ಜಿ.ಎನ್. ಮೋಹನ್ ಕ್ವಾರಂಟೈನ್ ಮೆಲುಕು: ಕಾಫಿ ಕಪ್ಪಿನೊಳಗೆ ಕೊಲಂಬಸ್..

ಕಾಫಿ ಕಪ್ಪಿನೊಳಗೆ ಕೊಲಂಬಸ್..
ಆ ಹಡಗು ಸಮುದ್ರದ ಮಧ್ಯೆ ದಾರಿ ಮಾಡಿಕೊಳ್ಳುತ್ತಾ ಹೊರಟದ್ದೇ ತಡ ಜಗತ್ತು ಎಂದಿನ ಜಗತ್ತಾಗಿ ಉಳಿಯಲಿಲ್ಲ.
ಆ ಹಡಗು ಸೂರ್ಯನ ಗುರುತನ್ನು ಆಧಾರವಾಗಿಟ್ಟುಕೊಂಡು ತನ್ನ ಪಯಣ ಆರಂಭಿಸಿದ್ದೆ ತಡ ಸಾವು ತನ್ನ ಕಾಲ ಬುಡದಲ್ಲಿ ಬಿದ್ದಿದೆ ಎನ್ನುವುದು ಅನೇಕರಿಗೆ ತಿಳಿದಿರಲಿಲ್ಲ.
ಆ ಹಡಗು ಜಗತ್ತು ಚಪ್ಪಟೆಯಾಗಿದೆ ಎನ್ನುವುದನ್ನು ಸುಳ್ಳು ಮಾಡುತ್ತೇನೆ ಎಂದು ಹೊರಟಾಗ ಅದು ಸಾವಿರಾರು ಹೊಸ ಸುಳ್ಳುಗಳಿಗೆ ದಾರಿಯಾಗುತ್ತದೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ.
ಆ ಹಡಗು ಮೂರು ವರ್ಷಗಳಿಗಾಗುವಷ್ಟು ಆಹಾರವನ್ನು ಹೊತ್ತು ಹೊರಟಾಗ ಅದು ಜಗತ್ತಿನ ಅನ್ನವನ್ನು, ಅವಕಾಶವನ್ನು, ಭವಿಷ್ಯವನ್ನು ಕಸಿಯುತ್ತದೆ ಎಂದು ಯಾರೆಂದರೆ ಯಾರಿಗೂ ಗೊತ್ತಿರಲಿಲ್ಲ.
ಆತ- ಕೊಲಂಬಸ್.
ಸ್ಪೇನ್ ನ ರಾಣಿ ಇಸಾಬೆಲ್ಲಾಳ ಬೆಂಬಲವನ್ನು ಬಗಲಲ್ಲಿಟ್ಟುಕೊಂಡು 1492 ಅಕ್ಟೋಬರ್ 12 ರಂದು ಆತ ಸಂಚಾರ ಹೊರಟದ್ದೇ ತಡ ಜಗತ್ತಿನ ಚರಿತ್ರೆಯ ಪುಟಗಳು ಮಗ್ಗುಲು ಬದಲಿಸಿಕೊಂಡವು.
ಯಾಕೋ ಕಳೆದ ಹಲವು ದಿನಗಳಿಂದ ನನಗೆ ಕೊಲಂಬಸ್ ಬಿಟ್ಟೂ ಬಿಡದೆ ಕಾಡುತ್ತಿದ್ದಾನೆ. ನಿಂತರೂ ಕುಂತರೂ ಕೊಲಂಬಸ್ ನದ್ದೇ ಗುಂಗು.
ಹಾಗಾಗಲು ಕಾರಣವಾದದ್ದು ನಾನು ಕುಡಿಯಲು ಹೊರಟಿದ್ದ ಒಂದು ಕಪ್ ಕಾಫಿ ಎಂದರೆ ನೀವು ನಂಬಬೇಕು.
