ಬೆಳಗಾವಿ,ಡಿಸೆಂಬರ್,15,2023(www.justkannada.in): ಕನ್ನಡ ಚಿತ್ರರಂಗ ಕಂಡ ಅಪರೂಪದ ನಟಿ ಉಮಾಶ್ರೀ ಅವರು ರಾಜಕೀಯದಲ್ಲೂ ಹೆಸರುವಾಸಿಯಾಗಿದ್ದು ಸಚಿವರು ಕೂಡ ಆಗಿದ್ದರು. ಹಲವು ವಿವಿಧ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಇವರು ಹಾಸ್ಯ ಪಾತ್ರಗಳಿಗೆ ತುಂಬಾ ಪ್ರಸಿದ್ಧರಾಗಿದ್ದಾರೆ. ಈ ನಡುವೆ ಇಂದು ವಿಧಾನ ಪರಿಷತ್ ನಲ್ಲಿ ಉಮಾಶ್ರೀ ಅವರ ನಟನೆಯ ಬಗ್ಗೆ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು.
ಪರಿಷತ್ತಿನಲ್ಲಿ ಬಿಲ್ ಮೇಲಿನ ಚರ್ಚೆಯ ವೇಳೆ ಮಾಲಾಶ್ರೀ, ಉಮಾಶ್ರೀಯವರ ನಟನೆ ಬಗ್ಗೆ ಚರ್ಚೆ ನಡೆಯಿತು. ಈ ವೇಳೆ ನಟಿ ಉಮಾಶ್ರೀ ಅವರ ನಟನೆಯನ್ನು ಸದಸ್ಯರು ಹೊಗಳಿದರು.
ಬಿಜೆಪಿಯ ವಿಶ್ವನಾಥ್ ಬಿಲ್ ಮೇಲಿನ ಚರ್ಚೆ ವೇಳೆ ಉಮಾಶ್ರೀ ಹೆಸರೇಳುವಾಗ ಮಾಲಾಶ್ರೀಯವರ ಮಾತು ಎಂದು ಹೆಸರಿಸಿದರು. ಈ ಸಂದರ್ಭದಲ್ಲಿ ಸಭಾಪತಿಗಳು ಮಾಲಾಶ್ರೀಯವರ ನೆನಪು ಈಗೇಕೆ ನಿಮಗೆ ಬಂತು ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ಮಧ್ಯಪ್ರವೇಶಿಸಿದ ತೇಜಸ್ವಿನಿಗೌಡ ಅವರು, ಭಾರತದಲ್ಲಿ ಹೇಮಮಾಲಿನಿ ಹೇಗೆ ಕನಸಿನ ಕನ್ಯೆ ಎಂದು ಹೆಸರು ಪಡೆದಿದ್ರೊ, ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ನಟನೆಯಿಂದ ಹೆಸರು ಮಾಡಿದ್ದರು. ನಾಯಕಿಯಾಗಲು ಸೌಂದರ್ಯದ ಮಾನದಂಡ ಬದಲು ನಟನೆಯ ಮಾನದಂಡದ ಮೇಲೆ ಆಯ್ಕೆ ಮಾಡುವ ಹಾಗಿದಿದ್ರೆ ಉಮಾಶ್ರೀಯವರು ನಾಯಕಿಯಾಗಿ ಹಲವು ಚಿತ್ರದಲ್ಲಿ ನಟಿಸಬಹುದಿತ್ತು ಎಂದರು.
ಈ ವೇಳೆ ಎದ್ದು ನಿಂತ ಉಮಾಶ್ರೀ, ನನ್ನ ನಟನೆಯ ಬಗ್ಗೆ ಮಾತನಾಡಿದ್ದಕ್ಕೆ ಧನ್ಯವಾದ. ನಾನು ರಂಗಭೂಮಿಯಿಂದ ಬಂದವಳು, ರಂಗಭೂಮಿಯಲ್ಲಿ ನಾಯಕಿ, ಪೋಷಕನಟಿ, ಹಾಸ್ಯನಟಿ ಎಂಬ ವರ್ಗವಿಲ್ಲ, ಸಿನಿಮಾದಲ್ಲಿದೆ. ಆದರೆ ಗಿರೀಶ್ ಕಾಸರವಳ್ಳಿಯವರು ನನಗೆ ಗುಲಾಬಿ ಚಿತ್ರದಲ್ಲಿ ನಾಯಕಿ ನಟಿಯ ಅವಕಾಶ ನೀಡಿದ್ರು, ಅದರಿಂದ ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ಪ್ರಶಸ್ತಿ ಬಂತು.ಈ ನಾಡಿನ ಜನತೆ ಕಲಾವಿದೆಯಾಗಿ ನನಗೆ ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಧನ್ಯವಾದ ತಿಳಿಸಿದರು.
ಈ ವೇಳೆ ಮಾತನಾಡಿದ ಸಚಿವ ಎಚ್ ಕೆ ಪಾಟೀಲ್, ಉಮಾಶ್ರೀಯವರ ಒಡಲಾಳ ನಾಟಕ ನೋಡಿದ್ರೆ ಎಂತಹ ಅದ್ಬುತ ಕಲಾವಿದೆ ಎಂದು ಗೊತ್ತಾಗಲಿದೆ. ಈ ಒಡಲಾಳ ನಾಟಕವನ್ನ ಸೋನಿಯಾ ಗಾಂಧಿಯವರಿಗೆ ತೋರಿಸಿದ್ವಿ. ಆ ನಂತರ ಉಮಾಶ್ರಿಯವರನ್ನ ಭೇಟಿ ಮಾಡಿಸಿದಾಗ ಆ ನಾಟಕದಲ್ಲಿ ಪಾತ್ರ ಮಾಡಿರುವವರು ಇವರೇನಾ ಎಂದು ಮೂರು ಬಾರಿ ಕೇಳಿದ್ದರು ಎಂದರು.
Key words: Actress –Umashree- acting -appreciated –Legislative council