‘ಡಂಕೆಲುನ್ನಾರು ಜಾಗ್ರತ’ ಎಂದರು.
ವಾವ್! ಎಂಬ ಉದ್ಘಾರ ನನ್ನಿಂದ ತನ್ನಿಂದ ತಾನೇ ಬಂತು
ಇದಕ್ಕೆ ಕಾರಣವಿತ್ತು.
ಚಂಪಾ ಮಂಗಳೂರಿಗೆ ಬಂದಿದ್ದರು. ಆಗ ನಾನು ಮಂಗಳೂರಿನಲ್ಲಿ ‘ಪ್ರಜಾವಾಣಿ’ಯ ವರದಿಗಾರನಾಗಿದ್ದೆ.
ಚಂಪಾ ಹಾಗೂ ನಾನು ಸೋಮೇಶ್ವರದ ಕಡಲ ದಂಡೆಯಲ್ಲಿ ನಿಂತಿದ್ದೆವು.
ಕಡಲು ಗೊತ್ತಿಲ್ಲದ ಚಂಪಾ ಅಲೆಗಳ ಅಬ್ಬರಕ್ಕೆ ಬೆರಗಾಗಿ ನಿಂತಿದ್ದರು.
ಆ ಕಡಲೋ ಒಂದು ಕ್ಷಣ ರಮಿಸುವಂತೆ, ಇನ್ನೊಂದು ಕ್ಷಣ ರೋಧಿಸುವಂತೆ, ಅದೇ ಮರುಕ್ಷಣದಲ್ಲಿ ಅಬ್ಬರಿಸುತ್ತಾ ಇತ್ತು.
ಚಂಪಾಗೆ ಇದೆಲ್ಲಾ ವಿಸ್ಮಯ
ನಾನು ಅವರ ಕಣ್ಣುಗಳಲ್ಲಿದ್ದ ವಿಸ್ಮಯವನ್ನು ನೋಡುತ್ತಾ
‘ಸರ್ ಕಡಲ ದಂಡೆಗಳು ತುಂಬಾ ದಿನ ನಮ್ಮ ಬಳಿ ಉಳಿಯುವುದಿಲ್ಲ’ ಎಂದೆ
ಅವರು ಗಾಬರಿಯಿಂದ ‘ಯಾಕೆ’ ಎಂದರು.
ಎಲ್ಲಾ ಕಡಲ ದಂಡೆಗಳನ್ನೂ ಬಹುರಾಷ್ಟ್ರೀಯ ಕಂಪನಿಗಳಿಗೆ ಒತ್ತೆ ಇಡುವ ಹುನ್ನಾರ ನಡೆಯುತ್ತಿದೆ ಎಂದೆ
ಅದೇಗೆ ಸಾಧ್ಯ ಎಂದರು.
ಮನಮೋಹನ್ ಸಿಂಗ್ ಸಾಹೇಬರು ಮೊನ್ನೆ ಮೊನ್ನೆ ತಾನೇ ಡಂಕೆಲ್ ಪ್ರಸ್ತಾವನೆಗೆ ಸಹಿ ಹಾಕಿ ಬಂದಿದ್ದಾರೆ.
ಇನ್ನು ಮೇಲೆ ಯಾವ ದೇಶ ಬೇಕಾದರೂ ಬಂದು ಇಲ್ಲಿ ಯಾವ ವ್ಯಾಪಾರ ಬೇಕಾದರೂ ಮಾಡಬಹುದಂತೆ
ಅದಕ್ಕೆ ನಮ್ಮ ದೇಶ ನಡೆಮುಡಿ ಹಾಸಿಕೊಡಬೇಕಂತೆ
ಈಗ ಅವರ ಕಣ್ಣು ಬೀಚ್ ಗಳ ಮೇಲೆ ಬಿದ್ದಿದೆ. ಇವು ಇನ್ನು ಕ್ಯಾಸಿನೋಗಳಾಗಿ, ಕುಡುಕರ ಕೇಂದ್ರವಾಗಿ ಹೋಗುವ ದಿನ ದೂರ ಇಲ್ಲ ಎಂದೆ
‘ಅದ್ಹೇಗೆ ಸಾಧ್ಯ ಇಲ್ಲಿ ಎಷ್ಟೊಂದು ಜನ ಮೀನುಗಾರರಿದ್ದಾರೆ ಇವರ ಕಥೆ ಎಲ್ಲಾ ಏನು’ ಎಂದರು.