ಆ ಒಂದು ಪುಟ್ಟ ಕಾಫಿ ಕಪ್ ನನಗೆ ಭೂಗೋಳವನ್ನೂ ಚರಿತ್ರೆಯನ್ನೂ ಕಲಿಸಿಬಿಟ್ಟಿತು.
ಕ್ಯೂಬಾದಲ್ಲಿದ್ದೆ. ಕಾಫಿ ಹುಚ್ಚಿಗೆ ಬಿದ್ದು ಒಲ್ಲದ ಮನಸ್ಸಿನಿಂದ ಸಾಕಷ್ಟು ಡಾಲರ್ ಖರ್ಚು ಮಾಡಿ ಕಾಫಿಗೆ ಆರ್ಡರ್ ಮಾಡಿದೆ.
ಕಾಫಿ ಕೊಡುತ್ತಿದ್ದವ ‘ಕಾಫಿಗೆ ಹಾಲು ಸೇರಿಸಬೇಕೆ?’ ಎಂದು ಕೇಳಿದ. ‘ಎಸ್, ಕಾಫಿ ವಿಥ್ ಮಿಲ್ಕ್ ಪ್ಲೀಸ್’ ಅಂದೆ.
ಅಂದದಷ್ಟೇ, ಪಕ್ಕದಲ್ಲಿದ್ದಾಕೆ ನನ್ನನ್ನು ನನಗೆ ಗೊತ್ತಿಲ್ಲದ ಭಾಷೆಯಲ್ಲಿ ಹಿಗ್ಗಾಮುಗ್ಗಾ ಬೆಂಡೆತ್ತಲು ಆರಂಭಿಸಿದಳು.
ಯಾಕೆ ಹೀಗೆ? ಎಂದು ಕಳವಳಕ್ಕೆ ಬಿದ್ದಿದ್ದವನನ್ನು ಅಂಗಡಿಯಾತ ‘ನೀವು ಕಾಫಿಗೆ ಹಾಲು ಹಾಕಿಸಿಕೊಂಡಿರಲ್ಲಾ ಅದಕ್ಕೆ. ಕಾಫಿಗೆ ಹಾಲು ಹಾಕಿಸಿಕೊಳ್ಳುವವರು ಹೆಚ್ಚಾಗಿ ಬ್ರಿಟಿಷರು ಮಾತ್ರ. ಉಳಿದ ಕಡೆ ಕಾಫಿ ಎಂದರೆ ಕಾಫಿ ಮಾತ್ರ’ ಅಂದ.
ಕಾಫಿಗೆ ಹಾಲು ಹಾಕಿಸಿಕೊಂಡದ್ದೇ ತಡ ಆಕೆಯ ಹೊಟ್ಟೆಯಲ್ಲಿದ್ದ ಬ್ರಿಟಿಷರ ವಿರುಧ್ಧದ ಸಿಟ್ಟೆಲ್ಲಾ ಹೊರಬಂದಿತ್ತು.
ನಾನು ಹಿಡಿದಿದ್ದ ಕಾಫಿಯ ಕಪ್ ಆಗ ನನಗೆ ಕಾಫಿಯ ಕಪ್ ಆಗಿ ಮಾತ್ರ ಉಳಿದಿರಲಿಲ್ಲ ನನಗೆ ಚರಿತ್ರೆ ಭೂಗೋಳ ಕಲಿಸಿದ ಎಲ್ಲವೂ ಆಗಿಹೋಗಿತ್ತು. ನನ್ನ ಕಾಫಿ ಕಪ್ಪಿನೊಳಗೆ ಆ ಕ್ಷಣ ನೀವು ಇಣುಕಿದ್ದರೆ ದೊಡ್ಡ ಬಿರುಗಾಳಿಯನ್ನೇ ಕಾಣಬಹುದಾಗಿತ್ತು.
ಇದಾಗಿ ವರುಷಗಳು ಉರುಳಿ ಹೋಗಿದೆ. ಆದರೆ ಅಂದಿನಿಂದ ಇಂದಿನವರೆಗೆ ನನಗೆ ಚರಿತ್ರೆಯ ಪಾಠ ನಡೆಯುತ್ತಲೇ ಇದೆ.
