ಬೆಂಗಳೂರು,ಆ,19,2019(www.justkannada.in): ಫೋನ್ ಕದ್ದಾಲಿಕೆ ವಿಚಾರದಲ್ಲಿ ಕುಮಾರಸ್ವಾಮಿಯವ್ರು ಸಿಕ್ಕಾಕಿಕೊಂಡಿದ್ದಾರೆ ಅಂತೆಲ್ಲಾ ಹೇಳ್ತಿದ್ದಾರೆ ಇದನೆಲ್ಲ ಮಾಧ್ಯಮಗಳಲ್ಲಿ ವಿಜೃಂಭಿಸುವ ಅಗತ್ಯ ಇಲ್ಲ ಎಂಬುದು ನನ್ನ ಭಾವನೆ. ಇನ್ನು ಪ್ರಕರಣ ಸಿಬಿಐಗೆ ವಹಿಸಲು ಪ್ರಧಾನಿ ಮೋದಿ ಮತ್ತು ಕೇಂದ್ರ ಸಚಿವ ಅಮಿತ್ ಶಾ ಸೂಚನೆ ಕೊಟ್ಟಿದ್ದಾರೆ ಎಂಬುದನ್ನ ಅಲ್ಲಗಳೆಯುತ್ತೇನೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಹೇಳಿದರು.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿ ಆಗಿದೆ ಅಂತ ಬಿಂಬಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಾನು ಇಂತಹ ವಿಚಾರಗಳಿಗೆ ಒತ್ತು ಕೊಡಲ್ಲ. ಹೆಚ್,ಡಿ ಕುಮಾರಸ್ವಾಮಿಯವರು ಸಿಕ್ಕಾಕಿಕೊಂಡಿದ್ದಾರೆ ಅಂತೆಲ್ಲಾ ಹೇಳ್ತಿದ್ದಾರೆ. ಇದನೆಲ್ಲ ಮಾಧ್ಯಮಗಳಲ್ಲಿ ವಿಜೃಂಭಿಸುವ ಅಗತ್ಯ ಇಲ್ಲ ಎಂಬುದು ನನ್ನ ಭಾವನೆ. ಸುಪ್ರೀಂ ಕೋರ್ಟ್ ಕೂಡ ಒಂದು ಪ್ರಕರಣದಲ್ಲಿ ಟೆಲಿಫೋನ್ ಕದ್ದಾಲಿಕೆ ತಪ್ಪಲ್ಲ ಅಂತ ಹೇಳಿದೆ. ಕೆಲವು ವಿಚಾರಗಳಲ್ಲಿ ಮಾಡಬಹುದು. ಯಾವ್ಯಾವ ಸರ್ಕಾರದಲ್ಲಿ ಎಷ್ಟು ಫೋನ್ ಟ್ಯಾಪಿಂಗ್ ಆಗಿದೆ ಅನ್ನೋದನ್ನ ಟಿವಿಗಳಲ್ಲಿ ನೋಡಿದ್ದೇನೆ ಎಂದರು.
ಆವತ್ತು ನೇರವಾಗಿ ಹೆಗಡೆ ಮೇಲೆ ಯಾರೂ ಹೇಳಲಿಲ್ಲ. ಇವತ್ತು ಕಾಂಗ್ರೆಸ್ ಮುಖಂಡರು ಒತ್ತಾಯ ಮಾಡಿರೋದನ್ನೂ ಗಮನಿಸಿದ್ದೇನೆ. ಸಿದ್ದರಾಮಯ್ಯ ಅವ್ರು ತನಿಖೆಗೆ ನಾನು ಸಿದ್ದ ಅಂತ ಹೇಳಿದ್ದಾರೆ. ಆಪರೇಷನ್ ಕಮಲ ಬಗ್ಗೆಯೂ ತನಿಖೆಯಾಗಲಿ ಅಂತಾನೂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಬಿಐಗೆ ಕೊಡಲು ಸಾಧ್ಯವೇ ಇಲ್ಲ ಅಂತ ಹೇಳಿದ್ದನ್ನೂ ನಾನು ನೋಡಿದ್ದೇನೆ. ಅವ್ರ ಆಳೋವಾಗ, ಇವ್ರು ಆಳೋ ಕಾಲದಲ್ಲಿ ಏನಾನಗಿದೆ ಅನ್ನೋದರ ಬಗ್ಗೆ ಈಗ ಚರ್ಚೆ ಮಾಡುವುದು ಬೇಡ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.
