ಬೆಂಗಳೂರು, ಫೆಬ್ರವರಿ 13,2021(www.justkannada.in): ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಐಹೆಚ್ ಆರ್ )ನ ಬೀಜ ಗ್ರಾಮ ಯೋಜನೆಗೆ ರಾಷ್ಟ್ರೀಯ ತೋಟಗಾರಿಕೆ ಮೇಳದಲ್ಲಿ ಉತ್ತರ ಕರ್ನಾಟಕ ರೈತರಿಂದ ಬಾರೀ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಆ ಭಾಗದ ಹಲವು ಜಿಲ್ಲೆಗಳಿಗೆ ಈ ಯೋಜನೆಯನ್ನು ವಿಸ್ತರಿಸಲು ಐಐಹೆಚ್ ಆರ್ ಚಿಂತನೆ ನಡೆಸಿದೆ.
ರೈತರು ಐಐಹೆಚ್ಆರ್ ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಂಡು ಅವರ ಹೊಲದಲ್ಲಿ ಸಂಸ್ಥೆ ಪೂರೈಸುವ ಉತ್ಕೃಷ್ಟ ತಳಿಯ ಮದರ್ ಸೀಡ್ ಬಿತ್ತಿ ಅದರ ಉತ್ಪನ್ನದ ವಿವಿಧ ತರಕಾರಿಗಳ ಬೀಜವನ್ನು ಪುನಃ ಸಂಸ್ಥೆಗೆ ಪೂರೈಸುವ ಯೋಜನೆ ಇದಾಗಿದ್ದು, ದಕ್ಷಿಣ ಕರ್ನಾಟಕ ಭಾಗದಲ್ಲಿ ಜನಪ್ರೀಯಗೊಂಡಿದ್ದ ಈ ಯೋಜನೆ ಉತ್ತರ ಕರ್ನಾಟಕ ರೈತರ ಹೊಲಗಳಿಗೆ ತಲುಪಿಸಲು ಸಂಸ್ಥೆ ಯೋಜನೆ ರೂಪಸಿದೆ.
ಐಐಹೆಚ್ ಆರ್ ನಿರ್ದೇಶಕ ಡಾ. ಎಂ. ಆರ್. ದಿನೇಶ್ ಮಾರ್ಗದರ್ಶನದಲ್ಲಿ ಸಂಸ್ಥೆಯ ತೋಟಗಾರಿಕೆ ಬೆಳೆ ವಿಭಾಗದ ಪ್ರಧಾನ ವಿಜ್ಞಾನಿಯಾಗಿರುವ ಡಾ.ಹೆಚ್. ಎಸ್. ಯೋಗಿಶ್ ಈ ಯೋಜನೆಯ ಉಸ್ತುವಾರಿ ಹೊತ್ತಿದ್ದಾರೆ. ತೋಟಗಾರಿಕೆ ಮೇಳದಲ್ಲಿ ಬೀಜ ಗ್ರಾಮ ಯೋಜನೆಯಲ್ಲಿ ಸಹಬಾಗಿತ್ವ ಹೊಂದಲು ಉತ್ತರ ಕರ್ನಾಟಕ ಭಾಗದ ಕಲಬರ್ಗಿ, ಕೊಪ್ಲಳ ಮತ್ತು ರಾಯಚೂರು ಜಿಲ್ಲೆಗಳ ರೈತರು ಆಸಕ್ತಿ ತೋರಿಸಿದ್ದಾರೆ. ಈ ಯೋಜನೆಯ ಪ್ರಯೋಜವನ್ನು ಆ ಭಾಗದ ರೈತರಿಗೆ ನೀಡುವ ಕುರಿತು ಸಂಸ್ಥೆಯ ನಿರ್ದೇಶಕರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಯೋಗಿಶ್ ತಿಳಿಸಿದರು.
ಕಳೆದ 2019-20ರಲ್ಲಿ ಸಂಸ್ಥೆ 15 ರಿಂದ 16 ಟನ್ ಬೀಜ ಉತ್ಪಾದಿಸಿದ್ದು, 2020-21 ರಲ್ಲಿ 50 ಟನ್ ಬೀಜ ಉತ್ಪಾದಿಸಿ ಗ್ರಾಹಕರಿಗೆ ತಲುಪಿಸುವ ಗುರಿ ಹೊಂದಿದೆ. ದಾವಣಗೆರೆ, ಕೊಪ್ಪಳ, ರಾಣೆಬೆನ್ನೂರು, ಚಿರ್ತದುರ್ಗ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಕನಕಪುರ, ಮಂಡ್ಯ ಮತ್ತು ಚಾಮರಾಜನಗರ ಭಾಗಗಳ ರೈತರು ಈ ಯೋಜನೆಯ ಸಹಬಾಗಿತ್ವಹೊಂದಿದ್ದಾರೆ.
