ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ‘ವಿ ಶಲ್ ಓವರ್ ಕಮ್’

‘ವಿ ಶಲ್ ಓವರ್ ಕಮ್’
—-
‘ಇಲ್ಲ ಅದು ನನಗೆ ಸಿಗುವವರೆಗೆ ನಾನಿಲ್ಲಿಂದ ಕದಲುವುದೇ ಇಲ್ಲ’ ಎಂದು ರಚ್ಚೆಹಿಡಿದು ಕೂತುಬಿಟ್ಟಿದ್ದೆ.

ಸದಾ ನಿದ್ರೆಯ ಸ್ಥಿತಿಯಲ್ಲಿರುವ ಅಟ್ಲಾಂಟಾದಿಂದ ಮಾರು ದೂರದಲ್ಲಿರುವ, ನೂರಾರು ಎಕರೆ ವಿಸ್ತಾರದಲ್ಲಿ ಹರಡಿಕೊಂಡಿದ್ದ ಬೃಹತ್ ಮಾಲ್ ನಿಂದ ನಾನು ಕಾಲು ತೆಗೆಯಲು ಸಿದ್ಧವೇ ಇರಲಿಲ್ಲ.

ಜಪಾನಿನ ಮೆಗ್, ರುಮೇನಿಯಾದ ಕ್ರಿಸ್ಟಿ, ಜೆಕ್ ನ ಮೆರೆಕ್, ಸ್ಲೊವೇನಿಯಾದ ಪೋಲಾಂಕಾ, ಆಸ್ಟ್ರೇಲಿಯಾದ ಗೆರ್ದಾ, ದಕ್ಷಿಣ ಆಪ್ರಿಕಾದ ಶಬಲಾಲ, ಇರಾನ್ ನ ಹಮೀದ್, ಕೆನ್ಯಾದ ಏಂಜೆಲೋ ಎಲ್ಲರೂ ನನ್ನನ್ನು ಸುತ್ತುವರಿದಿದ್ದರು.

ನಾನೋ ಮಿಠಾಯಿಗೆ ಹಠ ಹಿಡಿದು ಕೂತ ಮಗುವಿನಂತೆ ಕೂತುಬಿಟ್ಟಿದ್ದೆ…

ಆ ವೇಳೆಗೆ ನಾನು ಬೆಂಗಳೂರಿನ ಎಲ್ಲಾ ಅಂಗಡಿಗಳನ್ನೂ ಗರಗರನೆ ಸುತ್ತಿ ಮುಗಿಸಿದ್ದೆ. ಇಲ್ಲ ಎನಿಸಿಕೊಂಡರೂ ತರಿಸಿಕೊಡಿ ಎಂದು ಬೆನ್ನುಬಿದ್ದಿದ್ದೆ. ದೂರ ದೇಶದ ಹಲವರಿಗೆ ಮೇಲ್ ಮಾಡಿ ಸಿಕ್ಕರೆ ಖಂಡಿತಾ ಕಳಿಸಿಕೊಡಿ ಎಂದು ವಿನಂತಿಸಿದ್ದೆ.

ಈಗ ಈ ಅಮೇರಿಕಾದ ನೆಲದಲ್ಲಲ್ಲದಿದ್ದರೆ ಇನ್ನೆಲ್ಲೂ ನನಗೆ ಅದು ಸಿಗಲು ಸಾಧ್ಯವೇ ಇಲ್ಲ ಎಂದು ಗೊತ್ತಾಗಿ ಹೋಗಿತ್ತು. ಹಾಗಾಗಿ ನಾನು ಪಟ್ಟು ಹಿಡಿದು ಕೂತಿದ್ದೆ.

