ಜಿ.ಎನ್.ಮೋಹನ್ ಕ್ವಾರಂಟೈನ್ ಮೆಲುಕು: ಎಲ್ಲಿಂದ ಬಂದಿರೆಂದು ಕೇಳಬಹುದು ನೀವು..

ಹೌದು ಇದು ‘ವಿಚಿತ್ರ ಆದರೂ ನಿಜ’.

ಹಾಗೆ ಆ ಪುಸ್ತಕದ ಅಂಗಡಿಯನ್ನು ಹುಡುಕುತ್ತಾ ನಾನು ಕ್ರಮಿಸಿದ್ದು ಅಷ್ಟಿಷ್ಟಲ್ಲ.. 1500 ಕಿಲೋ ಮೀಟರ್ ಗಳನ್ನು.

ನಾನು ಒರಿಸ್ಸಾಗೆ ಹೋಗುತ್ತಿದ್ದೇನೆ ಎಂದ ತಕ್ಷಣ ಗೆಳೆಯರು ‘ಓ ಕೋನಾರ್ಕ್’ ಎಂದರು. ಅಲ್ಲಪ್ಪ ಎಂದೆ.. ‘ಪುರಿ ಜಗನ್ನಾಥ’ ಎಂದರು. ‘ಜಗನ್ನಾಥನ ರಥಚಕ್ರಗಳು’ ಕವಿತೆಯಾಗಿ, ನಾಟಕವಾಗಿ ಕನ್ನಡವನ್ನು ಅಷ್ಟು ಕಾಡಿತ್ತು. ಅಲ್ಲ ಅಂದೆ .

ತಕ್ಷಣ ‘ಬುದ್ಧ ಸ್ತೂಪ’ ಎಂದರು. ಅದಕ್ಕೂ ಕಾರಣವಿತ್ತು. ಅಶೋಕ ಚಕ್ರವರ್ತಿ ಸೆಣಸಿದ ಯುದ್ಧ, ಹರಿದ ನೆತ್ತರು ಎಲ್ಲಾಕ್ಕೂ ಒರಿಸ್ಸಾ ಸಾಕ್ಷಿಯಾಗಿತ್ತು. ಆ ಯುದ್ಧದಲ್ಲಿ ಹರಿದ ನೆತ್ತರಿಗೆ ಕಳಿಂಗಾ ನದಿ ತಿಂಗಳುಗಟ್ಟಲೆ ಕಾಲ ರಕ್ತದ ಬಣ್ಣ ಹೊಂದಿತ್ತು ಅನ್ನುತ್ತಾರೆ.

ಅಲ್ಲ ಎಂದೆ

ಹಾಗಿದ್ದರೆ ‘ಚಿಲ್ಕಾ’ ಎಂದು ಯಾವ ಸಂಶಯವೂ ಇಲ್ಲದಂತೆ ಹೇಳಿದರು. ನಿಮ್ಮ ಪಕ್ಕದಲ್ಲೇ ಜಿಗಿಯುವ, ರಾಸಲೀಲೆಯಾಡುವ, ಡಾಲ್ಫಿನ್ ಗಳನ್ನು ನೋಡಬೇಕೆಂದರೆ, ಸಾವಿರಾರು ಮೈಲಿ ಹಾರಿ ಬರುವ ಪಕ್ಷಿಗಳನ್ನು ನೋಡಬೇಕೆಂದರೆ ಬಂಗಾಳ ಕೊಲ್ಲಿಯನ್ನು ಬಗಲಿಗಿಟ್ಟುಕೊಂಡಿರುವ ಚಿಲ್ಕಾ ಸರೋವರಕ್ಕೆ ಬರಬೇಕು.

ಆದರೆ ಏನು ಮಾಡುವುದು ಅದೂ ನನ್ನ ಪಟ್ಟಿಯಲ್ಲಿರಲಿಲ್ಲ.

ನನ್ನ ಪಟ್ಟಿಯಲ್ಲಿದ್ದದ್ದು ಪುಸ್ತಕದ ಅಂಗಡಿ ಮತ್ತು ಅಲ್ಲಿ ಸಿಗುವ ಬಿಸಿ ಬಿಸಿ ಟೀ ಮಾತ್ರ!.