ಕಾಫಿಯೊಳಗಿನ ಹಾಲು ನನಗೆ ಹೊಸ ಚರಿತ್ರೆ ಕಲಿಸಿದ ದಿನದಿಂದ ನಾನು ಚರಿತ್ರೆಯ ಪುಟಗಳನ್ನು ಎಚ್ಚರಿಕೆಯಿಂದ ಓದುತ್ತಾ ಬಂದಿದ್ದೇನೆ. ಚರಿತ್ರೆಯ ಪುಟಗಳ ನಡುವೆ ಆಡದೆ ಬಿಟ್ಟಿರುವ ಮಾತುಗಳನ್ನು ಓದುತ್ತಾ ಬರುತ್ತಿದ್ದೇನೆ. ಚರಿತ್ರೆಯ ಪುಟಗಳು ಹೇಳದೆ ಬಿಟ್ಟಿದ್ದನ್ನು ಹೆಕ್ಕಿ ನೋಡುತ್ತಿದ್ದೇನೆ.
ಹಾಗೆ ಹುಡುಕುವಾಗಲೇ ನನಗೆ ಸಿಕ್ಕಿದ್ದು ಈ ಕೊಲಂಬಸ್.
ಕೆಲವೇ ವಾರಗಳ ಹಿಂದೆ ಅಮೇರಿಕಾದಲ್ಲೂ ಈ ಚರಿತ್ರೆಯ ಗುಳ್ಳೆಗಳು ಒಡೆದು ಹೋಗಿದ್ದವು.
‘ಸ್ಯಾಂಡಿ’ಗೂ ಮುನ್ನವೇ ಇನ್ನೊಂದು ಚಂಡಮಾರುತ ಎದ್ದು ಬಂದಿತ್ತು. ಅದು ಚರಿತ್ರೆಯ ಪುಟಗಳಲ್ಲಿ ಎದ್ದ ಚಂಡಮಾರುತ.
ಕೊಲಂಬಸ್ ದಿನಾಚರಣೆಯನ್ನು ಸರ್ಕಾರ ರದ್ದು ಮಾಡಬೇಕು, ಘೋಷಿಸಿರುವ ಸರ್ಕಾರಿ ರಜವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು, ಕೈಯಲ್ಲಿ ರಕ್ತ ಮೆತ್ತಿದ ವ್ಯಕ್ತಿಯನ್ನು ದೇಶದ ದೊಡ್ಡ ಮನುಷ್ಯ ಎಂದು ಬಿಂಬಿಸುವುದೇಕೆ? ಎನ್ನುವ ಕೂಗೆದ್ದಿತ್ತು.
ಈ ಕೂಗನ್ನು ಎತ್ತಿದವರು ಅಮೆರಿಕಾದ ಮೂಲನಿವಾಸಿಗಳು, ಚರಿತ್ರಕಾರರು ಹಾಗೂ ನನ್ನಂತೆಯೇ ಕಾಫಿ ಕುಡಿದಿದ್ದ ಹಲವಾರು ಮಂದಿ.
‘ಒಂದು ಪ್ರಶ್ನೆ ಕೇಳುತ್ತೇವೆ. ಜರ್ಮನಿಯ ಯಹೂದಿಗಳ ಓಣಿಯಲ್ಲಿ ಹಿಟ್ಲರ್ ನ ಗುಣಗಾನ ಮಾಡುವ, ಆರಾಧಿಸುವ ಮೆರವಣಿಗೆ ನಡೆದರೆ ಹೇಗಿರುತ್ತದೆ ಎಂಬುದನ್ನು ಊಹಿಸಿಕೊಳ್ಳಿ. ಇದು ಸಾಧ್ಯವೇ? ಹಾಗಾಗಲು ಸಾಧ್ಯವಿಲ್ಲ ಎನ್ನುವುದಾದರೆ ಅಮೆರಿಕಾದ ಪಾಲಿಗೆ ಹಿಟ್ಲರ್ ಆದ ಕೊಲಂಬಸ್ ನನ್ನು ಹೇಗೆ ಆರಾಧಿಸುತ್ತೀರಿ? ಎಂದು ಸಾರ್ವಜನಿಕ ಹೇಳಿಕೆಗಳು ಬಿಡುಗಡೆಯಾದವು.
