ಜಿ.ಎನ್ ಮೋಹನ್ ಸ್ಪೆಷಲ್ : ರಾತ್ರೋರಾತ್ರಿ ಫೋನ್’ಕುಯ್’ ಎಂದಾಗ

ರಾತ್ರೋರಾತ್ರಿ ಫೋನ್
‘ಕುಯ್’ ಎಂದಾಗ
———–
ಜಿ ಎನ್ ಮೋಹನ್

ಸಾರ್, ನಾನು ವೆಂಕಪ್ಪಗೌಡ- ರಾತ್ರೋರಾತ್ರಿ ಫೋನ್ ‘ಕುಯ್’ ಎಂದಾಗ ಕಂಡದ್ದು ಅಪರಿಚಿತ ನಂಬರ್.jk-logo-justkannada-logo

ಯಾರು? ಅಂತ ಕೇಳುವ ಮುನ್ನವೇ ಆ ಕಡೆ ಇದ್ದ ವ್ಯಕ್ತಿ ತನ್ನನ್ನು ಪರಿಚಯಿಸಿಕೊಂಡರು.

ಎಲ್ಲಿಂದ ಅಂತ ಕೇಳಿದೆ.

ವೈಟ್ ಫೀಲ್ಡ್ ನಿಂದ ಅಂದರು.

‘ಏನು ವಿಷಯ?’ ಅಂತ ಕೇಳುವ ಪ್ರಮೇಯವೇ ಬರಲಿಲ್ಲ. ಅವರು ಆಗಲೇ ಶುರು ಮಾಡಿದ್ದರು. ‘ಸಾರ್, ಸರ್ಕಾರದವರು ಶಾಲಾ ಮಕ್ಕಳಿಗೆ ಸೈಕಲ್ ಕೊಡ್ತಾರಲ್ಲಾ ಅದನ್ನೆಲ್ಲಾ ಅವರ ಅಪ್ಪ ಅಮ್ಮ ಮಾರಿಕೊಳ್ತಾ ಇದಾರೆ. ಹಾಫ್ ರೇಟ್ ಗೆ..’ ಅಂದರು.

ತಕ್ಷಣ ನನ್ನ ಕಿವಿ ನೆಟ್ಟಗಾಯಿತು.

ಅಲರ್ಟ್ ಆದ ನಾನು ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಾ ಹೋದೆ. ವೆಂಕಪ್ಪಗೌಡ ಸಹ ಪಟ ಪಟ ಉತ್ತರ ಕೊಡುತ್ತಾ ಹೋದರು.

ಆ ನಿಮಿಷಕ್ಕೆ ನಾನೇ ‘ಸಿ ಎಸ್ ಪಿ, ಟಿ ಎನ್ ಸೀತಾರಾಂ’. ಅಲ್ರೀ ವೆಂಕಪ್ಪ, ಯಾರೋ ಒಬ್ರು ಸೈಕಲ್ ಮಾರಿಬಿಟ್ರು ಅಂತ ಎಲ್ರೂ ಹಾಗೆ ಅನ್ನೋ ತೀರ್ಮಾನಕ್ಕೆ ಬರೋಕಾಗಲ್ಲ ಅಂತ ಲಾಯರ್ ಪಾಯಿಂಟ್ ಹಾಕಿದೆ.GN Mohan Special.

ವೆಂಕಪ್ಪ ಗೌಡ ನನ್ನ ಮುಂದೆ ಇಡೀ ಕಥೆಯನ್ನೇ ಬಿಚ್ಚಿಟ್ಟರು.

ವೆಂಕಪ್ಪ ಇನ್ನೂ ಮಾತಾಡ್ತಾ ಇದ್ದರು. ನಾನು ನನ್ನ ನೆನಪುಗಳ ರಿವೈಂಡ್ ಮಾಡತೊಡಗಿದೆ. ಸುಮಾರು 12 ವರ್ಷದ ಹಿಂದೆ ನನಗೆ ಇದೇ ತರಹದ ಕಾಲ್ ಬಂದಿತ್ತು. ‘ಸೊಲ್ಲಾಪುರದ ಇಂತಿಂತಾ ಸ್ಟೇಶನ್ ನಲ್ಲಿ ಒಬ್ಬನ್ನ ಅರೆಸ್ಟ್ ಮಾಡಿದ್ದಾರೆ. ಕರ್ನಾಟಕಕ್ಕೆ ಕರ್ನಾಟಕಾನೇ ಬೆಚ್ಚಿ ಬೀಳೋ ವಿಷ್ಯ ಇದೆ’ ಅಂತ. ಏನು, ಎತ್ತ ಕೇಳೋಣ ಅಂದ್ರೆ ಆ ಕಡೆ ಇದ್ದ ವ್ಯಕ್ತಿ ಫೋನ್ ಕಟ್ ಮಾಡಿ ಆಗಿತ್ತು.