ಮೀನುಗಾರರು ಬೀಚ್ ಗಳು ಅಷ್ಟೇ ಅಲ್ಲ ಸಾರ್, ಹಾಲು ಉತ್ಪಾದಿಸುವರು, ಕೊಡೆ ಮಾಡುವವರು, ಸೋಡಾ ತಯಾರಿಸುವವರು ಎಲ್ಲರಿಗೂ ಇದು ನೇಣಿನ ಹಗ್ಗವನ್ನು ತಯಾರು ಮಾಡಿದೆ ಎಂದೆ
ಆಗಲೇ ಚಂಪಾ ‘ಡಂಕೆಲುನ್ನಾರು ಜಾಗ್ರತ’ ಎಂದಿದ್ದು.
ದೊಂಗಲುನ್ನಾರು ಜಾಗ್ರತ ಎನ್ನುವುದು ಜನ ಮಾನಸವನ್ನು ಆಳಿದ ಸಿಕ್ಕಾಪಟ್ಟೆ ಫೇಮಸ್ ತೆಲುಗು ಸಿನೆಮಾ
ಚಂಪಾ ತಮ್ಮ ಎಂದಿನ ಶೈಲಿಯಲ್ಲಿ ಅದಕ್ಕೆ ಪಂಚ್ ನೀಡಿದ್ದರು.
ಆ ಕ್ಷಣವೇ ‘ಮೋಹನ್, ಈ ಬಗ್ಗೆ ನೀವು ಸಂಕ್ರಮಣಕ್ಕೆ ಒಂದು ವಿಶೇಷ ಸಂಚಿಕೆ ಯಾಕೆ ಸಂಪಾದಿಸಿ ಕೊಡಬಾರದು?’ ಎಂದರು.
ನಾನು ಸಾವರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಯ್ತು.
ಏಕೆಂದರೆ ನಾನು ‘ಸಂಕ್ರಮಣ’ ಓದಿ ಬೆಳೆದವನು.
‘ಸಂಕ್ರಮಣ’ ಆ ವೇಳೆಗೆ ನೆಲ್ಸನ್ ಮಂಡೇಲಾ ಬಗ್ಗೆ, ಮಂಡಲ್ ವರದಿ ಬಗ್ಗೆ, ಲೋಹಿಯಾ ಬಗ್ಗೆ ವಿಶೇಷಾಂಕಗಳನ್ನು ರೂಪಿಸಿ ಕನ್ನಡದ ಮನಸ್ಸನ್ನು ಸಾಕಷ್ಟು ತಿದ್ದಿದ್ದವು.
ಅದನ್ನು ಓದಿಕೊಂಡು ಅಂಬೆಗಾಲಿಡುತ್ತಿದ್ದವನಿಗೆ ಸಂಕ್ರಮಣದ ಸಂಪಾದಕ ಆಗು ಎಂದರೆ..?
ತಕ್ಷಣ ‘ಒಲ್ರೀ ಸರ..’ ಅಂತ ಅವರದೇ ಧಾಟಿಯಲ್ಲಿ ತಲೆ ಅಲ್ಲಾಡಿಸಿದೆ.
ಚಂಪಾ ಚಂಪಾನೇ
ನಾವು ಕಡಲ ದಂಡೆಯಿಂದ ಕಾಲು ತೆಗೆಯುವ ವೇಳೆಗೆ ಅವರು ನನ್ನನ್ನು ಒಪ್ಪಿಸಿ ಮುಗಿದಿತ್ತು.
ನನಗೆ ಈ ಕೆಲಸ ಆಗುತ್ತದೋ ಇಲ್ಲವೋ ಮಾಡುವುದೋ ಬೇಡವೋ ಎನ್ನುವ ತೂಗುಯ್ಯಾಲೆಯಲ್ಲಿಯೇ ಇದ್ದೆ.’ನೀನಾಸಂ’ನ ಕೆ ವಿ ಸುಬ್ಬಣ್ಣ, ‘ಚರಕ’ದ ಪ್ರಸನ್ನ ಸೇರಿದಂತೆ ಹಲವು ಸಾಂಸ್ಕೃತಿಕ ಸಾಹಿತ್ಯ ಲೋಕದ ಗಣ್ಯರಿಗೆ, ಹೋರಾಟಗಾರರಿಗೆ ಸಾಹಿತ್ಯ- ಸಾಂಸ್ಕೃತಿಕ ಲೋಕದ ಮೇಲೆ ಡಂಕೆಲ್ ಪ್ರಸ್ತಾವನೆ ಮಾಡಬಹುದಾದ ಪರಿಣಾಮದ ಬಗ್ಗೆ ಬರೆಯುವಂತೆ ಪತ್ರ ಬರೆದೆ.ಬಹುತೇಕ ಎಲ್ಲರೂ ‘ಆ ಬಗ್ಗೆ ನಮಗೇನೂ ಗೊತ್ತಿಲ್ಲ, ನೀವು ತರುವ ವಿಶೇಷಾಂಕಕ್ಕೆ ಕಾಯುತ್ತೇವೆ’ ಎಂದು ಮರು ಪತ್ರ ಬರೆದರು.ನಿಜಕ್ಕೂ ಆಗ ನನಗೆ ಖಚಿತವಾಗಿ ಹೋಯಿತು. ಇಲ್ಲ ಈ ವಿಶೇಷಾಂಕ ತರಲೇಬೇಕು ಅಂತ
ಆ ವೇಳೆಗೆ ನನ್ನ ಮುಂದೆ ಇದ್ದದ್ದು ಭಾಸ್ಕರ್ ಚಂದಾವರ್ಕರ್ ಅವರು ‘ನೀನಾಸಂ ಮಾತುಕತೆ’ಗೆ ಬರೆದಿದ್ದ ‘ಆದೇಶ ಸಂಸ್ಕೃತಿ ಮತ್ತು ಸಂಗೀತ’ಹಾಗೂ ಪೋಲೆಂಡ್ ನ ಖ್ಯಾತ ಚಿತ್ರ ನಿರ್ದೇಶಕ ಕ್ರಿಸ್ಟೋಫರ್ ಝನೂಸಿ ಬರೆದ ಒಂದು ಲೇಖನ.
ಅಲ್ಲಿಂದ ಶುರುವಾಯ್ತು ಸವಾಲುಗಳ ಸರಮಾಲೆ ಮೊದಲಿಗೆ ಈ ‘ಡಂಕೆಲ್’ ಅಂದ್ರೆ ಏನು ‘ಗ್ಯಾಟ್’ ಅಂದ್ರೇನು ‘ಟ್ರಿಪ್ಸ್’ ಅಂದ್ರೇನು, ‘ಇಂಟಲೆಕ್ಚ್ಯುಯಲ್ ಪ್ರಾಪರ್ಟಿ ರೈಟ್ಸ್’ ಅಂದ್ರೇನು ಅಂತ ನಾನೇ ಅರ್ಥ ಮಾಡಿಕೊಳ್ಳಬೇಕಿತ್ತು ನಾನು ಇದ್ದದ್ದು ಮಂಗಳೂರಿನಲ್ಲಿ. ಮೊಬೈಲ್ ಇಲ್ಲದ ಗೂಗಲ್ ಇಲ್ಲದ ಮೇಲ್ ಗಳಿಲ್ಲದ ಕಾಲ ಅದು.ಅಂತಹ ಸಮಯದಲ್ಲಿ ನನ್ನ ಎದುರು ಸವಾಲಿನ ಗುಡ್ಡವನ್ನು ನಾನೇ ಸೃಷ್ಟಿಸಿಕೊಂಡು ಕೂತೆ
ಆಗ ಮಂಗಳೂರಿನಲ್ಲಿಯೇ ಇದ್ದ ಕೆ ಫಣಿರಾಜ್ ಹಾಗೂ ನಾನು ಮತ್ತೆ ಮತ್ತೆ ಭೇಟಿಯಾಗಿ ನಮಗೆ ಗೊತ್ತಿದ್ದ ಅಷ್ಟು ಇಷ್ಟನ್ನು ಚರ್ಚೆ ಮಾಡಲು ಶುರು ಮಾಡಿದೆವು. ಅದು ಹಾಗಿರಬಹುದು ಇದು ಹೀಗಿರಬಹುದು ಎಂದು ಶುರುವಾದ ಚರ್ಚೆಯ ನಂತರ ಒಂದಿಷ್ಟು ಬೆಳಕಿನ ದಾರಿಗಳು ಗೋಚರವಾಗಲು ಶುರುವಾಯಿತು. ಆ ವೇಳೆಗೆ ಪ್ರೊ ಬಿ ಎ ವಿವೇಕ ರೈ ಅವರು ‘ಮುಂಗಾರು’ವಿನ ತಮ್ಮ ‘ಗಿಳಿಸೂವೆ’ ಅಂಕಣದಲ್ಲಿ ‘ಅಥೆನ್ಸಿನ ಅರ್ಥವಂತ ಮತ್ತು ಮನಮೋಹಕ ಬಜೆಟ್’ ಎನ್ನುವ ಲೇಖನ ಬರೆದರು.ಅದು ಇಡೀ ನನ್ನ ಕೆಲಸಕ್ಕೆ ಹೊಸದೇ ದಿಕ್ಕು ತೋರಿಸಿಬಿಟ್ಟಿತು. ಹೇಗೆ ಜಗತ್ತಿನ ಹುನ್ನಾರವನ್ನು ನಮ್ಮದೇ ಟೂಲ್ ಗಳ ಮೂಲಕ ಅರ್ಥ ಮಾಡಿಕೊಳ್ಳಬೇಕು ಎನ್ನುವುದು ಗೊತ್ತಾಯಿತು.
ಆಗ ಸಿಕ್ಕ ಸ್ಪಷ್ಟತೆಯಿಂದಾಗಿ ವಿ ಆರ್ ಕೃಷ್ಣ ಅಯ್ಯರ್, ಎಂ ಎನ್ ಶ್ರೀನಿವಾಸ್, ಎ ಜಿ ನೂರಾನಿ ಅವರ ಲೇಖನಗಳನ್ನು ಇದೇ ಬೆಳಕಿನಡಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಯಿತು. ಫಣಿರಾಜ್ ‘ಡಂಕೆಲ್ ಯಜಮಾನಿಕೆ ಹೇಗಿರಬಹುದು’ ಎನ್ನುವುದರ ಬಗ್ಗೆಯೂ, ನಾನು ಹೇಗೆ ‘ಈ ಡಂಕೆಲ್ ಪ್ರಸ್ತಾವನೆಗೆ ನೀಡುವ ಸಮ್ಮತಿ ಸಾಹಿತ್ಯ ಹಾಗೂ ಮಾಧ್ಯಮ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ’ ಎನ್ನುವುದನ್ನು ಅಧ್ಯಯನ ಮಾಡುವುದು ಎಂದು ಮಾತಾಡಿಕೊಂಡೆವು. ನೆನಪಿರಲಿ ನಾನು ಈ ಬಗ್ಗೆ ಆಲೋಚಿಸಿ ಲೇಖನ ಕೊಡುವಂತೆ ಮನವಿ ಮಾಡಿದ ಸುಮಾರು 50 ಮುಖ್ಯರ ಪೈಕಿ ಲೇಖನ ಕಳಿಸಿಕೊಟ್ಟದ್ದು ಚಿಂತಕ ಕೆ ಕೇಶವ ಶರ್ಮರು ಮಾತ್ರ.
ಮಾತಾಡಿಕೊಂಡಂತೆಯೇ ಈ ಎಲ್ಲವನ್ನೂ ಒಂದು ಚೌಕಟ್ಟಿನಲ್ಲಿಟ್ಟು ‘ಡಂಕೆಲ್: ಸಾಂಸ್ಕೃತಿಕ ಪಿಡುಗು’ ಎನ್ನುವ ‘ಸಂಕ್ರಮಣ’ ವಿಶೇಷ ಸಂಚಿಕೆಯನ್ನು ಸಂಪಾದಿಸಿಯೇಬಿಟ್ಟೆ. ಆ ವೇಳೆಗೆ ಕೃಷಿ ಲೋಕದ ಮೇಲೆ ಮಾತ್ರ ಈ ಡಂಕೆಲ್ ಪರಿಣಾಮ ಬೀರುತ್ತದೆ. ಅಲ್ಪ ಸ್ವಲ್ಪ ವೈದ್ಯ ಕ್ಷೇತ್ರದ ಮೇಲೆ ಎನ್ನುವುದು ಮಾತ್ರ ಚರ್ಚೆಯಾಗುತ್ತಿತ್ತು. ಅದನ್ನು ಸಾಹಿತ್ಯ, ಸಾಂಸ್ಕೃತಿಕ ಲೋಕಕ್ಕೂ ವಿಸ್ತರಿಸಿದ್ದು ನನಗೆ ನೆಮ್ಮದಿ ಕೊಟ್ಟ ವಿಷಯ.
ಚಂಪಾ ತಮ್ಮ ವಿಶೇಷ ಸಂಪಾದಕೀಯದೊಂದಿಗೆ ವಿಶೇಷ ಸಂಚಿಕೆ ನನ್ನ ಕೈಗಿತ್ತರು. ಸ್ವಲ್ಪ ದಿನ ಕಳೆದು ಅದನ್ನೇ ಪುಸ್ತಕವಾಗಿಯೂ ಹೊರತಂದರು.
ನಾನು ಉಸ್ಸಪ್ಪಾ ಎಂದು ಕೈತೊಳೆದು ಕೂತೆ.
ಆದರೆ ಅದು ಅಷ್ಟಕ್ಕೇ ಮುಗಿಯಲಿಲ್ಲ.
‘ನವಕರ್ನಾಟಕ’ದ ರಾಜಾರಾಮ್ ಅವರಿಂದ ಫೋನ್.
‘ಮೋಹನ್, ಡಂಕೆಲ್ ವಿಶೇಷಾಂಕ ನೋಡಿದೆ. ಅದರಲ್ಲಿ ನೀವು ಸ್ಯಾಟಲೈಟ್ ಟಿವಿ ಬಗ್ಗೆ ಬರ್ದಿದ್ದೀರಲ್ಲ. ಓದಿ ಗಾಬರಿಯಾಯಿತು.
ಅದನ್ನೇ ವಿಸ್ತರಿಸಿ ಒಂದು ಪುಸ್ತಕ ಬರೆದು ಕೊಡುತ್ತೀರಾ??’ ಎಂದರು.
ಮತ್ತೆ ಒಂದು ತಿಂಗಳು ನನ್ನ ಅಧ್ಯಯನ ವ್ರತ ಶುರುವಾಯಿತು.
ಸ್ಯಾಟಲೈಟ್ ಟಿ ವಿಯ ಪ್ರವೇಶವನ್ನು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ವಿ ಆರ್ ಕೃಷ್ಣ ಅಯ್ಯರ್ ಅವರು ‘ಆಕಾಶ ಮಾರ್ಗದ ದಾಳಿ’ ಎಂದು ಬಣ್ಣಿಸಿದ್ದರು.
ಇದೇ ಎಳೆಯನ್ನು ಹಿಡಿದುಕೊಂಡು ನಾನು ಸ್ಯಾಟಲೈಟ್ ಚಾನಲ್ ಗಳು ಮಾಡಬಹುದಾದ ಆಕ್ರಮಣವನ್ನೂ,
ಸಂಸ್ಕೃತಿ ತಿರುಚುವಿಕೆಯನ್ನೂ, ಸುದ್ದಿಯನ್ನು ಮನರಂಜನೆಯಾಗಿ ಪರಿವರ್ತಿಸಬಹುದಾಗಿರುವುದನ್ನೂ,
ಆಕಾಶವಾಣಿ, ಹಾಲಿವುಡ್, ಇಂಟರ್ ನೆಟ್ ಜಗತ್ತಿನ ಮೇಲೆ ಮಾಡಬಹುದಾದ ದಾಳಿಯ ಬಗ್ಗೆ ಬರೆದು ರಾಜಾರಾಮ್ ಅವರಿಗೆ ದಾಟಿಸಿದೆ.
ರಾಜಾರಾಮ್ ಅವರು ‘ನವಕರ್ನಾಟಕ’ದಿಂದ ಎಷ್ಟು ಮುತುವರ್ಜಿಯಿಂದ, ಎಷ್ಟು ಚೆನ್ನಾಗಿ ಈ ಪುಸ್ತಕ ತಂದರೆಂದರೆ ನಾನು ಥ್ರಿಲ್ ಆಗಿ ಹೋದೆ.
ಪುಸ್ತಕಕ್ಕೆ ಗುಜ್ಜಾರ್ ಬರೆದ ಚಿತ್ರಗಳಂತೂ ತನ್ನದೇ ರೀತಿಯಲ್ಲಿ ಚಾನಲ್ ಗಳ ಪ್ರವೇಶದ ಭೀಕರತೆಯನ್ನು ವಿವರಿಸಿತ್ತು.
ನಾನು ಇನ್ನೂ ಆ ಥ್ರಿಲ್ ನಿಂದ ಹೊರಬಂದಿರಲಿಲ್ಲ. ಅಷ್ಟರಲ್ಲಿ ಮತ್ತೆ ರಾಜಾರಾಮ್ ಕರೆ.