ಹಾಗೆ ಬಿಸಿ ಬಿಸಿ ಚಹಾ ಹಿಡಿದು ನಾನು ಅವರಿಬ್ಬರ ಮುಂದೆ ಕುಳಿತಿದ್ದೆ. ಅವರಿಬ್ಬರ ಕಣ್ಣಲ್ಲೂ ಮಿಂಚಿತ್ತು.

‘ಅದು ಸರಿ ನಮ್ಮ ಈ ಪುಸ್ತಕದ ಅಂಗಡಿ ದಾರಿಯನ್ನು ಹೇಗೆ ಕಂಡು ಹಿಡಿದಿರಿ’ ಎಂದರು.

ಏಕೆಂದರೆ ಅವರಿಗೆ ನಾನು ಬೆಂಗಳೂರಿನವನೆಂದೂ, ನಿಮ್ಮ ಅಂಗಡಿಗೆ ಬರಬೇಕೆಂಬ ಆಸೆ ಇದೆ ಎಂದೂ, ಯಾವಾಗ ಸಿಗುತ್ತೀರಾ.. ಎಂದು ಏನೇನೂ ಕೇಳದೆ ಬಂದುಬಿಟ್ಟಿದ್ದೆ.

ಹಾಗಾಗಿ 1500 ಕಿ ಮೀ ಆಚೆ ಇರುವ ಬೆಂಗಳೂರಿನಿಂದ ಭುವನೇಶ್ವರದ ಕಳಿಂಗ ಆಸ್ಪತ್ರೆಯ ಆಸುಪಾಸಿನಲ್ಲಿದ್ದ ಈ ಪುಸ್ತಕದ ಅಂಗಡಿ ಜಾಡು ಹಿಡಿದು ಬಂದದ್ದಾದರೂ ಹೇಗೆ ಎನ್ನುವ ಪ್ರಶ್ನೆ ಅವರ ಮುಖದಲ್ಲಿತ್ತು.

ನಾನು ಗೂಗಲ್ ಮ್ಯಾಪ್ ಬಳಸಿ ನೇರಾನೇರ ಅಲ್ಲಿಗೆ ಬಂದಿದ್ದೇನೆ ಎಂದು ಅವರು ದೃಢವಾಗಿ ನಂಬಿದ್ದರು.

ಆದರೆ ನಾನು ಹೇಳಿದೆ- ‘ಸಿಂಪಲ್. ಪುಸ್ತಕಕ್ಕೆ ಇರುತ್ತದಲ್ಲ ಅದರದ್ದೇ ಆದ ಘಮ ಅದರ ಜಾಡು ಹಿಡಿದು’. ದುಂಬಿಗೆ ಮಕರಂದ ಯಾವ ಜಾಗದ, ಯಾವ ಹೂವಿನ, ಯಾವ ಮೂಲೆಯಲ್ಲಿ ಅಡಗಿರುತ್ತದೆ ಎನ್ನುವುದು ಗೊತ್ತಾಗುವುದಿಲ್ಲವೇ..

ಹಾಗೆ ನಾನು ಕುಳಿತದ್ದು ಶತಾಬ್ದಿ ಮಿಶ್ರಾ ಹಾಗೂ ಅಕ್ಷಯಾ ರೌತ್ರೆ ಎದುರು.

ಒಬ್ಬಾತ ಕಾಲೇಜಿನಲ್ಲಿ ಓದುವಾಗ ಪದೇ ಪದೇ ಡುಮ್ಕಿ ಹೊಡೆದು ಪುಸ್ತಕದ ಅಂಗಡಿಯಲ್ಲಿ ಸ್ಟೋರ್ ಮ್ಯಾನೇಜರ್ ಆಗಿದ್ದಾತ. ಇನ್ನೊಬ್ಬಾಕೆ ಉತ್ಕಲ ಯೂನಿವರ್ಸಿಟಿಯಲ್ಲಿ ಪತ್ರಿಕೋದ್ಯಮ ಓದಿ ಜಾಹೀರಾತು ಕಂಪನಿಯಲ್ಲಿ ‘ಆಹಾ’ ಎನ್ನುವ, ಒಂದೇ ಏಟಿಗೆ ಎಲ್ಲರನ್ನೂ ಸೆಳೆಯುವ ಕಾಪಿ ಬರೆಯುತ್ತಿದ್ದಾಕೆ.