ಆ ವೇಳೆಗಾಗಲೇ, ಮಾಲ್ ಅನ್ನು ಶರವೇಗದಲ್ಲಿ ಸುತ್ತಿ ಇದ್ದ ಹತ್ತಾರು ಬೂಟುಗಳ ಪಟ್ಟಿಗೆ ಇನ್ನಷ್ಟನ್ನು ಜೋಡಿಸಿಕೊಂಡಿದ್ದ ಆಸ್ಟ್ರೇಲಿಯಾದ ಗೆರ್ದಾ, ಒಳ್ಳೆಯ ಟಾಪ್ ಗಳಿಂದ ಮಿಂಚುತ್ತಿದ್ದರೂ ಇನ್ನಷ್ಟು ಟಾಪ್ ಗಳ ಬೇಟೆ ಮಾಡಿದ್ದ ದಕ್ಷಿಣ ಆಫ್ರಿಕಾದ ಶಬಲಾಲ, ಕ್ಯಾಮೆರಾಗಳ ಬೆನ್ನ ಹಿಂದೆಯೇ ಇದ್ದ ಜೆಕ್ ನ ಮೆರೆಕ್, ಮಕ್ಕಳಿಗೆ ಟಾಯ್ಸ್ ಎಂದು ಓಡಾಡುತ್ತಿದ್ದ ಇರಾನ್ ನ ಹಮೀದ್, ಎಲ್ಲರೂ ನಾನು ಹೀಗೆ ಹಠಕ್ಕೆ ಬಿದ್ದು ಕೂತಿರುವ ವಸ್ತುವಾದರೂ ಯಾವುದು ಎನ್ನುವ ಕುತೂಹಲಕ್ಕೆ ಬಿದ್ದಿದ್ದರು.

ನಾನು ಹುಡುಕುತ್ತಿದ್ದುದು ಒಂದು ಸಿ.ಡಿ. ಮಾತ್ರ.

ಇವನ ಆಸೆ ಈಡೇರಿಸದಿದ್ದರೆ ಇವತ್ತಿನ ‘ಹ್ಯಾಪಿ ಹವರ್ಸ್’ ಗೆ ದೊಡ್ಡ ನಾಮ ಎಂದು ಎಲ್ಲರಿಗೂ ಅರಿವಾಯಿತೇನೋ.. ಇಬ್ಬಿಬ್ಬರಂತೆ ಎಲ್ಲರೂ ಆ ಬೃಹ…ತ್ ಮಾಲ್ ನ ದಶದಿಕ್ಕುಗಳಲ್ಲಿ ಹರಡಿಹೋದರು.

ಇದ್ದಬದ್ದ ಅಂಗಡಿಗಳನ್ನೆಲ್ಲಾ ಹುಡುಕಿ ತಡಕಿದಾಗ ಒಂದು ಮೂಲೆಯಲ್ಲಿ ಸಿಕ್ಕೇಬಿಟ್ಟದ್ದು ಆ ಅಜ್ಜ.

ಬೊಚ್ಚುಬಾಯಿಯ ತುಂಬಾ ನಗೆ ಉಕ್ಕಿಸುತ್ತಿದ್ದ, ಜಗತ್ತು ಬದಲಿಸಿಯೇ ಸೈ ಎಂದು ಸಿದ್ಧವಾದ ಅಜ್ಜ ‘ಪೀಟ್ ಸೀಗರ್’.

ಎಂತಹ ಸಂಕಷ್ಟವೇ ಆದರೂ ಸರಿ ‘ಗೆದ್ದೇ ಗೆಲ್ಲುವೆವು’ ಎಂಬ ಹುಮ್ಮಸ್ಸನ್ನು ಜಗತ್ತಿಗೆ ತುಂಬಿದ ಅಜ್ಜ, ‘ವಿ ಶಲ್ ಓವರ್ ಕಮ್’ ಹಾಡನ್ನು ಜಗತ್ತಿನ ರಾಷ್ಟ್ರಗೀತೆಯಾಗಿಸಿದ ಪೀಟ್ ಸೀಗರ್.

ಹುರ್ರೇ! ಎನ್ನುತ್ತಾ ಎಲ್ಲರೂ ವ್ಯಾನ್ ಏರಿದೆವು.

ನಾವು ಉಳಿದುಕೊಂಡಿದ್ದ ಹೋಟೆಲ್ ನಲ್ಲಿ ಸಂಜೆ ಒಂದು ಗಂಟೆ ಪುಕ್ಕಟೆಯಾಗಿ ಕೊಡುವ ಬಿಯರ್ ನ್ನು ಈ ದಿನ ದಯಪಾಲಿಸಿರುವುದು ನಾನೇ ಎನ್ನುವ ಕೃತಜ್ಞತಾಭಾವ ಅವರ ಕಣ್ಣುಗಳಿಂದ ತುಳುಕುತ್ತಿತ್ತು.

