ಬೆಂಗಳೂರು ನವೆಂಬರ್,2,2023(www.justkannada.in): ಪಡಿತರ ವಿತರಣೆಯಲ್ಲಿ ಕಮಿಷನ್ ನೀಡುವಂತೆ ಆಗ್ರಹಿಸಿ ಪಡಿತರ ವಿತರಕರು ನವೆಂಬರ್ 7 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು ಅಲ್ಲಿವರೆಗೂ ನ್ಯಾಯಬೆಲೆ ಅಂಗಡಿಗಳನ್ನ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನಿಟ್ಟು ನವೆಂಬರ್ 7 ರವರೆಗೆ ಪಡಿತರ ವಿತರಣೆ ಮಾಡದಿರಲು ನ್ಯಾಯಬೆಲೆ ಪಡಿತರ ವಿತರಕರ ಸಂಘದ ಸಭೆಯಲ್ಲಿ ನಿರ್ಧರಿಸಲಾಗಿದೆ. ನವೆಂಬರ್ 7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆ ನಡೆಸಲು ನ್ಯಾಯಬೆಲೆ ಅಂಗಡಿಕಾರರುತೀರ್ಮಾನಿಸಿದ್ದಾರೆ. ಸರಕಾರ ಫಲಾನುಭವಿಗಳಿಗೆ ಅಕ್ಕಿ ಬದಲು ಹಣ ನೀಡುವುದನ್ನು ನಿಲ್ಲಿಸಬೇಕು ಎಂಬುದು ನ್ಯಾಯಬೆಲೆ ಅಂಗಡಿ ನಡೆಸುವವರ ಪ್ರಮುಖ ಬೇಡಿಕೆಯಾಗಿದೆ.
ಇ-ಕೆವೈಸಿ ಕೆಲಸ ನಿರ್ವಹಿಸಲು ಸರ್ಕಾರವು 23.75 ಕೋಟಿ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು.ಗೋವಾ, ಕೇರಳ ಮತ್ತು ಮಹಾರಾಷ್ಟ್ರ ಸರ್ಕಾರಗಳು ಹೇಗೆ ನೀಡುತ್ತಿವೆಯೋ ಹಾಗೆಯೇ ಕರ್ನಾಟಕದಲ್ಲಿ ನ್ಯಾಯಬೆಲೆ ಅಂಗಡಿ ನಡೆಸುವವರಿಗೆ ಕಮಿಷನ್ ಹಣವನ್ನು ನೀಡಬೇಕು. ಪ್ರತಿ ಕ್ವಿಂಟಾಲ್ ಅಕ್ಕಿ ವಿತರಿಸಲು 250 ರೂಪಾಯಿ ಕಮಿಷನ್ ನೀಡಬೇಕು. ಅಂಗಡಿ ನಿರ್ವಾಹಕರು ಮೃತಪಟ್ಟರೆ ಅವರ ಕುಟುಂಬಕ್ಕೆ ಸರ್ಕಾರ ನೆರವು ನೀಡಬೇಕು ಎಂದು ಪಡಿತರ ವಿತರಕರ ಸಂಘ ಆಗ್ರಹಿಸಿದೆ.
ಸರ್ವರ್ ಸಮಸ್ಯೆ ಇರುವುದರಿಂದ ಪ್ರತಿ ಜಿಲ್ಲೆಗೂ ಪ್ರತ್ಯೇಕ ಸರ್ವರ್ ಸೆಂಟರ್ ಕಲ್ಪಿಸಬೇಕು. 5 ಕೆಜಿ ಅಕ್ಕಿ ಹಣವನ್ನು ಡಿಬಿಟಿ ಮಾಡುವ ಬದಲು ಬೇರೆ ಆಹಾರ ಪದಾರ್ಥಗಳನ್ನು ನೀಡಬೇಕು. DBT ಮೂಲಕವೇ ಕಮಿಷನ್ ಹಣವನ್ನು ಪಡಿತರ ವಿತರಕರಿಗೆ ನೀಡಬೇಕು ಎಂದು ಬೇಡಿಕೆಗಳನ್ನಿಟ್ಟಿದೆ.
Key words: protest – ration- dealers -Nov 7- bangalore