ಕರಪತ್ರಗಳು ಹಂಚಿಕೆಯಾದವು. ಕೊಲಂಬಸ್ ನ ಪ್ರತಿಮೆಯ ಮೇಲೆ ರಕ್ತದ ಸಂಕೇತವಾಗಿ ಕೆಂಪು ಬಣ್ಣವನ್ನು ಎರಚಲಾಯಿತು.
ಈ ಆಕ್ರೋಶಕ್ಕೆ ಕಾರಣವಿದೆ.
ಇಟಲಿಯ ಮೂಲದ ಕೊಲಂಬಸ್ ಭಾರತದಲ್ಲಿದ್ದ ಸಂಬಾರ ಪದಾರ್ಥ, ರೇಷ್ಮೆ ಹಾಗೂ ಧನ ಕನಕದ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿದ್ದ. ಹಾಗಾಗಿ ಸಮುದ್ರ ಮಾರ್ಗವಾಗಿ ಹೋಗಿ ಭಾರತದಿಂದ ಅಮೂಲ್ಯವಾದ ಎಲ್ಲವನ್ನೂ ಹೊತ್ತುಕೊಂಡು ಬರುವ ಬಗ್ಗೆ ಸ್ಪೇನ್ ನ ರಾಣಿ ಇಸಾಬೆಲ್ಲಾಳ ಮನ ಒಲಿಸಿದ.
ಆಗ ಸಾಗರ ಮಾರ್ಗಗಳೇ ಒಂದು ದೇಶದ ಭವಿಷ್ಯವನ್ನು ಬದಲಿಸಿ ಹಾಕುವ ಮಾರ್ಗಗಳಾಗಿದ್ದವು. ಹೊಸ ದಾರಿ ಹುಡುಕುವುದು ಎನ್ನುವುದು ಹೊಸ ಸಂಪತ್ತನ್ನು ದೋಚುವುದು ಎನ್ನುವ ಅರ್ಥವನ್ನೇ ಪಡೆದಿತ್ತು.
ಹಾಗೆ ಭಾರತ ಮುಟ್ಟುವ ಆಸೆಯಿಂದ ಹೊರಟ ಕೊಲಂಬಸ್ ಲೆಕ್ಕಾಚಾರ ತಪ್ಪಿತ್ತು.
ಆತ ಭೂಮಿಯ ವಿಸ್ತಾರವನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ. ಸಾಗರದಲ್ಲಿನ ಮೈಲುಗಳ ಅಂದಾಜು ತಪ್ಪಿದ್ದ. ಹಾಗಾಗಿ ಆತ ಹೋಗಿ ಮುಟ್ಟಿದ ನೆಲವನ್ನೇ ಭಾರತ ಎಂದುಕೊಂಡ.
ಹಾಗೆ ಆತ ಕಾಲಿಟ್ಟದ್ದು ವೆಸ್ಟ್ ಇಂಡೀಸ್, ಕ್ಯೂಬಾ, ಅಮೇರಿಕಾ ಹೀಗೆ..
ಚರಿತ್ರೆಯ ಪುಸ್ತಕ ಬರೆದವರು ‘ಕೊಲಂಬಸ್ ಅಮೆರಿಕಾವನ್ನು ಕಂಡುಹಿಡಿದ’ ಎಂದು ಬರೆದು ಕೈ ತೊಳೆದುಕೊಂಡರು.
