ಬೆಂಗಳೂರು,ಜೂ,10,2019(www.justkannada.in): ಗಿರೀಶ್ ಕಾರ್ನಾಡ್ ಎಲ್ಲಾ ಸೀಮೆಗಳನ್ನೂ ಮೀರಿದ ಮಹಾನ್ ಪ್ರತಿಭೆ. ಕನ್ನಡದಲ್ಲಿ ನಾಟಕ ಸಾಹಿತ್ಯಕಾರರಾಗಿ, ಪ್ರಸಿದ್ಧ ರಂಗಭೂಮಿ ತಜ್ಞರಾಗಿ, ನಾಟಕಕಾರರಾಗಿ, ಚಲನಚಿತ್ರರಂಗದ ನಟರಾಗಿ, ನಿರ್ದೇಶಕರಾಗಿ, ಪ್ರಾಚಾರ್ಯರಾಗಿ, ಸಂಗೀತ ನಾಟಕ ಅಕಾಡೆಮಿಗಳ ಅಧ್ಯಕ್ಷರಾಗಿ ಹೀಗೆ ಅವರು ಹಲವು ರಂಗಗಳಲ್ಲಿ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರು.
ಕತೆ, ವಿಮರ್ಶೆ ಮತ್ತು ತಮ್ಮ ಆತ್ಮಕತೆ ‘ಆಡಾಡತ ಆಯುಷ್ಯ ಗಳನ್ನು ವಿರಳವಾಗಿ ಬರೆದಿದ್ದಾರಾದರೂ ಕನ್ನಡ ಸಾಹಿತ್ಯದಲ್ಲಿ ನಾಟಕ ಕ್ಷೇತ್ರದ ಸಾಹಿತಿ ಎಂದು ಕರೆಯಲ್ಪಡುವ ಗಿರೀಶ್ ಕಾರ್ನಾಡ್, ಕನ್ನಡದಲ್ಲಿ ನಾಟಕ ರಚಿಸುತ್ತಾ ಇತರ ಭಾರತೀಯ ಭಾಷೆಗಳೊಡನೆ ಸಂಪರ್ಕವನ್ನಿಟ್ಟುಕೊಂಡು ನಟರಾಗಿ, ನಿರ್ದೇಶಕರಾಗಿ, ಸಾಂಸ್ಕ್ರತಿಕ ವಕ್ತಾರರಾಗಿ ಕೆಲಸ ಮಾಡಿದವರು.
ಗಿರೀಶ್ ಕಾರ್ನಾಡರು 1934 ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಕಾರ್ನಾಡರ ಪ್ರಾಥಮಿಕ ಶಿಕ್ಷಣ ಉತ್ತರಕನ್ನಡದ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ, ಹಾಗೂ ಪದವಿ ಶಿಕ್ಷಣ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಆಯಿತು. ಆ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು. ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಇವರು. ಮದ್ರಾಸಿನಲ್ಲಿ ನೌಕರಿಯಲ್ಲಿದ್ದ ಇವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೂಡಾ ಅವರು ಕಾರ್ಯನಿರ್ವಹಿಸಿರುವರು.
ಯಯಾತಿ, ತುಘಲಕ್, ಹಯವದನ, ನಾಗಮಂಡಲ, ತಲೆದಂಡ, ಅಗ್ನಿ ಮತ್ತು ಮಳೆ, ಅಂಜುಮಲ್ಲಿಗೆ, ಹಿಟ್ಟಿನ ಹುಂಜ, ಟಿಪ್ಪುವಿನ ಕನಸುಗಳು ಮುಂತಾದವು ಕಾರ್ನಾಡರ ಪ್ರಮುಖ ನಾಟಕ ಕೃತಿಗಳು. ಅಲ್ಲದೆ ಹಲವಾರು ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿರುವ ಕಾರ್ನಾಡ್ ಪ್ರಶಸ್ತಿ ವಿಜೇತ ಚಲನಚಿತ್ರ ನಿರ್ದೇಶಕರೂ ಹೌದು. ವಂಶವೃಕ್ಷ, ತಬ್ಬಲಿಯು ನೀನಾದೆ ಮಗನೆ, ಕಾಡು, ಒಂದಾನೊಂದು ಕಾಲದಲ್ಲಿ, ಕಾನೂರು ಹೆಗ್ಗಡತಿ, ಉತ್ಸವ್ ಮುಂತಾದ ಸಿನಿಮಾಗಳು; ಸೂಫಿ ಪಂಥ, ಕನಕ ಪುರಂದರ ಸಾಕ್ಷಚಿತ್ರಗಳನ್ನು ನಿರ್ದೇಶಿಸಿದ್ದಾರೆ. ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.