ವ್ಯಾನ್ ಆ ಉದ್ದೋಉದ್ದ ರಸ್ತೆಗಳಿಗೆ ತೆಕ್ಕೆ ಬಿದ್ದದ್ದೇ ತಡ ಎಲ್ಲರಿಗೂ ಅದ್ಯಾವುದಪ್ಪಾ ಅಂತ ಘನಂದಾರಿ ಕ್ಯಾಸೆಟ್, ನಾನು ಹಾಗೆ ಹಠ ಹಿಡಿದು ಕೂತಿದ್ದು,. ಎನಿಸಿತೇನೋ ವ್ಯಾನ್ ನಲ್ಲಿಯೇ ಕೇಳಿಬಿಡುವ ಹುಕಿಗೆ ಬಿದ್ದರು.

ಪ್ಲೇಯರ್ ಒಳಹೊಕ್ಕ ಸಿ.ಡಿ ಹಾಡನ್ನು ಹೊರಗೆ ತುಳುಕಿಸಿದ್ದೇ ತಡ ಗೆರ್ಡಾಳ ಮುಖದ ಆಕಾರವೇ ಬದಲಾಯಿತು ‘ಏನಿದು, ಚರ್ಚ್ ಹಾಡು ಕೇಳಲು ಇಷ್ಟು ಸ್ಟ್ರೈಕ್ ಮಾಡಿದೆಯಾ?’ ಎಂದಳು.

ಸಿ.ಡಿ ಆ ವೇಳೆಗೆ ಎರಡನೇ ಹಾಡಿಗೆ ದಾಟಿಕೊಂಡಿತ್ತು. ‘ಅಯ್ಯೋ ಇದು ಜೋಗುಳದ ಹಾಡು, ಲಲಬಿ..’ ಎಂದು ಸ್ಲೋವೇನಿಯಾದ ಪೋಲಂಕಾ ಆಕಳಿಸಿಯೇಬಿಟ್ಟಳು.

ಒಂದೊಂದು ಹಾಡೂ ಪ್ಲೇಯರ್ ನಿಂದ ಹೊರಗೆ ಜಿಗಿಯುತ್ತಿದ್ದಂತೆಯೇ ಒಬ್ಬೊಬ್ಬರೂ ನನ್ನ ಮುಖ ನೋಡತೊಡಗಿದರು.

ಆ… ಆ ವೇಳೆಗೇ ಆ ಹಾಡು ಹೊರಬಿತ್ತು. ವಿ ಶಲ್ ಓವರ್ ಕಂ…

ಅರೆ! ಇಡೀ ವ್ಯಾನ್ ನ ವಾತಾವರಣವೇ ಬದಲಾಗಿ ಹೋಯಿತು.

ಆಸ್ಟ್ರೇಲಿಯಾ, ಕೆನ್ಯಾ, ಜಪಾನ್, ಸ್ಲೋವೇನಿಯಾ, ರುಮೇನಿಯಾ, ಇರಾನ್, ಜೆಕ್, ದಕ್ಷಿಣ ಆಫ್ರಿಕಾ ಎಂಬ ಗಡಿಗಳನ್ನು ಅಳಿಸಿಹಾಕಿ ಆ ಹಾಡು ಎಲ್ಲರ ಬಾಯಲ್ಲೂ ಮೊಳಗುತ್ತಿತ್ತು. ಅದು ನೋಡ ನೋಡುತ್ತಿದ್ದಂತೆಯೇ ಈ ಎಲ್ಲರೂ ಒಂದಾಗಿ ಹೋಗಿದ್ದರು.

ದೇಶದ ಗಡಿ ಇಲ್ಲವಾಗುತ್ತಾ ಆಗುತ್ತಾ ಒಂದು ಜಗತ್ತು ಆ ಪುಟ್ಟ ವ್ಯಾನ್ ನಲ್ಲಿ ಅರಳಿಕೂತಿತ್ತು.