ಪುಸ್ತಕದ ಅಂಗಡಿಯಲ್ಲಿ ಯಾವಾಗ ಇಬ್ಬರೂ ಕೈ ಕುಲುಕಬೇಕಾಗಿ ಬಂತೋ ಅವತ್ತೇ ಅವರಿಬ್ಬರೂ ತಮ್ಮ ತಮ್ಮ ಕೆಲಸಕ್ಕೆ ರಾಜೀನಾಮೆ ಬಿಸಾಕಿಬಿಟ್ಟರು.

ನಂತರ ಇನ್ನೇನು ಎಂದು ಯೋಚನೆಯನ್ನೂ ಮಾಡದೆ ಎರಡು ಬ್ಯಾಕ್ ಪ್ಯಾಕ್ ತಂದು ಅದರಲ್ಲಿ ಪುಸ್ತಕಗಳನ್ನು ತುಂಬಿದರು. ಬಸ್ ಹತ್ತಿದವರೇ ತಮಗೆ ತೋಚಿದ ಸ್ಥಳಕ್ಕೆ ಹೋದರು. ರಸ್ತೆ ಬದಿ, ಬಸ್ ಸ್ಟಾಂಡ್ ನಲ್ಲಿ, ಆಸ್ಪತ್ರೆ ಮುಂದೆ, ದೇವಸ್ಥಾನದ ಆಚೆ, ಪಾರ್ಕ್ ಗಳಲ್ಲಿ, ಅಪಾರ್ಟ್ಮೆಂಟ್ ಕಾರ್ ಪಾರ್ಕಿಂಗ್ ನಲ್ಲಿ ಹೀಗೆ ಪುಸ್ತಕಗಳನ್ನು ಹರಡಿ ನಿಂತರು.

'ನೀವು ನಂಬಲೇಬೇಕು.. ಹಾಗೆ ಹೋದಡೆಯೆಲ್ಲಾ ಜನ ನಮ್ಮನ್ನೂ ಅಂತೆಯೇ ಪುಸ್ತಕಗಳನ್ನೂ ಒಳ್ಳೆ ಅನ್ಯಗ್ರಹದಿಂದ ಬಂದ ಜೀವಿಯೇನೋ ಅನ್ನುವ ಹಾಗೆ ನೋಡುತ್ತಿದ್ದರು. ಪಕ್ಕಾ ಅಮೀರ್ ಖಾನ್ ನ ‘ಪಿ ಕೆ’ ಸಿನೆಮಾದಂತೆ' ಎಂದು ಇಬ್ಬರೂ ಗಹಗಹಿಸಿ ನಕ್ಕರು.

ಮತ್ತೆ ಕಥೆ ಮುಂದುವರೆಸಿದರು. ಆದರೆ ಆ ಮಕ್ಕಳಿದ್ದಾರಲ್ಲ.. ಶಾಲೆಯ ವಿದ್ಯಾರ್ಥಿಗಳು ಅವರು ನಮಗೆ ಭರವಸೆ ನೀಡಿಬಿಟ್ಟರು. ನಾವು ಹೋದ ಹೋದಕಡೆಯೆಲ್ಲ ಕಿಂದರಿಜೋಗಿಯ ಹಿಂದೆ ಮಕ್ಕಳು ಸಮ್ಮೋಹನಕ್ಕೆ ಒಳಗಾಗಿ ಬಂದಂತೆ ಬಂದರು. ಪುಸ್ತಕ ಕೊಳ್ಳಲು ಹಣವಿಲ್ಲದಿದ್ದರೂ ಆಸಕ್ತಿಯಿಂದ ಅದನ್ನು ನೋಡಿದರು. ಎಷ್ಟೋ ವೇಳೆ ಅದನ್ನು ಮುಟ್ಟಿ ನೋಡಬಹುದಾ ಎಂದು ಕೇಳಿದರು. ಅಲ್ಲೇ ನಿಂತು ಎಷ್ಟೋ ಕಥೆ ಓದಿದರು.

ನಮಗೆ ಗೊತ್ತಾಗಿಹೋಯಿತು ಮಕ್ಕಳಿಗೆ ಪುಸ್ತಕಗಳು ಬೇಕು ಆದರೆ ಅವರನ್ನು ಪುಸ್ತಕಗಳ ಲೋಕಕ್ಕೆ ಕರೆದೊಯ್ಯುವ ಮನಸ್ಸುಗಳೆ ಮಾಯವಾಗಿ ಹೋಗಿದೆ ಎಂದು.

