ಬೆಂಗಳೂರು,ನವೆಂಬರ್,17,2021(www.justkannada.in): ಭಾರತವು ಕೃಷಿರಂಗದಲ್ಲಿ ಕೃತಕ ಬುದ್ಧಿಮತ್ತೆಯನ್ನು ಅಳವಡಿಸಿಕೊಳ್ಳುವ ಮೂಲಕ ಇಡೀ ಕ್ಷೇತ್ರದ ಡಿಜಿಟಲ್ ರೂಪಾಂತರ ಮಾಡಿದರೆ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯುವ ನಿಚ್ಚಳ ಅವಕಾಶಗಳಿವೆ ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯುಇಎಫ್) ಸಂಸ್ಥಾಪಕ ಪ್ರೊ.ಕ್ಲಾಸ್ ಶ್ವಾಬ್ ಅಭಿಪ್ರಾಯಪಟ್ಟರು.
ಬೆಂಗಳೂರು ತಂತ್ರಜ್ಞಾನ ಶೃಂಗದಲ್ಲಿ ಶುಕ್ರವಾರ ನಡೆದ ವಿದ್ವತ್ ಗೋಷ್ಠಿಯಲ್ಲಿ ವರ್ಚುಯಲ್ ಆಗಿ ಪಾಲ್ಗೊಂಡಿದ್ದ ಅವರು, ದೇಶವು ಇಡೀ ಜಗತ್ತಿಗೆ ಬೇಕಾದ ತಂತ್ರಜ್ಞಾನ ಮತ್ತು ಆರ್ಥಿಕ ಕಾರ್ಯಸೂಚಿಯನ್ನು ರೂಪಿಸಲು ಸಮರ್ಥವಾಗಿದೆ ಎಂದರು.
ಜಗತ್ತಿನಲ್ಲಿ ಈಗ ನಾಲ್ಕನೇ ಕೈಗಾರಿಕಾ ಕ್ರಾಂತಿ ನಡೆಯುತ್ತಿದೆ. ಇದರಲ್ಲಿ ವೇಗದಿಂದ ಕೆಲಸ ಮಾಡುವ ಇಂಟರ್ನೆಟ್ ಲಭ್ಯತೆ ಮಹತ್ತರ ಪಾತ್ರ ವಹಿಸಲಿದೆ. ಆದರೆ ಭಾರತದಲ್ಲಿ ಈಗಲೂ ಶೇ.50ರಷ್ಟು ಜನರಿಗೆ ಸರಿಯಾದ ಅಂತರ್ಜಾಲ ಸೌಲಭ್ಯ ಸಿಕ್ಕುತ್ತಿಲ್ಲ. ಕರ್ನಾಟಕವೂ ಸೇರಿದಂತೆ ಇಡೀ ದೇಶ ಈ `ಡಿಜಿಟಲ್ ಅಂತರ’ವನ್ನು ಪರಿಹರಿಸುವುದಕ್ಕೆ ಆದ್ಯತೆ ಕೊಡಬೇಕು ಎಂದು ಅವರು ಸೂಚಿಸಿದರು.
ವಿಶ್ವ ಆರ್ಥಿಕ ವೇದಿಕೆಯು ಪ್ರಮುಖ ತಂತ್ರಜ್ಞಾನಗಳನ್ನೂ ದೂರಸಂಪರ್ಕ ಕಂಪನಿಗಳನ್ನೂ ಪರಸ್ಪರ ಹತ್ತಿರಕ್ಕೆ ತರುವುದಕ್ಕೆ ಒತ್ತು ನೀಡಿದೆ. ಈಗ ನಡೆಯುತ್ತಿರುವ ಕೈಗಾರಿಕಾ ಕ್ರಾಂತಿಯಿಂದಾಗಿ 2025ರ ಹೊತ್ತಿಗೆ 35 ದಶಲಕ್ಷ ಉದ್ಯೋಗಗಳು ಜಾಗತಿಕವಾಗಿ ಸೃಷ್ಟಿಯಾಗಲಿವೆ. ಈ ಸದವಕಾಶವನ್ನು ಭಾರತ ಕೈಚೆಲ್ಲಬಾರದು ಎಂದು ಪ್ರೊ.ಶ್ವಾಬ್ ನುಡಿದರು.
ಕೈಗಾರಿಕೆಗಳ ಉತ್ಪಾದನಾ ವಿಧಾನದಲ್ಲಿ ಕೂಡ `ಹಸಿರು ಕ್ರಾಂತಿ’ ಆಗಬೇಕಾಗಿದ್ದು, ಶೂನ್ಯ ಇಂಗಾಲದ ಗುರಿಯನ್ನು ಅಳವಡಿಸಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ನಿರ್ಣಾಯಕ ಆವಿಷ್ಕಾರಗಳು ಆಗಬೇಕಾದ ತುರ್ತಿದೆ ಎಂದರು.