ಸಾಹಿತ್ಯಕ್ಷೇತ್ರದಲ್ಲಿ ನಾಟಕಗಳನ್ನು ಮಾತ್ರ ರಚಿಸಿ ಜ್ಞಾನಪೀಠ ಪ್ರಶಸ್ತಿಗೆ ಪುರಸ್ಕೃತರಾದವರಲ್ಲಿ ಕಾರ್ನಾಡರು ಮೊದಲಿಗರು. ಹಾಗಾಗಿ ಅವರಿಗೆ ಸಂದ ಈ ಗೌರವ ಕಾರ್ನಾಡರಿಗೆ ಮಾತ್ರವಾಗಿರದೆ ಅದು ಇಡೀ ಭಾರತೀಯ ರಂಗಭೂಮಿಗೆ ಬಂದ ಗೌರವವೆಂದು ಪರಿಗಣಿತವಾಯಿತು. ಕನ್ನಡ ರಂಗಭೂಮಿಯ ಪತಾಕೆ ಮತ್ತಷ್ಟು ಎತ್ತರದಲ್ಲಿ ಹಾರಲು ಪುಷ್ಟಿಯನ್ನು ಒದಗಿಸಿಕೊಟ್ಟಿತು.
ಜ್ಞಾನಪೀಠ ಪ್ರಶಸ್ತಿಗೆ ಅರ್ಹರಾದವರ ಕೃತಿಗಳು ಪ್ರಶಸ್ತಿ ಬಂದ ಮೇಲೆ ಕೃತಿಗಳ ಮೂಲಭಾಷೆಯಿಂದ ಇತರ ಭಾಷೆಗಳಿಗೆ ಅನುವಾದಿತವಾಗುವುದು ಸರ್ವೇ ಸಾಮಾನ್ಯವಾದರೆ ಕಾರ್ನಾಡರ ಕೃತಿಗಳು ಪ್ರಶಸ್ತಿ ಬರುವ ಮುಂಚೆಯೇ ಹಲವು ಭಾರತೀಯ ಭಾಷೆಗಳಿಗೆ ಅನುವಾದಿತವಾಗಿ, ಆ ಭಾಷೆಗಳಲ್ಲಿ ಪ್ರಯೋಗವೂ ಆಗಿ ಯಶಸ್ವಿಯಾಗಿದ್ದವು, ಇಂಗ್ಲಿಷ್ ಭಾಷೆಯೂ ಸೇರಿದಂತೆ. ಪ್ರಯೋಗ ಭಾರತಕ್ಕೆ ಮಾತ್ರ ಸೀಮಿತವಾಗಿರದೆ ಇಬ್ರಾಹಿಂ ಅಲ್ಕಾಜಿಯವರು ನಿರ್ದೇಶಿಸಿದ ‘ತುಘಲಕ್’ ವಿದೇಶ ಸಂಚಾರವನ್ನೇ ಕೈಗೊಂಡಿತ್ತು. ‘ಹಯವದನ’ ಆಸ್ಟ್ರೇಲಿಯಾ, ಜರ್ಮನಿಗಳಲ್ಲಿ ಅಲ್ಲಿನವರಿಂದಲೇ ಪ್ರಯೋಗಗೊಂಡಿತ್ತು. ‘ನಾಗಮಂಡಲ’ವನ್ನು ಅಮೆರಿಕದ ಗಥ್ರಿ ಥಿಯೇಟರಿನವರು ಪ್ರದರ್ಶಿಸಿದರು. ಹೀಗೆ ‘ಜ್ಞಾನಪೀಠ’ ಬರುವ ಮುನ್ನವೇ ಕಾರ್ನಾಡರು ರಾಷ್ಟ್ರೀಯ, ಅಂತರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದರು.