ಹಾಗೆ ಅನಿಸಿಹೋದಾಗ ಅವರಿಬ್ಬರೂ ಆರಂಭಿಸಿದ್ದು – ವಾಕಿಂಗ್ ಬುಕ್ ಫೇರ್

ನಾವು ಕುಳಿತದ್ದು ಇದೇ ವಾಕಿಂಗ್ ಬುಕ್ ಫೇರ್ ನ ಪುಸ್ತಕದ ಗೂಡಿನಲ್ಲಿ. ತಪ್ಪು ತಪ್ಪು.. ಅದನ್ನು ಗೂಡು ಎಂದು ಕರೆಯುವ ಹಾಗೆ ಇಲ್ಲ. ಪ್ರತೀ ಪುಸ್ತಕ ಜೋಡಿಸುವುದರಲ್ಲೂ ಅವರು ಕೊಟ್ಟ ಸಮಯ ಗೊತ್ತಾಗಿಹೋಗುತ್ತಿತ್ತು.

ಪುಸ್ತಕಗಳ ಮುಖಪುಟಗಳನ್ನೇ ಸ್ಮರಣ ಫಲಕಗಳನ್ನಾಗಿ ಮಾಡಿದ್ದ್ದರು. ಅಲ್ಲಿ ಹಳೆಯ ಟ್ರಂಕ್ ಒಂದು ಬಿದ್ದುಕೊಂಡಿತ್ತು. ಚಿನ್ನದ ಅಂಗಡಿಯಲ್ಲಿ ನೊಣಕ್ಕೇನು ಕೆಲಸವಪ್ಪ? ಎಂದು ಅದನ್ನು ತೆರೆದರೆ ಅರೆ ಅಲ್ಲೂ.. ಪುಸ್ತಕಗಳು.

ಹಳೆಯ ಕಾಲದ ಟೈಪ್ ರೈಟರ್ ಒಂದು ನೆನಪಿನ ಓಣಿಗಳಲ್ಲಿ ನಡೆಸಿಕೊಂಡು ಹೋಯಿತು. ರಸ್ಕಿನ್ ಬಾಂಡ್, ಖುಷ್ವಂತ್ ಸಿಂಗ್ ಟಪ ಟಪ ಎಂದು ಟೈಪ್ ರೈಟರ್ ನಲ್ಲಿ ಕುಟ್ಟುತ್ತಾ ತಮ್ಮೊಳಗಿನ ಕಥೆ ಕಾದಂಬರಿಗಳು ಹೊರಗೆ ಜಿಗಿಯುವಂತೆ ಮಾಡುತ್ತಿದ್ದುದು ನೆನಪಿಗೆ ಬಂತು.

ಅಲ್ಲೊಂದು ಎತ್ತರದ ಏಣಿ.. ಅದರ ಕಾಲ್ಗಳ ಮೇಲೆ ಆರಾಮವಾಗಿ ಪುಸ್ತಕ ಹಿಡಿದು ಓದುತ್ತಿದ್ದ ದಂಡು.

ಮತ್ತೊಂದು ಕಪ್ ಚಹಾಗೆ ಬೇಡಿಕೆಯಿಟ್ಟು ಹೀಗೆ ಕಣ್ಣಾಡಿಸುತ್ತಾ.. ಕಣ್ಣಾಡಿಸುತ್ತಾ.. ಸಾಗುತ್ತಿದ್ದಾಗ ಒಂದು ವಿಶೇಷ ನನ್ನ ಗಮನಕ್ಕೆ ಬಂತು. ಅಲ್ಲಿದ್ದ ಪುಸ್ತಕಗಳ ಪೈಕಿ ಬಹುತೇಕ ಎಲ್ಲವೂ ಕಥೆ , ಕಾದಂಬರಿಗಳೇ. ಬೇರೆ ಪ್ರಕಾರ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಇತ್ತು.

ನಾನು ಕೇಳಿಯೂಬಿಟ್ಟೆ.. ಇದೇನು ವಿಚಿತ್ರ ಅಂತ. ಅವರು ಹೇಳಿದರು- ಹೌದು ಅದು ನಾವು ಬೇಕೆಂದೇ ಮಾಡಿರುವ ಆಯ್ಕೆ. ಇವತ್ತು ಕಥೆಗಳು ಬೇಕು. ಈ ಜಗತ್ತನ್ನು ಅರ್ಥ ಮಾಡಿಕೊಳ್ಳಲು ಕಥೆಗಳು ಬೇಕು. ವಿಜ್ಞಾನ, ಚರಿತ್ರೆ, ಸಾಮಾಜಿಕ ಶಾಸ್ತ್ರ ಯಾವುದನ್ನೇ ಅರ್ಥ ಮಾಡಿಕೊಳ್ಳಲು ನೀವು ಕಥೆಗಳನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಎಂದರು.