ಅದು ಪೀಟ್ ಸೀಗರ್. ಜಗತ್ತಿಗೇ ಒಂದು ಹಾಡು ಮೊಗೆದುಕೊಟ್ಟಾತ.

ನನ್ನ ಶಾಲೆಯ ಕಿಟಕಿಯಿಂದ ಇಣುಕಿದರೆ ಸಾಕು ಅನತಿ ದೂರದಲ್ಲಿ ಗುಡ್ಡಗಳ ಸಾಲು ಕಾಣುತ್ತಿತ್ತು. ಬೆಟ್ಟಕ್ಕೆ ಚಾರಣ ಹೋಗಿಯೇ ಬಿಡೋಣ ಎಂದು ಮಾಸ್ತರರು ನಮ್ಮನ್ನು ಹೊರಡಿಸಿಕೊಂಡು ನಡೆದೇಬಿಟ್ಟರು.

ದಾರಿ ಸಾಗಲು ಒಂದು ಹಾಡು ಬೇಕಿತ್ತು. ಆಗ ಚಿಮ್ಮಿದ್ದು ಅದೇ ಹಾಡು ‘ವಿ ಶಲ್ ಓವರ್ ಕಮ್’

ಅಲ್ಲಿಂದ ಜಿಗಿದು ಹೈಸ್ಕೂಲ್ ಗೆ ಬಂದಾಗ ಶ್ರಮದಾನಕ್ಕಾಗಿ ಇನ್ನೊಂದು ಊರು ಸೇರಿಕೊಂಡೆವು. ರಾತ್ರಿ ಕ್ಯಾಂಪ್ ಫೈರ್ ನಂದಿಸುವ ಸಮಯ. ಅದಕ್ಕೂ ಮುನ್ನ ನಮ್ಮೆಲ್ಲರ ಕಂಠದಿಂದ ಮೊಳಗಿದ್ದು ಅದೇ ‘ವಿ ಶಲ್ ಓವರ್ ಕಮ್’.

ಕಾಲೇಜು ಎನ್ ಸಿ ಸಿಯಲ್ಲಿಯೂ ಅದೇ ಹಾಡು- ವಿ ಶಲ್ ಓವರ್ ಕಮ್ ,

ಇದೆಲ್ಲಾ ಆಗಿ ನಾನು ಕ್ಯೂಬಾಗೆ ಬಂದಿಳಿದೆ. ಜಗತ್ತಿನ ಎಲ್ಲೆಡೆಯ ಕನಸುಗಾರರು ಒಂದೆಡೆ ಸೇರಿದ್ದವು. ಅಲ್ಲಂತೂ ನಾವು ಬೇರೆ ಹಾಡನ್ನು ಯೋಚಿಸುವ ಸಾಧ್ಯತೆಯೇ ಇರಲಿಲ್ಲ. ಏಕೆಂದರೆ ಜಗತ್ತಿನ ಕನಸುಗಾರರಿಗೆ ಹುಮ್ಮಸ್ಸು ತಂಬಲು ಒಂದು ಹಾಡು ಎಂದು ಇದ್ದರೆ ಅದು ‘ವಿ ಶಲ್ ಓವರ್ ಕಮ್’ ಮಾತ್ರ.

ಸಂಗೀತಗಾರರ, ಸಂಗೀತ ಶಾಸ್ತ್ರಜ್ಞರ ಕುಟುಂಬದಲ್ಲಿ ಹುಟ್ಟಿದ ಪೀಟರ್ ಸೀಗರ್ ಗೆ ನಾಲ್ಕು ಗೋಡೆಯ ಒಳಗಿನ ಪಾಠಕ್ಕಿಂತ ಬಯಲೇ ಕೈಬೀಸಿ ಕರೆಯಿತೇನೋ.