ಕನ್ನಡ ರಂಗಭೂಮಿಯಂತೂ ಕಾರ್ನಾಡರಿಗೆ ಋಣಿಯಾಗಿದೆ. 70ರ ದಶಕದ ಬಯಲು ರಂಗೋತ್ಸವದ ಯಶಸ್ಸಿಗೆ ಅವರ ನಟನೆಯೂ ಒಂದು ಕಾರಣ. ಈಡಿಪಸ್ ನಾಟಕದಲ್ಲಿ ದೊರೆ ಈಡಿಪಸ್ ಪಾತ್ರವನ್ನು ಅವರೇ ವಹಿಸಿದ್ದರು. ಮುಂದೆ ಅವರು ರಂಗಭೂಮಿಯಲ್ಲಿ ನಟಿಸದಿದ್ದರೂ ಅವರ ನಾಟಕಗಳು ದೇಶವಿದೇಶಗಳಲ್ಲಿ ಯಶಸ್ವಿಯಾಗಿರುವಂತೆ ಕನ್ನಡದಲ್ಲೂ ಯಶಸ್ಸು ಕಂಡಿವೆ. 60ರ ದಶಕದಲ್ಲಿ ಅವರ ‘ತುಘಲಕ್’ ಪ್ರದರ್ಶನ ತುಘಲಕ್ ಪಾತ್ರವಹಿಸಿದ ಸಿ.ಆರ್. ಸಿಂಹರನ್ನು ಬೆಳಕಿಗೆ ತಂದದ್ದಲ್ಲದೆ ಹವ್ಯಾಸಿರಂಗಕ್ಕೆ ಹೊಸಜೀವ ಸಂಚಾರವನ್ನೇ ತಂದಿತು.
ಪುರಾಣ ಬಳಸಿ ಕಾರ್ನಾಡರು ಯಯಾತಿ ಬರೆದರು. ಇತಿಹಾಸ ಬಳಸಿ ತುಘಲಖ್ ಬರೆದರು. ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಕೆಲವು ಗಣ್ಯರು ಭಾರತೀಯ ರಂಗಭೂಮಿಯನ್ನು ಪಾಶ್ಚಾತ್ಯ ಪ್ರಭಾವದಿಂದ ಬಿಡಿಸಿ ಕಟ್ಟಬೇಕೆಂದು ಮಾಡಿದ ಆಲೋಚನೆ, ತೋರಿದ ಕಾಳಜಿಗೆ ಸ್ಪಂದಿಸಿದ ಕಾರ್ನಾಡರು ಜಾನಪದ ತಂತ್ರಗಳನ್ನು ಬಳಸಿ ‘ಹಯವದನ’ ಬರೆದರು.