ನನಗೆ ಹೆಚ್ಚು ಆಸಕ್ತಿ ಇದ್ದದ್ದು ಅವರ ಕಥೆಯಲ್ಲಿ..

ಕೇಳಿಯೇಬಿಟ್ಟೆ.. ನೀವು ಬ್ಯಾಕ್ ಪ್ಯಾಕ್ ನಲ್ಲಿ ಪುಸ್ತಕ ಹೊತ್ತು ಒಯ್ದಿರಿ ಆಮೇಲೆ.. ಅವರಿಗೂ ಕಥೆ ಹೇಳುವ ಹುಮ್ಮಸ್ಸಿತ್ತು. ನನ್ನ ಮುಂದೆ ಒಂದು ಮಾಂತ್ರಿಕ ಲೋಕವನ್ನು ಬಿಡಿಸಿಡುವವರಂತೆ ಅವರು ಬಣ್ಣಿಸುತ್ತಾ ಹೋದರು. ಹಾಗೆ ನಾವು ಊರೂರಿಗೆ ಹಳ್ಳಿಗಳಿಗೆ ಪುಸ್ತಕ ಒಯ್ದಾಗ ಎಲ್ಲರೂ ನಮ್ಮನ್ನು ಕಣ್ಣು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದರು. ನಾವೋ ರಸ್ತೆ ಬದಿ ಪುಸ್ತಕ ಮಾರಿ ಅಲ್ಲಿಯೇ ಮಲಗಿಬಿಡುತ್ತಿದ್ದೆವು. ಹೆಣ್ಣು ಹುಡುಗಿ ರಸ್ತೆ ಬದಿ ಮೆಟ್ಟಿಲ ಮೇಲೆ ಮಲಗುತ್ತಿದ್ದದ್ದು ಹುಬ್ಬೇರುವಂತೆ ಮಾಡಿತ್ತು.

ಎಷ್ಟೋ ಕಡೆ ನಾವು ಹೇಳಲಾಗದಂತ ಸಮಸ್ಯೆಗಳೂ ಆಯಿತು. ಆದರೆ ಎಷ್ಟೋ ಊರುಗಳಲ್ಲಿ ಇದೇ ಮೊದಲ ಬಾರಿಗೆ ಪಠ್ಯ ಪುಸ್ತಕದ ಆಚೆಗೂ ಪುಸ್ತಕಗಳ ಲೋಕವಿದೆ ಎನ್ನುವುದು ಅರ್ಥವಾಯಿತು. ನಮಗೆ ಗೊತ್ತಾಗಿ ಹೋಯಿತು. ಪುಸ್ತಕಗಳನ್ನು ಪಠ್ಯ ಪುಸ್ತಕಗಳಿಂದ ಆಚೆ ಬಿಡಿಸಿಕೊಂಡು ಬರಬೇಕಾದ ಅಗತ್ಯವಿದೆ ಎಂದು.

ಆಗೋ ನೋಡಿ ಎಂದು ಕಿಟಕಿಯಾಚೆಗೆ ಶತಾಬ್ದಿ ಮಿಶ್ರಾ ಕೈ ತೋರಿಸಿದರು.

ಅಲ್ಲಿ ದೇವಸ್ಥಾನದ ಮುಂದೆ ಗರುಡಗಂಭ ಎನ್ನುವಂತೆ ಒಂದು ಟ್ರಕ್ ನಿಂತಿತ್ತು. ಪುಸ್ತಕದ ಟ್ರಕ್. ಅದರ ಮೂರೂ ಬದಿಯಲ್ಲಿ ಪುಸ್ತಕಗಳೋ ಪುಸ್ತಕಗಳು. ಡ್ರೈವರ್ ಸೀಟ್ ಬಿಟ್ಟರೆ ಉಳಿದ ಎಲ್ಲಾ ಕಡೆ ಪುಸ್ತಕಗಳೇ.