ಸೊಲ್ಲಾಪುರ ಏನ್ ಪಕ್ಕದಲ್ಲಿದ್ಯಾ? ಹಿಂಗ್ ಹೋಗಿ ಹಂಗ್ ಬಂದ್ಬಿಡೋದಕ್ಕೆ. ಅದಿರೋದು ಮಹಾರಾಷ್ಟ್ರದಲ್ಲಿ. ಗಂಟೆಗಟ್ಟಲೆ ಜರ್ನಿ. ಆಗ ಹೇಳಿ ಕೇಳಿ ಗುಲ್ಬರ್ಗದಲ್ಲಿ ರಣಬಿಸಿಲು. ಒಂದು ಕಿಲೋ ಮೀಟರ್ ದಾಟೋ ವೇಳೆಗೆ ‘ಹಾರುತಿದೆ ಎನ್ನಯ ಹರಣ, ಕೇಳಬೇಡ ಕಾರಣ..’ ಅನ್ನೋ ಸ್ಥಿತಿ.

ಅಲ್ಲಿ ಕನ್ನಡ ಬೇರೆ ನಡೆಯೋದಿಲ್ಲ. ಜೇಬಲ್ಲಿ ಸ್ವಲ್ಪಾನಾದ್ರೂ ಮರಾಠಿ ಇರ್ಬೇಕು. ಫೋನ್ ಮಾಡಿದವನು ತಾನು ಯಾರು ಅಂತ ಹೇಳಿರಲಿಲ್ಲ. ಕಪಿಚೇಷ್ಟೆ ಮಾಡೋರಿಗೆ ಫೋನ್ ಒಂದು ಒಳ್ಳೆ ಆಟದ ಸಾಮಾನು.

ರಾತ್ರಿ 2 ಗಂಟೆಗೆ ಫೋನ್ ಮಾಡೋದು ಎತ್ತಿದರೆ ‘ಬ್ಯಾ ಬೋ..ಬ್ಲ..’ ಅನ್ನೋ ಭಾಷೆ ಬಳಸೋದು. ಯಾಕಪ್ಪಾ? ಏನಪ್ಪಾ? ಅಂತ ಕೇಳೋದ್ರೊಳಗೆ ಬಾಯಿ ತೀಟೆ ತೀರಿಸಿ ಸುಮ್ಮನಾಗೋದು.

ಇಂತದ್ದೇ ನೂರಾರು ಆಶೀರ್ವಾದ ಪಡಕೊಂಡ ನಾನು ಇದನ್ನೂ ಅದೇ ಲಿಸ್ಟ್ ಗೆ ಸೇರಿಸಿ ಸುಮ್ಮನಾಗಿಬಿಡೋಣ ಅಂದುಕೊಂಡೆ.

ಆದರೂ ಜರ್ನಲಿಸ್ಟ್ ಬುದ್ದಿ. ‘ಪ್ರತ್ಯಕ್ಷ ನೋಡಿದರೂ ಪ್ರಮಾಣಿಸಿ ನೋಡು’ ಅಂತ ಕಲಿತಿರೋವ್ರು. ಎಷ್ಟು ದೂರ ಆಗ್ಲಿ, ಯಾವ ಭಾಷೆ ಆದರೂ ಅಗಲಿ ಹೋಗಿ ಬಂದುಬಿಡಬಾರದ್ಯಾಕೆ? ಹೋದ್ರೆ ಕಲ್ಲು, ಬಂದ್ರೆ ಬೆಟ್ಟ ಅನಿಸ್ತು.

‘ಕನ್ನಡಪ್ರಭ’ದ ಶೇಷಮೂರ್ತಿ ಅವಧಾನಿ, ಯು ಎನ್ ಐನ ವೆಂಕಟೇಶ್ ಒಟ್ಟಾಗಿ ಪೋಲೀಸ್ ಸ್ಟೇಶನ್ ಗೆ ನುಗ್ಗಿದಾಗ ಷಾಕ್ ಕಾದಿತ್ತು.