ಪರಿಪೂರ್ಣತೆಯ ಆಕಾಂಕ್ಷೆಯನ್ನು ವಸ್ತುವಾಗುಳ್ಳ ‘ಹಯವದನದಲ್ಲಿ ಜಾನಪದ ರಂಗದ ಮಹತ್ವವನ್ನು ಬಯಲುಗೊಳಿಸುವುದರ ಜೊತೆಗೆ ಕಾರ್ನಾಡರು ರಂಗಸಾಧ್ಯತೆಗಳನ್ನು ವಿಸ್ತರಿಸಿದರು. ದೇಶಾದ್ಯಂತ ಸತ್ಯ ದೇವ ಧುಬೆ, ಬಿ.ವಿ.ಕಾರಂತರಂತಹ ಹಲವಾರು ಶ್ರೇಷ್ಠ ನಿರ್ದೇಶಕರು ‘ಹಯವದನ’ವನ್ನು ನಿರ್ದೇಶಿಸಿ ಸ್ಪರ್ಧಿಸಿದರು. ಹಯವದನ ಅಖಿಲಭಾರತ ವ್ಯಾಪ್ತಿಯನ್ನು ಮೀರಿ ಆಸ್ಟ್ರೇಲಿಯಾದಲ್ಲೂ ಪ್ರಯೋಗ ಕಂಡಿತು. ಅನಂತರ ಅವರು ಬರೆದ ನಾಟಕಗಳಲ್ಲಿ ತಲೆದಂಡ, ನಾಗಮಂಡಲ ಕಾರ್ನಾಡರ ಖ್ಯಾತಿಯನ್ನು ಮತ್ತಷ್ಟು ಹೆಚ್ಚಿಸಿತು. ಈ ಎಲ್ಲ ನಾಟಕಗಳು ವಿವಿಧ ಭಾಷೆಗಳಿಗೆ ತರ್ಜುಮೆಯಾಗಿ ಯಶಸ್ವೀ ಪ್ರಯೋಗ ಕಂಡಿದೆ. ‘ನಾಗಮಂಡಲ’ ಚಲನಚಿತ್ರ ರೂಪದಲ್ಲೂ ಜಯಗಳಿಸಿದೆ. ಕಾರ್ನಾಡರ ‘ಅಗ್ನಿ ಮತ್ತು ಮಳೆ’ ಅವರಿಂದಲೇ ಇಂಗ್ಲಿಷಿಗೆ ‘Fire and Rain’ ಆಗಿ ರೂಪುಗೊಂಡು ಆಂಗ್ಲ ರಂಗ ವಲಯದಲ್ಲಿ ಅಪರಿಮಿತವಾದ ಯಶಸ್ಸನ್ನು ಪಡೆಯಿತು. ‘ಅಂಜುಮಲ್ಲಿಗೆ’ ಹಿಂದಿಯಲ್ಲಿ ಹೆಚ್ಚು ಯಶಸ್ಸನ್ನು ಗಳಿಸಿತು.
‘ತಲೆದಂಡ’ ಕಾರ್ನಾಡರ ಮಹತ್ವದ ಕೃತಿಗಳಲ್ಲೊಂದು. ಜನಸಾಮಾನ್ಯರು, ವಿಶೇಷವಾಗಿ ಭಕ್ತರು, ತಾವು ಆರಾಧಿಸುವ ವ್ಯಕ್ತಿಯೊಬ್ಬನ ಕೆಲವು ಮಹತ್ವದ ಕೆಲಸಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟವಾದಾಗ ಅದನ್ನು ಪವಾಡಗಳೆಂದು ಕರೆದು ಬಿಡುವುದನ್ನು 12ನೆಯ ಶತಮಾನದಲ್ಲದೆ 21ನೆಯ ಶತಮಾನದಲ್ಲೂ ಕಾಣಬಹುದಾಗಿದೆ. ಕಲ್ಯಾಣದಲ್ಲಿ ನಡೆಯುತ್ತಿದ್ದ ದಾಸೋಹಗಳಿಗೆ ಬಸವಣ್ಣ ಬೊಕ್ಕಸದಿಂದ ದುಡ್ಡು ತೆಗೆಯುತ್ತಿದ್ದಾನೆಂದು ನಂಬುವ ರಾಜಕುಮಾರ ಸೋವಿದೇವ ಬೊಕ್ಕಸದ ಪರೀಕ್ಷೆ ಮಾಡಿ ಅಲ್ಲಿ ಒಂದು ದಮಡೀ (ಕಾಸು) ವ್ಯೆತ್ಯಾಸ ಕಾಣದ ಸಂಗತಿ ಶರಣ ಭಕ್ತರಿಗೆ ಪವಾಡವೆನಿಸಿಬಿಡುತ್ತದೆ. ಭಕ್ತರು ಬಸವಣ್ಣನನ್ನು ಕೊಂಡಾಡುತ್ತಾರೆ. ಈ ಜನ ಬಸವಣ್ಣ ಹಣ ಒಳ್ಳೆಯ ಕೆಲಸಕ್ಕೆ ತೆಗೆಯುತ್ತಿದ್ದಾನೆ ಎಂದು ಸಂದೇಹಪಡುತ್ತಾರೆ, ಆದರೆ ಅದು ಪವಾಡ ಸದೃಶವಾಗಿ ಹೊರಹೋಗದಂತೆ ಕಾಣುತ್ತಿದೆ ಎಂದು ಭಾವಿಸಿ ತಮ್ಮ ಅರಿವಿಗೆ ಬಾರದ್ದನ್ನು ಪವಾಡವೆನ್ನುತ್ತಾ ಸಾಗುತ್ತಾರೆ. ಈ ರೀತಿಯ ಭಕ್ತರ ನಡೆ ಬಸವಣ್ಣನ ಪ್ರಾಮಾಣಿಕ ವ್ಯಕ್ತಿತ್ವಕ್ಕೆ ಕೊಡುವ ಕೊಡಲಿ ಪೆಟ್ಟಾಗುತ್ತದೆ. ಅದೇ ಪವಾಡಕ್ಕೆ ಕಾರ್ನಾಡರು ಕೊಡುವ ಸಮಾಜೋ-ಆರ್ಥಿಕ ವಿಶ್ಲೇಷಣೆ ಶರಣರ ಕಾಯಕದ ಮೌಲ್ಯವನ್ನೇ ಹೆಚ್ಚಿಸುತ್ತದೆ. ಕಾಯಕವೇ ಕೈಲಾಸ ಎಂದುಕೊಂಡು ಶರಣರು ದುಡಿದದ್ದರಿಂದ ಕಲ್ಯಾಣರಾಜ್ಯ ಸಮೃದ್ಧಿಹೊಂದಿ ಶ್ರೀಮಂತರು ಗಳಿಸಿದ ಲಾಭದಲ್ಲಿ ಅದರ ಒಂದಂಶವನ್ನು ದಾಸೋಹಗಳಿಗೆ ನೀಡುತ್ತಿದ್ದರು. ಬಸವಣ್ಣ ಬೊಕ್ಕಸಕ್ಕೆ ಕೈ ಹಾಕಬೇಕಾದ ಅವಶ್ಯಕತೆಯೇ ಇರಲಿಲ್ಲವೆಂದು ಕಾರ್ನಾಡರು ವಿಶ್ಲೇಷಿಸುತ್ತಾರೆ. ಪವಾಡದ ಹಣೆ ಪಟ್ಟಿ ಕಟ್ಟಿ ಬಸವಣ್ಣನ ವ್ಯಕ್ತಿತ್ವಕ್ಕೇ ಮಸಿಬಳಿಯುವುದಕ್ಕಿಂತ ಬಸವಣ್ಣನ ತತ್ವದ ಘನತೆಯನ್ನು ಹೆಚ್ಚಿಸುವಂಥ ಕಾರ್ನಾಡರ ವಿಶ್ಲೇಷಣೆ ಮಹತ್ವವಾದದ್ದು.
ತಲೆದಂಡ ನಾಟಕದ ಇನ್ನೊಂದು ಸಂದರ್ಭದಲ್ಲಿ ಲೇಖಕರು ಬಸವಣ್ಣನ ಕೆಲಸಗಳಲ್ಲಿ ಪವಾಡವೆನ್ನುವಷ್ಟು ಮಹತ್ವವಾದುದನ್ನು ಬಿಜ್ಜಳನ ಮಾತಿನಲ್ಲಿ ತರುತ್ತಾರೆ.
ಬಿಜ್ಜಳ: ” ಒಬ್ಬ ಹಾರುವರ ಹುಡುಗಿ ತಾನಾಗಿ ಪಂಚಮನ ಮಾಡಿಕೋತೀನಿ ಅಂತಾಳೇನು – ಎರಡು ಲಕ್ಷ ಜನ ಅದಕ್ಕೆ ಬೆಂಬಲ ಕೊಡತೈತೇನು? ಬಸವಣ್ಣನ ಖರೀ ಪವಾಡ ಇದು. ಇದು ನನ್ನ ರಾಜಧಾನಿಯೊಳಗ ಆಗತೈತಿ ಅಂದಾಗ ನಾ ಅಡ್ಡಗಾಲು ಹಾಕಿಸೇನ?