ಇದರಲ್ಲಿ ಏನಿಲ್ಲೆಂದರೂ 4000 ಪುಸ್ತಕ ಹಿಡಿಸುತ್ತದೆ ಗೊತ್ತಾ ಎಂದರು. ಹಾಂ! ಅನಿಸಿತು. 10 ಸಾವಿರ ಕಿಲೋ ಮೀಟರ್, 90 ದಿನ, 20 ರಾಜ್ಯ, ಇಬ್ಬರು ಜೊತೆಗಾರರು, ಒಂದು ಟ್ರಕ್, ಸಾವಿರಾರು ಕಥೆಗಳು ಯೋಜನೆ ಸಿದ್ಧವಾಗಿಯೇ ಹೋಯಿತು.

ಜಾಹೀರಾತು ಕಂಪನಿಯಲ್ಲಿ ಪೆನ್ನು ಹಿಡಿದು ಕುಳಿತಿದ್ದ ಹುಡುಗಿ ಈಗ ಟ್ರಕ್ ನ ಸ್ಟಿಯರಿಂಗ್ ವೀಲ್ ಹಿಡಿದಳು. ಬಗಲಲ್ಲಿ ಅಕ್ಷಯಾ ರೌತ್ರೆ.

ಕಾರಣ ಇತ್ತು. ಪುಸ್ತಕದ ಟ್ರಕ್ ಓಡಿಸುತ್ತಾ ನಾವು ಹಾಗೆ ೨೦ ರಾಜ್ಯಗಳಲ್ಲಿ ೧೦ ಸಾವಿರ ಕಿ ಮೀಟರ್ ಸಂಚರಿಸಲು ಕಾರಣವಿತ್ತು.

ಯಾವಾಗ ಒರಿಸ್ಸಾದ ಮಕ್ಕಳು ಇದೇ ಮೊದಲ ಬಾರಿಗೆ ಇಂತಹ ಪುಸ್ತಕಗಳೂ ಇರುತ್ತವೆ ಎಂದು ಬೆರಗುಗಣ್ಣಿನಿಂದ ನೋಡಿದರೋ ಆಗ ಅನಿಸಿತು. ಈ ಪರಿಸ್ಥಿತಿ ನಮ್ಮಲ್ಲಿ ಅಲ್ಲ, ಇಡೀ ದೇಶದಲ್ಲಿ ಹೀಗೇ ಇದ್ದರೆ ಅಚ್ಚರಿಯೇನಿಲ್ಲ ಎಂದು. ಹಾಗಾಗಿ ಸ್ಟಿಯರಿಂಗ್ ಹಿಡಿದೇಬಿಟ್ಟೆವು.

ಹಾಗೆ ಸ್ಟಿಯರಿಂಗ್ ಹಿಡಿದಾಗ ನಮಗೆ ಗೊತ್ತಿತ್ತು. ನಾವು ಪುಸ್ತಕದ ಕನಸಿನ, ಪುಸ್ತಕ ಚಳವಳಿಯ ಸ್ಟಿಯರಿಂಗ್ ಸಹಾ ಹಿಡಿದಿದ್ದೇವೆ ಎಂದು.

ನೋಡಿ ಯಾವುದೇ ಒಂದು ಸಿಟಿಯಲ್ಲಿ ಅಪಾರ್ಟ್ಮೆಂಟ್ ಗಳಿಗೆ ಜಾಗವಿದೆ, ಮಾಲ್ ಗಳಿಗೆ ಜಾಗವಿದೆ, ಹೋಟೆಲ್ ಗಳಿಗೆ ಜಾಗವಿದೆ, ಚಿತ್ರ ಮಂದಿರಕ್ಕೆ ಜಾಗವಿದೆ, ಕೊನೆಗೂ ರೇಸ್ ಕೋರ್ಸ್ ಗೂ ಜಾಗವಿದೆ ಆದರೆ ಲೈಬ್ರರಿಗಳಿಗಿಲ್ಲ?

ಅದೇ ಅಪಾರ್ಟ್ಮೆಂಟ್ ಗೆ ಹೋಗಿ ನೋಡಿ ಕಾರ್ ಪಾರ್ಕಿಂಗ್ ಗೆ ಜಾಗವಿದೆ, ಪೂಲ್ ಗೆ ಜಾಗವಿದೆ, ಕ್ಲಬ್ ಗೆ ಜಾಗವಿದೆ. ಕೊನೆಗೆ ಒಂದು ಮಿನಿ ದೇವಸ್ಥಾನಕ್ಕೂ ಜಾಗವಿರುತ್ತದೆ ಆದರೆ ಇಡೀ ಕಟ್ಟಡದಲ್ಲಿ ಒಂದು ಪುಟ್ಟ ಲೈಬ್ರರಿಗೆ ಜಾಗ ಮಾಡುವುದಿಲ್ಲ.