ಆಗಲೇ ಫಿಡೆಲ್ ಕ್ಯಾಸ್ಟ್ರೋ ಗುಡುಗಿದ್ದು- ವೆಸ್ಟ್ ಇಂಡೀಸ್, ಕ್ಯೂಬಾ ಆ ಮೂಲಕ ಅಮೆರಿಕಾವನ್ನು ಕೊಲಂಬಸ್ ಕಂಡುಹಿಡಿದ 500ನೆ ವರ್ಷಾಚರಣೆಯನ್ನು ಅದ್ಧೂರಿಯಿಂದ ಆಚರಿಸಲು ಸ್ಪೇನ್ ಸಜಾಗುತ್ತಿದ್ದಾಗ ಕ್ಯಾಸ್ಟ್ರೋ ಅಪಸ್ವರ ಎತ್ತಿದರು.
‘ಯಾವುದೇ ಒಂದು ದೇಶವನ್ನು ಕಂಡು ಹಿಡಿಯುವುದು ಎಂದರೇನು?’ ಎಂದು ಪ್ರಶ್ನಿಸಿದರು.
‘ಕೊಲಂಬಸ್ ಇಲ್ಲಿಗೆ ಕಾಲಿಟ್ಟಿರಬಹುದು ಅಷ್ಟೇ, ಆದರೆ ಆತ ಕಂಡು ಹಿಡಿಯಲು ಹೇಗೆ ಸಾಧ್ಯ?’ ಏಂಬ ಪ್ರಶ್ನೆ ಎತ್ತಿದರು.
ಇದೇ ಪ್ರಶ್ನೆಯನ್ನು ಈಗ ಅನೇಕ ಅಮೆರಿಕನ್ನರೂ ಕೇಳುತ್ತಿದ್ದಾರೆ.
ಅಕ್ಟೋಬರ್ 12 ಬಂತೆಂದರೆ ಸಾಕು ಅಮೇರಿಕಾ ಕೊಲಂಬಸ್ ಪರ ವಿರೋಧದ ಹೊಸ ಚರ್ಚೆಗೆ ಕಾರಣವಾಗುತ್ತದೆ.
ಅಮೆರಿಕಾದಲ್ಲಿ ನೆಲಸಿರುವ ಇಟಲಿ, ಸ್ಪೇನ್ ನವರಿಗೆ ತಾವು ಅಮೆರಿಕಾವನ್ನು ಕಂಡು ಹಿಡಿದೆವು ಎನ್ನುವ ಹೆಮ್ಮೆಯಾದರೆ ಅಮೆರಿಕಾದ ಹಲವು ಮೂಲ ನಿವಾಸಿಗಳಿಗೆ ಇದು ತಮ್ಮನ್ನು ಹೊಸಕಿ ಹಾಕಿದ ನೋವಿನ ಘಟನೆಯಾಗಿ ಕಾಣುತ್ತದೆ.
ಕೊಲಂಬಸ್ ಅಮೆರಿಕಾದಲ್ಲಿ ಕಾಲಿಡುವ ಮುಂಚೆಯೇ 145 ದಶಲಕ್ಷ ಮಂದಿ ಇದ್ದರು. 565 ಬುಡಕಟ್ಟುಗಳು ಇದ್ದವು. ಇಲ್ಲಿನ ಮೂಲನಿವಾಸಿಗಳನ್ನು ಕತ್ತರಿಸಿದ, ಹೊಸಕಿ ಹಾಕಿದ ಅವರನ್ನು ಲೂಟಿ ಮಾಡಿದ, ಅಮೆರಿಕಾದ ಸಂಪನ್ಮೂಲವನ್ನು ಕೊಳ್ಳೆ ಹೊಡೆದ ಬಗ್ಗೆ ಸಂಶೋಧಕರು. ಚರಿತ್ರಕಾರರು ಪುರಾವೆ ನೀಡುತ್ತಲೇ ಬಂದಿದ್ದಾರೆ.