ಧಾಮೊದರಭಟ್ಟ: (ಕನಲಿ) ಅದು ಪವಾಡ ಅಲ್ಲ, ಮಹಾಸ್ವಾಮಿ. ನಿಸರ್ಗದ್ರೋಹ-
ಬಿಜ್ಜಳ: ” (ಕೈಯೆತ್ತಿ, ದನಿಯೆತ್ತದೆ) ಹೇಳೆದೆನಲ್ಲ ನಿಮಗೆ ತಿಳಿಯೋ ಮಾತಲ್ಲಿದು. ಹುಟ್ಟಾ ಪವಾಡಕ್ಕಾಗಿ ಹಂಬಲಿಸಿ ಕೂತವಗ ಮಾತ್ರ ಪವಾಡ ಕಂಡ ಗಳಿಗೆ ಅದರ ಗುರ್ತ ಹತ್ತತೈತಿ, ಉಳಿದವರಿಗೆ ಹೇಳಿದ್ದಲ್ಲದು!
ಬಿಜ್ಜಳನ ಈ ಮಾತುಗಳೇ ಎಲ್ಲವನ್ನೂ ಸ್ಪಷ್ಟಪಡಿಸುತ್ತವೆ. ಶೀಲ, ಕಲಾವತಿಯರ ವಿವಾಹ ಪ್ರಸ್ತಾಪದ ಇಡೀ ದೃಶ್ಯ, ಅಲ್ಲಮಪ್ರಭು ಬಸವಣ್ಣನಿಗೆ ಕೊಟ್ಟ ದಿವ್ಯದರ್ಶನದಂತೆ ನಾಟಕ ಹಿಂಸೆ, ರಕ್ತಪಾತಗಳಲ್ಲಿ ಕೊನೆಯಾಗುವುದು, ಇವೇ ಮುಂತಾದವುಗಳು ನಾಟಕವನ್ನು ಶ್ರೇಷ್ಠಕೃತಿಯಾಗಿಸಿವೆ.
ಕಾರ್ನಾಡರ ಮತ್ತೊಂದು ಮಹತ್ವದ ಕೃತಿಯಾದ ತುಘಲಕ್ ನಾಟಕದಲ್ಲಿ, ತುಘಲಕ್ ಚದುರಂಗದಾಟದ ಪ್ರೇಮಿ. ಈ ಆಟದಲ್ಲಿ ಸಾಮಾನ್ಯ ಸಿಪಾಯಿ ಮೇಲಕ್ಕೆ ಚಲಿಸಿ ತನ್ನ ಗುರಿ ಮುಟ್ಟಿದರೆ ಮಂತ್ರಿಯಾಗಬಲ್ಲ. ದೊರೆಯೂ ಆಗಬಲ್ಲ. ನಾಟಕದಲ್ಲಿ ದೊರೆ ತನ್ನ ಜನರನ್ನು ಪಗಡೆಕಾಯಿಗಳಂತೆ ತನ್ನ ಉದ್ದೇಶಕ್ಕೆ ಬಳಸಿಕೊಳ್ಳುವುದು, ನಾಟಕದ ಹಾಸಿನಲ್ಲಿ ಸಾಮಾನ್ಯ ಕೊಲೆಗಾರ, ಕಳ್ಳನೊಬ್ಬ ಮೇಲೇರಿ ಕಡೆಯಲ್ಲಿ ದೊರೆಗೆ ಸರಿಸಮಾನನಾಗಿ ನಿಲ್ಲುವುದು ‘ತುಘಲಕ್’ ನಾಟಕದ, ಚದುರಂಗದ ಹಾಸಿನ ಸಂವಿಧಾನದ ಕ್ರೂರ ವ್ಯಂಗ್ಯಗಳು. ಅಂತೆಯೇ ತುಘಲಕ್ ಕನಸುವ ಗುಲಾಬಿ ಉದ್ಯಾನವನ ವಾಸ್ತವದಲ್ಲಿ ಶವಗಳ ಕಾರ್ಯಾಗಾರಗಳಾಗುವುದು. ಹೀಗೆ ಬರೆಯುತ್ತ ಹೋದಷ್ಟೂ ತುಘಲಕ್ ನಾಟಕದ ಶ್ರೇಷ್ಟತೆ, ಮಹತ್ವತೆ ಹೆಚ್ಚುತ್ತದೆ.
