ಮೈಸೂರು,ನವೆಂಬರ್,6,2023(www.justkannada.in): ಕಾರ್ಯಕ್ರಮ ನಡೆಯುತ್ತಿದ್ದ ವೇಳೆಯೇ ಮಧ್ಯೆ ಪ್ರವೇಶಿಸಿ ನ್ಯಾಯಬೆಲೆ ಅಂಗಡಿ ಮಾಲೀಕರ ಸಮಸ್ಯೆ ಬಗೆಹರಿಸುವಂತೆ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಅವರಿಗೆ ನ್ಯಾಯಬೆಲೆ ಅಂಗಡಿ ಮಾಲೀಕರೊಬ್ಬರು ಆಗ್ರಹಿಸಿದ ಘಟನೆ ಮೈಸೂರಿನಲ್ಲಿ ನಡೆಯಿತು.
ಕಾರ್ಯಕ್ರಮದ ವೇಳೆ ಮಧ್ಯೆ ಪ್ರವೇಶಿಸಿದ ನ್ಯಾಯಬೆಲೆ ಅಂಗಡಿ ಮಾಲೀಕನನ್ನು ಸಚಿವ ಕೆ.ಎಚ್ ಮುನಿಯಪ್ಪ ಸಮಾಧಾನಗೊಳಿಸಿದರು. ಇನ್ನು ಇದೇ ವೇಳೆ ಸರ್ಕಾರ ಐದು ಕೆ. ಜಿ ಉಚಿತ ಅಕ್ಕಿಯ ಬದಲು ಹಣ ನೀಡುತ್ತಿರುವುದಕ್ಕೆ ಮಹಿಳೆಯೊಬ್ಬರು ಆಕ್ಷೇಪ ವ್ಯಕಪಡಿಸಿದರು. ಐದು ಕೆ ಜಿ ಉಚಿತ ಅಕ್ಕಿಯ ಬದಲು ಹಣ ನೀಡುತ್ತಿರುವುದು ಸರಿಯಲ್ಲ. ಹಣದ ಬದಲು ಹತ್ತು ಕೆ. ಜಿ ಉಚಿತ ಅಕ್ಕಿಯನ್ನೇ ನೀಡುವಂತೆ ಮಹಿಳೆ ಆಗ್ರಹಿಸಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವ ಕೆ ಹೆಚ್ ಮುನಿಯಪ್ಪ. ಶೀಘ್ರದಲ್ಲೇ ಹತ್ತು ಕೆ. ಜಿ ಉಚಿತ ಅಕ್ಕಿ ನೀಡುವುದಾಗಿ ಭರವಸೆ ನೀಡಿದರು. ಹಾಗೆಯೇ ನ್ಯಾಯಬೆಲೆ ಅಂಗಡಿಗಳಲ್ಲಿ ಕೆಲವೊಮ್ಮೆ ಕಳಪೆ ಗುಣಮಟ್ಟದ ಅಕ್ಕಿ ನೀಡಲಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು. ರಾಜ್ಯ ಸರ್ಕಾರ ರೈತರಿಂದ ಗುಣಮಟ್ಟದ ಭತ್ತವನ್ನಷ್ಟೇ ಖರೀದಿಸುತ್ತದೆ. ಆದರೆ ಬಡವರಿಗೆ ನೀಡುವ ಉಚಿತ ಅಕ್ಕಿ ಗುಣಮಟ್ಟದಿಂದ ಏಕೆ ಕೂಡಿರುವುದಿಲ್ಲ?. ಕೆಲ ನ್ಯಾಯಬೆಲೆ ಅಂಗಡಿಗಳಲ್ಲಿ ಕಳಪೆ ಗುಣಮಟ್ಟದ ಅಕ್ಕಿ ವಿತರಿಸಲಾಗುತ್ತಿದೆ ಎಂದು ರೈತರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ಎಚ್ ಮುನಿಯಪ್ಪ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಬಳಿಕ ಮಾತನಾಡಿದ ಸಚಿವ ಕೆಎಚ್ ಮುನಿಯಪ್ಪ, ರಾಜ್ಯದ ಆಯಾಯ ಭಾಗದ ಜಿಲ್ಲೆಗಳ ಜನರ ಆಹಾರ ಪದ್ದತಿಗೆ ಅನುಗುಣವಾಗಿ ಪಡಿತರ ವಿತರಣೆ ಮಾಡಲಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಅಕ್ಕಿಯ ಜೊತೆಗೆ ರಾಗಿ ವಿತರಣೆ ಮಾಡಿದರೆ, ಮತ್ತೆ ಕೆಲವೆಡೆ ಜೋಳ ವಿತರಣೆ ಮಾಡಲಾಗುತ್ತಿದೆ. ಹತ್ತು ಕೆ.ಜಿ ಉಚಿತ ಅಕ್ಕಿ ವಿತರಣೆ ಮಾಡುವ ಗುರಿಯಿದೆ. ಆದರೆ ಕೇಂದ್ರ ಸರ್ಕಾರ ಹೆಚ್ಚುವರಿ ಅಕ್ಕಿ ನೀಡುತ್ತಿಲ್ಲ. ಹಾಗಾಗಿ 5 ಕೆ.ಜಿ ಅಕ್ಕಿ ಬದಲು ಹಣ ನೀಡುತ್ತಿದ್ದೇವೆ. ಶೀಘ್ರದಲ್ಲೇ 10 ಕೆ. ಜಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ಇದಕ್ಕಾಗಿ ಆಂಧ್ರ, ತೆಲಂಗಾಣ, ಛತ್ತೀಸ್ ಘಡ ರಾಜ್ಯಗಳಿಂದ ಅಕ್ಕಿ ಪಡೆಯಲು ಮುಂದಾಗಿದ್ದೇವೆ ಎಂದು ತಿಳಿಸಿದರು.
ಒಂದು ರಾಷ್ಟ್ರ ಒಂದು ಪಡಿತರ ಯೋಜನೆಯಿಂದ ರಾಜ್ಯದಲ್ಲಿರುವ 10ಸಾವಿರ ಕಾರ್ಡ್ ದಾರರಿಗೆ ಅಕ್ಕಿ ವಿತರಣೆ ಮಾಡಬೇಕಿದೆ. ಬಿಪಿಎಲ್ ಕಾರ್ಡ್ ದಾರರು ತಮ್ಮ ಸುತ್ತಮುತ್ತಲಿನ ನ್ಯಾಯ ಬೆಲೆ ಅಂಗಡಿಗಳಲ್ಲಿ ಅಕ್ಕಿ ತೆಗೆದುಕೊಳ್ಳಬಹುದು. ನಮ್ಮ ರಾಜ್ಯದಲ್ಲಿ 4 ಕೋಟಿ ಕಾರ್ಡ್ ದಾರರಿಗೆ ಪಡಿತರ ವಿತರಣೆ ಮಾಡುತ್ತಿದ್ದೇವೆ. 40ಲಕ್ಷ ಕಾರ್ಡ್ ದಾರರಿಗೆ ಪಡಿತರ ಸಿಗುತ್ತಿಲ್ಲ. ಉಳಿದ 40ಲಕ್ಷ ಕಾರ್ಡ್ ದಾರರಿಗೂ ಪಡಿತರ ನೀಡಲು ಕೇಂದ್ರಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಅಪ್ರಸ್ತುತ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಅಪ್ರಸ್ತುತ. ಈಗ ಸಿದ್ದರಾಮಯ್ಯ ಸಿಎಂ ಆಗಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಸುಭದ್ರವಾಗಿದೆ. ಸರ್ಕಾರಕ್ಕೆ ಯಾವುದೇ ರೀತಿಯ ಅಪಾಯವಿಲ್ಲ ಎಂದರು.
Key words: Minister- KH Muniappa – promised – action – money -instead of rice.