ಬೆಂಗಳೂರು,ಸೆಪ್ಟಂಬರ್,24,2024 (www.justkannada.in): ಪಡೆದುಕೊಳ್ಳುವುದರಲ್ಲಿ ಸಂತೋಷವಿದೆ ನಿಜ, ಆದರೆ ಕೊಡುವುದರಲ್ಲಿ ಇರುವ ಸಂತೋಷ ಬೇರೆ ಯಾವುದರಲ್ಲೂ ಇಲ್ಲ. ನಾವು ಕೊಡುವುದು ಎಂದರೆ ಹಣದ ರೂಪದಲ್ಲೋ, ವಸ್ತುವಿನ ರೂಪದಲ್ಲೋ ಎಂದುಕೊಳ್ಳುತ್ತೇವೆ. ಒಂದು ಮುಗುಳ್ನಗೆಯೂ ಕೊಡುಗೆ ಆಗಬಲ್ಲದು. ಹಾಗಾಗಿ ಕೊಡುವುದಕ್ಕೆ ನಮ್ಮೆಲ್ಲರಲ್ಲೂ ಅಪಾರವಾದ ಸಂಗತಿಗಳಿವೆ. ನಮಗದು ಗೊತ್ತಾಗಬೇಕು. ಯಾರು ಕೊಡುವುದನ್ನು ಕಲಿಯುತ್ತಾರೋ ಅವರಿಗೆ ಬದುಕಿನ ಸಾರ್ಥಕತೆಯ ಅರಿವಿರುತ್ತದೆ ಎಂದು ಶಿಕ್ಷಣ ತಜ್ಞರು, ಚಿಂತಕರು ಅಗಿರುವ ಡಾ. ಗುರುರಾಜ ಕರ್ಜಗಿ ಹೇಳಿದರು.
ಬೆಂಗಳೂರಿನ ಆರ್.ವಿ. ಡೆಂಟಲ್ ಕಾಲೇಜಿನ ಪಾಂಡು ಸಭಾಂಗಣದಲ್ಲಿ ನಡೆದ ಲಕ್ಷ್ಮೀಶ ಫೌಂಡೇಶನ್ ನ ನಾಲ್ಕನೇ ವಾರ್ಷಿಕೋತ್ಸವದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ತನಗಾದ ಸಂಕಷ್ಟ, ನೋವು, ಬೇರೆಯವರಿಗೆ ಆಗದಂತೆ, ತಾನು ನೊಂದಿದ್ದರೂ ಇತರರ ಸಂಕಷ್ಟಕ್ಕೆ, ನೋವಿಗೆ ನೆರವಾಗಲು ನಿಲ್ಲುವವರು ಬಹಳ ವಿರಳ, ಇಂತಹ ವಿರಳರಲ್ಲಿ ಲಕ್ಷ್ಮೀಶ ಫೌಂಡೇಶನ್‍ನ ಸ್ಥಾಪಕರಾದ ಉಷಾ ನಾರಾಯಣ ಹಾಗೂ ಸಂಸ್ಥೆಯ ಎಲ್ಲ ಸದಸ್ಯರಿದ್ದಾರೆ. ಇಂತಹ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನ್ನಲ್ಲಿ ಧನ್ಯತೆ ಮೂಡಿಸಿದೆ ಎಂದು ಡಾ. ಗುರುರಾಜ ಕರ್ಜಗಿ ಹೇಳಿದರು.
ಲಕ್ಷ್ಮೀಶ ಫೌಂಡೇಶನ್ ನ ಮಹತ್ವಾಕಾಂಕ್ಷಿ ಹಾಗೂ ಬಹು ಬೇಡಿಕೆಯ ಯೋಜನೆಯಾದ ಕ್ಯಾನ್ಸರ್ ಕಾಯಿಲೆ ಉಳ್ಳವರ ಮಕ್ಕಳು ಹಾಗೂ ಆರ್ಥಿಕ ಸಂಕಷ್ಟದಲ್ಲಿರುವವರ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡುವುದಕ್ಕಾಗಿ ನಿಧಿ ಸಂಗ್ರಹಣೆಯ ಉದ್ದೇಶದಿಂದ ಹಮ್ಮಿಕೊಂಡ ನೃತ್ಯ ವೈವಿದ್ಯ ಹಾಗೂ ಅನುಭವಾಮೃತ ಕಾರ್ಯಕ್ರಮ ಸೇವಾಸಕ್ತ ಸಹೃದಯರಿಂದ ಕಿಕ್ಕಿರಿದು ತುಂಬಿತ್ತು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ. ಸಂಗೀತಾ ಫಣೀಶ್ ಹಾಗೂ ವಿದುಷಿ ವರ್ಷ ರವಿಪ್ರಕಾಶ್ ಅವರ ನೃತ್ಯ ಹಾಗೂ ಅದಕ್ಕೆ ನೀಡಿದ ವಿವಿರಣೆಗಳು ನೋಡುಗರನ್ನು ಗಂಧರ್ವ ಲೋಕಕ್ಕೆ ಕರೆದೊಯ್ಯಿತು. ಕಲಾ ದೇಗುಲ ಶ್ರೀನಿವಾಸ್ ಅವರ ನಿರೂಪಣೆ ಕಾರ್ಯಕ್ರಮದ ಮೆರಗು ಹೆಚ್ಚಿಸಿತು.
