ಬೆಂಗಳೂರು, ಆಗಸ್ಟ್ 13, 2021 (www.justkannada.in): ರೈಲ್ವೆ ಸುರಕ್ಷತಾ ವಿಭಾಗದ ಆಯುಕ್ತ (ಸಿಆರ್ಎಸ್) ಎ.ಕೆ. ರೈ ಅವರ ನೇತೃತ್ವದಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ನಮ್ಮ ಮೆಟ್ರೊದ ನೇರಳೆ ಲೈನ್ ನ ಎರಡು-ದಿನಗಳ ಸುರಕ್ಷತಾ ತಪಾಸಣಾ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ.
ಬೆAಗಳೂರು ಮೆಟ್ರೊ ರೈಲು ನಿಗಮ ನಿಯಮಿತದ (ಬಿಎಂಆರ್ಸಿಎಲ್) ಅಧಿಕಾರಿಗಳು ತಿಳಿಸಿರುವಂತೆ ಸಿಆರ್ಎಸ್ ಅವರು ಮೆಟ್ರೊ ನೇರಳೆ ಲೈನ್ ನ ಟ್ರ್ಯಾಂಕ್ ಪ್ಯಾರಾಮೀಟರ್ಗಳು, ಮೂರನೇ ರೈಲ್ ಹಾಗೂ ಇತರೆ ವ್ಯವಸ್ಥೆಗಳೂ ಒಳಗೊಂಡಂತೆ ಭೌತಿಕ ಮೂಲಭೂತಸೌಕರ್ಯಗಳ ತಪಾಸಣೆ ನಡೆಸಿದರು.
ಯೋಜಿಸಿದಂತೆ ಸಿಆರ್ಎಸ್ ಅವರು ಮೆಟ್ರೊ ಸ್ಟೇಷನ್ ಗಳಿಗೆ ಭೇಟಿ ನೀಡಿ, ನಿಯಂತ್ರಣ ಕೊಠಡಿ, ಎಲಿವೇಟರ್ ಗಳು, ಎಸ್ಕಲೇಟರ್ ಗಳು ಹಾಗೂ ಇತರೆ ಪ್ರಯಾಣಿಕರ ಸವಲತ್ತುಗಳನ್ನು ಪರಿಶೀಲಿಸಿದರು.
ಪ್ಲಾಟ್ ಫಾರಂ ಕ್ಲಿಯರಿಂಗ್ ಗಳಿಂದ ಹಿಡಿದು ವಿದ್ಯುತ್ ಮೂಲಭೂತಸೌಕರ್ಯ, ಅದೇ ರೀತಿ ಸಿಗ್ನಲ್ ವ್ಯವಸ್ಥೆಯಿಂದ ಹಿಡಿದು ಟೆಲಿಕಮ್ಯೂನಿಕೇಷನ್ ವ್ಯವಸ್ಥೆಯವರೆಗೆ, ಸಿಆರ್ಎಸ್ ಎ.ಕೆ. ರೈ ಅವರ ಮುಂದಾಳತ್ವದ ತಂಡವು ಯೋಜನೆಯ ಎಲ್ಲಾ ವಿವರಗಳನ್ನೂ ಕೂಲಂಕುಷವಾಗಿ ಪರಿಶೀಲಿಸಿದೆ.
“ಈ ಸಂದರ್ಭದಲ್ಲಿ ಕೆಲವು ತಿದ್ದುಪಡಿಗಳನ್ನು ಸೂಚಿಸಿದ್ದಾರೆ. ಈ ಸಂಬಂಧ ವಿವರವಾದ ಸಲಹೆಗಳು ಹಾಗೂ ತಿದ್ದುಪಡಿಗಳನ್ನು ಒಳಗೊಂಡ ವರದಿಯನ್ನು ಮುಂದಿನ ಒಂದು ಅಥವಾ ಎರಡು ವಾರಗಳಲ್ಲಿ ಒದಗಿಸಲಾಗುವುದು,” ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಬಿಎಂಆರ್ಸಿಎಲ್ ಮೂಲಗಳ ಪ್ರಕಾರ, ಆಗಸ್ಟ್ ತಿಂಗಳ ಅಂತ್ಯದೊಳಗೆ ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮೆಟ್ರೊ ಲೈನ್ ಆರಂಭವಾಗಲಿದೆ. “ವೇಗದ ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗಳೂ ಪೂರ್ಣಗೊಂಡಿವೆ. ಸುರಕ್ಷತಾ ಮಾನದಂಡಗಳು ಪೂರೈಸಿದರೆ ಮತ್ಯಾವುದೇ ವಿಳಂಬ ಮಾಡದೆ ಆಗಸ್ಟ್ ತಿಂಗಳಲ್ಲೇ ಕಾರ್ಯಾಚರಣೆ ಆರಂಭವಾಗಲಿದೆ,” ಎಂದು ಮಾಹಿತಿ ನೀಡಿದ್ದಾರೆ.
ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಮೆಟ್ರೊ ಲೈನ್ ನಡುವೆ ನಾಯಂಡಹಳ್ಳಿ, ಆರ್ ಆರ್ ನಗರ, ಜ್ಞಾನಭಾರತ, ಪಟ್ಟಣಗೆರೆ, ಕೆಂಗೇರಿ ಬಸ್ ನಿಲ್ದಾಣ ಹಾಗೂ ಕೆಂಗೇರಿ ಸೇರಿದಂತೆ ಆರು ನಿಲ್ದಾಣಗಳಿರುತ್ತವೆ.
ಈ ನಡುವೆ ಛಲ್ಲಘಟ್ಟದವರೆಗಿನ ೧.೫ ಕಿ.ಮೀ. ಲೈನ್ ಅನ್ನು ಪೂರ್ಣಗೊಳಿಸಲು ಅಧಿಕಾರಿಗಳು ಡಿಸೆಂಬರ್ ೨೨ರವರೆಗೆ ಡೆಡ್ಲೈನ್ ನಿಗಧಿಪಡಿಸಿದ್ದಾರೆ. ಛಲ್ಲಘಟ್ಟದಲ್ಲಿ ಒಂದು ಸ್ಟೇಷನ್ ಹಾಗೂ ಡಿಪೊಗಳು ಸ್ಥಾಪನೆಯಾಗಲಿವೆ.
ಸುದ್ದಿ ಮೂಲ: ಡೆಕ್ಕನ್ ಹೆರಾಲ್ಡ್
Key words: Full – safety -checks – Kengeri- Metro Line.