ಅಲ್ಲಿನ ಪೋಲೀಸ್ ವರಿಷ್ಠರ ಮುಂದೆ ನಿಂತಿದ್ದ ಕೇಡುಗಣ್ಣಿನ, ಕುರುಚಲು ಗಡ್ಡದ ಆ ವ್ಯಕ್ತಿ ನಾನು ಏನಿಲ್ಲಾ ಅಂದ್ರು 20 ಕೊಲೆ ಮಾಡಿದ್ದೀನಿ ಅಂದ ಹೇಳಿಕೆ ಕೊಡ್ತಾ ಇದ್ದ.

ಯಾರೇ ದುಡ್ಡು ಕೊಟ್ರು ನಾವು ಕೊಲೆಗೆ ರೆಡಿ. ಕರ್ನಾಟಕ ಮಿನಿಸ್ಟರ್ ಒಬ್ರು ಹೇಳಿದ್ದಕ್ಕೆ ಹತ್ತು ಕೊಲೇನಾದ್ರೂ ಮಾಡಿದೀವಿ ಅಂತ ‘ಹೀಗೂ ಉಂಟೆ?’ ಅನ್ನೋ ಥರಾ ಕಥೆ ಹೇಳ್ತಾ ಇದ್ದ.

‘ಸುಪಾರಿ ಮರ್ಡರ್’ ಅನ್ನೋ ಹೊಸ ಶಬ್ದ ಕೇಳಿದ್ದೇ ಅವಾಗ.

ಇದು ಗೊತ್ತದದ್ದೇ ಕರ್ನಾಟಕ ಅದುರಿ ಹೋಗಿತ್ತು. ಮಿನಿಸ್ಟ್ರು ಸಾಹೇಬರು ವರ್ಷಗಟ್ಟಲೆ ಮೀಡಿಯಾ ಕಟಕಟೆಯಲ್ಲಿ ನಿಂತ್ಕೋಬೇಕಾಗಿ ಬಂತು.

ನೀವು ಯಾರ ಜೊತೆಗಾದರೂ ಕೈ ಕುಲುಕಿ. ನೀವು ಜರ್ನಲಿಸ್ಟ್ ಅಂತ ಗೊತ್ತಾದ ತಕ್ಷಣ ಎರಗಿ ಬರೋ ಮೊದಲ ಪ್ರಶ್ನೆ ‘ಅಲ್ಲಾ, ಅದೆಲ್ಲೋ ಕೆಂಗೇರಿನಲ್ಲಿ ಬಾಂಬ್ ಇಟ್ರೆ ಎಂಜಿ ರೋಡ್ ಆಫೀಸ್ ನಲ್ಲಿ ಕುಳಿತಿರೋ ನಿಮಗೆ ಹೆಂಗೆ ಗೊತ್ತಾಗುತ್ತೆ ಅಂತಾನೋ, ಸೌಂದರ್ಯ ಹೆಲಿಕಾಪ್ಟರ್ ಕ್ರ್ಯಾಶ್ ಆಯ್ತು ಅಂತ ಅಷ್ಟು ಬೇಗ ಹೇಗೆ ಗೊತ್ತಾಗುತ್ತೆ? ಅಂತಾನೋ, ಐಶ್ವರ್ಯ ರೈ ಕ್ಯಾರಿಯಿಂಗಾ ಇಲ್ವಾ ಅಂತ ಹೇಗೆ ಗೊತ್ತು ಮಾಡ್ಕೋತೀರಾ? ಅಂತಾನೋ, ಕೊತ್ವಾಲ ರಾಮಚಂದ್ರ ಮರ್ಡರ್ ಆಗಿದ್ದ ನೆಕ್ಸ್ಟ್ ಸೆಕೆಂಡ್ ಅಲ್ಲಿರ್ತೀರಲ್ಲ. ಅದು ಹೆಂಗೆ? ಅಂತಾನೋ ಪ್ರಶ್ನೆ ಬಂದೇ ಬರುತ್ತೆ.

ನಾನು ಯಾವಾಗಲೂ ಹೇಳ್ತಿರ್ತೀನಿ. ‘ನಾವು ಸಾಯಿಬಾಬಾ ಥರಾ. ಯಾವಾಗಲೂ ಗಾಳೀಲಿ ಕೈ ಆಡಿಸ್ತಾ ಇರ್ಬೇಕು. ಒಂದು ಸಲ ನೆಲ್ಲೀಕಾಯಿ ಸಿಗುತ್ತೆ. ಇನ್ನೊಂದ್ಸಲ ಕುಂಬಳ ಕಾಯೀನೆ ಸಿಗಬಹುದು’ ಅಂತ.

