ಮೈಸೂರು,ಫೆಬ್ರವರಿ,9,2023(www.justkannada.in): ಮೈಸೂರಿನ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯು (AIISH) ಕುವೆಂಪುನಗರದ ಭಾನವಿ ಆಸ್ಪತ್ರೆಯ ಸಹಯೋಗದೊಂದಿಗೆ ಫೆಬ್ರವರಿ 11 ರಂದು ಉಚಿತ ಶ್ರವಣ ತಪಾಸಣೆ ಶಿಬಿರವನ್ನ ಆಯೋಜಿಸಿದೆ.
ಭಾನವಿ ಆಸ್ಪತ್ರೆಯ ಆವರಣದಲ್ಲಿ ಫೆಬ್ರವರಿ 11ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 1 ರವರೆಗೆ ಉಚಿತ ಶ್ರವಣ ತಪಾಸಣೆ ಶಿಬಿರವನ್ನು ಆಯೋಜಿಸಲಾಗಿದ್ದು, ಎಲ್ಲಾ ವಯೋಮಾನದವರು ತಮ್ಮ ಕಿವಿ ಮತ್ತು ಶ್ರವಣ ಸಂಬಂಧಿ ಸಮಸ್ಯೆಗಳ ತಪಾಸಣೆಗಾಗಿ ಇಲ್ಲಿ ಭೇಟಿ ನೀಡಬಹುದು. ಸಾರ್ವಜನಿಕರು ಆಯಿಷ್ ಮತ್ತು ಭಾನವಿ ಆಸ್ಪತ್ರೆಯವರು ಆಯೋಜಿಸಿರುವ ಈ ತಪಾಸಣ ಶಿಬಿರದ ಸೇವೆಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದ್ದಾರೆ.
ಶ್ರವಣದೋಷವು, ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ನ್ಯೂನತೆಯಾಗಿದ್ದು, ಇತರ ವೈಕಲ್ಯಗಳಿಗೆ ಹೋಲಿಸಿದರೆ ಇದರ ಪ್ರಮಾಣ ಹೆಚ್ಚು. ಆದರೆ, ಶ್ರವಣ ಸಮಸ್ಯೆಗಳನ್ನು ಶೀಘ್ರವಾಗಿ ಗುರುತಿಸಿ, ಚಿಕಿತ್ಸೆ ನೀಡಿದಲ್ಲಿ ಉತ್ತಮ ಸುಧಾರಣೆ ಸಾಧ್ಯವಿದೆ. ಹೀಗಾಗಿ, ಇದರ ಕುರಿತು ಜನರಲ್ಲಿ ಅರಿವು ಮೂಡಿಸಲು ವಿಶ್ವ ಆರೋಗ್ಯ ಸಂಸ್ಥೆಯು ಪ್ರತಿ ವರ್ಷ ಮಾರ್ಚ್ 3 ಅನ್ನು ‘ವಿಶ್ವ ಶ್ರವಣ ದಿನ’ವನ್ನಾಗಿ ಆಚರಿಸುತ್ತದೆ. “ಎಲ್ಲರ ಕಿವಿ ಹಾಗೂ ಶ್ರವಣ ರಕ್ಷಣೆ. ಇದನ್ನು ಸಾಧ್ಯವಾಗಿಸೋಣ’ ಎಂಬುದು ಈ ವರ್ಷದ ವಿಷಯ. ಅಖಿಲ ಭಾರತ ವಾಕ್-ಶ್ರವಣ ಸಂಸ್ಥೆಯು “ಶ್ರವಣ” ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿರುವ ದೇಶದ ಪ್ರಮುಖ ಸಂಸ್ಥೆಯಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆಯ ಧೈಯವಾಕ್ಯವನ್ನು ಬೆಂಬಲಿಸುವುದು ಮಾತ್ರವಲ್ಲದೆ, `ವಿಶ್ವ ಶ್ರವಣ ದಿನವನ್ನು ಅರ್ಥಪೂರ್ಣವಾಗಿ ಆಚರಿಸುತ್ತದೆ.
Key words: Free- hearing – camp-AIISH-Mysore -11th Feb.