ಹಾಗಾಗಿಯೇ ನಾವು ಎಲ್ಲಾ ರಾಜ್ಯಗಳ ಮೂಲೆ ಮೂಲೆಗೆ ಟ್ರಕ್ ಡ್ರೈವ್ ಮಾಡುತ್ತಾ ಹೊರಟೇಬಿಟ್ಟೆವು. ಸಾವಿರಾರು ಕಡೆ ಪುಸ್ತಕ ನೋಡಿದವರಲ್ಲಿ ಒಂದಿಷ್ಟು ಜನರಿಗಾದರೂ ಪುಸ್ತಕದ ಹುಚ್ಚು ಹಿಡಿದರೆ ನಾವು ಗೆದ್ದಂತೆ ಎಂದರು.

‘ಎಲ್ಲಾ ಕಡೆ ಹುಚ್ಚು ಬಿಡಿಸುವ ಮಂದಿ ಇದ್ದಾರೆ ನಾವೋ ಅದಕ್ಕೆ ವಿರುದ್ಧ ಹುಚ್ಚು ಹಿಡಿಸುವುದಕ್ಕಾಗಿಯೇ ಊರೂರು ಸುತ್ತುವವರು’ ಎಂದರು.

ಅದು ನಿಜ ಆ ಹುಚ್ಚಷ್ಟೇ ನನಗೂ ತಗುಲಿದ್ದು. ಕಳೆದ ಜನವರಿ 13 ಹಾಗೂ 14 ರಂದು ಈ ಜೋಡಿ ಆ ಪಾಟಿ ಪುಸ್ತಕಗಳನ್ನು ತುಂಬಿಕೊಂಡು ಬೆಂಗಳೂರಿಗೂ ಬಂದಿದ್ದರು.

ಬ್ರಿಗೇಡ್ ರೋಡ್ ನಲ್ಲಿ, ಟ್ರಕ್ ನಿಲ್ಲಿಸಿ ಪಬ್ ಗಳಿರುವೆಡೆ ಪುಸ್ತಕದ ಪರಿಮಳವನ್ನೂ ಹರಡಿಬಿಟ್ಟಿದ್ದರು. ಅದು ನನಗೆ ಗೊತ್ತಾಗುವ ವೇಳೆಗೆ ಅವರು ಬೆಂಗಳೂರಿಗೆ ವಿದಾಯ ಹೇಳಿ ಮೈಸೂರು ಮೂಲಕ ಕೇರಳ ತಲುಪಿಕೊಂದು ಅಲ್ಲಿ ತೆಂಗಿನ ನಗರಿಗೆ ಪುಸ್ತಕದ ಹುಚ್ಚು ಹತ್ತಿಸುತ್ತಿದ್ದರು.

ಛೆ! ಗೊತ್ತಾಗದೆ ಹೋಯ್ತೆ ಎನ್ನುವ ಹಳಹಳಿಕೆ ಶುರುವಾಗಿ ಹೋಯ್ತು.ಕೊನೆಗೆ ಅದು ಕೋನಾರ್ಕವನ್ನೂ, ಪುರಿ ಜಗನ್ನಾಥನನ್ನೂ, ಆ ಚಿಲ್ಕಾ ಸರೋವರವನ್ನೂ ಮೀರಿ ಪುಸ್ತಕದ ಅಂಗಡಿಯ ಮುಂದೆ ನಿಲ್ಲುವಂತೆ ಮಾಡಿತ್ತು.

ನಾನು ಅವರ ಪುಸ್ತಕದ ಅಂಗಡಿ ಹೊಕ್ಕಾಗ ಸಾರ್ಥಕ ಭಾವ. ಎದುರಿಗಿರುವ ಆ ಇಬ್ಬರನ್ನೂ ನೋಡುತ್ತೇನೆ ಅವರ ಮುಖದಲ್ಲೂ ಅದೇ ಸಾರ್ಥಕ ಭಾವ.

