ಕಿ ರಂ ಎಂಬ ಘಮ
—–
ಅದು ‘ಕಾವ್ಯ ಮಂಡಲ’ದ ಕನಸನ್ನು ಹೆರಲು ಕಿ ರಂ ಸಜ್ಜಾಗುತ್ತಿದ್ದ ದಿನಗಳು.
ಅವರೊಳಗೆ ಒಂದು ಅಶಾಂತ ಸಂತನ ತಹತಹವಿತ್ತು. ಯಾವುದೋ ಒಂದು ದುಂಬಿ ಪರಾಗಸ್ಪರ್ಶ ಮಾಡುತ್ತದೆ ಎನ್ನುವಂತೆ ಕಿ ರಂ ಕಾಯುತ್ತಿದ್ದರು. ಅವರು ಕನಸುಗಳನ್ನು ಸಾಕಷ್ಟು ಹೆರುತ್ತಿದ್ದರು.

ಆದರೆ ಆ ಕನಸು ಇನ್ನಷ್ಟು ರೆಕ್ಕೆ ಪಡೆಯಲು ಅವರಿಗೆ ಕೇಳುವ ಕಿವಿಗಳು ಬೇಕಿತ್ತು. ನೆಲದಲ್ಲಿ ಆ ಕನಸ ಬೀಜ ಊರುವವರು ಬೇಕಾಗಿತ್ತು. ಅವರು ಹಾಗೆ ಅರಸುತ್ತಿದ್ದಾಗ ಕಾಲಿಗೆ ತೊಡರಿಕೊಂಡವರು ನಾವು.
ಅದು ನಾನು ‘ಸಂಗೀತ, ನೃತ್ಯ ಮತ್ತು ನಾಟಕ ವಿಭಾಗ’ದಲ್ಲಿ ಓದುತ್ತಿದ್ದ ದಿನಗಳು. ಹಲವು ವರ್ಷ ಸಂಸ್ಕೃತ ಕಲಿತು ಬಂದವನನ್ನು ಕ ವೆಂ ರಾಜಗೋಪಾಲ್ ತಮ್ಮ ಸಾತ್ವಿಕ ಬೆದರಿಕೆಯಿಂದ ಕನ್ನಡದ ಕ್ಯಾನ್ ವಾಸ್ ಗೆ ಎಳೆದು ತಂದು ಕೂರಿಸಿದ್ದರು.
ಇಲ್ಲೊಂದು ಆಶ್ಚರ್ಯವಿತ್ತು. ಇಡೀ ವಿಭಾಗಕ್ಕೆ ನಾನೊಬ್ಬನೇ ಕನ್ನಡ ಐಚ್ಚಿಕ ವಿದ್ಯಾರ್ಥಿ.
ನನ್ನ ಪದವಿ ವಿಭಾಗವನ್ನು ನೇರವಾಗಿ ಬೆಂಗಳೂರು ವಿಶ್ವವಿದ್ಯಾಲಯವೇ ನಡೆಸುತ್ತಿದ್ದರಿಂದ ದೂರದ ಜ್ಞಾನ ಭಾರತಿ ಆವರಣದಿಂದ ನನ್ನೊಬ್ಬನಿಗೆ ಪಾಠ ಮಾಡಲೆಂದೇ ಕಿ ರಂ ನಾಗರಾಜ್, ಸಿದ್ದಲಿಂಗಯ್ಯ, ಡಿ ಆರ್ ನಾಗರಾಜ್, ಬಸವರಾಜ ಕಲ್ಗುಡಿ ಎಲ್ಲರೂ ನಗರದ ಸೆಂಟ್ರಲ್ ಕಾಲೇಜಿಗೆ ಬರಬೇಕಿತ್ತು.
ಆದರೆ ಕಿ ರಂ ನನಗೆ ಪಾಠ ಮಾಡಲು ಹೊಸ ಹಾದಿ ಕಂಡುಕೊಂಡರು.
ಕೆಂಪೇಗೌಡ ರಸ್ತೆ, ಅವಿನ್ಯೂ ರಸ್ತೆ, ಕೆ ವಿ ಟೆಂಪಲ್ ಸ್ಟ್ರೀಟ್ ನಲ್ಲಿದ್ದ ಅಸಂಖ್ಯಾತ ಹೋಟೆಲುಗಳ ಪಟ್ಟಿಯನ್ನು ನನ್ನ ಮುಂದೆ ವಗಾಯಿಸಿದವರೇ ‘ಇನ್ನು ಮುಂದೆ ಇವೇ ನಿನ್ನ ಕ್ಲಾಸ್ ರೂಮ್’ ಎಂದು ಘೋಷಿಸಿಬಿಟ್ಟರು.
ಯೋಚನೆ ಮಾಡಲು ಒಂದು ಕ್ಷಣವೂ ಅವಕಾಶ ನೀಡದೆ ಪ್ರತೀ ದಿನ ಒಂದೊಂದು ಹೋಟೆಲಿಗೆ ಕರೆದೊಯ್ದು ಅಲ್ಲಿ ತಿಂಡಿ ತಿನಿಸುತ್ತಾ ಹೋದರು. ಕಾವ್ಯ ಮೀಮಾಂಸೆ ಪಾಠ ಕೇಳಲು ಸಜ್ಜಾಗಿ ಹೋಗುತ್ತಿದ್ದ ನಾನು ಪಾಕಶಾಸ್ತ್ರಜ್ಞನಾಗಿ ಪಳಗುತ್ತಾ ಹೋದೆ.
ನಾನು ಯಾವುದೇ ಶೂಟ್ ಮುಗಿಸಿ ಬರುವಾಗ ನನ್ನ ಕ್ಯಾಮೆರಾ ‘ಕ್ರ್ಯೂ’ನೊಂದಿಗೆ ಅಥವಾ ದೂರದೂರುಗಳಿಂದ ಬೆಂಗಳೂರಿಗೆ ಬರುವ ಗೆಳೆಯರೊಂದಿಗೆ ದಾಳಿ ಇಡುವುದು ಇಂತಹ ಸಂದಿಗೊಂದಿಯ ರಸಾಗಾರಗಳಿಗೇ..
ಅವರೆಲ್ಲರಿಗೂ ಅಚ್ಚರಿ ಈ ನಿಗೂಢ ಲೋಕವನ್ನು ