‘ಪಪ್ಪಾ ಹೋಮ್ ವರ್ಕ್ ಗೆ ಹೆಲ್ಪ್ ಮಾಡ್ತೀಯಾ..’ ಅಂತ ಆ ಪುಟ್ಟ ಹುಡುಗಿ ಓಡಿಬಂದಾಗ ನನ್ನ ಕಣ್ಣಲ್ಲಿ ಮಿಂಚು
ಹಾಗೆ ಓಡಿ ಬಂದ ಹುಡುಗಿಯನ್ನು ಮಡಿಲಿಗೆ ಸೇರಿಸಿಕೊಂಡು ಅವಳು ತಂದಿದ್ದ ಪುಸ್ತಕದ ಹಾಳೆ ತಿರುವುತ್ತಾ ಹೋದೆ.
ಅವಳು ಒಂದು ಬದುಕಿನ ಕಥೆ ಹೆಕ್ಕಬೇಕಿತ್ತು. ಶಾಲೆಯ ಪುಸ್ತಕದಲ್ಲಿದ್ದ ಒಂದು ಪಾಠವನ್ನು ತನ್ನ ಕಣ್ಣುಗಳ ಮೂಲಕ ಕಟ್ಟಿಕೊಡಬೇಕಿತ್ತು.
ಸರಿ ದೋಸೆಮುಗುಚಿ ಹಾಕುವ ಕೆಲಸ ಅಷ್ಟೇತಾನೇ. ಅವರು ಹಾಗೆ ಬರೆದದ್ದನ್ನು ಹೀಗೆ ಬರೆದರೆ ಅವಳ ಹೋಮ್ ವರ್ಕ್ ರೆಡಿ ಅಂದುಕೊಂಡವನೇ ಆ ಪಾಠ ಓದತೊಡಗಿದೆ.
ಒಹ್! ನಿಜಕ್ಕೂ ಅದು ಪಾಠ. ಬದುಕಿನ ಪಾಠ. ನನ್ನೊಳಗೆ ಇದ್ದ ಕತ್ತಲೆಯನ್ನು ಒಂದಿಷ್ಟು ಸರಿಸಿ ಹಾಕಿದ ಪಾಠ.
ಆಕೆ-ರೋಸಾ ಪಾರ್ಕ್ಸ್. ಅಮೆರಿಕಾದ ಅಲಬಾಮಾದ ಮಹಿಳೆ
ಒಂದು ದಿನ ಹೀಗಾಯ್ತು. ಕರಿಯ ಮತ್ತು ಬಿಳಿಯ ಬಣ್ಣ ತನ್ನ ಆಟವನ್ನು ಆಡುತ್ತಿದ್ದ ಕಾಲ. ಜಗತ್ತು ಕಪ್ಪು ಎನ್ನುವ ಯಾವುದನ್ನೂ ಒಪ್ಪಿಕೊಳ್ಳಲುಸಿದ್ಧವಿರಲಿಲ್ಲ. ಕಪ್ಪು ಜನರಿಗೆ ಜೀವ ಒಂದು ಇದೆ ಎಂದೇ ಗೊತ್ತಿಲ್ಲದ ಕಾಲ. ಕಪ್ಪು ಜನರಿಗೆ ಜೀವ ಇದೆ ಎಂದರೆ ಅದೇ ಅಪರಾಧ ಎನ್ನುವಂತೆ ನೋಡುತ್ತಿದ್ದಕಾಲ.
ಬಸ್ ನಲ್ಲಿ ಬಹುಪಾಲು ಸೀಟುಗಳು ಬಿಳಿಯರಿಗೆ ಮಾತ್ರ. ಕಪ್ಪು ಜನರೇ ಬಸ್ ನಲ್ಲಿ ತುಂಬಿದ್ದರೂ ಬಿಳಿಯರ ಮೀಸಲು ಸೀಟುಗಳು ಖಾಲಿ ಇದ್ದರೂ ಅವರು ಕುಳಿತುಕೊಳ್ಳುವಂತಿಲ್ಲ.
ಅಂತಹ ಒಂದು ಬಸ್ ನಲ್ಲಿ ರೋಸಾ ಪಾರ್ಕ್ ಹತ್ತಿದಳು. ಇಡೀ ದಿನದ ದುಡಿಮೆ ಸಾಕಾಗಿ ಹೋಗಿತ್ತು. ಬಳಲಿ ಬೆಂಡಾಗಿದ್ದ ರೋಸಾ ಕುಳಿತದ್ದು ಕಪ್ಪುಜನರಿಗಾಗಿಯೇ ಇದ್ದ ಸೀಟ್ ನಲ್ಲೇ
ಆದರೆ ಆಗಿದ್ದು ಬೇರೆ. ಒಬ್ಬ ಬಿಳಿಯ ಬಂದವನೇ ಎದ್ದೇಳು ಅಂದ. ಬಿಳಿಯರಿಗಿದ್ದ ಸೀಟ್ ತುಂಬಿತ್ತು. ಆದರೆ ಬಿಳಿಯ ಎಂದರೆ ಬಿಳಿಯನೇ ಅಲ್ಲವೇ. ಕರಿಯರ ಸೀಟ್ ಆದರೇನು. ನಾನೇರುವತ್ತರಕ್ಕೆ ನೀನೇರಬಲ್ಲೆಯಾ ಎಂಬ ಸೊಕ್ಕು.
ರೋಸಾ ಪಾರ್ಕ್ಸ್ ಅವನತ್ತ ನೋಡಿದಳು. ಸುಸ್ತಾಗಿ ಹೋಗಿದ್ದ ಜೀವಕ್ಕೆ ನಿಲ್ಲಲ್ಲು ಸಾಧ್ಯವೇ ಇಲ್ಲ ಅನಿಸಿತು. ನಿಲ್ಲಲಿಲ್ಲ ಅಷ್ಟೇ. ಬಿಳಿಯ ಕೂಗಾಡಿದ. ಬಸ್ ಡ್ರೈವರ್, ಕಂಡಕ್ಟರ್ ಕೂಗಾಡಿದರು. ಬಸ್ ನಲ್ಲಿದ್ದ ಬಿಳಿಯರೆಲ್ಲಾ ಒಟ್ಟಾಗಿ ಕೂಗಿದರು.
ರೋಸಾ ಒಂದಿನಿತೂ ಅಲುಗಲಿಲ್ಲ. ಕುಳಿತೇಬಿಟ್ಟಳು. ಅಷ್ಟೇ ಆದದ್ದು.
ಆದರೆ ಅದು ಬಿಳಿಯರ ಕಣ್ಣಿಗೆಮಾತ್ರ ‘ಅಷ್ಟೇ’ ಆಗಿರಲಿಲ್ಲ. ಪೊಲೀಸರನ್ನು ಕರೆಸಿದರು. ಎಲ್ಲರ ಕಣ್ಣೆದುರಿಗೆ ರೋಸಾಗೆ ಕೈಕೋಳ ತೊಡಿಸಿ ಜೈಲಿಗೆ ದೂಕಿದರು.
ದೂಕಿದ್ದು ಕತ್ತಲ ಕೋಣೆಗೆ. ಆದರೆ ಅದೇ ಬೆಳಕಿಗೆ ದಾರಿಯಾಗಿ ಹೋಯಿತು.
ಯಾವಾಗ ರೋಸಾ ಕೂತಲ್ಲೇ ಕೂತುಬಿಟ್ಟಳೋ. ಅದೇ ಮಹಾಪರಾಧವಾಗಿಹೋಯಿತೋ, ಇಡೀ ದೇಶದ ಕರಿಯರು ಒಂದಾದರು. ಮನುಷ್ಯರಾಗಿದ್ದವರೆಲ್ಲರೂ ಅವರ ಜೊತೆಗೂಡಿದರು. ನಾಗರಿಕ ಹಕ್ಕುಗಳ ಚಳವಳಿ ಆರಂಭವಾಗಿಹೋಯಿತು.
ನೋಡ ನೋಡುತ್ತಿದ್ದಂತೆಯೇ ಒಂದು ಪುಟ್ಟ, ಹೆಸರೇ ಕೇಳಿರದಿದ್ದ ಊರಿನಲ್ಲಿ ನಡೆದ ಘಟನೆ ದೇಶದ ಗಡಿ ದಾಟಿ ಸುದ್ದಿ ಮಾಡುತ್ತಾ ಹೋಯಿತು.
ಜಗತ್ತಿಗೆ ಜಗತ್ತೇ ಈ ಹೋರಾಟದ ಬೆನ್ನಿಗೆ ನಿಂತುಬಿಟ್ಟಿತು.
ಚರಿತ್ರೆಯ ಪುಟಗಳಲ್ಲಿ ಏನು ಬರೆದಿದ್ದಾರೋ ಗೊತ್ತಿಲ್ಲ. ಏಕೆಂದರೆ ಚರಿತ್ರೆಯ ಪುಟಗಳು ಸೃಷ್ಟಿಯಾಗಿರುವುದು ಬೇಟೆ ಆಡಿದವನ ಕಣ್ಣುಗಳಿಂದ ಮಾತ್ರಅಲ್ಲವೇ?. ಆದರೆ ಹೀಗಾಗಿ ಹೋಯಿತು-
ಆಕೆ ಕುಳಿತಳು.. ಇಡೀ ಜಗತ್ತು ಎದ್ದು ನಿಂತಿತು.
ಇದಾಗಿ ಒಂದೆರಡು ವರ್ಷವಾಗಿತ್ತು. ನಾನು ವಾಷಿಂಗ್ಟನ್ ನ ಪ್ರೆಸಿಡೆಂಟ್ ಕಚೇರಿಯ ಎದುರು ಇದ್ದೆ.
ಎದ್ದೇನೋ ಬಿದ್ದೆನೋ ಎಂದು ಅಲ್ಲಿಗೆ ಓಡಿ ಬರುವವೇಳೆಗೆ ಜನಸಾಗರ. ದೊಡ್ಡ ಕ್ಯೂ.. ಕಣ್ಣು ಆಯಾಸಗೊಳ್ಳುವವರೆಗೂ ಸಾಗಿ ಹೋಗಿತ್ತು.
ನನಗೋ ಆತಂಕ. ಇನ್ನಿದ್ದದ್ದು ಒಂದು ಗಂಟೆಯಷ್ಟು ಸಮಯಮಾತ್ರ. ಈ ‘ಕ್ಯೂ’ನಲ್ಲಿ ನಿಂತರೆ ಶತಾಯ ಗತಾಯ ನಾನು ಅಧ್ಯಕ್ಷರ ಸಭಾಂಗಣ ಸೇರುವುದು ಸಾಧ್ಯವೇ ಇರಲಿಲ್ಲ.
ತಕ್ಷಣ ನೆನೆಪಿಗೆ ಬಂತು. ಸೀದಾ ಮುಖ್ಯ ಗೇಟಿಗೆ ಹೋದವನೇ ನನ್ನ ‘ಐ ಡಿ’ ಝಳಪಿಸಿದೆ. ನಾನು ಆಗ ‘ಸಿ ಎನ್ ಎನ್’ ಚಾನಲ್ ನಲ್ಲಿದ್ದೆ.
‘ಸಿ ಎನ್ ಎನ್’ ಎಂದರೇನು ಸುಮ್ಮನೆಯೇ?. ಅದು ಇಡೀ ಅಮೆರಿಕಾದ ಕಣ್ಣು ಕಿವಿ ನಾಲಿಗೆ ಎಲ್ಲಾ.. ಹಾಗಾಗಿ ಗೇಟು ತನ್ನಿಂದತಾನೇ ತೆರೆದುಕೊಡುಬಿಟ್ಟಿತ್ತು.
ಅಕಸ್ಮಾತ್ ತೆರೆಯದಿದ್ದರೆ ನೇರಾ ಜಾರ್ಜ್ ಬುಷ್ ಬಳಿಗೆ ಕರೆದೊಯ್ಯಿರಿ ಎಂದು ಹೇಳುವಷ್ಟು ಧೈರ್ಯವನ್ನು ಆ ಒಂದು ಪುಟ್ಟ ಐ ಡಿ ಕಾರ್ಡ್ ನನಗೆ ಕೊಟ್ಟುಬಿಟ್ಟಿತ್ತು.
ಹಾಗೆ ನಾನು ಒಳಗೆ ನುಗ್ಗಿದ್ದು ಇನ್ನಾರಿಗೂ ಅಲ್ಲ. ಅದೇ ಆ ನಾಲ್ಕನೇ ಕ್ಲಾಸಿನ ಪಠ್ಯ ಪುಸ್ತಕದಲ್ಲಿ ಒಂದು ಪಾಠವಾಗಿದ್ದ, ನಾಲ್ಕು ದಿನಗಳ ಕಾಲ ನಾನೂ ನನ್ನ ಮಗಳೂ ಗೂಗಲ್ ಎಲ್ಲಾ ತಡಕಾಡಿ ಸಂಗ್ರಹಿಸಿದ್ದ ಫೋಟೋ, ಚಿತ್ರಗಳನ್ನೆಲ್ಲಾ ಕತ್ತರಿಸಿ ಹೊಸ ಸ್ಕೆಚ್ ಪೆನ್ ತಂದು ಡ್ರಾಯಿಂಗ್ ಹಾಳೆಯ ಮೇಲೆ ನೀಟಾಗಿ ಕತ್ತರಿಸಿ ಒಂದು ಬದುಕು ಕಟ್ಟಿ ಕೊಟ್ಟಿದ್ದೆವಲ್ಲಾ ಅದೇ ‘ರೋಸಾ ಪಾರ್ಕ್ಸ್’ಗಾಗಿ
ರೋಸಾ ತಮ್ಮ೯೨ ವಯಸ್ಸಿನಲ್ಲಿ ಕಣ್ಣು ಮುಚ್ಚಿದ್ದರು. ಮೈಲುಗಟ್ಟಲೆ ದೂರದಲ್ಲಿದ್ದ ನನಗೇ, ಖಂಡಗಳ ಆಚೆ ಇದ್ದ ನನಗೇ, ದೇಶ ಗೊತ್ತಿರದಿದ್ದ, ಭಾಷೆ ಗೊತ್ತಿರದಿದ್ದ ನನಗೇ, ಒಮ್ಮೆಯೂ ನೋಡಿರದ ನನಗೇ ಆ ಘಟನೆ ನಡೆದಾಗ ಹುಟ್ಟಿಯೂ ಇರದ ನನಗೇ.. ರೋಸಾ ಅಷ್ಟು ದೊಡ್ಡದಾಗಿ ಕಾಡಿದ್ದಾಗ.. ಇನ್ನುಅಮೆರಿಕಾಗೆ..!!
ರೋಸಾ ಪಾರ್ಕ್ಸ್ ಎನ್ನುವುದು ತಮ್ಮ ಬದುಕಿಗೆ ಏನು ಎನ್ನುವುದು ಎಲ್ಲರಿಗೂ ಗೊತ್ತಿತ್ತು.. ಅಂತೆಯೇ ಸರ್ಕಾರಕ್ಕೂ.. ಹಾಗಾಗಿಯೇ ಮೊಟ್ಟಮೊದಲ ಬಾರಿಗೆ ಅಧ್ಯಕ್ಷರ ಕಚೇರಿಯಲ್ಲಿ ಅಧ್ಯಕ್ಷರಲ್ಲದವರ ದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.
ಯಾಕೆಂದರೆ ರೋಸಾ ಪಾರ್ಕ್ಸ್ ಅಧ್ಯಕ್ಷರಿಗಿಂತಲೂ ಒಂದು ಸಾಸಿವೆ ಕಾಳು ಹೆಚ್ಚು ತೂಗಿದವರೇ..
ನಾನು ಕ್ಯಾಮೆರಾ ಕೈಗೆತ್ತಿಕೊಂಡವನೇ ಕ್ಲಿಕ್ಕಿಸುತ್ತಾ ಹೋದೆ. ಒಳಗೆ, ಹೊರಗೆ.. ರೋಸಾ ಎಂಬ ಬೆಳಕು ನನ್ನ ಕ್ಯಾಮೆರಾದೊಳಗೆ ಅಡಗಿದ್ದ ಕತ್ತಲನ್ನೂ ಹೊರಗೆ ತಳ್ಳುತ್ತಾ ಕುಳಿತಿತ್ತು
ಇದಾಗಿ ಸ್ವಲ್ಪ ದಿನ ಹಿಂದಷ್ಟೇ.. ನನ್ನೊಡನೆ ಸಿ ಎನ್ ಎನ್ ನಲ್ಲಿದ್ದ ಕೆನ್ಯಾದ ಮಾರ್ಕ್ ‘ಬರ್ತೀಯಾ ನನ್ನ ಜೊತೆ’ ಎಂದ. ‘ಎಲ್ಲಿಗೆ’ ಎಂದೆ ‘ಅಲಬಾಮಾ’ಅಂದ.
ಅಲಬಾಮಾ…. ತಕ್ಷಣ ನನ್ನ ಕಿವಿ, ಬುದ್ದಿ ಎರಡೂ ಚುರುಕಾದವು. ಮತ್ತೆ ಅದೇ ಪುಟ್ಟ ಹುಡುಗಿಯ ಜೊತೆ ಮಾಡಿದ ಹೋಮ್ ವರ್ಕ್ ನೆನಪಿಗೆ ಬಂತು.
ಅಲಬಾಮಾ-ಅಲ್ಲಿಯೇ ಆ ಘಟನೆ ನಡೆದದ್ದು. ರೋಸಾ ಬಸ್ ನಲ್ಲಿ ‘ಜಗ್ಗದೆಯೆ, ಕುಗ್ಗದೆಯೆ’ ಕುಳಿತದ್ದು.
ಸರಿ ಎಂದು ನಾನು ಅವನ ಜೊತೆಯಾಗಿ ನಡೆದೆ. ಟ್ರೇನ್ ಹಿಡಿಯಲು ಸ್ಟೇಷನ್ ತಲುಪಿದೆವು. ಒಳಗೆ ಹೋಗಬೇಕು ಎನ್ನುವಾಗ ನನ್ನಮುಖ ಅವನೂ, ಅವನ ಮುಖ ನಾನೂ ಇಬ್ಬರೂ ನೋಡಿಕೊಂಡೆವು.
ಮನಸ್ಸುಗಳೇ ಮಾತಾಡಿಬಿಟ್ಟಿತ್ತು. ಯಾವ ಬಸ್ ಘಟನೆಯಿಂದಾಗಿ ಜಗತ್ತು ಎಚ್ಛೆತ್ತುಕೊಂಡಿತೋ, ಯಾವ ಬಸ್ ಘಟನೆಯಿಂದಾಗಿ ವರ್ಣಬೇಧದ ಬಗ್ಗೆ ಆಕ್ರೋಶ ಭುಗಿಲೆದ್ದಿತ್ತೋ, ಯಾವ ಬಸ್ ಘಟನೆಯಿಂದಾಗಿ ಮನಸ್ಸುಗಳು ನರಳಿ ಹೋಗಿದ್ದವೋ, ಯಾವ ಬಸ್ ಘಟನೆಯಿಂದಾಗಿ ಹೋರಾಟಗಳು ಅರಳಿ ನಿಂತವೋ.. ಅಂತಹ ಆ ಊರಿಗೆ ಟ್ರೇನ್ ನಲ್ಲಿ..!