ಬಾಸ್ಟನ್ ನಲ್ಲಿ ಓದುತ್ತಿದ್ದ ಆತ ಓದಿಗೆ ಶರಣು ಹೇಳಿ ಸಿಕ್ಕ ಸಿಕ್ಕ ರೈಲು ಹತ್ತಿ ಊರೂರು ಸುತ್ತಲು ಶುರುಮಾಡಿದ. ಹೋದೆಡೆಯೆಲ್ಲಾ ಕೇಳಿದ ಜನಪದ ಹಾಡುಗಳು ಅವನೊಳಗೆ ಒಬ್ಬ ಹಾಡುಗಾರನನ್ನು ಹುಟ್ಟುಹಾಕಲುತೊಡಗಿದವು.

ಹಾಗೆ ಹಾಡುಗಳನ್ನು ಸೂರೆಗೊಳ್ಳುತ್ತಾ ಇರುವಾಗಲೇ ಅವರ ಕಣ್ಣಿಗೆ ಬಿದ್ದದ್ದು ಬ್ಯಾಂಜೋ… ಐದು ತಂತಿಗಳ ಬ್ಯಾಂಜೋ ಗಿರಿಜನರ ಕೈಯಲ್ಲಿ ಹೊರಡಿಸುತ್ತಿದ್ದ ಸಂಗೀತ ಇವರಿಗೆ ಕಿನ್ನರ ಗಾನವಾಗಿ ಕೇಳಿಸಿತು.

ಅದನ್ನು ಕೈಗೆತ್ತಿಕೊಂಡರು. ಅಷ್ಟೇ ಅಲ್ಲ ಅದನ್ನು ತನಗೆ ಬೇಕಾದಂತೆ ಹಿಗ್ಗಿಸಿ ಪಳಗಿಸಿಕೊಂಡರು. ಈ ಬ್ಯಾಂಜೋ ಎಷ್ಟು ಜನಪ್ರಿಯವಾಯಿತೆಂದರೆ ಅಮೇರಿಕದೆಲ್ಲೆಡೆ ಈಗ ಇದು ‘ಪೀಟ್ ಬ್ಯಾಂಜೋ’ ಎಂದೇ ಹೆಸರುವಾಸಿ.

ಪೀಟ್ ಸೀಗರ್ ಗೆ ಇದು ಸಂಗೀತ ವಾದ್ಯವಲ್ಲ. ಅದು ಅಸ್ತ್ರ. ದ್ವೇಷವನ್ನು ಸುತ್ತುಗಟ್ಟಿ ಮಣಿಸುವ ಅಸ್ತ್ರ. ಪೀಟ್ ಬಾರಿಸುವ ಬ್ಯಾಂಜೋದ ಮೇಲೆ ಈ ಸಾಲುಗಳು ಸದಾ ಕಾಣಿಸುತ್ತದೆ.

ಪೀಟ್ ಗೆ ಗೊತ್ತಿತ್ತು ನಾನು ಹಾಡಹೊರಟಿರುವುದು ಜಗತ್ತಿನ ವಿಷಾದವನ್ನು, ಹಾಡ ಹೊರಟಿರುವುದು ನೊಂದವರ ಕಥೆಗಳನ್ನು, ಪೀಟ್ ಹಾಡಿನ ಮೂಲಕ ಕಣ್ಣೀರ ಕಥೆಗಳನ್ನು ಕೇಳಿಸುವ, ಹಾಡಿನ ಮೂಲಕವೇ ಆ ಕಣ್ಣೀರನ್ನು ಒರೆಸುವ, ಹಾಡಿನ ಮೂಲಕವೇ ಒಂದು ಪುಟ್ಟ ವಿಶ್ವಾಸ ಹೊಳೆಯುವಂತೆ ಮಾಡುವ, ಹಾಡಿನ ಮೂಲಕವೇ ಜಗತ್ತನ್ನು ಗೆಲ್ಲುವ ಕೆಲಸಕ್ಕೆ ಇಳಿದೇಬಿಟ್ಟರು.

ವಿಯೆಟ್ನಾಂ ಯುದ್ಧದ ವಿರುದ್ಧ, ವಾಟರ್ ಗೇಟ್ ನ ನಿಕ್ಸನ್ ವಿರುದ್ಧ, ಮಲಗುಂಡಿಗಳಂತೆ ಕಾಣುವ ಹೊಳೆ ನದಿಗಳ ವಿರುದ್ಧ, ಆಫ್ರಿಕಾದ ಚಿನ್ನದ ಗಣಿಗಳ ಶೋಷಕರ ವಿರುದ್ಧ, ಯುದ್ಧಕ್ಕೆ ಹಸಿದವರ ವಿರುದ್ಧ ಹಾಡುಗಳನ್ನು ಕಟ್ಟಿದರು.