ಸಿಡುಬಿನ ರೋಗಾಣುಗಳನ್ನು ಹೊತ್ತ ಕಂಬಳಿಗಳನ್ನು ಮೂಲನಿವಾಸಿಗಳಿಗೆ ನೀಡಿ ರೋಗ ಹರಡುವಂತೆ ಮಾಡಿದ್ದು. ಬೇಟೆ ಆಡಬೇಕು ಎಂದು ಆಸೆಯಾದಾಗ ಮನುಷ್ಯರನ್ನೇ ಅಟ್ಟಾಡಿಸಿ ಗುಂಡು ಹಾರಿಸಿ ಕೊಂದದ್ದು, ಹಾಗೆ ಸತ್ತವರನ್ನು ತನ್ನ ಬೇಟೆ ನಾಯಿಗಳಿಗೆ ಆಹಾರವಾಗಿ ನೀಡಿದ್ದು, ಲಕ್ಷಾಂತರ ಜನರನ್ನು ಗುಲಾಮರನ್ನಾಗಿಸಿಕೊಂಡು ವಿವಿಧ ದೇಶಗಳಿಗೆ ಹೊತ್ತೊಯ್ದದ್ದು, ಮಕ್ಕಳು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದು ಎಲ್ಲವೂ ಚರಿತ್ರೆಯ ಪುಟಗಳಲ್ಲಿ ಏಕಿಲ್ಲ ಎನ್ನುವ ಪ್ರಶ್ನೆ ಎದ್ದಿದೆ.
ಈ ಕೊಲಂಬಸ್ ವಿವಾದದ ನೆರಳು ಭಾರತವನ್ನೂ ಬಿಟ್ಟಿಲ್ಲ.
ಕೊಲಂಬಿಯನ್ನರಿಗಿಂತ ಮುಂಚೆ ಭಾರತ ತಲುಪಿಬಿಡಬೇಕು ಎಂದುಕೊಂಡ ಕೊಲಂಬಸ್ ಎಲ್ಲೆಲ್ಲಿಗೋ ಹೋಗಿ ಮುಟ್ಟಿದ. ಆದರೆ ಅವನೊಬ್ಬನಿದ್ದ ವಾಸ್ಕೋ ಡ ಗಾಮ.
ಪೋರ್ಚುಗಲ್ಲಿನಿಂದ ಹೊರಟ ಆತ ಕೇರಳ, ಗೋವಾಗೆ ಕಾಲಿಟ್ಟ. ವಾಸ್ಕೋ ಡ ಗಾಮ ಭೇಟಿ ಕೊಟ್ಟ 500ನೆಯ ವರ್ಷಾಚರಣೆಗೆ ಭಾರತ ಸಜ್ಜಾಗುತ್ತಿರುವಾಗ ಇಲ್ಲಿಯೂ ಕೊಲಂಬಸ್ ಅಮೆರಿಕಾವನ್ನು ಕಂಡು ಹಿಡಿದ ಘಟನೆ ನೆನಪಾಯಿತು.
‘ವಾಸ್ಕೋ ಡ ಗಾಮ ಭಾರತವನ್ನು ಕಂಡು ಹಿಡಿಯಲು ಹೇಗೆ ಸಾಧ್ಯ? ಆತ ಬಂದ ಕಾರಣದಿಂದಾಗಿಯೇ ಭಾರತ ಶತಮಾನಗಳ ದಾಸ್ಯಕ್ಕೆ ಒಳಗಾಗಬೇಕಾಯಿತು. ಆಚರಣೆ ಕೈಬಿಡಿ’ ಎಂದು ಕೇರಳ, ಗೋವಾದಲ್ಲಿ ಪ್ರತಿಭಟನೆಯ ಅಲೆ ಎದ್ದಿತು.
‘ಆತ ಇಲ್ಲಿಗೆ ಬಂದಿದ್ದ, ಅದು ವ್ಯಾಪಾರದ ಹೊಸ ನಡೆಗೆ ದಾರಿಯಾಯಿತು ಎನ್ನುವುದಷ್ಟನ್ನು ಮಾತ್ರವೇ ಸರ್ಕಾರ ಗುರುತಿಸಲು ಇಷ್ಟಪಡುತ್ತದೆ’ ಎಂದು ಸರ್ಕಾರವೇ ಖುದ್ದು ಹೇಳಿಕೆ ನೀಡಬೇಕಾಯಿತು.