ಬೀಜ ಗ್ರಾಮ ಯೋಜನೆ ಸಾಕಷ್ಟು ಜನಪ್ರೀಯ ಯೋಜನೆಯಾಗಿದ್ದು, ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಧಾನಿಯವರ ಆತ್ಮ ನಿರ್ಬರ್ ಭಾರತ ಕಲ್ಪನೆಗೆ ಈ ಯೋಜನೆ ಸಹಕಾರಿಯಾಗಿದೆ. ರೈತ ಐಐಹೆಚ್ ಆರ್ ಜತೆ ಒಡಂಬಡಿಕೆ ಮಾಡಿಕೊಂಡು, ನಾವು ಪೂರೈಸುವ ತರಕಾರಿ ಬೀಜಗಳನ್ನು ಆತನ ಹೊಲದಲ್ಲಿ ಬೆಳೆದು ಅದನ್ನು ಪುನ; ಸಂಸ್ಥೆಗೆ ಮಾರಾಟ ಮಾಡಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಈ ಯೋಜನೆಯನ್ನು ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಚಿಂತನೆ ಇದೆ ಎಂದು ಐಐಹೆಚ್ ಆರ್ ನ ನಿರ್ದೇಶಕ ಡಾ. ದಿನೇಶ್ ತಿಳಿಸಿದರು.
ನಾವು ಮುಂದಿನ ದಿನಗಳಲ್ಲಿ ಹೆಚ್ಚಿನ ಬೀಜ ಸಂಗ್ರಹ ಮಾಡಬೇಕಾದರೆ ಈ ಯೋಜನೆಯನ್ನು ವಿಸ್ತರಿಸಬೇಕಾಗಿದೆ. ಪ್ರಸ್ತುತ ಸುಮಾರು 120 ರಿಂದ 125 ಎಕರೆ ಭೂ ಪ್ರದೇಶದಲ್ಲಿ ಈ ಯೋಜನೆ ಜಾರಿಯಲ್ಲಿದೆ. ನಿನ್ನೆ ಅಷ್ಟೇ ಪೂರ್ಣಗೊಂಡ ತೋಟಗಾರಿಕೆ ಮೇಳದಲ್ಲಿ ಈ ಯೋಜನೆ ಕುರಿತು ಹೆಚ್ಚಿನ ರೈತರು ಮಾಹಿತಿ ಪಡೆದು ಸಂಸ್ಥೆ ಜತೆ ಒಡಂಬಡಿಕೆ ಮುಂದಾಗಿದ್ದಾರೆ ಎಂದು ಯೋಗಿಶ್ ವಿವರಿಸಿದರು.
ಏನಿದು ಬೀಜ ಗ್ರಾಮ ಪರಿಕಲ್ಪನೆ
ರೈತರು ತರಕಾರಿ ಬೆಳೆ ಬೆಳೆಯುವುದರ ಜತೆಗೆ ತಮ್ಮ ಆದಾಯವನ್ನು ದುಪ್ಪಟ್ಟುಗೊಳಿಸುವ ಯೋಜನೆ ಇದಾಗಿದೆ. 2008-09ರಲ್ಲಿ ಐಐಹೆಚ್ ಆರ್ ಜಾರಿಗೆ ತಂದಿದ್ದ ಈ ಯೋಜನೆ 2017 ರಿಂದೇಚೆಗೆ ಹೆಚ್ಚು ಜನಪ್ರಿಯತೆ ಪಡೆಯಿತು. 20 ತರಕಾರಿ ಬೆಳೆಗಳ 40 ತಳಿಗಳ ಉತ್ತಮ ಗುಣಮಟ್ಟದ ಬೀಜಗಳನ್ನು ಸಂಸ್ಥೆ ರೈತರಿಗೆ ಪೂರೈಸುತ್ತದೆ. ಎಲ್ಲಾ ರೈತರಿಗೆ ಯೋಜನೆ ಸಿಗಬೇಕಾದ ಹಿನ್ನೆಲೆಯಲ್ಲಿ 1ರಿಂದ 2 ಎಕರೆ ಪ್ರದೇಶದಲ್ಲಿ ಬೀಜ ಉತ್ಪಾದನೆಗೆ ಪ್ರತಿ ರೈತರಿಗೆ ಅವಕಾಶ ನೀಡಲಾಗುತ್ತದೆ. ತರಕಾರಿ ಬೆಳೆ ಬೆಳೆದು ಅನುಭವ ಹೊಂದಿರುವ ಮತ್ತು ಪ್ರಗತಿಪರ ರೈತರನ್ನು ಈ ಯೋಜನೆಯಲ್ಲಿ ಜೋಡಿಸಲಾಗುತ್ತದೆ.