ಕಾರ್ನಾಡರು ತಮ್ಮ ಮನಸ್ಸನ್ನು ನಾಟಕ ರಚನೆಯಲ್ಲಿ ನೆಟ್ಟು ತಮ್ಮ ದೇಹವನ್ನು ಚಲನಚಿತ್ರದಲ್ಲಿ ತೊಡಗಿಸಿಕೊಂಡವರು. ಕಿರು ಮತ್ತು ದೊಡ್ಡ ತೆರೆಯಲ್ಲಿ ಅಭಿನಯಿಸುತ್ತ, ಚಿತ್ರಕಥೆಗಳನ್ನು ಬರೆಯುತ್ತ, ಒಮ್ಮೊಮ್ಮೆ ಚಿತ್ರಗಳನ್ನು ನಿರ್ದೇಶಿಸುತ್ತ ತಮ್ಮ ಮನಸ್ಸಿನಲ್ಲಿ ಕಾಡುತ್ತಿರುವ ನಾಟಕಗಳ ಶಿಲ್ಪವನ್ನು ಕಡೆದವರು.
ಚಲನಚಿತ್ರ ಕ್ಷೇತ್ರಕ್ಕೂ ಅವರ ಕೊಡುಗೆ ಗಣನೀಯ. ಅರವತ್ತರ ದಶಕದಲ್ಲಿ ಅವರು ಚಿತ್ರಕತೆ ರಚಿಸಿ ಅಭಿನಯಿಸಿದ ‘ಸಂಸ್ಕಾರ’ ರಾಷ್ಟ್ರಪಶಸ್ತಿಯನ್ನು ಗಳಿಸಿದ್ದಲ್ಲದೆ ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿತು. ಪ್ರತಿಭಾವಂತ ಯುವ ನಿರ್ದೇಶಕರು ಸಮಾಜದ ವಾಸ್ತವತೆಗಳನ್ನು ಪ್ರತಿಬಿಮ್ಬಿಸುವಂಥ ಚಿತ್ರಗಳನ್ನು ತೆಗೆಯಲು ಧೈರ್ಯವನ್ನು ದೊರಕಿಸಿಕೊಟ್ಟಿತು. ಕನ್ನಡ ಚಿತ್ರರಂಗ ರಾಷ್ಟ್ರೀಯ, ಅಂತರರಾಷ್ಟ್ರೀಯ ರಂಗದಲ್ಲಿ ಮನ್ನಣೆ ಗಳಿಸಿತು. ಬಿ. ವಿ. ಕಾರಂತರೊಡನೆ ಅವರು ನಿರ್ದೇಶಿಸಿದ ಚಿತ್ರಗಳು ವಂಶವೃಕ್ಷ ಮತ್ತು ತಬ್ಬಲಿಯು ನೀನಾದೆ ಮಗನೆ. ಕಾರ್ನಾಡರು ಸ್ವಯಂ ನಿರ್ದೇಶಿಸಿದ ಚಿತ್ರಗಳು ಒಂದಾನೊಂದು ಕಾಲದಲ್ಲಿ, ಕಾಡು, ಕಾನೂರು ಹೆಗ್ಗಡತಿ, ಹಿಂದಿಯಲ್ಲಿ ಉತ್ಸವ್, ಚೆಲ್ವಿ ಇತ್ಯಾದಿ. ನಟರಾಗಿ ಶ್ಯಾಂ ಬೆನೆಗಲ್ ಅವರ ನಿಶಾಂತ್, ಮಂಥನ್, ಭೂಮಿಕಾ; ಶಂಕರ ನಾಗರ ಮಾಲ್ಗುಡಿ ಡೇಸ್, ಕನ್ನಡ ಮತ್ತು ತೆಲುಗಿನ ಆನಂದ ಭೈರವಿ, ಮೈಸೂರು ಮಲ್ಲಿಗೆ, ಸಂತ ಶಿಶುನಾಳ ಶರೀಫ್ ಹೀಗೆ ಹಲವಾರು ನೆನಪುಗಳು