ಮೈಸೂರು,ಅಕ್ಟೋಬರ್,24,2023(www.justkannada.in): ಮೈಸೂರು ಅರಮನೆಯಲ್ಲಿ ದಸರಾ ಸಂಭ್ರಮ ಕಳೆಗಟ್ಟಿದ್ದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಇಂದು ಬನ್ನಿಮರಕ್ಕೆ ಪೂಜೆ ಸಲ್ಲಿಸಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಪಲ್ಲಕ್ಕಿಯಲ್ಲಿ ಪಟ್ಟದ ಕತ್ತಿ ಇಟ್ಟು ಪೂಜೆ ಸಲ್ಲಿಕೆ ಮಾಡಲಾಯಿತು. ಅರಮನೆ ಆವರಣದಿಂದ ಭುವನೇಶ್ವರಿ ದೇಗುಲದವರೆಗೆ ರಾಜವಂಶಸ್ಥ ಯದುವೀರ್ ಅವರು ವಿಜಯಯಾತ್ರೆ ಮೆರವಣಿಗೆಯಲ್ಲಿ ಬಂದು ನಂತರ ಬನ್ನಿಮರಕ್ಕೆಪೂಜೆ ಸಲ್ಲಿಸಿದರು.
ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ವಜ್ರಮುಷ್ಠಿ ಕಾಳಗ ಮುಗಿದ ನಂತರ ಉತ್ತರ ದಿಕ್ಕಿನಲ್ಲಿರುವ ಭುವನೇಶ್ವರಿ ಅಮ್ಮನವರ ದೇಗುಲಕ್ಕೆ ಯದುವೀರ್ ವಿಜಯಯಾತ್ರೆ ಹೊರಟರು. ಬಳಿಕ ಬನ್ನಿಮರಕ್ಕೆ ಸಂಪ್ರದಾಯದಂತೆ ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮಹಾಕಾಳಿಯಮ್ಮನವರ ಆಶೀರ್ವಾದ ಪಡೆದುಕೊಂಡರು.
ಅಲ್ಲಿಂದ ಹೊರಟ ಯದುವೀರ ವಿಜಯಯಾತ್ರೆ ಮುಂದುವರಿಸಿ ಅರಮನೆ ತಲುಪಿದರು. ಈ ಮೂಲಕ ರಾಜಮನೆತನದ ವಿಜಯದಶಮಿಯ ಪೂಜಾ ಕೈಂಕರ್ಯಗಳಿಗೆ ಅಂತಿಮ ತೆರೆಬಿತ್ತು.
Key words: mysore dasara-palace-Yaduvir-worship-Banni tree.