ನಶಿಸಿಹೋಗುವ ಹಂತದಲ್ಲಿ ಕನ್ನಡ ಶಾಲೆಗಳು: ಕನ್ನಡದ ಭವಿಷ್ಯ ರಕ್ಷಿಸಬೇಕಾಗಿದೆ: ಪುರುಷೋತ್ತಮ ಬಿಳಿಮಲೆ

ಬೆಂಗಳೂರು,ಫೆಬ್ರವರಿ,22,2025 (www.justkannada.in):  ಕನ್ನಡದ ಭವಿಷ್ಯ ಕರಾಳವಾಗಿದೆ. ಕನ್ನಡ ಶಾಲೆಗಳು ನಶಿಸಿಹೋಗುವ ಹಂತದಲ್ಲಿವೆ. ಈಗಾಗಲೇ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಕನ್ನಡವೇ ಕ್ರಮೇಣ ಮರೆಯಾಗುವ ಸಾಧ್ಯತೆ ಇದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆತಂಕ ವ್ಯಕ್ತಪಡಿಸಿದರು.

ಕ್ರಿಯಾ ಮಾಧ್ಯಮ ಹಮ್ಮಿಕೊಂಡಿದ್ದ ಮಾತೃ ಭಾಷೆ ಹಾಗೂ ಕೆಂಪು ಪುಸ್ತಕ ದಿನವನ್ನು ಉದ್ದೇಶಿಸಿ ಪುರುಷೋತ್ತಮ ಬಿಳಿಮಲೆ ಅವರು ಮಾತನಾಡಿದರು.

ಕನ್ನಡ ಭಾಷೆ ಹಾಗೂ ಅಸ್ಮಿತೆಯ ಮುಂದೆ ಹಲವು ಸವಾಲುಗಳಿವೆ. ಅದರಲ್ಲಿ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳುವ ತುರ್ತು ಮುಖ್ಯವಾದದ್ದು. ಇದಲ್ಲದೆ ಕನ್ನಡ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳದೆ ಹೋದಲ್ಲಿ ಭಾಷೆ ಸಂಸ್ಕೃತಿ ನಶಿಸಿಹೋಗುತ್ತದೆ ಎಂದರು.

ಓದುವ ಹಿಗ್ಗು ಉತ್ಸವದ ಅಂಗವಾಗಿ ಹೊರತಂದ   ‘ಓದುವ ಖುಷಿ ‘ ಕೃತಿಯನ್ನು ಬಿಡುಗಡೆ ಮಾಡಿದ ಸಾಹಿತಿ, ಪತ್ರಕರ್ತ ಜಿ.ಎನ್ ಮೋಹನ್ ಅವರು, ಪುಸ್ತಕ ಎನ್ನುವುದು ಬದಲಾವಣೆಯನ್ನು ತರುವ ಪ್ರಮುಖ ಅಸ್ತ್ರ. ಇದು ಸಮಾಜವನ್ನು ಜಡವಾಗಿ ಇರಲು ಬಿಡದ ಬದಲಾವಣೆಯ ವೇಗವರ್ಧಕ. ಪುಸ್ತಕ ಪ್ರೀತಿಯನ್ನು ಎಲ್ಲೆಡೆ ಬಲಪಡಿಸುವ, ಹಂಚುವ ಕೆಲಸವಾಗಬೇಕು ಎಂದರು.

ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಮುಖ್ಯಸ್ಥರಾದ ಬಸವರಾಜ ಕಲ್ಗುಡಿ ಅವರು ಮಾತನಾಡಿ, ಓದುವ ಸಂಸ್ಕೃತಿ ನಶಿಸಿ ಹೋಗುವ ಹಂತದಲ್ಲಿದೆ. ಆಧುನಿಕ ಸಾಧನ ಹಾಗೂ ತಂತ್ರಜ್ಞಾನದಿಂದಾಗಿ ಯುವಪೀಳಿಗೆ ಓದಿನಿಂದ ಸಂಪೂರ್ಣ ವಿಮುಖರಾಗಿದ್ದಾರೆ. ಓದಿನತ್ತ ಮತ್ತೆ ಅವರನ್ನು ಸೆಳೆಯುವುದು ಸವಾಲಿನ ಕೆಲಸ ಎಂದರು.

ಕ್ರಿಯಾ ಮಾಧ್ಯಮದ ಎನ್ ಕೆ ವಸಂತರಾಜ್, ಕೆ ಎಸ್ ವಿಮಲಾ, ಕೃತಿಯ ಅನುವಾದಕರಾದ ತಡಗಳಲೆ ಸುರೇಂದ್ರ ರಾವ್ ಉಪಸ್ಥಿತರಿದ್ದರು.

ಎಚ್ ಜಿ ಜಯಲಕ್ಷ್ಮಿ ಹಾಗೂ ದೇವಿಕಾ ರಾಮು ಅವರು ನಿರಂಜನರ ಕೃತಿಗಳ ಆಯ್ದ ಭಾಗವನ್ನು ವಾಚಿಸಿದರು.

Key words: future, Kannada, needs, protected, Purushottam Bilimale