‘ಉಹ್ಞೂ’ ಎಂದುಕೊಂಡವರೇ ನಾವಿಬ್ಬರೂ ಬಸ್ ಹತ್ತಿದೆವು
ಹಾಗೇ ಅನಿಸಿತೇನೋ ಆ ಒಬಾಮನಿಗೂ.. ಥೇಟ್ ನಮ್ಮಂತೆಯೇ.. ಅಧ್ಯಕ್ಷನಾದರೇನು, ತನ್ನದೇ ವಿಮಾನ ಇದ್ದರೇನು. ಆಳುಕಾಳು ಜೊತೆಗಿದ್ದರೇನು ಅಂತ ಒಂದು ದಿನ ಸೀದಾ ಹೆನ್ರಿ ಫೋರ್ಡ್ ಮ್ಯೂಸಿಯಂ ಬಾಗಿಲು ತಲುಪಿಕೊಂಡವರೇ ಅಲ್ಲಿ ಇರಿಸಿದ್ದ, ರೋಸಾ ಪಾರ್ಕ್ಸ್ ಸಂಚರಿಸಿದ್ದ ಅದೇ ಬಸ್ ಅನ್ನು ಹುಡುಕಿದರು. ಬಸ್ ಏರಿದವರೇ ಅದೇ ಸೀಟನ್ನು ಹುಡುಕಿದರು. ಅಲ್ಲಿ ಅದೇ ಸೀಟ್ ನಲ್ಲಿ ಕುಳಿತು ಹೊರ ಜಗತ್ತು ನೋಡಿದರು. ಬೆಳಕಿನ ಕಿರಣಗಳು ಅವರಿಗೂ ಕಂಡಿರಬೇಕು. ಎದ್ದು ನಡೆದರು..
ಇದು ಕುಳಿತ ಕಥೆ ಆಯಿತು.. ಆದರೆ ಅವರು ನಿಂತರು.
ಇಡೀ ಬಿಳಿಯ ಜಗತ್ತು ನುಂಗಿಹಾಕುವಂತೆ ನೋಡುತ್ತಿದ್ದಾಗಲೂ ಅವರು ನಿಂತೇ ನಿಂತರು. ಕಪ್ಪು ಬಿಳಿ ಎನ್ನುವ ನೀಚ ಮನಸ್ಸನ್ನು ಬಯಲಿಗಿಟ್ಟುಬಿಡಬೇಕು ಎಂದುಕೊಂಡವರೇ ಹಲ್ಲುಕಚ್ಚಿ ನಿಂತರು.
ಇದು ಆಗಿದ್ದು ಬಸ್ ನಲ್ಲಿ ಅಲ್ಲ, ಕ್ರೀಡಾಂಗಣದಲ್ಲಿ. ಅಂತಿಂತ ಕ್ರೀಡಾಂಗಣದಲ್ಲಿ ಅಲ್ಲ. ಒಲಂಪಿಕ್ಸ್ ನ ಕ್ರೀಡಾಂಗಣದಲ್ಲಿ
೧೯೬೮ ಮೆಕ್ಸಿಕೋದಲ್ಲಿ ಜರುಗಿದ ಒಲಂಪಿಕ್ಸ್ ಕ್ರೀಡಾಕೂಟ ಒಂದು ಇತಿಹಾಸಕ್ಕೆ ನಾಂದಿ ಹಾಡಿತು. ಒಲಂಪಿಕ್ಸ್ ನ ಇತರೆ ಎಲ್ಲಾ ಕ್ರೀಡಾಕೂಟಗಳದ್ದೇ ಒಂದು ತೂಕವಾದರೆ ಈ ಕ್ರೀಡಾಕೂಟದ್ದೇ ಇನ್ನೊಂದು ತೂಕ.
ಈ ಕ್ರೀಡಾಕೂಟ ಅಂದಿಗೂ ಇಂದಿಗೂ ‘ಬ್ಲಾಕ್ ಸಲ್ಯೂಟ್’ ಕ್ರೀಡಾ ಕೂಟ ಎಂದೇ ಹೆಸರುವಾಸಿ.
ಆ ಕೂಟದ ೨೦೦ ಮೀಟರ್ ಓಟದಲ್ಲಿ ಮೊದಲನೆಯ ಹಾಗೂ ಮೂರನೆಯ ಸ್ಥಾನ ಗೆದ್ದಿದ್ದು ಇಬ್ಬರು ಅಮೆರಿಕನ್ನರು. ಎರಡನೆಯ ಸ್ಥಾನ ಆಸ್ಟ್ರೇಲಿಯಾದ ಪಾಲು.