ಕೋವಿಡ್ ಸಾಂಕ್ರಾಮಿಕವು ಜಗತ್ತಿನ ದಿಕ್ಕಿದೆಸೆಯನ್ನೇ ಬದಲಿಸಿದ್ದು, ಭಾರತವು ಆರ್ಥಿಕ ಶಕ್ತಿಯಾಗಿ ಉಳಿಯಬೇಕಾದರೆ ದೇಶದ ಯುವಜನರಿಗೆ ಕೌಶಲ್ಯಗಳನ್ನು ಸಮರೋಪಾದಿಯಲ್ಲಿ ಒದಗಿಸಿ, ಎಲ್ಲರನ್ನೂ ಉದ್ಯೋಗಕ್ಕೆ ಅರ್ಹರನ್ನಾಗಿ ಮಾಡಬೇಕು ಎಂದು ಮೈಕ್ರೋಸಾಫ್ಟ್ ಇಂಡಿಯಾದ ಮುಖ್ಯಸ್ಥ ಅನಂತ್ ಮಹೇಶ್ವರಿ ಹೇಳಿದರು.
ವರ್ಚುಯಲ್ ಆಗಿ ಪಾಲ್ಗೊಂಡು ಮಾತನಾಡಿದ ಅವರು, ಮುಂದಿನ ದಿನಗಳನ್ನು ಕ್ಲೌಡ್, ಡೇಟಾ ಮತ್ತು ಕೃತಕ ಬುದ್ಧಿಮತ್ತೆ, ಹೈಬ್ರಿಡ್ ಕಾರ್ಯವಿಧಾನ ಮತ್ತು ವಿಶ್ವಾಸಾರ್ಹ ತಂತ್ರಜ್ಞಾನಗಳೇ ಆವರಿಸಲಿವೆ ಎಂದರು. ಕ್ಲೌಡ್ ತಂತ್ರಜ್ಞಾನವು ಭಾರತದ ಎಲ್ಲ ಜನವರ್ಗಗಳನ್ನೂ ಒಳಗೊಳ್ಳುವಂತಹ ಬೆಳವಣಿಗೆಯನ್ನು ಆಗುಮಾಡಲಿದೆ. ಡೇಟಾ ವಿಜ್ಞಾನ ಮತ್ತು ಕೃತಕ ಬುದ್ಧಿಮತ್ತೆಗಳು ದೇಶದ ಆರ್ಥಿಕ ಪುನಶ್ಚೇತನವನ್ನು ಸಾಧ್ಯವಾಗಿಸಲಿದೆ ಎಂದು ಮಹೇಶ್ವರಿ ತಿಳಿಸಿದರು.
ಕೊರೋನಾ ಪಿಡುಗಿನಿಂದ ಹೈಬ್ರಿಡ್ ಕಾರ್ಯ ಸಂಸ್ಕೃತಿಯು ಅನಿವಾರ್ಯವಾಗಿದೆ. ಇದೊಂದು ಸಂಕೀರ್ಣ ಪರಿಸ್ಥಿತಿಯಾಗಿದ್ದು, ನಾವೀನ್ಯತೆಯು ಜಗತ್ತಿನ ಹೊಸ ಸಂಸ್ಕೃತಿಯಾಗಿ ಬೆಳೆಯಬೇಕಾದ ಜರೂರಿದೆ ಎಂದು ಹೇಳಿದರು.
ಲೇಖಕ.ಹಾಗೂ ಅಂಕಣಕಾರ ಚೇತನ್ ಭಗತ್, ಮಾತನಾಡಿ, “ನಮ್ಮ ಭಾಷೆಗಳು, ಹಬ್ಬಗಳು, ಆಹಾರ ಕ್ರಮಗಳು, ಸಂಸ್ಕೃತಿ, ಧರ್ಮ ನಮಗೆ ಬೇಕೆನ್ನುವುದು ನಿಜ. ಆದರೆ ಕೃಷಿ ಬೆಳವಣಿಗೆ, ಆರ್ಥಿಕತೆ, ವಾಣಿಜ್ಯ ವಹಿವಾಟು, ತಂತ್ರಜ್ಞಾನ ಮುಂತಾದವು ದೇಶದ ಬೆಳವಣಿಗೆಗೆ ಬೇಕೇಬೇಕು. ಇವೆರಡನ್ನೂ ಒಂದಕ್ಕೊಂದು ಬೆರೆಸಬಾರದು ಎಂದರು.
Key words: founder -WEF -BTS-2019-Advice – application – artificial- intelligence – field – agriculture