ನ್ಯೂಸ್ ಅನ್ನೋದು ಎಲ್ಲಿ ಬೇಕಾದರೂ ಇರುತ್ತೆ. ನೋಡೋ ಕಣ್ಣಿರ್ಬೇಕು ಅಷ್ಟೇ. ಮೂಸೋ ಮೂಗಿರ್ಬೇಕು. ಕೇಳೋ ಕಿವಿ ಇರ್ಬೇಕು. ಅವಾಗ್ಲೇ ‘ಎಲ್ಲಿದ್ದೆ ಇಲ್ಲೀ ತನಕ, ಎಲ್ಲಿಂದ ಬಂದ್ಯವ್ವಾ?’ ಅಂತ ಕುತೂಹಲ ಹುಟ್ಟೋದು.

ಮೊನ್ನೆ ಮಂಗಳೂರಿಗೆ ಹೋಗಿದ್ದೆ. ರೈಲಿನಿಂದ ಇಳಿದ ಟಾಯ್ಲೆಟ್ ಕಡೆ ಹೋಗ್ತಿದ್ದವನು ಥಟ್ಟಂತ ನಿಂತೆ. ಆ ಟಾಯ್ಲೆಟ್ ಮುಂದೆ ಒಂದು ಸ್ಮಾರಕ. ಅದು ಯಾವ ವ್ಯಕ್ತಿಯದ್ದೂ ಅಲ್ಲ, ಯಾವ ಶಕ್ತಿಯದ್ದೂ ಅಲ್ಲ. ಒಂದು ಮೈಲಿಕಲ್ಲಿನದ್ದು.

‘ಮದ್ರಾಸ್ 550 ಮೈಲು’ ಅಂತಿತ್ತು.

ಟಾಯ್ಲೆಟ್ ಹೋಗಬೇಕು ಅನ್ನೋದು ಮರತೇಹೋಯ್ತು. ಅಲ್ಲಿದ್ದ ಕೂಲಿಯಿಂದ ಹಿಡಿದು ಸ್ಟೇಶನ್ ಮಾಸ್ತರ್ ವರೆಗೆ ಗರ ಗರ ತಿರುಗಿದೆ.

ಕಥೆ ಇಷ್ಟು. ಬ್ರಿಟಿಶ್ ಆಡಳಿತ ಇದ್ದಾಗ ಹಾಕಿದ ಕಲ್ಲು ಅದು. ಆಗ ಒಂದು ಪುಟ್ಟ ಊರಾಗಿದ್ದ ಮಂಗಳೂರು ಈಗ ದೊಡ್ಡ ಜಂಕ್ಷನ್ ಆಗಿ ಬೆಳೆದಿದೆ. ಆಗಿನ ಕಾಲ ನೆನಪಿರಲಿ ಅಂತ ಆ ಕಲ್ಲಿಗೂ ಒಂದು ಸ್ಮಾರಕ ಕಟ್ಟಿದ್ದಾರೆ. ಆ ಕಲ್ಲು ಅಂದಿನ ಚರಿತ್ರೆ ಹೇಳುತ್ತಾ ನಿಂತಿದೆ.

ಸುದ್ದಿ ಅನ್ನೋದೇ ಹಾಗೆ. ಒಬ್ಬ ವರದಿಗಾರ ಅದನ್ನ ಬರೆದಿರಬಹುದು. ಆದರೆ ಅದಕ್ಕೆ ಕಣ್ಣು ಕೈ ಕಿವಿ ಬಾಯಿ ಮೂಡಿಸೋಕೆ ಅನಾಮಿಕರು ಹತ್ತಾರು ಜನ ಕೈ ಜೋಡಿಸಿರ್ತಾರೆ. ‘ಎನಿತು ಜನ್ಮದಲಿ, ಎನಿತು ಜೀವರಿಗೆ, ಎನಿತು ನಾವು ಋಣಿಯೋ..’