ಮರುಕಳಿಸುತ್ತವೆ. ಎಪ್ಪತ್ತರ ದಶಕದಲ್ಲಿ ಬಂದ ಮಹಾನ್ ಪ್ರತಿಭೆಗಳಾದ ನಾಸಿರುದ್ದೀನ್ ಷಾ, ಓಂ ಪುರಿ, ಗಿರೀಶ್ ಕಾಸರವಳ್ಳಿ ಮುಂತಾದ ಹಲವಾರು ಪ್ರಸಿದ್ಧರು ಗಿರೀಶರು ಪೂನಾ ಫಿಲಂ ಇನ್ಸ್ಟಿಟ್ಯೂಟಿನಲ್ಲಿದ್ದಾಗ ಮೂಡಿಬಂದವರು. ಓಂ ಪುರಿಯಂತವ ನಟನೆಗೆ ಯೋಗ್ಯನೆ ಎಂಬುದನ್ನು ಪ್ರಶ್ನಿಸಿದ್ದ ಅಂದಿನ ಕಾಲದಲ್ಲಿ ಆತನಲ್ಲಿದ್ದ ಪ್ರತಿಭೆಯನ್ನು ಕಂಡವರು ಗಿರೀಶ್. ಕನ್ನಡದಲ್ಲಿ ವಿಷ್ಣುವರ್ಧನ್, ಶಂಕರನಾಗ್, ಸಿ. ಆರ್. ಸಿಂಹ ಮುಂತಾದ ಅನನ್ಯ ಪ್ರತಿಭೆಗಳನ್ನು ಹುಡುಕಿಕೊಟ್ಟವರು ಕೂಡಾ ಗಿರೀಶರೆ. ಅವರು ಎಷ್ಟು ಪ್ರಾಜ್ಞರಾಗಿ ಕಲಾವಂತಿಕೆ ಹೊತ್ತ ಚಿತ್ರಗಳಲ್ಲಿ ನಟಿಸುತ್ತಾರೋ, ಅಷ್ಟೇ ಸರಾಗವಾಗಿ ಕನ್ನಡ, ತಮಿಳು, ಹಿಂದಿ, ಮಲಯಾಳ, ಮರಾಠಿ ಹೀಗೆ ವಿವಿದ ಭಾಷೆಗಳ ಕಮರ್ಷಿಯಲ್ ಹಣೆಪಟ್ಟಿಯ ಚಿತ್ರಗಳಲ್ಲೂ ಸರಾಗವಾಗಿ ಎಂಬಂತೆ ನಟಿಸಿಬರುವುದನ್ನು ಕಂಡು ಇವರ ಅಪ್ರತಿಮ ವೈವಿಧ್ಯತೆಯ ಕುರಿತಾಗಿ ಅಚ್ಚರಿಹುಟ್ಟುತ್ತದೆ.
ಗಿರೀಶರ ಆತ್ಮಚರಿತ್ರೆಯಾದ ‘ಆಡಾಡತ ಆಯುಷ್ಯ’ ನಮ್ಮ ಕಾಲದಲ್ಲಿ ಮೂಡಿ ಬಂದ ಹೊಸ ನಿಟ್ಟಿನ ಬದುಕಿನ, ನವ್ಯ ಕಾಲದ ಸಾಹಿತ್ಯ, ರಂಗಭೂಮಿ, ಸಿನಿಮಾ, ಲಲಿತ ಕಲೆ ಮತ್ತು ಸಾಂಸ್ಕೃತಿಕ ಜಗತ್ತಿನ ಬಹು ದೊಡ್ಡ ಜಗತ್ತನ್ನೇ ನಮ್ಮ ಕಣ್ಣೆದುರು ತೆರೆದಿಡುವಂತದ್ದಾಗಿದೆ.
Key words: Girish Karnad’s contribution to literature, drama and cinema.
#Girish Karnad #contribution #literature #drama #cinema.