ಬೆಂಗಳೂರು,ಡಿಸೆಂಬರ್,25,2023(www.justkannada.in): ರೈತರ ಕುರಿತು ಸಕ್ಕರೆ ಸಚಿವ ಶಿವಾನಂದ ಪಾಟೀಲ್ ನೀಡಿದ ಹೇಳಿಕೆಗೆ ಬಿಜೆಪಿಯಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆರ್.ಅಶೋಕ್, ಸಚಿವ ಶಿವಾನಂದ ಪಾಟೀಲ್ ಹಿಂದೆಯೂ ಸಹ ರೈತರ ಆತ್ಮಹತ್ಯೆ ವಿಚಾರವಾಗಿ ಮಾತನಾಡಿದ್ದರು. ಪರಿಹಾರ ಜಾಸ್ತಿ ಸಿಗುತ್ತೆಂದು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದಿದ್ದರು. ಇದೀಗ ಸಾಲಮನ್ನಾ ಆಸೆಗೆ ರೈತರು ಬರಗಾಲ ಬರಲಿ ಎನ್ನುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ರೈತ ವಿರೋಧಿ ಸರ್ಕಾರ, ಈ ಸರ್ಕಾರಕ್ಕೆ ನಾಚಿಕೆ ಆಗಬೇಕು. ಹಿಂದೆ ರೈತರ ಬಗ್ಗೆ ಹಗುರವಾಗಿ ಹೇಳಿದಾಗಲೂ ಕ್ರಮ ತೆಗೆದುಕೊಳ್ಳಲಿಲ್ಲ. ಮುಖ್ಯಮಂತ್ರಿಯಾದರೂ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕಿತ್ತು. ರೈತರನ್ನು ಕಡೆಗಣಿಸಿದರೆ ಅವರ ಶಾಪಕ್ಕೆ ಸರ್ಕಾರ ಗುರಿಯಾಗುತ್ತದೆ.ಈ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ಕಿಡಿಕಾರಿದ್ದಾರೆ.
ಶಿವಾನಂದ್ ಪಾಟೀಲ್ ಕೂಡಲೇ ರಾಜೀನಾಮೆ ನೀಡಬೇಕು- ಬಿ.ವೈ ವಿಜಯೇಂದ್ರ.
ಈ ಕುರಿತು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ರೈತರ ಬಳಿ ಶಿವಾನಂದ್ ಪಾಟೀಲ್ ಕೂಡಲೇ ಕ್ಷಮೆಯಾಚಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಶಿವಾನಂದ ಪಾಟೀಲರಿಗೆ ಬುದ್ದಿಭ್ರಮಣೆಯಾಗಿದೆಯೋ ಗೊತ್ತಿಲ್ಲ. ಅವರು ಕೂಡಲೇ ರೈತರ ಕ್ಷಮೆ ಕೇಳಬೇಕು. ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದ್ದಾರೆ.
Key words: Sivanand Patil- statement – farmers- R. Ashok – BY Vijayendra