ಮೈಸೂರು, ಆಗಸ್ಟ್, 20, 2020(www.justkannada.in): ಕೇಂದ್ರ ಸರ್ಕಾರ ಕಬ್ಬಿನ ಎಫ್ ಆರ್ ಪಿ ದರ ನಿಗದಿ ಮಾಡಿರುವುದು ಅವೈಜ್ಞಾನಿಕವಾಗಿದ್ದು, ರಾಜ್ಯ ಸರ್ಕಾರ ಹೆಚ್ಚುವರಿ ಬೆಲೆ ನಿಗದಿ ಮಾಡಲಿ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಒತ್ತಾಯಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದಲೂ ಕೇಂದ್ರ ಸರ್ಕಾರ ಕಬ್ಬಿನ ಎಫ್ ಆರ್ ಪಿ ದರವನ್ನು ಏರಿಕೆ ಮಾಡದೆ ಈಗ ಶೇ.10 ಸಕ್ಕರೆ ಇಳುವರಿ ಬರುವ ಪ್ರತಿಟನ್ ಗೆ 2850ರೂ ನಿಗದಿ ಮಾಡಿ ಕಳೆದ ವರ್ಷಕ್ಕಿಂತ ಕೇವಲ 100 ಮಾತ್ರ ಏರಿಕೆ ಮಾಡಿರುವುದು ಅವೈಜ್ಞಾನಿಕವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಕಬ್ಬಿನ ಉತ್ಪಾದನೆ ವೆಚ್ಚ ಟನ್ ಗೆ 3200 ಆಗುತ್ತದೆ. ಆದರೆ, ರೈತರ ಉತ್ಪಾದನಾ ವೆಚ್ಚವನ್ನು ಗಮನಿಸದೆ ನ್ಯಾಯೂಚಿತ ಬೆಲೆ ನಿಗದಿ ಮಾಡಿರುವುದು, ಅನ್ಯಾಯವಾಗಿದೆ. ಕೂಡಲೇ ಈ ದರವನ್ನು ಪುನರ್ ಪರಿಶೀಲಿಸಿ ರಾಜ್ಯ ಸರ್ಕಾರ ಎಸ್ ಎ ಪಿ ಕಾಯ್ದೆಯ ಅನುಸಾರ ಹೆಚ್ಚುವರಿ ಬೆಲೆ ನಿಗದಿ ಮಾಡಿ ಕಬ್ಬು ಬೆಳೆಗಾರ ರೈತರನ್ನು ರಕ್ಷಿಸಬೇಕು ಎಂದು ಕುರುಬೂರು ಶಾಂತಕುಮಾರ್ ಸರಕಾರವನ್ನು ಆಗ್ರಹಿಸಿದ್ದಾರೆ.
ಕಬ್ಬಿನ ಬಾಕಿ ಹಣ ಕೊಡಿಸಿ : ರಾಜ್ಯದ ಹಲವು ಸಕ್ಕರೆ ಕಾರ್ಖಾನೆಗಳಿಂದ ಕಬ್ಬಿನ ಬಾಕಿ ಹಣ ಪಾವತಿಯಾಗಿಲ್ಲ. ಈ ಹಣ ರೈತರಿಗೆ ಕೊಡಿಸಲು ಸಕ್ಕರೆ ಖಾತೆ ಸಚಿವರು ಗಂಭೀರ ಕ್ರಮ ಕೈಗೊಳ್ಳಬೇಕು. ಕಬ್ಬಿನ ಬೆಳೆಯನ್ನು ಪಸಲ್ ಬೀಮಾ ಬೆಳೆವಿಮೆ ವ್ಯಾಪ್ತಿಗೆ ಸೇರಿಸಲು ಕ್ರಮ ಕೈಗೊಳ್ಳಬೇಕು. ಅತಿವೃಷ್ಟಿ-ಅನಾವೃಷ್ಟಿ ಆದಾಗ ಕಬ್ಬು ಬೆಳೆಗಾರರಿಗೆ ನಷ್ಟ ಭರಿಸಲು ಸಹಕಾರಿಯಾಗುತ್ತದೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದ್ದಾರೆ.
Key words : central-government- unscientific-Kurubur Shanth Kumar