ಆಪರೇಷನ್ ಕಮಲದ ಆಡಿಯೋದಲ್ಲಿ ವಾಯ್ಸ್ ನಂದೇ ಅಂತ ಬಿಎಸ್ ವೈ ಒಪ್ಪಿಕೊಂಡಿದ್ರು. ಆಮೇಲೆ ಅದು ನಂದಲ್ಲ ಅಂತ ಅಲ್ಲಗಳೆದುದನ್ನೂ ನೋಡಿದ್ದೇನೆ. ರಾಜ್ಯದಲ್ಲಿ ಹಲವಾರು ಸಮಸ್ಯಗಳಿವೆ ಅದನ್ನು ಬಗೆಹರಿಸುತ್ತಿಲ್ಲ. ಯಡಿಯೂರಪ್ಪ ಸ್ಟಿಂಗ್ ಆಪರೇಶನ್ ನ್ನೂ ರೆಫರ್ ಮಾಡ್ಬೇಕಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಫೋನ್ ಟ್ಯಾಪಿಂಗ್ ಕೇಸ್ ಸಿಬಿಐಗೆ: ಶಾ,ಮೋದಿ ಮಧ್ಯಪ್ರವೇಶವಿಲ್ಲ.
ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ದೇಶದ ವಿಚಾರದಲ್ಲಿ ಹೆಚ್ಚು ಗಮನ ಹರಿಸಿದ್ದಾರೆ. ಆದರೆ ಫೋನ್ ಕದ್ದಾಲಿಕೆ ವಿಚಾರದಲ್ಲಿ ಅವರು ಮಧ್ಯ ಪ್ರವೇಶಿಸಿಲ್ಲ. ಅವರ ಸೂಚನೆ ಮೇರೆಗೆ ಸಿಬಿಐಗೆ ವಹಿಸಲಾಗಿದೆ ಎಂಬುದನ್ನು ಅಲ್ಲಗಳೆಯುತ್ತೇನೆ ಎಂದು ಹೆಚ್.ಡಿ ದೇವೇಗೌಡರು ತಿಳಿಸಿದರು.
ಮೋದಿಯವರೇ ಟ್ಯಾಪಿಂಗ್ ಮಾಡಿಸ್ತಿದ್ದಾರೆ ಅಂತ ಹೇಳೋದನ್ನ ನೋಡಿದ್ದೇನೆ. ಅವ್ರು ಆ ವಿಚಾರಕ್ಕೆ ಗಮನ ಕೊಡ್ಲಿಲ್ಲ. ಇಲ್ಲಿಯ ರಾಜಕೀಯ ಒತ್ತಡಗಳಿಂದ ತನಿಖೆಗೆ ಹೇಳಿರಬಹುದು. ಆದ್ರೆ ಕೇಂದ್ರ ಸೂಚನೆ ಕೊಟ್ಟಿದೆ ಅನ್ನೋದು ಸುಳ್ಳು ಅಂತ ಹೇಳ್ತಿದ್ದೇನೆ ಎಂದರು.
ರಾಜ್ಯದ ಜನಶಕ್ತಿ, ಆದಾಯ ಎಲ್ಲವನ್ನೂ ಪರಿಗಣಿಸಿ ಕೇಂದ್ರ ಪರಿಹಾರ ಘೋಷಣೆ ಮಾಡುತ್ತದೆ. ನನಗೆ ಸಂಬಳ ಬರಲ್ಲ, ನಾನೂ ಕಿರುಕಾಣಿಕೆ ಕೊಟ್ಟಿದ್ದೇನೆ. ನಮ್ಮ ಶಾಸಕರ ಒಂದು ತಿಂಗಳ ಸಂಬಳ ನೀಡಲು ಹೇಳಿದ್ದೆ. ಪಕ್ಷದಿಂದಲೂ ಅಕ್ಕಿ, ಜಮಖಾನ, ಬಟ್ಟೆ ಎಲ್ಲಾ ಕಲೆಕ್ಟ್ ಮಾಡಿ ಕಳುಹಿಸಿಕೊಟ್ಟಿದ್ದೇವೆ. ನಿಖಿಲ್ ಎಲ್ಲಾ ಕಡೆ ಇದ್ದು ಹಂಚಿದ್ದಾರೆ. ನಿರಾಶ್ರಿತರಿಗೆ ಶಾಶ್ವತವಾಗಿ ರಿಲೀಫ್ ಮಾಡಬೇಕು ಎಂದು ಮನವಿ ಮಾಡಿದರು.
ಉತ್ತರ ಭಾರತ ಹಿಂದೂಸ್ತಾನದಲ್ಲಿ ಆಗಬಾರದ ಅನಾಹುತ ಆಗುತ್ತಿದೆ. ನಿರುದ್ಯೋಗ ಹೆಚ್ಚಾಗ್ತಿದೆ, ಆರ್ಥಿಕ ಪರಿಸ್ಥಿತಿ ಏನಾಗಿದೆ. ನಾವು ಕೇಳಿದಷ್ಟು ಪರಿಹಾರ ಯಾವ ಸರ್ಕಾರವೂ ಕೊಟ್ಟಿಲ್ಲ. ಕೆಸರೆರಚಾಟ ನಿಲ್ಲಿಸಿ, ನೆರೆ ಕಡೆ ಗಮನ ಹರಿಸಿ. ಸುಮ್ಮನೆ ಊಹಾಪೋಹ ಮಾಡೋದು ಬೇಡ ಎಂದು ಹೆಚ್.ಡಿ ದೇವೇಗೌಡರು ಹೇಳಿದರು.