ಲಕ್ಷ್ಮೀಶ ಫೌಂಡೇಶನ್‍ನ ಕಾರ್ಯದರ್ಶಿಗಳಾದ ಮೋಹನ್ ಕುಮಾರ್ ಅವರು ಸ್ವಾಗತಿಸಿದರು. ಸಂಸ್ಥೆಯ ಅಧ್ಯಕ್ಷೆ ಉಷಾ ನಾರಾಯಣ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ, ಕ್ಯಾನ್ಸರ್ ಕಾಯಿಲೆ ಉಳ್ಳವರಿಗೆ ಹಾಗೂ ಅವರನ್ನು ಆರೈಕೆ ಮಾಡುತ್ತಿರುವವರಿಗೆ ನೆರವಾಗುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ಅವರಿಗೆ ಸ್ವಲ್ಪ ಅವಧಿಗೆ ಉಳಿಯುವುದಕ್ಕೆ ನೆರವಾಗುವ ಸೆಂಟರ್ ಸ್ಥಾಪಿಸಬೇಕಾಗಿದೆ, ಇದಕ್ಕೆ ಬಹಳ ಜನರ ಕೋರಿಕೆ ಇದೆ ಎಂದು ಹೇಳಿ, ಸೂಕ್ತ ಜಾಗದ ನೆರವು ಕೇಳಿದರು.
ಲಕ್ಷ್ಮೀಶ ಫೌಂಡೇಶನ್
ಉದಯ ಟಿ.ವಿಯ ಹಿರಿಯ ವಾರ್ತಾ ವಾಚಕಿ ಉಷಾ ನಾರಾಯಣ ಅವರು ತಮ್ಮ ಪತಿ ಲಕ್ಷ್ಮೀನಾರಾಯಣ ಅವರ ಹೆಸರಿನಲ್ಲಿ ಕ್ಯಾನ್ಸರ್ ಕೇರ್ ಗೀವರ್ ಸಂಸ್ಥೆ ಲಕ್ಷ್ಮೀಶ ಫೌಂಡೇಶನ್ ಅನ್ನು 2020 ರಲ್ಲಿ ಆರಂಭಿಸಿದರು. ಆರಂಭವಾದ ಕೆಲವೇ ವರ್ಷಗಳಲ್ಲಿ ಸಂಸ್ಥೆ ಸಮುದಾಯದ ಅಗತ್ಯ ಅರಿತು ಹಲವು ವಲಯಗಳಲ್ಲಿ ತನ್ನ ಸೇವಾ ಕಾರ್ಯ ವಿಸ್ತರಿಸಿದೆ. ಅವುಗಳ ವಿವರ ಇಲ್ಲಿದೆ.
ಕ್ಯಾನ್ಸರ್‍ನಿಂದ ಬಳಲುವವರು ಹಾಗೂ ಅವರನ್ನು ಆರೈಕೆ ಮಾಡುತ್ತಿರುವವರಿಗೆ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಭಾವನಾತ್ಮಕ ಬೆಂಬಲ. ಕಳೆದ ನಾಲ್ಕು ವರ್ಷಗಳಿಂದ ಶಂಕರ ಕ್ಯಾನ್ಸರ್ ಆಸ್ಪತ್ರೆಗೆ ಪ್ರತಿ ವಾರವೂ ಭೇಟಿ ನೀಡಿ, ವಾರ್ಡ್ ಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು, ಅವರನ್ನು ನೋಡಿಕೊಳ್ಳುತ್ತಿರುವವರೊಂದಿಗೆ ಆಪ್ತಮಾತು, ಸಾಂತ್ವನ, ಧೈರ್ಯ ತುಂಬುವುದರ ಜೊತೆಗೆ, ಅವರೊಂದಿಗೆ ಮುದವಾಗಿ ಇರುವುದು.
ವೃದ್ಧಾಶ್ರಮದಲ್ಲಿರುವವರಲ್ಲಿ ಒಂಟಿತನ ನೀಗುವುದಕ್ಕಾಗಿ ಸಂಗೀತ, ಕಥೆ, ಆಟಗಳ ಮನರಂಜನೆ ನೀಡುವುದು. ಅವರಿಗಾಗಿ ಸಮಯ ಕೊಟ್ಟು, ಅವರ ಮಾತುಗಳನ್ನೂ ಆಲಿಸುವುದು. ಕ್ಯಾನ್ಸರ್ ಕಾಯಿಲೆ ಉಳ್ಳವರ ಮಕ್ಕಳು ಹಾಗೂ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣಕ್ಕಾಗಿ ನೆರವು.