ಮಾರ್ಟಿನ್ ಲೂಥರ್ ಕಿಂಗ್ ಜನರನ್ನು ಮುನ್ನಡೆಸುತ್ತಾ ಹೊರಟಾಗ ಜೊತೆಯಲ್ಲಿ ಹಾಡುಗಳನ್ನು ಹೊತ್ತ ಪೀಟ್ ಸೀಗರ್ ಇದ್ದರು.

ಪೀಟ್ ಸೀಗರ್ ಬೈಬಲ್ ಪುಟಗಳಿಂದಲೂ ಹಾಡು ಸೃಷ್ಟಿಸಿದರು. ತಾಯಂದಿರು ಹಾಡುವ ಜೋಗುಳದಲ್ಲಿ ಹಾಡು ಕಂಡರು, ಅಪ್ರೋ- ಅಮೇರಿಕನ್ ಜನರ ಕಾಲೋನಿಗಳಿಂದ ಹಾಡು ಹೆಕ್ಕಿ ತಂದರು, ಕೊನೆಗೆ ರಷ್ಯನ್ ಕಾದಂಬರಿಕಾರ ಶೋಲೋಕೋವ್ ನ ಕಾದಂಬರಿಗಳಿಂದಲೂ ಹಾಡು ಉಕ್ಕಿಸಿದರು.

ಪೀಟ್ ಗೆ ಜನರ ಎದೆ ಬಡಿತ ಗೊತ್ತಿತ್ತು. ಅತ್ಯಂತ ಸರಳ ಶಬ್ದಗಳನ್ನು ಹಿಡಿದು ಅವರಲ್ಲಿ ನೋವನ್ನೂ, ಭರವಸೆಯ ಕಿರಣಗಳನ್ನೂ ಬೆಸುಗೆ ಹಾಕುತ್ತಿದ್ದರು.

ಹಾಗಾಗಿ ಪೀಟ್ ಸೀಗರ್ ಹಾಡು ಅವರ ಸ್ವತ್ತಾಗಿ ಮಾತ್ರ ಉಳಿಯಲಿಲ್ಲ. ಅವರ 1700 ಹಾಡುಗಳೂ ದೇಶದಿಂದ ದೇಶಕ್ಕೆ ವಲಸೆ ಹೋಗುವ ಹಕ್ಕಿಗಳಂತೆ ಪಟ ಪಟ ರೆಕ್ಕೆ ಬಡಿಯುತ್ತಾ ಹಾರುತ್ತಾ ಹೋದವು.

ಪೀಟ್ ಹಾಡುಗಳು ಅದು ಎಂದೂ ಒಬ್ಬರ ಹಾಡು ಅಲ್ಲವೇ ಅಲ್ಲ. ಯಾವುದೇ ಕಡೆ ಆ ಹಾಡಿನ ಸೊಲ್ಲು ಶುರುವಾದರೆ ಇಡೀ ಸಭಾಂಗಣವೇ ದನಿಗೂಡಿಸುತ್ತದೆ.

ಪೀಟ್ ಯುದ್ಧಕ್ಕೆ ಹೋಗುವ ಯೋಧರ ಬಗ್ಗೆ ನಿಸ್ಸಾಹಕತೆಯಿರುವ ಹಾಡು ಬರೆಯುತ್ತಾರೆ, ಶಾಲೆಯ ಪಾಠಗಳು ಹೇಳಿಕೊಡುವ ಕಟು ಸುಳ್ಳುಗಳ ಬಗ್ಗೆ ಬರೆಯುತ್ತಾರೆ, ರಾಜಕಾರಣಿಗಳ ಮುಖವಾಡಗಳ ಬಗ್ಗೆ, ಇಂಗ್ಲಿಷ್ ಎಂಬ ಹುಚ್ಚಾಟದ ಬಗ್ಗೆ, ಕೊನೆಗೆ ಕಿಟಕಿಯಿಂದ ಕಂಡ ಸುಂದರ ನೋಟದ ಬಗ್ಗೆಯೂ ಬರೆಯುತ್ತಾರೆ.

