ಮೈಸೂರು ,ಮಾರ್ಚ್,8,2023(www.justkannada.in): ಬಿಜೆಪಿಯ ನಾಲ್ಕು ಸಚಿವರು, ಶಾಸಕರು, ಜೆಡಿಎಸ್ ನ 8 ಜನ ಶಾಸಕರು ಸದ್ಯದಲ್ಲೇ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ. ಲಕ್ಷ್ಮಣ್, ಈಗಾಗಲೇ ಕೆಲವರು ಕಾಂಗ್ರೆಸ್ ಟಿಕೆಟ್ ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಯಾವುದೇ ರೀತಿಯ ನಿಯಮಗಳನ್ನ ಹಾಕದೆ ಪಕ್ಷಕ್ಕೆ ಬರುವಂತೆ ಸೂಚಿಸಲಾಗಿದೆ. ಪಕ್ಷಕ್ಕೆ ಕರೆ ತರಬೇಕೋ ಇಲ್ಲವೋ ಎಂಬುದನ್ನ ಪಕ್ಷ ನಿರ್ಧಾರ ಮಾಡುತ್ತೆ ಎಂದರು.
ಬಿಜೆಪಿ ನಾಯಕರು ಮನ ಬಂದಂತೆ ಮಾತನಾಡುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಕೂಡ ನಿನ್ನೆ ಮೈಸೂರಿನಲ್ಲಿ ಹುಚ್ಚುಚ್ಚಾಗಿ ಮಾತನಾಡಿದ್ದಾರೆ. ಪತ್ರಕರ್ತರು ಕೇಳಿದ ಪ್ರಶ್ನೆಗೂ ಸಮರ್ಪಕ ಉತ್ತರ ನೀಡಲಿಲ್ಲ ಎಂದು ಎಂ.ಲಕ್ಷ್ಮಣ್ ಕಿಡಿಕಾರಿದರು.
ಬಂಗಾರು ಲಕ್ಷ್ಮಣ್ ವಿರುದ್ದ ಕ್ರಮ ಕೈಗೊಂಡಿದ್ದ ಬಿಜೆಪಿ ಈಗ ಮಾಡಾಳ್ ವಿರೂಪಾಕ್ಷಪ್ಪ ವಿರುದ್ದ ಕ್ರಮ ಯಾಕಿಲ್ಲ…?
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಬಂಗಾರು ಲಕ್ಷ್ಮಣ್ ಕೇವಲ ಒಂದು ಲಕ್ಷ ಹಣ ಪಡೆಯುವಾಗ ಸಿಕ್ಕಿ ಬಿದ್ದರೆಂಬ ಕಾರಣಕ್ಕೆ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು. ಅವರನ್ನು ಬಿಜೆಪಿಯವರೇ ಸಿಲುಕಿಸಿ ದಲಿತರೆಂಬ ಕಾರಣಕ್ಕೆ ಅವರ ವಿರುದ್ಧ ಕ್ರಮ ಕೈಗೊಂಡರು. ಆದರೆ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣದಲ್ಲಿ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಅವರ ಪುತ್ರ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಆದರೂ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಬಿಜೆಪಿ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರದಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯ ಹೇಳಿಕೆ ನೀಡ್ತಿದಾರೆ. ಬೇಲ್ ಮೇಲೆ ಬಂದ ಮಾಡಾಳ್ ವಿರೂಪಾಕ್ಷಪ್ಪರನ್ನ ಮೆರವಣಿಗೆ ಮೂಲಕ ಕರೆ ತರಲಾಯಿತು ಎಂದು ಎಂ.ಲಕ್ಷ್ಮಣ್ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಕಾಫಿ,ಟೀ, ಬಿಸ್ಕೆಟ್ ಗೆ 200 ಕೋಟಿ ಖರ್ಚು ಮಾಡಲಾಗಿದೆ ಎಂದು ಆರೋಪಿಸಿರುವ ಬಿಜೆಪಿಯ ಎನ್.ಆರ್ ರಮೇಶ್ ಸೂಕ್ತ ದಾಖಲೆ ಬಿಡುಗಡೆ ಮಾಡಬೇಕು. ಈ ಬಗ್ಗೆ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ. ಯಾವುದೇ ದಾಖಲೆಗಳಿಲ್ಲದಿದ್ದರೂ ಸಿದ್ದರಾಮಯ್ಯ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡ್ತಿದಾರೆ. ದಿನ ಬೆಳಗಾದರೆ ಸಿದ್ಧರಾಮಯ್ಯ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡುತ್ತಿರುವ ಅವರೇ ಭ್ರಷ್ಟರಾಗಿದ್ದಾರೆ ಎಂದು ಎಂ.ಲಕ್ಷ್ಮಣ್ ಹರಿಹಾಯ್ದರು.
ನಾಳೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಹದೇವಪ್ಪರಿಂದ ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ವೀಕ್ಷಣೆ.
ನಾಳೆ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರು ಮೈಸೂರು ಬೆಂಗಳೂರು ಎಕ್ಸ್ಪ್ರೆಸ್ ಹೈವೇ ವೀಕ್ಷಣೆ ಮಾಡಲಿದ್ದಾರೆ. ಮೈಸೂರು ಬೆಂಗಳೂರು ಹೈವೇ ಕಾಮಗಾರಿಗೆ ಕಾಂಗ್ರೆಸ್ ಒಂದು ನಯಾ ಪೈಸೆ ನೀಡಿಲ್ಲ. ಮಾಜಿ ಸಚಿವ ಮಹದೇವಪ್ಪ ಮಾತನ್ನು ಪರಿಗಣಿಸಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಹೈವೇ ಕಾಮಗಾರಿಗೆ 9360 ಕೋಟಿ ಖರ್ಚಾಗಿದೆ ಎಂದಿದ್ದಾರೆ. ನಾಳೆ ಸಿದ್ದರಾಮಯ್ಯ ಹಾಗೂ ಮಹದೇವಪ್ಪರೊಟ್ಟಿಗೆ ಹೈವೇ ಕಾಮಗಾರಿ ವೀಕ್ಷಣೆ ಮಾಡಲಿದ್ದೇವೆ. ಆ ವೇಳೆ ಮಾಧ್ಯಮಗಳಿಗೆ ಹೈವೇ ಕಾಮಗಾರಿಗೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡುತ್ತೇವೆ ಎಂದರು.
ಬಿಜೆಪಿ ವಿರುದ್ಧ ನಾಳೆ ಕಾಂಗ್ರೆಸ್ ಕರೆ ನೀಡಿದ್ದ ಬಂದ್ ರದ್ದಾದ ಕುರಿತು ಪ್ರತಿಕ್ರಿಯಿಸಿದ ಎಂ.ಲಕ್ಷ್ಮಣ್, ನಮಗೆ ಇಂಟೆಲಿಜೆಂಟ್ ಮಾಹಿತಿ ಸಿಕ್ಕಿದೆ. ನಾಳೆ ಬಿಜೆಪಿ, ಆರ್ ಎಸ್ಎಸ್ ಸೇರಿದಂತೆ ಇತರೆ ಸಂಘಟನೆಗಳು ಕಾಂಗ್ರೆಸ್ ಗೆ ಮಸಿ ಬಳಿಯುವ ಕೆಲಸಕ್ಕೆ ಕೈ ಹಾಕಿದೆ ಮಾಹಿತಿ ಸಿಕ್ಕಿತ್ತು. ಹೀಗಾಗಿ ನಾಳಿನ ನಮ್ಮ ಬಂದ್ ಅನ್ನ ವಾಪಾಸ್ ತೆಗೆದುಕೊಂಡಿದ್ದೇವೆ. ದ್ವಿತೀಯ ಪಿಯುಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಶುಭವಾಗಲಿ. ನಮ್ಮ ಹೋರಾಟ ಏನಿದ್ದರೂ 40% ಬಿಜೆಪಿ ಸರ್ಕಾರದ ವಿರುದ್ಧ. ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ಮಂದುವರೆಯುತ್ತದೆ ಎಂದರು.
Key words: Four –BJP- ministers- MLAs- 8 JDS- MLAs – join -Congress -M. Laxman