ಶಿಕ್ಷಣ ಶುಲ್ಕ ಭರಿಸಲಾರದೆ ಮುಂದೇನು ಎನ್ನುವ ಆತಂಕದಲ್ಲಿದ್ದ ನೂರಾರು ಮಕ್ಕಳಿಗೆ ಮುಂದಿನ ಓದಿಗೆ ನೆರವಾಗಿ ಅವರ ಭವಿಷ್ಯ ರೂಪಿಸುವಲ್ಲಿ ಲಕ್ಷ್ಮೀಶ ಫೌಂಡೇಶನ್ ಪ್ರಮುಖ ಪಾತ್ರ ವಹಿಸಿದೆ.
ಬಳಸಿದ ಆದರೆ ಉಪಯುಕ್ತವಾದ ಬಟ್ಟೆ, ಪಾತ್ರೆಗಳು ಸೇರಿದಂತೆ ಹಲವು ವಸ್ತುಗಳನ್ನು ಅಗತ್ಯ ಇರುವವರಿಗೆ ವಿತರಿಸುವ ಯೋಜನೆಯನ್ನು ಪ್ರತಿ ತಿಂಗಳೂ ಕಳೆದ ನಾಲ್ಕು ವರ್ಷಗಳಿಂದ ಹಮ್ಮಿಕೊಳ್ಳಲಾಗಿದೆ. ಈ ಮೂಲಕ ಸಾವಿರಾರು ಜನರಿಗೆ ನೆರವು ನೀಡಿದೆ.
ಇಷ್ಟೆಲ್ಲ ಕಾರ್ಯನಿರ್ವಹಿಸುತ್ತಿರುವ ಲಕ್ಷ್ಮೀಶ ಫೌಂಡೇಶನ್ ಯಾವುದೇ ಆಫೀಸನ್ನು ಹೊಂದಿಲ್ಲ. ಉದ್ಯೋಗಿಗಳೂ ಇಲ್ಲ. ಕೇವಲ ಸ್ವಯಂ ಸೇವಕರು ಹಾಗೂ ನಿರಂತರವಾಗಿ ನೆರವು ನೀಡುತ್ತಿರುವವರೇ ಸಂಸ್ಥೆಯ ಬೆನ್ನೆಲುಬಾಗಿದ್ದಾರೆ.
ಲಕ್ಷ್ಮೀಶ ಫೌಂಡೇಶನ್ ನ ಮಹತ್ವದ ಯೋಜನೆ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವುದು. ಇದಕ್ಕಾಗಿ ಕಳೆದ ಎರಡು ವರ್ಷಗಳಿಂದಲೂ ನಿಧಿ ಸಂಗ್ರಹಣೆಯ ಉದ್ದೇಶದಿಂದ ಸಂಗೀತ ಕಾರ್ಯಕ್ರಮ ಆಯೋಜನೆ ಆಗುತ್ತಿದೆ. ಕಲಾವಿದರು, ಸಹೃದಯ ಕಲಾಸಕ್ತರು ನಿಧಿ ಸಂಗ್ರಹಣೆಯಲ್ಲಿ ನೆರವು ನೀಡುತ್ತಲೇ ಇದ್ದಾರೆ.
ಶಿಕ್ಷಣ ಶುಲ್ಕ ಬಯಸಿ ಬರುವವರ ಅಗತ್ಯ ಪೂರೈಸಲು “ನಿಧಿ ಸಂಗ್ರಹಣೆ”ಯ ಕಾರ್ಯಕ್ರಮ ಒಂದೇ ಸಾಕಾಗುತ್ತಿಲ್ಲ. ಹನಿ ಹನಿ ಸೇರಿದರೆ ಹಳ್ಳ ಎನ್ನುವಂತೆ, ದಾನದಲ್ಲಿ ಶ್ರೇಷ್ಠವಾದ ವಿದ್ಯಾದಾನಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕಾಗಿದೆ. ಪ್ರತಿ ಮನೆಯಲ್ಲಿ ನಡೆಯುವ ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಹಿರಿಯರ ಸ್ಮರಣೆಯ ದಿನಗಳನ್ನು ಅರ್ಥಪೂರ್ಣವಾಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ. ನೀವು ಆರ್ಥಿಕ ನೆರವು ನೀಡುವ ಮೂಲಕ, ಮಕ್ಕಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರವಹಿಸುತ್ತೀರಿ. ಇಂತಹ ಸಾರ್ಥಕ ಸೇವೆಗೆ ನಮ್ಮ ಜೊತೆ ಕೈಜೋಡಿಸಿ, ವಿದ್ಯಾದಾನದಲ್ಲಿ ಸಹಕರಿಸಿ ಎಂದು ಲಕ್ಷ್ಮೀಶ ಫೌಂಡೇಶನ್ ವತಿಯಿಂದ ಮನವಿ ಮಾಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ usha.narayan67@gmail.com
Key words: fourth anniversary, Lakshmeesh Foundation, Dr. Gururaj Karjagi