ಜಿ.ಎನ್ ಮೋಹನ್ ಸ್ಪೆಷಲ್ : ಬನ್ನಿ ಬೆನ್ನು ತಟ್ಟೋಣ..

ಬನ್ನಿ ಬೆನ್ನು ತಟ್ಟೋಣ..
——
‘ಮೊದಲು ನನ್ನ ಮುಖಕ್ಕೆ ಬಂದು ಬಿದ್ದದ್ದು ಮೊಟ್ಟೆ..
ಆ ನಂತರ ಚಪ್ಪಾಳೆ..’
– ಹೀಗೆ ಹೇಳಿದ್ದು ಜಿ ಆರ್ ವಿಶ್ವನಾಥ್.jk-logo-justkannada-logo
ಹೌದು ಅದೇ ಜಿ ಆರ್ ವಿಶ್ವನಾಥ್.
ತಮ್ಮ ಮೊದಲ ಟೆಸ್ಟ್ ನಲ್ಲೇ ಸೆಂಚುರಿ ಸಿಡಿಸಿದ, ಎಲ್ಲರೂ ಅಬ್ಬರದ ಆಟಕ್ಕೆ ಶರಣಾಗಿದ್ದ ಸಮಯದಲ್ಲಿ ಕ್ರಿಕೆಟ್ ನ ಒಂದೊಂದು ಹೊಡೆತಕ್ಕೂ ಕಾವ್ಯದ ಸ್ಪರ್ಶ ನೀಡಿದ ಜಿ ಆರ್ ವಿಶ್ವನಾಥ್.
ಆಸ್ಟ್ರೇಲಿಯಾ ವಿರುಧ್ದದ ಟೆಸ್ಟ್ ಅದು.
4 ನೇ ಕ್ರಮಾಂಕ ಎಂದ ತಕ್ಷಣವೇ ಟೆನ್ಷನ್ ಗೆ ಒಳಗಾದ ಜಿ ಆರ್ ವಿಶ್ವನಾಥ್ ಮೊದಲ ಇನ್ನಿಂಗ್ಸ್ ನಲ್ಲಿ ಸಿಡಿಸಿದ್ದು ಭರ್ಜರಿ ಸೊನ್ನೆ.
ತಲೆ ತಗ್ಗಿಸಿ ಸ್ಟಾಂಡ್ ಗೆ ಮರಳುತ್ತಿದ್ದ ಜಿ ಆರ್ ಗೆ ಅಪ್ಪಳಿಸಿದ್ದು ಮೊಟ್ಟೆ, ಕೊಳೆತ ಮೊಟ್ಟೆ..
-ಹಾಗಂತ ಹೇಳುವಾಗ ಜಿ ಆರ್ ವಿಶ್ವನಾಥ್ ಅವರ ದನಿಯಲ್ಲಿ ಇನ್ನೂ ಖೇದವಿತ್ತು.
ಆದರೆ ಅದೇ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಅದೇ ಜಿ ಆರ್ ವಿಶ್ವನಾಥ್ ಸಿಡಿಸಿದ್ದು 137 ರನ್. ಅದರಲ್ಲಿ 25 ಬೌಂಡರಿಗಳೇ..
ಜಿ ಆರ್ ವಿಶ್ವನಾಥ್ ಸ್ಟಾಂಡ್ ಗೆ ಮರಳುವಾಗ ಯಾವ ಕೈಗಳು ಮೊಟ್ಟೆ ಎಸೆದಿದ್ದವೋ ಅದೇ ಕೈಗಳು ಕಿವಿಗಡಚಿಕ್ಕುವಂತೆ ಚಪ್ಪಾಳೆ ತಟ್ಟುತ್ತಿದ್ದವು.
‘ಬಿಗ್ ಬಾಸ್’ನ ಯಾವುದೋ ಒಂದು ಸೀಸನ್ ನಲ್ಲಿ ಕಿಚ್ಚನ ಜೊತೆ ಅಡುಗೆ ಮನೆಗೆ ಬಂದ ಜಿ ಆರ್ ಸರ್ ಸುದೀಪ್ ಗೆ ಒಂದು ಮಾತು ಕೇಳಿದರು-
‘ಸುದೀಪ್ ಈ ಎರಡರ ನಡುವೆ ಏನು ವ್ಯತ್ಯಾಸವಾಯ್ತು ಗೊತ್ತಾ?’ ಎಂದರು.
‘ನಾನು ಮೊಟ್ಟೆ ಹೊಡೆಸಿಕೊಂಡು ಆತಂಕದಿಂದ ಕುಳಿತಿದ್ದೆ. ನನ್ನ ಬೆನ್ನು ಯಾರೋ ತಟ್ಟಿದರು. ಯಾರು ಎಂದು ತಿರುಗಿನೋಡಿದರೆ ತಂಡದ ಕ್ಯಾಪ್ಟನ್’.
‘ಯಂಗ್ ಬಾಯ್, ಟೆನ್ಷನ್ ಮಾಡಿಕೊಳ್ಳಲೇಬೇಡ. ನೀನು ಈ ಇನ್ನಿಂಗ್ಸ್ ನಲ್ಲಿ ಸೆಂಚುರಿ ಹೊಡೆಯುತ್ತೀಯಾ’ ಅಂತ ಅಂದರು.GN Mohan spacial
ಆ ಒಂದು ಪುಟ್ಟ ಬೆನ್ನು ತಟ್ಟುವಿಕೆ ಎಲ್ಲವನ್ನೂ ಬದಲು ಮಾಡಿಹಾಕಿಬಿಟ್ಟಿತು.
ಸೋಲಿನಿಂದ ಎತ್ತಿಕೊಂಡು ಗೆಲುವಿನ ದೋಣಿಯ ಮೇಲೆ ಕೂಡಿಸಿಬಿಟ್ಟಿತು.
ಹೌದಲ್ಲಾ, ಒಂದು ಪುಟ್ಟ ಬೆನ್ನು ತಟ್ಟುವಿಕೆ. ದೊಡ್ಡ ಗೆಲುವು. ಬನ್ನಿ ಬೆನ್ನು ತಟ್ಟೋಣ