ಪ್ರಧಾನಿಗಳ ಬಗ್ಗೆ ನಾನು ಲಘುವಾಗಿ ಮಾತನಾಡಿಲ್ಲ. ನಾನು ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ಬಿಎಸ್ ವೈ ಅಧಿಕಾರ ಸ್ಬೀಕರಿಸಿ ಸಂಪುಟ ಸಭೆ ಮಾಡಿದರು. ಆದರೆ ಒಬ್ಬ ವ್ಯಕ್ತಿಯಿಂದ ಸಚಿವ ಸಂಪುಟ ಆಗಲ್ಲ . ನಾನು ಯಾವುದೇ ಕ್ರಿಯಾ ಲೋಪ ಎತ್ತುತ್ತಿಲ್ಲ. ಫೈನಾನ್ಸ್ ಬಿಲ್ ಪಾಸ್ ಮಾಡೋದಕ್ಕೆ ಬಿಎಸ್ ವೈಗೆ ಸ್ಪೀಕರ್ ಗೆ ಅವಕಾಶ ಕೊಟ್ಟಿದ್ದಾರೆ. ಪುಂಖಾನುಪುಂಕವಾಗಿ ಒಬ್ಬಬ್ಬರಿಗೇ ಒಂದೊಂದೇ ವಿಮಾನ ಮಾಡಿ ಕರೆದುಕೊಂಡು ಹೋದ್ರು. ಅದರ ಬಗ್ಗೆಯೂ ನಾನು ಮಾತನಾಡಿಲ್ಲ. ಸುಪ್ರೀಂ ಕೋರ್ಟ್ ಗೆ ಹೋಗಿದ್ದರ ಬಗ್ಗೆ, ವಿಪ್ ಕೊಟ್ಟ ಬಗ್ಗೆಯೂ ಮಾತನಾಡಿಲ್ಲ ಮಾಧ್ಯಮಗಳಿಗೆ ನಾನು ವಿನಂತಿ ಮಾಡಿಕೊಳ್ಳುತ್ತೇನೆ. ಬಿಎಸ್ ವೈ ಹಣಕಾಸಿನ ಮಸೂದೆ ಪಾಸಾಗಲು ಎಲ್ಲರೂ ಸಹಕಾರ ನೀಡಿದ್ದಾರೆ ಎಂದರು.
ಸ್ಪೀಕರ್ ಅವ್ರು ಪಕ್ಷಪಾತ ಆರೋಪ ಬಂದಿದ್ದು ನಿಜ, ಅದೆಲ್ಲಾ ನೋಡಿದ್ದೇನೆ. ಸ್ಪೀಕರ್ ಅವರ ಅಧಿಕಾರದಲ್ಲಿ ಅವ್ರು ಕ್ರಮ ತೆಗೆದುಕೊಂಡಿದ್ದಾರೆ ಎಂಬುದು ನನ್ನ ಭಾವನೆ ಎಂದು ಮಾಜಿ ಪ್ರಧಾನಿ ಹೆಚ್.ಡಿಡಿ ಅಭಿಪ್ರಾಯ ಪಟ್ಟರು.
ಇನ್ನು ಮಹಾಲಕ್ಷ್ಮೀ ಲೇಔಟ್ ನ ಒಂದು ವಾರ್ಡ್ ನಲ್ಲಿ ಕಾರ್ಯಕರ್ತರ ಸಭೆ ಮಾಡಿದೆ. ಕುಪೇಂದ್ರ ರೆಡ್ಡಿ, ಶರವಣ, ದತ್ತಾ ಸೇರಿ ಪಕ್ಷದ ಮುಖಂಡರು ಇದ್ರು. ಬೇರೆ ಕಾರ್ಯ ನಿಮಿತ್ತ ಅರ್ಜೆಂಟಾಗಿ ಮನೆಗೆ ಹೋದೆ. ಆದ್ರೆ ಫೋನ್ ಕದ್ದಾಲಿಕೆ ಬಗ್ಗೆ ಮಾತನಾಡದೇ ಹೋಗಿದ್ದಾರೆ ಅಂತ ಮಾಧ್ಯಮದವರು ಹೇಳಿದ್ದಾರೆ. ಜೀವನದಲ್ಲಿ ನಿರ್ಭಯವಾಗಿ ಹೋರಾಟ ಮಾಡಿದ್ದೇನೆ. ಯಾರ ಒತ್ತಡದಿಂದಲೂ ಹೋರಾಟ ಮಾಡಲ್ಲ.ವ್ಯಕ್ತಿಗತವಾಗಿ ನನ್ನ ಸ್ವಭಾವವನ್ನ ಅರ್ಥ ಮಾಡಿಕೊಂಡಿದ್ದೀರಿ ಅಂತ ಭಾವಿಸಿದ್ದೇನೆ ಎಂದರು.
Key words: Former Prime Minister -HD Deve Gowda-reaction- about-phone tapping.