ಪೀಟ್ ಸೀಗರ್ ಗೆ ಭಾಷೆ ಎಂದೂ ಮಿತಿಯಾಗಿರಲಿಲ್ಲ. ‘ಭಾಷೆ ಎನ್ನುವುದು ಸೋತಾಗ ನಾದದ ಬೆನ್ನತ್ತಿ, ಭಾಷೆ ಎನ್ನುವುದು ಸೋತಾಗ ಕುಣಿತದ ಬೆನ್ನತ್ತಿ’ ಎನ್ನುತ್ತಿದ್ದರು.

ಅದು ಹೌದು ಎನ್ನುವಂತೆ ಅವರು ಕೊಲ್ಕೊತ್ತಾ, ಬೆಂಗಳೂರು, ತಿರುವನಂತಪುರಕ್ಕೆ ಬಂದಾಗ ಅವರ ಹಾಡುಗಳು ಭಾಷೆಯನ್ನು ಮೀರಿ ನಾದದ ಅಲೆಗಳನ್ನು ಎಬ್ಬಿಸುತ್ತಿದ್ದವು.

‘ಇಷ್ಟೆಲ್ಲಾ ಹಾಡಿದ್ದೀರಿ, ಇಷ್ಟು ವರ್ಷ ಹಾಡಿದ್ದೀರಿ, ಇಷ್ಟೆಲ್ಲಾ ಜನರ ಮುಂದೆ ಹಾಡಿದ್ದೀರಿ, ಆದದ್ದೇನು?’ ಎನ್ನುವ ಪ್ರಶ್ನೆಯನ್ನು ಕೇಳಿದಾಗ ಪೀಟ್ ನಕ್ಕು ‘ಎಷ್ಟೊಂದು ಪುಟ್ಟ ಪುಟ್ಟ ವಿಜಯಗಳು ಸಿಕ್ಕಿವೆ ಗೊತ್ತಾ’ ಎಂದರು.

ಕೊಲ್ಕೊತ್ತಾದ ವೇದಿಕೆಯ ಮೇಲೆ ಬ್ಯಾಂಜೋ ಹಿಡಿದು ನಿಂತ ಪೀಟ್ ಸೀಜರ್ ಗೆ ಸಭಿಕರೊಬ್ಬರು ಕೂಗಿ ಕೇಳಿದರು- ‘ಭಾರತವನ್ನು ಬಡಿದೆಬ್ಬಿಸಿದ ಒಂದು ಪ್ರತಿಭಟನಾ ಗೀತೆ ಎಂದು ನೀವು ಯಾವುದನ್ನು ಆರಿಸುತ್ತೀರಿ?’.

ಪೀಟ್ ಬ್ಯಾಂಜೋ ತಂತಿಗಳನ್ನು ಶೃತಿಮಾಡಿ, ಗಂಟಲನ್ನು ಸರಿಮಾಡಿಕೊಂಡು- ‘ರಘುಪತಿ ರಾಘವ ರಾಜಾರಾಂ, ಪತಿತ ಪಾವನ ಸೀತಾರಾಂ’ ಹಾಡಲು ಶುರುಮಾಡಿದರು.

ಸಭೆ ತನಗೇ ಗೊತ್ತಿಲ್ಲದಂತೆ ದನಿಗೂಡಿಸಿತ್ತು. ಗಾಂಧಿ ಎಂಬ ಆ ದೊಡ್ಡ ಪ್ರತಿಭಟನಾಕಾರನ ಜೊತೆ ಪೀಟ್ ಸೀಗರ್ ಹೆಜ್ಜೆ ಹಾಕುತ್ತಿದ್ದರು.

ಮೊನ್ನೆ ಮೊನ್ನೆ ತಾನೇ ಮೇ ದಿನಾಚರಣೆ ಮುಗಿಯಿತಲ್ಲಾ ಪೀಟ್ ಸೀಗರ್ ನೆನಪಿಗೆ ಬಂದರು.