ಬೆಂಗಳೂರು,ಜೂ,12,2020(www.justkannada.in): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರನ್ನು ದುರುಪಯೋಗಪಡಿಸಿಕೊಂಡು ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿನ ನಿವೇಶನಗಳಿಗೆ ನಕಲಿ ಹಕ್ಕು ಪತ್ರಗಳನ್ನು ಸೃಷ್ಟಿಸಿಕೊಂಡು ಸಾರ್ವಜನಿಕರಿಗೆ ಹಂಚಿಕೆ ಮಾಡಿ ಜನರಿಗೆ ವಂಚನೆ ಮಾಡಿದ್ದ ಜಾಲವೊಂದನ್ನು ಪತ್ತೆ ಹಚ್ಚಲಾಗಿದೆ.
ಉತ್ತರ ಕರ್ನಾಟಕ ಪ್ರದೇಶ ರೈತ ಸಂಘದ ರಾಜ್ಯಾಧ್ಯಕ್ಷ ವಿಜಯಾನಂದಸ್ವಾಮಿ ಎಂಬುವವರೇ ಈ ವಂಚನೆ ಮಾಡಿ ಸಿಕ್ಕಿಬಿದ್ದಿರುವುದು. ಈತ ಬೆಂಗಳೂರು ಮೂಲಕ ರಮೇಶ್ ಎಂಬಾತನೊಂದಿಗೆ ಸೇರಿಕೊಂಡು ತಾನು ನೋಂದಣಿ ಮಾಡಿಸಿಕೊಂಡಿದ್ದ ಉತ್ತರ ಕರ್ನಾಟಕ ಪ್ರದೇಶ ರೈತರ ಸಂಘ ( ರಿ ) ಸಂಸ್ಥೆಯ ಮೂಲಕ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ರಚಿಸಿರುವ ನಿವೇಶನಗಳನ್ನು ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಿಸಿಕೊಡುತ್ತೇನೆಂದು ಜನರಲ್ಲಿ ನಂಬಿಸಿದ್ದನು.
ಬಳಿಕ ತನ್ನ ಸಂಘದ ಹೆಸರಿನಲ್ಲಿ ಸದಸ್ಯರನ್ನಾಗಿ ನೊಂದಾಯಿಸಿಕೊಳ್ಳುವುದಾಗಿ ಪ್ರತಿಯೊಬ್ಬರಿಂದ ರೂ . 15,000 / -ಗಳನ್ನು ಪಡೆದುಕೊಂಡು ಸುಮಾರು 1000 ಜನರನ್ನು ಸದಸ್ಯರನ್ನಾಗಿ ನೊಂದಾಯಿಸಿಕೊಂಡಿದ್ದನು. ಇನ್ನು ಸಾರ್ವಜನಿಕರಿಗೆ ತಾನೇ ತಯಾರಿಸಿದ್ದ ಫಲಾನುಭವಿಯ ಮನವಿಯಲ್ಲಿ ಮಾಹಿತಿ ಪಡೆದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಹೆಸರಿನಲ್ಲಿ ನಕಲಿಯಾಗಿ ತಯಾರಿಸುವ ನಿವೇಶನದ ಹಂಚಿಕೆ ಹಕ್ಕು ಪತ್ರದಲ್ಲಿ ಬಿ.ಡಿ.ಎ. ನಕಲಿ ರಬ್ಬರ್ ಸ್ಟಾಂಪ್ ಹಾಕಿ , ಬಿ.ಡಿ.ಎ. ಆಯುಕ್ತರ ನಕಲಿ ಸಹಿಯನ್ನು ಮಾಡಿ , ಈಗಾಗಲೇ 50 ಕ್ಕೂ ಹೆಚ್ಚು ಜನರಿಗೆ ನಿವೇಶನದ ಹಕ್ಕು ಪತ್ರಗಳನ್ನು ನೀಡಿದ್ದನು. ನಿವೇಶನ ಹಕ್ಕುಪತ್ರಗಳಿಗೆ ರೂ . 50,000 / – ಗಳಿಂದ ರೂ . 3,00,000 / – ಗಳವರೆಗೆ ಹಣವನ್ನು ವಸೂಲಿ ಮಾಡಿ ಸಾರ್ವಜನಿಕರಿಗೆ ವಂಚನೆ ಮಾಡಿದ್ದಾರೆ.
ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಸುಮಾರು 3000 ಜನರಿಗೆ ಸದಸ್ಯತ್ವವನ್ನು ಮಾಡಿಕೊಂಡು ನಿವೇಶನದ ನಕಲಿ ಹಕ್ಕು ಪತ್ರಗಳನ್ನು ವಿತರಿಸುವ ಯೋಜನೆ ಹೊಂದಲಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಕ್ರಮಕೈಗೊಳ್ಳಲಾಗಿದೆ .
ಪ್ರಕರಣ ಬೆಳಕಿಗೆ ಬಂದಿದ್ದು ಹೀಗೆ :
ವ್ಯಕ್ತಿಯೊಬ್ಬರು ರೂ . 3,00,000 ಗಳನ್ನು ಪಾವತಿಸಿ ಒಟ್ಟು ಆರು ನಿವೇಶನದ ನಕಲಿ ಹಕ್ಕು ಪತ್ರಗಳನ್ನು ಪಡೆದಿದ್ದರು. ಹಕ್ಕು ಪತ್ರದ ಅಸಲೀತನವನ್ನು ತಿಳಿಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಭೇಟಿ ನೀಡಿ , ಉಪ ಕಾರ್ಯದರ್ಶಿ -1 ರ ವಿಭಾಗದಲ್ಲಿ ವಿಚಾರಿಸಿದ್ದರು . ಈ ಬಗ್ಗೆ ತಕ್ಷಣವೇ ಜಾಗೃತಗೊಂಡ ಉಪ ಕಾರ್ಯದರ್ಶಿ -1 ರವರು ಸದರಿ ವಿಷಯವನ್ನು ಆಯುಕ್ತರಾದ ಡಾ . ಹೆಚ್.ಆರ್ . ಮಹದೇವ್ ಅವರ ಗಮನಕ್ಕೆ ತಂದರು .
ಇದೇ ವೇಳೆ ಆಯುಕ್ತರು ತಕ್ಷಣವೇ ಕಾರ್ಯ ಪ್ರವೃತ್ತರಾಗಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕರಾದ ಶಿವಕುಮಾರ್ ಗುನಾರೆಯವರಿಗೆ ಈ ಬಗ್ಗೆ ಗೌಪ್ಯವಾಗಿ ತನಿಖೆಯನ್ನು ನಡೆಸಿ , ಮುಂದಿನ ಅಗತ್ಯ ಕಾನೂನು ಕ್ರಮವಹಿಸುವಂತೆ ತಿಳಿಸಿದ್ದರು
ಈ ಬಗ್ಗೆ ಕಳೆದ ಎರಡು ದಿನಗಳಿಂದ ತನಿಖೆ ನಡೆಸಿದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಜಾಗೃತ ದಳದ ಅಧಿಕಾರಿ / ಸಿಬ್ಬಂದಿಯವರು ಆರೋಪಿಯಾದ ವಿಜಯಾನಂದಸ್ವಾಮಿ ನಡೆಸುತ್ತಿದ್ದ ಕಚೇರಿಯ ಮೇಲೆ ದಾಳಿ ನಡೆಸಿ , ಕಚೇರಿಯಲ್ಲಿದ್ದ ಬಿ.ಡಿ.ಎ. ಹೆಸರಿನ ನಿವೇಶನದ ನಕಲಿ ಹಂಚಿಕೆ ಪತ್ರಗಳು , ಸಂಘದ ಹೆಸರಿನ ಮೊಹರುಗಳು , ಬಿ.ಡಿ.ಎ. ಹೆಸರಿನಲ್ಲಿರುವ ರಬ್ಬರ್ ಸ್ಟಾಂಪ್‌ಗಳನ್ನು ವಶಪಡಿಸಿಕೊಂಡು , ವಿಜಯಾನಂದಸ್ವಾಮಿಯನ್ನು ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿಜಯಾನಂದಸ್ವಾಮಿ ಅವರ ತಂಡದವರಿಂದ ವಂಚನೆಗೆ ಒಳಗಾದವರು ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಸೂಚಿಸಲಾಗಿದೆ .
Key words: Fraudulent -distribution – fake-certificate -BDA
.