ನವದೆಹಲಿ,ಡಿಸೆಂಬರ್,10,2021(www.justkannada.in): ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಸಿಡಿಎಸ್ ಬಿಪಿನ್ ರಾವತ್ ಹಾಗೂ ಪತ್ನಿ ಮಧುಲಿಕಾ ರಾವತ್ ಅವರ ಅಂತ್ಯಕ್ರಿಯೆ ಸಕಲ ಸೇನಾ ಗೌರವದೊಂದಿಗೆ ಇಂದು ನೆರವೇರಿತು.
ನವದೆಹಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿನ ಬ್ರಾರ್ ಸ್ಕ್ವೇರ್ ನಲ್ಲಿ ಬಿಪಿನ್ ರಾವತ್ ದಂಪತಿಯ ಅಂತ್ಯಕ್ರಿಯೆ ನೆರವೇರಿತು. ಒಂದೇ ಚಿತೆಯಲ್ಲಿ ರಾವತ್ ದಂಪತಿ ಅಂತ್ಯ ಸಂಸ್ಕಾರ ನೆರವೇರಿದ್ದು, ಪುತ್ರಿಯರು ಅಗ್ನಿಸ್ಪರ್ಶ ಮಾಡುವ ಮೂಲಕ ಅಂತಿಮ ವಿದಾಯ ಹೇಳಿದರು.
ಬಿಪಿನ್ ರಾವತ್ ಅವರ ಪಾರ್ಥೀವ ಶರೀರವನ್ನ ನಿವಾಸದಿಂದ ದೆಹಲಿಯ ಕಂಟೋನ್ಮೆಂಟ್ ನಲ್ಲಿರುವ ಬ್ರಾರ್ ಸ್ಕ್ವೇರ್ ವರೆಗೆ ಅಂತಿಮಯಾತ್ರೆ ಮೂಲಕ ಮೆರವಣಿಗೆಯಲ್ಲಿ ತರಲಾಯಿತು. ಬ್ರಾರ್ ಸ್ಕ್ವೇರ್ ನಲ್ಲಿ ಸಿಡಿಎಸ್ ಬಿಪಿನ್ ರಾವತ್ ಅವರಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕುಟುಂಬಸ್ಥರು, ವಿವಿಐಪಿಗಳು ಅಂತಿಮ ನಮನ ಸಲ್ಲಿಸಿದರು. ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಭಾರತೀಯ ಸೇನೆ 17 ಸುತ್ತು ಕುಶಾಲತೋಪು ಹಾರಿಸಿ ಹುತಾತ್ಮ ಸಿಡಿಎಸ್ ಬಿಪಿನ್ ರಾವತ್ ಅವರಿಗೆ ಗೌರವ ಸಲ್ಲಿಸಿದರು. ಅಂತ್ಯಕ್ರಿಯೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮೂರು ಸೇನೆಯ ಮುಖ್ಯಸ್ಥರು 800 ಸೇನಾ ಸಿಬ್ಬಂದಿ ಪಾಲ್ಗೊಂಡಿದ್ದರು.
Key words: funeral-CDS-Bipin Rawat- Helicopter -disaster