ಹುಲಿಗಳು ಬದುಕಲು ದೇಶದಲ್ಲಿ ಪೂರಕ ವಾತಾವರಣ: ವಿಜಯ್ ಮೋಹನ್ರಾಜ್
ಮೈಸೂರು, ಜುಲೈ. 29, 2021: ಹುಲಿಗಳು ಬದುಕಲು ಪೂರಕ ವಾತವರಣ ಹೊಂದಿದ್ದ 13 ದೇಶದ ಪ್ರಮುಖ ಮುಖಂಡರು 2010ರಲ್ಲಿ ಸಭೆ ಸೇರಿ ಒಂದು ಜೀವಿಯ ಸಂತತಿಯ ಸಂರಕ್ಷಣೆ ಮಾಡುಬೇಕು ಎಂದು ತೀರ್ಮಾನಿಸಿದ್ದು ಎಂದರೆ ಅದು ಹುಲಿಗೆ ಮಾತ್ರ ಎಂದು ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯ್ ಮೋಹನ್ರಾಜ್ ತಿಳಿಸಿದರು.
ತಾಲ್ಲೂಕಿನ ಅಂತರಸಂತೆ ವನ್ಯಜೀವಿ ವಲಯ ಕಾಕನಕೋಟೆ ಸಫಾರಿ ಕೇಂದ್ರದಲ್ಲಿ ಗುರುವಾರ ನಡೆದ ಜಾಗತಿಕ ಹುಲಿ ದಿನದ ಕಾರ್ಯಕ್ರಮದಲ್ಲಿ ನಾಗರಹೊಳೆಯ ನೂತನ ಲಾಂಚನವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಜೀವನದಲ್ಲಿ ಒಮ್ಮೆಯಾದರೂ ಹುಲಿಯನ್ನು ನೋಡಬೇಕು. ನೋಡಿದ ನಂತರ ಆ ಕ್ಷಣವನ್ನು ಎಂದಿಗೂ ಮರೆಯಲು ಆಗುವುದಿಲ್ಲ. 2010ರಲ್ಲಿ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ 13 ರಾಷ್ಟ್ರಗಳ ಮುಖಂಡರು ಸಭೆ ಸೇರಿ ಜುಲೈ 29ರಂದು ವಿಶ್ವ ಹುಲಿ ದಿನಾಚರಣೆ ಎಂದು ಘೋಷಿಸಿದರು.
ಸಾರಿಷ್ಕ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಳ್ಳಬೇಟೆಯಿಂದ ಹುಲಿಗಳು ನಾಶವೊಂದಿದ್ದನ್ನು ಗಮನಿಸಿದ ಅಂದಿನ ಪ್ರಧಾನಿ ಹುಲಿಗಳ ಸಂರಕ್ಷಣೆ ಯೋಜನೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಮಾಡಿದರು. ಇದರೊಂದಿಗೆ ಕಾಡಿನ ಇತರ ಜೀವಜಾಲಗಳು ಸಂರಕ್ಷಣೆಗೊಳ್ಳುವುದರ ಜೊತೆಗೆ ಅರಣ್ಯ ಸಂಪತ್ತು ರಕ್ಷಣೆಯಾಯಿತು ಎಂದರು.
ಎಸಿಎಫ್ ಎಸ್.ಪಿ.ಮಹಾದೇವ್ ಅವರು ಮಾತನಾಡಿ, 2007ರಲ್ಲಿ 643.39 ಚ.ಕಿ.ಮೀ ವ್ಯಾಪ್ತಿಯನ್ನು ಗುರುತಿಸಿ ಅದನ್ನು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಿಸಲಾಯಿತು. ನಾಗರಹೊಳೆಯಲ್ಲಿ ಆನೆಗಳ ಸಾಂದ್ರತೆಯೂ ಸಹ ಹೆಚ್ಚಾಗಿರುವುದರಿಂದ 2019ರಲ್ಲಿ ಇಲ್ಲಿಗೆ 200.57 ಚ.ಕಿ.ಮೀ ಬಫರ್ ಪ್ರದೇಶವನ್ನು ಸೇರಿಸಿ ಒಟ್ಟು 843.93 ಚ.ಕಿ.ಮೀ ಪ್ರದೇಶವನ್ನು ಗುರುತಿಸಲಾಗಿದೆ. 2014ರ ಗಣತಿಯಲ್ಲಿ ಒಟ್ಟು 72 ಹುಲಿಗಳು ಮತ್ತು 2018ರಲ್ಲಿ 125 ಹುಲಿಗಳು ಹಾಗೂ 2020 ರಲ್ಲಿ 135 ಹುಲಿಗಳು ಕಂಡುಬಂದಿದ್ದು, ಹುಲಿಗಳ ಸಂಖ್ಯೆ ಕಳೆದ 8 ವರ್ಷಗಳಲ್ಲಿ ಶೇ.87.50 ರಷ್ಟು ಹೆಚ್ಚಾಗಿದೆ ಎಂದರು.
ಇದೇ ವೇಳೆ ಅರಣ್ಯ ವೀಕ್ಷಕ ಹುದ್ದೆಯಿಂದ ಅರಣ್ಯ ರಕ್ಷಕ ಹುದ್ದೆಗೆ ಬಡ್ತಿ ಹೊಂದಿದ 14ಜನ ಸಿಬ್ಬಂದಿಗಳಿಗೆ ಸ್ಟಾರ್ ಕ್ಲಿಪ್ಪಿಂಗ್ ಮಾಡಲಾಯಿತು. ಅಲ್ಲದೇ ಹುಲಿಗಳ ಬಗ್ಗೆ ಜಾಗೃತಿ ಮೂಡಿಸುವ ಸೈಕಲ್ ಜಾಥ ನಡೆಸಿದ ಬೆಂಗಳೂರಿನ ಪರಿಕ್ರಮ ತಂಡ ಮತ್ತು ಇಲಾಖೆಯ ಮುಂಚೂಣಿ ಸಿಬ್ಬಂದಿಗಳಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ನಾಹರಹೊಳೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್ ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಎ.ವಿ.ಸತೀಶ್, ಕೆ.ಪಿ.ಗೋಪಾಲ್, ವಲಯ ಅರಣ್ಯಾಧಿಕಾರಿಗಳಾದ ಎಸ್.ಎಸ್.ಸಿದ್ದರಾಜು, ಸಂತೋಷ ಹೂಗಾರ್, ಮಧು, ನಮನನಾಯಕ್, ಗಿರೀಶ್, ಹನುಮಂತ ರಾಜು, ಕಿರಣ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ವರ್ಗ ಮುಂತಾದವರು ಹಾಜರಿದ್ದರು.