ಇನ್ನೇನು ಪದಕ ಸ್ವೀಕಾರಕ್ಕೆ ಕೊರಳು ಒಡ್ಡಲು ಹೋಗಬೇಕು ಆಗ ಅಮೆರಿಕಾದ ಕಪ್ಪು ವರ್ಣೀಯ ಇಬ್ಬರು ಆಟಗಾರರಿಗೂ ತಮ್ಮ ಬದುಕಿನ ನೋವಿನ ಗಾಥೆ ಬಿಚ್ಚಿಟ್ಟುಬಿಡಬೇಕು ಅನಿಸಿತು. ಇಬ್ಬರೂ ತೀರ್ಮಾನಿಸಿದರು. ರಾಷ್ಟ್ರಗೀತೆ ಮೊಳಗುವಾಗ ನಾವು ಕಪ್ಪು ಪಟ್ಟಿ ಧರಿಸಿ ತಲೆ ಬಾಗಿಸಿ ನಿಂತುಬಿಡಬೇಕು ಎಂದು.
ಇದು ಆಸ್ಟ್ರೇ ಲಿಯಾದ ಬಿಳಿಯ ಜನಾಂಗದ ಪೀಟರ್ ನಾರ್ಮನ್ ಗೂ ಗೊತ್ತಾಗಿ ಹೋಯಿತು. ಆತ ಹೇಳಿದ- ‘ಬರೀ ನೀವೇನು, ನಾನೂ ಹಾಗೆ ಮಾಡಲು ಸಿದ್ಧ’. ಕಪ್ಪು ಜನಾಂಗದ ಆ ಇಬ್ಬರಲ್ಲೂ ಸಂತೋಷದ ಕಣ್ಣೀರು.
ಪದಕ ಸಮಾರಂಭಕ್ಕೆ ವೇದಿಕೆ ಸಜ್ಜಾಯಿತು. ಮೊದಲ ಸ್ಥಾನ ಪಡೆದಿದ್ದ ಟಾಮಿ ಸ್ಮಿಥ್ ಕಪ್ಪು ಗ್ಲೋವ್ ಹಾಕಿದ್ದ ಬಲಗೈ ಎತ್ತಿ ಹಿಡಿದ. ಮೂರನೆಯ ಸ್ಥಾನ ಪಡೆದ ಜಾನ್ ಕಾರ್ಲೋಸ್ ಕಪ್ಪು ಪಟ್ಟಿ ಹಾಕಿದ್ದ ಎಡಗೈ ಎತ್ತಿ ಹಿಡಿದ.
ಎರಡನೆಯ ಸ್ಥಾನ ಪಡೆದಿದ್ದ ಬಿಳಿಯ ಪೀಟರ್ ನಾರ್ಮನ್ ಎದೆಗೆ ಪ್ರತಿಭಟನೆಯ ಪದಕ ಸಿಕ್ಕಿಸಿಕೊಂಡಿದ್ದ. ಪದಕ ನೀಡಲು ಹೋದ ಗಣ್ಯರಿರಲಿ, ಇಡೀ ಒಲಂಪಿಕ್ ಕ್ರೀಡಾಂಗಣ ಬೆಚ್ಚಿ ಬಿತ್ತು.
ಇಡೀ ಕ್ರೀಡಾಂಗಣವಿರಲಿ ದೇಶಕ್ಕೆ ದೇಶವೇ ಬೆಚ್ಚಿಬಿತ್ತು. ಇಡೀ ದೇಶವಿರಲಿ ಜಗತ್ತೇ ನಿಬ್ಬೆರಗಾಗಿ ನಿಂತಿತು.
ಅಮೆರಿಕಾದಲ್ಲಿ ಜನಾಂಗ ನಿಂದನೆ, ತಾರತಮ್ಯ ಮಿತಿ ಮೀರಿತ್ತು. ಈಗಲ್ಲದೆ ಯಾವಾಗ? ಎಂದು ನಿರ್ಧರಿಸಿದ ಅಮೆರಿಕಾದ ಕ್ರೀಡಾಳುಗಳಿಗೆ ಇದೇ ಸಮಯ ಜಗತ್ತು ತಮ್ಮ ನೋವು ಕೇಳಲು ಅನಿಸಿತು.
