ಬೆಂಗಳೂರು ನವೆಂಬರ್,22,2023(www.justkannada.in): ರಾಜ್ಯದಲ್ಲಿ ಜಾತಿ ಜನಗಣತಿ ವರದಿ ಅನುಷ್ಠಾನ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು ಇದೀಗ ಮತ್ತೊಂದು ವಿವಾದ ಉಂಟಾಗಿದೆ. ಜಾತಿ ಜನಗಣತಿ ವರದಿ ಮೂಲಪ್ರತಿಯೇ ನಾಪತ್ತೆಯಾಗಿದೆ ಎನ್ನಲಾಗಿದ್ದು ಈ ಕುರಿತು ರಾಜ್ಯ ಸರ್ಕಾರಕ್ಕೆ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಪತ್ರ ಬರೆದಿದ್ದಾರೆ.
ಜಾತಿ ಗಣತಿಗೆ ಸಂಬಂಧಿಸಿದ ಮೂಲ ವರದಿಯೇ ಕಾಣೆಯಾಗಿದೆ. ಸೀಲ್ಡ್ ಬಾಕ್ಸ್ನಲ್ಲಿದ್ದ ಮೂಲ ಪ್ರತಿ ಅಥವಾ ಹಸ್ತಪ್ರತಿ ಲಭ್ಯವಿಲ್ಲವೆಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದು, ಈಗ ಬೆಳಕಿಗೆ ಬಂದಿದೆ.
‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 (ಜಾತಿ ಗಣತಿ ವರದಿ)ಯನ್ನು 2021ರ ಅಗಸ್ಟ್ 26 ರಂದು ಹಿಂದುಳಿದ ವರ್ಗಗಳ ಆಯೋಗ ಕಚೇರಿಯಲ್ಲಿ ಇರಿಸಲಾಗಿತ್ತು. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015ರಲ್ಲಿ ಸಂಗ್ರಹಿಸಿದ ಅಂಕಿ ಅಂಶಗಳು ಹಾಗೂ ಇತರ ವಿವರಗಳನ್ನೊಳಗೊಂಡ ಸೀಲ್ಡ್ ಬಾಕ್ಸ್ಗಳನ್ನು ಆಯೋಗದ ಅಧ್ಯಕ್ಷರು, ಸದಸ್ಯರು ಸದಸ್ಯ ಕಾರ್ಯದರ್ಶಿಯವರ ಸಮ್ಮುಖದಲ್ಲಿ ಮಹಜರ್ ನಡೆಸಿ 2021ರ ಅಕ್ಟೋಬರ್ 5 ರಂದು ತೆರೆಯಲಾಗಿತ್ತು. ಆದರೆ ಮುದ್ರಿತ ಮುಖ್ಯವರದಿಯಲ್ಲಿ ಸದಸ್ಯ ಕಾರ್ಯದರ್ಶಿಯವರ ಸಹಿ ಇರುವುದಿಲ್ಲ.
ಇದರೊಂದಿಗೆ ಇದಕ್ಕೆ ಸಂಬಂಧಿಸಿದ ಮುಖ್ಯ ವರದಿಯ ಮೂಲ ಅಥವಾ ಹಸ್ತಪ್ರತಿ ಸೀಲ್ಡ್ ಬಾಕ್ಸಿನಲ್ಲಿ ಲಭ್ಯವಿಲ್ಲ. ಹೀಗಾಗಿ ಹಸ್ತಪ್ರತಿಯನ್ನು ಕೂಡಲೇ ಆಯೋಗದ ಕಛೇರಿಗೆ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಲಾಗಿತ್ತು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತರಬಯಸುತ್ತಾ, ಮುಂದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟಪಡಿಸುವಂತೆ ಸರ್ಕಾರಕ್ಕೆ ಜಯಪ್ರಕಾಶ್ ಹೆಗ್ಡೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
Key words: Original copy – caste census- report –missing- Jayaprakash Hegde- letter – state government.