೆದ್ದು ಅಧಿಕಾರ ಅನುಭವಿಸಿದ್ದಾರೆ. ಉತ್ತರಪ್ರದೇಶದಲ್ಲೇ ಸ್ವಾಮಿ ಸಿಎಂ ಆಗಿಲ್ವೇ? ಎಂದು ಪ್ರಶ್ನಿಸಿದ ಹೆಚ್.ಡಿ ದೇವೇಗೌಡರು, ಅಭ್ಯರ್ಥಿಯ ಮೇಲೆ ಮಾನಸಿಕವಾಗಿ ಒತ್ತಡ ತಂದು ನಾಮಪತ್ರ ವಾಪಸ್ ತೆಗೆಸಿದ್ದಾರೆ. ಈ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತಂದಿದ್ದಾರೆ. ಹಾಗೆಯೇ ಅಥಣಿಯ ನಮ್ಮ ಅಭ್ಯರ್ಥಿಯೂ ಹಿಂದೆಗೆದಿದ್ದಾರೆ. ಜೆಡಿಎಸ್ ಪಕ್ಷದ ನಾಮಪತ್ರ ವಾಪಸ್ ಪಡೆದಿದ್ದಾರೆ. ಇವತ್ತು ಹೆಚ್ಚು ಬಲಪ್ರಯೋಗಗಳು ನಡೆಯುತ್ತಿವೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿ ಬೆಂಬಲಿಸಿದ್ದೇವೆ. ಉಳಿದ 12 ಕಡೆಗಳಲ್ಲಿ ನಾವು ಸ್ಪರ್ಧಿಸುತ್ತಿದ್ದೇವೆ ಎಂದರು.
ಮಹಾಲಕ್ಷ್ಮಿ ಲೇಔಟ್ ಅಭ್ಯರ್ಥಿ ಬಗ್ಗೆ ಅಪವಾದ ಮಾಡ್ತಾರೆ. ಅವರು ಓಡಿಹೋದ್ರು ಅಂತ ಬಿಂಬಿಸಿದ್ದಾರೆ. ಮಹಾಲಕ್ಷ್ಮಿ ಜೆಡಿಎಸ್ ಅಭ್ಯರ್ಥಿ ಬಗ್ಗೆ ಅಪಪ್ರಚಾರ ಮಾಡಿದ್ದಾರೆ. ಇದರಲ್ಲಿ ಯಾವುದೇ ಹುರುಳಿಲ್ಲ. ಹಿಂದೆ ನಮ್ಮ ಅಭ್ಯರ್ಥಿಯನ್ನ ನಾವೇ ಗೆಲ್ಲಿಸಿದ್ದೆವು ಅವರ ಪತ್ನಿಯನ್ನೂ ಡೆಪ್ಯೂಟಿ ಮೇಯರ್ ಮಾಡಿದ್ದೆವು. ಸಾಕಷ್ಟು ವಿರೋಧವಿದ್ದರೂ ಉಪಮೇಯರ್ ಮಾಡಿದ್ದೆವು. ಕುಮಾರಸ್ವಾಮಿಗೆ ಒಪ್ಪಿಸಿ ನಾನೇ ಮಾಡಿಸಿದ್ದೆ. ಇವತ್ತು ಅವರು ನಮ್ಮ ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ಪರೋಕ್ಷವಾಗಿ ಅನರ್ಹ ಶಾಸಕ ಗೋಪಾಲಯ್ಯ ವಿರುದ್ದ ವಾಗ್ದಾಳಿ ನಡೆಸಿದರು.
15 ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿ ನಿಲ್ಲಿಸಿದೆ. ಅವರಿಗೆ ಎಲ್ಲ ಬಲಗಳೂ ಇವೆ. ದೌರ್ಜನ್ಯ ಮಾಡಿದ್ರೂ ಅವರಿಗೆ ಸರ್ಕಾರ ರಕ್ಷಣೆ ನೀಡುತ್ತದೆ. ನಮ್ಮ ಸದಸ್ಯರ ಕಾಲನ್ನೇ ಕತ್ತರಿಸಿಹಾಕಿದ್ದಾರೆ. ಕೆ.ಆರ್.ಪೇಟೆಯಲ್ಲಿ ಚಪ್ಪಲಿ ಹೊಡೆದ್ರು ಅಂದ್ರು. 25 ಸಾವಿರಕ್ಕೂ ಹೆಚ್ಚು ನಮ್ಮ ಕಾರ್ಯಕರ್ತರಿದ್ದರು. ಅಷ್ಟು ಜನ ಸೇರಿದ್ದು ಬಿಜೆಪಿಯವರಿಗೆ ಇಷ್ಟವಾಗಲಿಲ್ಲ. ನಮ್ಮ ಕಾರ್ಯಕರ್ತರನ್ನೂ ಕೆಟ್ಟದಾಗಿ ಬೈಯ್ದಿದ್ದಾರೆ. ಕೆ.ಆರ್.ಪೇಟೆ ನಮ್ಮ ಮನೆಯಿದ್ದಂತೆ. ನಾವು 12 ಕ್ಷೇತ್ರದಲ್ಲೂ ಪ್ರಬಲ ಪೈಪೋಟಿ ಕೊಡ್ತೇವೆ. ಬಿಜೆಪಿ, ಕಾಂಗ್ರೆಸ್ ವಿರುದ್ಧ ನೇರ ಪೈಪೋಟಿ ಮಾಡ್ತೇವೆ. ನಾಳೆಯಿಂದಲೇ ಅಧಿಕೃತ ಪ್ರಚಾರ ಆರಂಭ ಮಾಡುತ್ತೇವೆ ಎಂದು ಹೆಚ್.ಡಿ ದೇವೇಗೌಡ ತಿಳಿಸಿದರು.
Key words: Former Prime Minister -HD Deve Gowda – confidence –12 constituency-fight-BJP – Congress