ಅಷ್ಟರಮಟ್ಟಿಗಾದರೂ ಕೊಲಂಬಸ್ ನನ್ನು ಸೀಮಿತಗೊಳಿಸಲು ಅಮೇರಿಕಾ ಸರ್ಕಾರಕ್ಕೆ ಸಾಧ್ಯವಾಗಿಲ್ಲ.
ಚರಿತ್ರೆ ಎನ್ನುವುದು ಅಂಕಿ ಅಂಶ, ಎದ್ದ ರಾಜರು, ಬಿದ್ದ ಸಾಮ್ರಾಜ್ಯಗಳ ಲೆಕ್ಕವಲ್ಲ ಎನ್ನುವುದು ಗೊತ್ತಾಗಲು ಇನ್ನೂ ಸಾಕಷ್ಟು ವಾದ ವಿವಾದಗಳು ನಡೆಯಬೇಕಿದೆ.
ಈ ಮಧ್ಯೆಯೇ ಅಮೆರಿಕಾದ ಹೆಸರಾಂತ ಸಮಾಜಶಾಸ್ತ್ರಜ್ಞ ಜೇಮ್ಸ್ ಲೋವೆನ್ ಅಮೆರಿಕಾದ ಶಾಲೆಗಳು ಕಲಿಸುತ್ತಿರುವ ಅಷ್ಟೂ ಚರಿತ್ರೆಯ ಪುಟಗಳನ್ನೂ ತಿರುವು ಹಾಕಿದರು.
ವಿಸ್ತಾರ ಅಧ್ಯಯನ ನಡೆಸಿ ‘ನನ್ನ ಅಧ್ಯಾಪಕರು ನನಗೆ ಹೇಳಿದ ಸುಳ್ಳುಗಳು’ (Lies My Teacher Told Me) ಎನ್ನುವ ಪುಸ್ತಕ ಹೊರತಂದರು.
ಆ ಸರಣಿಯಲ್ಲಿ ಈಗ ‘ನನ್ನ ಅಧ್ಯಾಪಕರು ನನಗೆ ಕ್ರಿಸ್ತೋಫರ್ ಕೊಲಂಬಸ್ ಬಗ್ಗೆ ಹೇಳಿದ ಸುಳ್ಳೇನು? ಎನ್ನುವ ಪುಸ್ತಕ ಹೊರಬಂದಿದೆ.
ಅಲ್ಲಿ ಅವರು ಪುಸ್ತಕಗಳ ಪುಟಗಳಲ್ಲಿ ಚರಿತ್ರೆಯ ಶವ ಪರೀಕ್ಷೆ ನಡೆಸುತ್ತಿದ್ದಾರೆ ಇಲ್ಲಿ ನಾನು ಕೈನಲ್ಲಿ ಕಾಫಿ ಕಪ್ ಹಿಡಿದು ಕುಳಿತಿದ್ದೇನೆ.
—–
ಅಮೆರಿಕಾದಲ್ಲಿ Black Lives Matters ಚಳವಳಿಯ ಅಂಗವಾಗಿ ಪ್ರತೀ ದಿನ ಕೊಲಂಬಸ್ ನ ಪ್ರತಿಮೆಗಳನ್ನು ಒಡೆದು ಉರುಳಿಸುತ್ತಿದ್ದಾರೆ.
ಏಕೆ ಎಂದು ಆಶ್ಚರ್ಯಚಕಿತರಾಗಿ ಅನೇಕರು ನನ್ನನ್ನು ಕೇಳಿದರು. ಆ ಹಿನ್ನೆಲೆಯಲ್ಲಿ ನನ್ನ ಈ ಲೇಖನ.

‘ಕಾಫಿ ಕಪ್ಪಿನೊಳಗೆ ಕೊಲಂಬಸ್’ ಕೃತಿಯನ್ನು ‘ಅಭಿನವ ಪ್ರಕಾಶನ’ ಪ್ರಕಟಿಸಿದೆ.
ಪ್ರತಿಗಳಿಗಾಗಿ- 94488 04905