ರೈತ ಮತ್ತು ಐಐಹೆಚ್ ಆರ್ ಒಂದು ವರ್ಷದ ಅವಧಿಗೆ ಒಡಂಬಡಿಕೆ ಸಹಿ ಮಾಡಿಕೊಂಡು ಉಚಿತವಾಗಿ ಬೀಜವನ್ನು ರೈತರಿಗೆ ಪೂರೈಸಲಾಗುತ್ತದೆ. ಕಾಲಕಾಲಕ್ಕೆ ವಿವಿಧ ತರಕಾರಿ ಬೆಳೆಗಳ ಉಸ್ತುವಾರಿ ನೋಡಿಕೊಳ್ಳುವ ಸಂಸ್ಥೆಯ ವಿಜ್ಞಾನಿಗಳ ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರೈತರಿಗೆ ನೀರಾವರಿ, ಕೀಟ ನಿರ್ವಹಣೆ, ಕಾಯಿಲೆ ನಿರ್ವಹಣೆ ಮತ್ತು ಪೌಷ್ಠಿಕಾಂಶ ನಿರ್ವಹಣೆ ಸೇರಿದಂತೆ ಸಲಹೆಗಳನ್ನು ನೀಡಲಾಗುತ್ತದೆ.
ಬೆಲೆ ನಿಗದಿ : ರೈತರ ಜತೆ ಒಂದು ವರ್ಷ ಅವಧಿಗೆ ಒಡಂಬಡಿಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಬೀಜ ಖರೀಯ ಬೆಲೆಯನ್ನು ನಿಗದಿ ಮಾಡಲಾಗುತ್ತದೆ. ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಬೆಲೆಯನ್ನೇ ನಿಗದಿ ಮಾಡಿ ರೈತರಿಂದ ಬೀಜಗಳನ್ನು ಖರೀದಿಸಲಾಗುತ್ತದೆ ಎಂದು ಯೋಗಿಶ್ ವಿವರಿಸಿದರು.
ರೈತರಿಗೆ ಬೇಕಾಗಿರುವ ತಂತ್ರಜ್ಞಾನ ಮತ್ತು ಸಲಹೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಒಂದು ವೇಳೆ ಬೆಳೆ ಸಮರ್ಪಕವಾಗಿ ಬರದಿದ್ದರೆ, ಅತೀವೃಷ್ಟಿ, ಅನಾವೃಷ್ಟಿಯಿಂದ ಹಾನಿಗೊಳಗಾದರೆ ಪರಿಹಾರವನ್ನು ನೀಡಲಾಗುವುದು. ಒಂದು ಬಾರಿ ಬೆಲೆ ನಿಗದಿ ಮಾಡಿದರೆ, ಅದನ್ನು ಯಾವುದೇ ಕಾರಣಕ್ಕೆ ಕಡಿಮೆ ಮಾಡುವುದಿಲ್ಲ. ಟೊಮೆಟೋದಲ್ಲಿ 8 ವಿವಿಧ ಬೀಜಗಳನ್ನು ಪೂರೈಸಲಾಗುತ್ತದೆ. ತರಕಾರಿ ಜೊತೆಗೆ ಹೂ ಮತ್ತು ಹಣ್ಣುಗಳ ಬೀಜಗಳ ಉತ್ಪಾದನೆಗೂ ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ.
ಬೀಜ ಖರೀದಿಸಿದ ನಂತರ ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ ನೇರ ಜಮಾವಣೆ ಮಾಡಲಾಗುತ್ತದೆ. ಜತೆಗೆ ರೈತ ಪೂರೈಸಿದ ಬೀಜಗಳ ಗುಣ ಮಟ್ಟದ ಪರೀಕ್ಷೆ ನಡೆಸಿಯೇ ಅದನ್ನು ಖರೀಸಲಾಗುತ್ತದೆ. ಗುಣಮಟ್ಟ ಕಡಿಮೆ ಇದ್ದರೆ ಅಂತಹ ಬೀಜಗಳನ್ನು ಸಂಸ್ಥೆ ಖರೀಸುವುದಿಲ್ಲ.
ಖರೀದಿಸಿದ ಬೀಜಗಳನ್ನು ಐಐಹೆಚ್ ಆರ್ ತನ್ನ ಯೋನೋ ಸೀಡ್ ಪೊರ್ಟಲ್ ಮೂಲಕ ಜನರಿಗೆ ಕಡಿಮೆ ದರದಲ್ಲಿ ಮಾರಾಟ ಮಾಡುತ್ತದೆ. ಸದ್ಯ ರೈತರು ಪ್ರೆಂಚ್ ಬೀನ್, ಒಕ್ರಾ, ಟೊಮೆಟೋ , ಈರುಳ್ಳಿ ಇನ್ನಿತರ ತರಕಾರಿಗಳನ್ನು ಬೆಳೆಯುತ್ತಾರೆ.
Key words: Gardening Fair-Demand -Farmers – Seed -Village Project -Partnerships