ಮೈಸೂರು,ಫೆಬ್ರವರಿ,1,2024(www.justkannada.in): ಭಾರತವನ್ನು 5 ಟ್ರಿಲಿಯನ್ ಡಾಲರ್ಗಳ ಪ್ರಬಲ ಆರ್ಥಿಕತೆಯಾಗಿ ರೂಪಿಸುತ್ತೇವೆಂದು ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರದ ಪ್ರಧಾನಿ ಮತ್ತು ಇನ್ನಿತರ ಮಂತ್ರಿಗಳು ಡಂಗುರ ಬಾರಿಸುತ್ತಿದ್ದರು.ಇದರ ಸತ್ಯಾಂಶವೀಗ ಬಿಚ್ಚಿಕೊಂಡಿದೆ. 5 ಟ್ರಿಲಿಯನ್ ಆರ್ಥಿಕತೆ ರೂಪಿಸುವುದಿರಲಿ, ದೇಶ ಸದ್ಯ ಸಿಲುಕಿರುವ ಸಾಲದ ಸುಳಿಯಿಂದ ಹೊರಬರಲೂ ಸಾಧ್ಯವಾಗದಷ್ಟು ಹಣಕಾಸು ದುಸ್ಥಿತಿಯನ್ನು ಬಿಜೆಪಿ ಸರ್ಕಾರ ನಿರ್ಮಿಸಿರುವುದು ಈ ಮಧ್ಯಂತರ ಬಜೆಟ್ ಪ್ರಸ್ತಾವನೆಯಲ್ಲಿ ಗೋಚರಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ ವೆಂಕಟೇಶ್ ಟೀಕಿಸಿದರು.
ಮಧ್ಯಂತರ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಹೆಚ್.ಎ ವೆಂಕಟೇಶ್, ಮಂಕುಬುದ್ದಿಯ ವಾಟ್ಸಪ್ ಯೂನಿವರ್ಸಿಟಿ ಜಾಲದೊಳಗೆ ಸಿಲುಕಿರುವ ದೇಶದ ಬಹತೇಕರು ಮತ್ತು ಅಂಧ ಭಕ್ತರು, ಬಿಜೆಪಿ ಸರ್ಕಾರದ ಈ ಸುಳ್ಳಿನ ಪರಧಿಯಿಂದ ಹೊರಬರಬೇಕಿದೆ. ಈ ಸರ್ಕಾರದ ಪ್ರಧಾನಿ ಮತ್ತು ಹಣಕಾಸು ಸಚಿವರು ದೇಶದ ಆಡಳಿತ ನಡೆಸಲು ಮತ್ತೆ 25ಲಕ್ಷ ಕೋಟಿ ಮೀರುವ ಹೊಸ ಸಾಲ ಪಡೆಯಲು ಮುಂದಾಗಿದ್ದಾರೆನ್ನುವುದು ಬಜೆಟ್ನಿಂದ ಸ್ಪಷ್ಟವಾಗಿದೆ. ಹೊಸ ಸಾಲ ಪಡೆಯದಿದ್ದರೆ ದೇಶದ ನಿತ್ಯದ ಆಡಳಿತ ಹಳ್ಳ ಹಿಡಿಯುತ್ತದೆನ್ನುವ ಸತ್ಯಾಂಶವನ್ನು ಜನ ಅರಿಯಬೇಕಿದೆ.
ಐದು ಟ್ರಿಲಿಯನ್ ಎಕಾನಮಿಯ ಶಕ್ತಿ ಪಡೆಯಲು ದೇಶದ ಜಿಡಿಪಿ ಬೆಳವಣಿಗೆಯು ಶೇ. ೦೮ನ್ನು ದಾಟಿ ಸರಿಸುಮಾರು 10ರ ಆಸುಪಾಸಿನಲ್ಲಿ ಸಾಗಬೇಕು. ಎಲ್ಲಾ ಪ್ರಜೆಗಳ ಬಡತನ ನೀಗಬೇಕು ಹಾಗು ತಲಾದಾಯ ಐದಾರು ಪಟ್ಟು ಏರಬೇಕು. ದೇಶದ ಈಗಿನ ಜಿಡಿಪಿ ಮತ್ತು ಜನರ ಬಡತನ ಗಮನಿಸಿದರೆ ಐದು ಟ್ರಿಲಿಯನ್ ಆರ್ಥಿಕತೆ ಎನ್ನುವುದು ಎಂದಿಗೂ ಮುಟ್ಟಲಾಗದ ಗುರಿಯೇ ಹೌದು. ಅರ್ಥಶಾಸ್ತ್ರದ ತಳಬುಡ ಗೊತ್ತಿಲ್ಲದ ವಾಟ್ಸಪ್ ನ ಗೊಬೆಲ್ಸ್ ಪ್ರಚಾರದ ಮೂಲಕ ಬಿಜೆಪಿ ದೇಶದ ಜನರನ್ನು ಬಹಳ ಅಗ್ಗವಾಗಿ ಮೂರ್ಖರನ್ನಾಗಿಸಲು ಹೊರಟಿದೆ ಎಂದು ಕಿಡಿಕಾರಿದ್ದಾರೆ.