ಹಾಗಿಲ್ಲದೆ ಹೋದ್ರೆ, ಮಿಸ್ಟರ್ ರೇಣುಕಾಚಾರ್ಯ ಅವರು ನರ್ಸ್ ಜಯಲಕ್ಷ್ಮಿ ಜೊತೆ ಟಚಿಂಗ್ ಟಚಿಂಗ್ ಮಾಡ್ತಾ ಇರೋದು ಪತ್ರಿಕೆ ಪುಟಕ್ಕೆ ಬಂದು ಬೀಳೋದಾದ್ರೂ ಹೇಗೆ. ಬುರ್ಖಾ ಹಾಕ್ಕೊಂಡು ಹಾಸ್ಪಿಟಲ್ ಗೆ ಹೋದರೂ ಅದು ರಾಧಿಕಾನೇ ಅಂತ ಗೊತ್ತಾಗೋದಾದ್ರೂ ಹೇಗೆ?

ಮಂಗಳೂರು ರೋಡ್ ಸೈಡ್ ನಲ್ಲಿ ಪಾನಿಪೂರಿ ತಿಂದು ಕೈ ಒರೆಸಿಕೊಳ್ಳೋಕೆ ಒಂದು ಪೇಪರ್ ಎಳ್ಕೊಂಡೆ. ಕೈ ತಿಕ್ಕಿದ ನಂತರ ಅದರ ಮೇಲೆ ಕಣ್ಣಾಡಿಸಿದರೆ ಒಳ್ಳೆ ವರದಿ ಇತ್ತು.

ಪುತ್ತೂರು ಕಡಬದ ಹತ್ತಿರ ಬಂಟ್ರ ಅನ್ನೋ ಹಳ್ಳಿ ಇದೆ. ಮನೆಗೆಲಸ ಮಾಡ್ಕೊಂಡು ಬಡತನ ಹೊದ್ದುಕೊಂಡು ಇದ್ದ ಹುಡುಗಿಯೊಬ್ಬಳಿಗೆ ಸಾಕ್ಷರತಾ ಆಂದೋಲನ ಶುರುವಾದದ್ದೇ ಹುರುಪು ಬಂದುಬಿಡ್ತು.

ನೇರ ಏಳನೇ ಕ್ಲಾಸ್ ಎಗ್ಸಾಮ್ ಬರೆದಳು. ನಂತರ ನೇರ ಎಸ್ ಎಸ್ ಎಲ್ ಸಿ.. ಸೈ ಅನ್ನೋ ಅಂತ ಮಾರ್ಕ್ಸು.

ಆ ಪೇಪರ್ ತುಂಡನ್ನ ಜೋಬಿಗೆ ಸೇರಿಸಿದೆ. ಆಫೀಸಿಗೆ ಬಂದವನೇ ಗೆಳೆಯ, ಪುತ್ತೂರಿನ ಐ ಕೆ ಬೊಳುವಾರ್ ಗೆ ಫೋನ್ ತಿರುಗಿಸಿದೆ. ಮನೆಯ ಕತ್ತಲ ಕೋಣೆಯಲ್ಲಿ ಉಳಿದು ಹೋಗಿಬಿಟ್ಟಿದ್ದ ಒಬ್ಬ ಹುಡುಗಿ ಉಡುಪಿಯ ಪ್ರತಿಷ್ಠಿತ ವೈಕುಂಠ ಬಾಳಿಗಾ ಲಾ ಕಾಲೇಜು ಸೇರಿ ನಂತರ ವಕೀಲೆಯಾಗುವವರೆಗೂ ಬೆಳೆದಿದ್ದಳು.

ಹೌದಲ್ಲಾ ಒಂದು ಪೇಪರ್ ತುಂಡು ನನ್ನನ್ನ ಎಳೆದುಕೊಂಡು ಹೋಗಿ ಕೋರ್ಟ್ ಬಾಗಿಲಿಗೆ ನಿಲ್ಲಿಸಿತಲ್ಲಾ!

ಇನ್ನೊಂದು ಘಟನೆ ನೆನಪಾಯ್ತು. ಗುಲ್ಬರ್ಗದ್ದು. ಗೆಳೆಯ, ವಕೀಲ ಪಿ ವಿಲಾಸ್ ಕುಮಾರ್ ಜಿಲ್ಲಾ ಕೋರ್ಟ್ ನಲ್ಲಿದ್ದರು. ಹಾಯ್ ಹೇಳಿ ಹೋಗೋಣ ಅಂತ ಸ್ಕೂಟರ್ ತಿರುಗಿಸಿದೆ. ಆ ಸಂತೆಯಲ್ಲಿ ಕಂಡ ಒಂದು ಮುಖ ಪರಿಚಯದ್ದು. ಹೆಸರು ಮಾಡಿದ್ದ ಸಾಹಿತಿ.