‘ನೀವು ಟಿ ವಿ ಬಗ್ಗೆ ಬರೆದುಕೊಟ್ಟಿರಿ, ಆದರೆ ಡಂಕೆಲ್ ಪ್ರಸ್ತಾವನೆ ಪತ್ರಿಕಾ ರಂಗದ ಮೇಲೆ ಬೀರುವ ಪರಿಣಾಮ ಯಾಕೆ ಬರೆಯಬಾರದು?’ ಅಂತ
ನಾನು ಸಾಕಷ್ಟು ಹಿಂದೆ ಮುಂದೆ ನೋಡಿ ಕಾಲ ತಳ್ಳಿ ಅವರು ಆ ಯೋಜನೆ ಕೈಬಿಡಲಿ ಎನ್ನುವ ಎಲ್ಲಾ ಹುನ್ನಾರ ಮಾಡಿದೆ.
ರಾಜಾರಾಮ್ ರಾಜಾರಾಮೇ. ಪಟ್ಟು ಒಂದಿಷ್ಟೂ ಸಡಿಲವಾಗಲಿಲ್ಲ.
ಹಾಗೆ ಬಂದ ಕೃತಿ ‘ಪತ್ರಿಕಾರಂಗಕ್ಕೆ ಲಗ್ಗೆ’.
ಇದಕ್ಕೆ ಆಗ ‘ದಿ ವೀಕ್’ನಲ್ಲಿ ಕಲಾವಿದರಾಗಿದ್ದ ಪ್ರಕಾಶ್ ಶೆಟ್ಟಿ ಬರೆದ ಚಿತ್ರಗಳನ್ನು ನೀವು ನೋಡಬೇಕು
ಇಲ್ಲಿಗೆ ಕಥೆ ಮುಗಿಯಿತು ಎನ್ನುವ ವೇಳೆಗೆ ನಾನು ತುಂಬು ಗೌರವದಿಂದ ನೋಡುವ ಜಿ ರಾಮಕೃಷ್ಣ ಅವರು ಪತ್ರ ಬರೆದರು.
ಸ್ವಾತಂತ್ರ್ಯ ಬಂದ 50 ವರ್ಷದಲ್ಲಿ ಮಾಧ್ಯಮದ ಮೇಲಾಗಿರುವ ಬದಲಾವಣೆಯನ್ನು ದಾಖಲಿಸುತ್ತೀರಾ ಎಂದು
ಅವರಿಗೆ ‘ನೋ’ ಹೇಳುವ ತಾಖತ್ತು ನನ್ನ ಬಳಿ ಎಂದೂ ಇರಲಿಲ್ಲ.
ಹಾಗಾಗಿ ಹೊರಬಂದದ್ದೇ ‘ಮಾಧ್ಯಮ ಮತ್ತು ಸ್ವಾತಂತ್ರ್ಯ’ ಕೃತಿ.
ನನ್ನ ‘ಕಾಫಿ ಕಪ್ಪಿನೊಳಗೆ ಕೊಲಂಬಸ್’ ಆಗಲೀ, ಬರಲಿರುವ ‘ಚಿಕ್ ಚಿಕ್ ಸಂಗತಿ’ ಆಗಲೀ,
ಒಂದು ಕೊರೋನಾ, ಒಂದು ಚಪ್ಪಲಿ, ಒಂದು ಟೂತ್ ಪೇಸ್ಟ್, ಒಂದು ಬ್ಯೂಟಿ ಕಂಟೆಸ್ಟ್, ಒಂದು ಬಾರ್ಬಿ ಡಾಲ್..
ಎಲ್ಲವನ್ನೂ ಅರ್ಥ ಮಾಡಿಕೊಳ್ಳಲು ಈ ಜಾಗತೀಕರಣದ ಅಧ್ಯಯನ ನನಗೆ ಸಾಧ್ಯ ಮಾಡಿಕೊಟ್ಟಿದೆ.
ಕಡಲ ತಡಿಯಿಂದ ನನ್ನನ್ನು ಜಾಗತೀಕರಣದ ದಿಗಂತದವರೆಗೆ ಕೈಹಿಡಿದು ನಡೆಸಿಕೊಂಡು ಬಂದ ಎಲ್ಲರಿಗೂ ಶರಣು.