ಹುಚ್ಚು ಹತ್ತಿಸಿದವರೂ, ಹುಚ್ಚು ಹತ್ತಿಸಿಕೊಂಡವರು ಇಬ್ಬರೂ ಕೈ ಕುಲುಕಿ ನಿಂತಿದ್ದೆವು. ಥೇಟ್ ಚಿಲ್ಕಾ ಸರೋವರ ಆ ಬಂಗಾಳ ಕೊಲ್ಲಿಯ ಮೈದಡವಿದ ಹಾಗೆ. ಗಂಟೆಗಟ್ಟಲೆ ಇಡೀ ಪುಸ್ತಕದಂಗಡಿ ಹುಡುಕಿ ಸಾಕಷ್ಟು ಪುಸ್ತಕ ಆಯ್ಕೆಮಾಡಿಕೊಂಡೆ.

ಬಿಲ್ ಮಾಡಿಸಲು ಕೌಂಟರ್ ಬಳಿಗೆ ಬಂದಾಗ ಒಂದು ಸಹಾಯ ಆಗಬೇಕಲ್ಲ ಎಂದೆ ಏನು ಎಂದೂ ಕೇಳದೆ ಅವರು ಪರವಾಗಿಲ್ಲ ನೀವು ಬೆಂಗಳೂರಿಗೆ ಹೋದ ಮೇಲೆಯೇ ದುಡ್ಡು ಕಳಿಸಿ ತೊಂದರೆ ಇಲ್ಲ ಅಂದರು. ನಾನು ಅದಲ್ಲ ಎಂದೆ ಮತ್ತೆ ಎನ್ನುವಂತೆ ನೋಡಿದರು. ನೀವು ಎಲ್ಲಾ ಸಮಯದಲ್ಲೂ ಶೇಖಡಾ 20 ರಿಯಾಯಿತಿ ಕೊಟ್ಟೇ ಕೊಡುತ್ತೀರಲ್ಲಾ.. ಅದು ದಯವಿಟ್ಟು ಬೇಡ. ಪುಸ್ತಕದ ಅಷ್ಟೂ ಬೆಲೆಯನ್ನು ನನ್ನಿಂದ ವಸೂಲು ಮಾಡಿ. ಅದೇ ನಾನು ನಿಮಗೆ ಕೊಡಬಹುದಾದ ಕಾಣಿಕೆ ಎಂದೆ.

ಅವರು ಬಹುಷಃ ಅಂತಹ ಮಾತನ್ನು ಮೊದಲು ಕೇಳಿದ್ದರೇನೋ. ನನ್ನ ಕೈ ಒತ್ತಿದರು ಕಣ್ಣಲ್ಲಿನ ಮಿಂಚಿನ ಸಮೇತ.

ನಾನು ಪುಸ್ತಕದ ಕಟ್ಟಿನ ಸಮೇತ ಅಲ್ಲಿಂದ ಹೊರಟವನು ಹಿಂದಿರುಗಿ ನೋಡಿದೆ. ಅವರಿಬ್ಬರೂ ಆಗಲೇ ಟ್ರಕ್ ಹತ್ತಿದ್ದರು. ಕ್ರಮೇಣ ಕಣ್ಣಿಂದ ಮರೆಯಾಗುತ್ತಿದ್ದ ಆ ಟ್ರಕ್ ನಲ್ಲಿ ಖುಷ್ವಂತ್ ಸಿಂಗ್, ದೇವದತ್ತ ಪಟ್ಟನಾಯಕ್, ಜುಂಪಾ ಲಾಹಿರಿ, ನಮ್ಮವರೇ ಆದ ರೇವತಿ, ಲೈಂಗಿಕ ಕಾರ್ಯಕರ್ತೆ ಜಮೀಲಾ, ಸಲ್ಮಾನ್ ರಷ್ಡಿ, ಅನುಜಾ ಚೌಹಾಣ್ ಕುಲು ಕುಲು ನಗುತ್ತಾ ಸಾಗಿದ್ದರು. ಅಷ್ಟೇ ಅಲ್ಲ ಕುಲುಕುತ್ತಲೂ..
——
ಈಗ ಈ ಜೋಡಿ ಬೆಂಗಳೂರಿನಲ್ಲೂ ಪುಸ್ತಕದ ಮಳಿಗೆ ತೆರೆದಿದ್ದಾರೆ. ಓಡಿಶಾದಂತಹದ್ದೇ ಮಳಿಗೆ