ಆದರೆ ಹಾಗೆ ನಿರ್ಧಾರ ಮಾಡುವಾಗ ಅವರ ಬಳಿ ಇದ್ದದ್ದು ಒಂದೇ ಜೊತೆ ಕೈಗವುಸು. ಹಾಗಾಗಿ ಅದನ್ನೇ ಇಬ್ಬರೂ ಹಂಚಿಕೊಂಡರು.
ಹಾಗಾಗಿಯೇ ಇಬ್ಬರೂ ಬಲಗೈ ಎತ್ತಿ ಹಿಡಿಯಲು ಆಗಲಿಲ್ಲ. ಮೂರನೆಯ ಕ್ರೀಡಾಳುವಿಗೆ ಕೈ ಗವುಸು ಇಲ್ಲದ ಕಾರಣ ಆತ ಕೈ ಎತ್ತಲು ಆಗಲಿಲ್ಲ. ಆದರೆ ಪ್ರತಿಭಟನೆಯ ಪದಕ ಹೊತ್ತಿದ್ದ.
ಈ ಮೂವರೂ ಕ್ರೀಡಾಂಗಣದಿಂದ ಹೊರ ಬರುತ್ತಿದ್ದಂತೆಯೇ ಬಿಳಿ ಜಗತ್ತು ಅವರ ವಿರುದ್ಧ ಮುಗಿಬಿದ್ದಿತು. ಇನ್ನೆಂದೂ ಒಲಂಪಿಕ್ ಬೆಳಕು ಕಾಣಲಿಲ್ಲ. ಅವರ ಕ್ರೀಡಾ ಬದುಕನ್ನು ಹೊಸಕಿಹಾಕಲಾಯಿತು.
ಟಾಮಿ ಸ್ಮಿಥ್ ಹೇಳಿದ- ನಾವು ಪದಕ ಗೆದ್ದರೆ ಅಮೇರಿಕನ್, ಅಲ್ಲದೆ ಹೋದರೆ ಕಪ್ಪು ಅಮೇರಿಕನ್ ಇದ್ಯಾವ ನ್ಯಾಯ?. ಜಗತ್ತು ಮತ್ತೆ ವರ್ಣಭೇದವನ್ನು ಚರ್ಚೆಗೆತ್ತಿಕೊಂಡಿತು. ನೋಡನೋಡುತ್ತಿದ್ದಂತೆಯೇ ಹಲವು ದೇಶಗಳು ಈ ಕ್ರೀಡಾಳುಗಳ ಬೆನ್ನಿಗೆ ನಿಂತರು.
ಇದೆಲ್ಲಾ ನೆನಪಾಗಿದ್ದು ಯಾಕೆಂದರೆ –
—–
ಇಂದು ಅಮೆರಿಕಾದಲ್ಲಿ ಪುಟ್ಟ ಮಗಳ ಎದುರೇ ಕಪ್ಪು ಜನಾಂಗದ ಪ್ಲಾಯ್ಡ್ ನನ್ನು ಬಿಳಿಯ ಪೊಲೀಸ್ ಅಧಿಕಾರಿ ಉಸಿರುಗಟ್ಟಿಸಿ ಕೊಂದಿದ್ದಾನೆ. ಕುತ್ತಿಗೆಯ ಮೇಲೆ ಮೊಣಕಾಲಿನಿಂದ ಒತ್ತಿ ಆತ ಉಸಿರಿಗಾಗಿ ಗೋಗರೆಯುತ್ತಿದ್ದರೂ ಕೊಂದು ಹಾಕಿದ್ದಾನೆ.
ಇಡೀ ಅಮೆರಿಕಾ ಈ ನೀಚ ಘಟನೆಯ ವಿರುದ್ಧ ಎದ್ದು ನಿಂತಿದೆ. ಅಮೆರಿಕಾ ದಾಟಿ ಈ ಪ್ರತಿಭಟನೆ ಎಲ್ಲಾ ದೇಶಗಳಲ್ಲೂ ಕಾವು ಪಡೆದುಕೊಳ್ಳುತ್ತಿದೆ.
ಅತ್ಯಂತ ನೋವಿನಿಂದ ಈ ಲೇಖನವನ್ನು ನಿಮ್ಮ ಮುಂದಿಡುತ್ತಿದ್ದೇನೆ.