ಕೋರ್ಟ್ ಕಡತಗಳ ಬೆನ್ನತ್ತಿದ್ದಾಯ್ತು. ಆಗ ಹೊರಬಂತು ಒಂದು ಹೊಸ ಹಗರಣ. ಎಲ್ಲರೂ ಮರತೇಹೋಗಿದ್ದ, ಮುಗಿದು ಹೋಯ್ತು ಅಂದುಕೊಂಡಿದ್ದ ಒಂದು ಕೇಸು ಮತ್ತೆ ತಲೆ ಎತ್ತಿ ನಿಂತಿತ್ತು. ಕೆಎಎಸ್ ಪರೀಕ್ಷೆಯ ಮೌಲ್ಯಮಾಪನವನ್ನು ತಾನು ಮಾಡದೇ ತನ್ನ ವಿದ್ಯಾರ್ಥಿನಿಯಿಂದ ಮಾಡಿಸಿ ಸಿಕ್ಕಿಹಾಕಿಕೊಂಡಿದ್ದ ಸಾಹಿತಿ ಮತ್ತೆ ಕೋರ್ಟ್ ಬಾಗಿಲಿಗೆ ಬರುವಂತಾಗಿತ್ತು. ಪ್ರಜಾವಾಣಿಯ ಪುಟಕ್ಕೆ ತಿಂಗಳುಗಟ್ಟಲೆ ಸುಗ್ರಾಸ ಸುದ್ದಿ.

ಬೀದರ್ ನ ಬಸವ ಕಲ್ಯಾಣದಲ್ಲಿ ಹದಿನಾರು ಸಾವಿರಕ್ಕೂ ಹೆಚ್ಚು ಲಾರಿ ಕಂಡಾಗ, ಗುಲ್ಬರ್ಗದ ಆಸ್ಪತ್ರೆಯಲ್ಲಿ ಕಂಡ ಮಕ್ಕಳ ಕಾಲುಗಳು ಸ್ಟ್ರಿಂಗ್ ನಂತಿದೆಯಲ್ಲಾ ಅನಿಸಿದಾಗ, ಪ ತ್ರಿಕಾ ಹೇಳಿಕೆಗಳಲ್ಲಿ, ಜನರ ಫೋನ್ ಕಾಲ್ ನಲ್ಲಿ, ಯಾವುದೋ ಕಚೇರಿಯ ಜವಾನನ ಬಳಿ, ದಾರಿ ಸವೆಸಲು ಸಿಕ್ಕ ಆಟೋ ಡ್ರೈವರ್ ನ ಹರಟೆಯಲ್ಲಿ ಸುದ್ದಿ ಅಡಗಿ ಕುಳಿತಿರುತ್ತದೆ.

187 Lives ಅನ್ನೋ ಪುಸ್ತಕ ಸಿಕ್ಕಿತು.

ಮುಂಬೈ ರೈಲು ಬಾಂಬ್ ಸ್ಫೋಟದಲ್ಲಿ ಪ್ರಾಣ ಕಳೆದುಕೊಂಡದ್ದು 187 ಜೀವಗಳು. ಆ ಮನೆಗಳು ಈಗ ಏನಾಗಿವೆ ಅಂತ ಇಂಡಿಯನ್ ಎಕ್ಸ್ ಪ್ರೆಸ್ ಭೇಟಿ ಕೊಟ್ಟಾಗ ಹೊರಬಂದ ಕಣ್ಣೀರ ಕಥೆಯೇ ಸುದ್ದಿಯಾಗಿ, ಪುಸ್ತಕವಾಗಿ ನನ್ನ ಕೈಲಿತ್ತು.

ಯಾಕೋ ನನಗೆ ಸರ್ಕಸ್ ಅಗ್ನಿ ದುರಂತದಲ್ಲಿ ಮಡಿದ, ಗಂಗಾರಾಮ್ ಪುಸ್ತಕ ಮಳಿಗೆಯ ಕುಸಿತದಲ್ಲಿ ಇಲ್ಲವಾಗಿ ಹೋದವರ ಮನೆಯ ಬಾಗಿಲು ಬಡಿಯಬೇಕು ಅನಿಸಿತು.