ಮಧ್ಯಂತರ ಬಜೆಟ್ ಪ್ರಸ್ತಾವನೆಯಲ್ಲಿ ಹಳ್ಳಹಿಡಿದಿರುವ ದೇಶದ ಆರ್ಥಿಕತೆಯನ್ನು ನಾಜೂಕಿನಿಂದ ಮುಚ್ಚಿಡಲಾಗಿದೆ. ಕೆಲ ಸಹಜ ಬದಲಾವಣೆಗಳನ್ನು ಸಾಧನೆಗಳೆಂದು ಬಿಂಬಿಸಿ ನಿರ್ಮಲಾ ಸೀತಾರಾಮನ್ ತಾವೇ ಬೆನ್ನು ತಟ್ಟಿಕೊಂಡಿದ್ದಾರೆ.
ಬಿಜೆಪಿ ಸಿದ್ಧಾಂತದಂತೆ ಮತ್ತೆ ಕಾರ್ಪೊರೇಟ್ ತೆರಿಗೆ ಮನ್ನಾಮಾಡಲಾಗಿದೆ. ಮೂರು ಕರಾಳ ಕಾನೂನುಗಳನ್ನು ವಾಪಸು ಪಡೆದು ರೈತರ ಕ್ಷಮೆ ಕೋರಿದ್ದ ಪ್ರಧಾನಿ ಮೋದಿ, ಇವನ್ನೀಗ ಹಿಂಬಾಗಿಲಿನಿಂದ ಮರುಜಾರಿ ಮಾಡುತ್ತಿದ್ದಾರೆ. ಕೃಷಿಗೆ ಕನಿಷ್ಟ ಬೆಂಬಲ ಬೆಲೆ ಘೋಷಿಸಿಲ್ಲ ಮತ್ತು ಸ್ವಾಮಿನಾಥನ್ ಶಿಫಾರಸು ಪರಿಗಣಿಸಿಲ್ಲ. ಜಿಎಂಒ ಕೃಷಿಗೆ ಒತ್ತು ನೀಡುವ ಮೂಲಕ ಈ ದೇಶದ ರೈತರನ್ನು ಒಕ್ಕಲೆಬ್ಬಿಸುವ ಹಾಗು ಆಕ್ವಾಪಾರ್ಕ್ ಪರಿಕಲ್ಪನೆ ಮೂಲಕ ದೇಶ ವ್ಯಾಪ್ತಿಯ ಸಮುದ್ರಗಳನ್ನು ಖಾಸಗೀಕರಿಸುವ ಹುನ್ನಾರವನ್ನೂ ಪ್ರಧಾನಿ ಮತ್ತು ಹಣಕಾಸು ಮಂತ್ರಿ ರೂಪಿಸಿರುವುದು ಸ್ಪಷ್ಟವಾಗಿದೆ. ಶ್ರೀಮಂತರ ಸಂಪತ್ತು ಮತ್ತಷ್ಟು ಹೆಚ್ಚಿಸುವ ಬಡವರನ್ನು ಇನ್ನೂ ಬಡವನ್ನಾಗಿಸುವ ಕ್ರೂರ ನಿಲುವನ್ನು ಈ ಬಜೆಟ್ ಹೊಂದಿದೆ. ಅಲ್ಲದೇ ಚುನಾವಣೆಗೋಸ್ಕರ ಅಗ್ಗದ ಪ್ರಚಾರಕ್ಕಾಗಿ ಕೆಲ ಘೋಷಣೆಗಳನ್ನು ಮಾಡಲಾಗಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಎಚ್.ಎ. ವೆಂಕಟೇಶ್ ಟೀಕಿಸಿದರು.
Key words: KPCC Spokesperson -H.A Venkatesh – budget – financial crisis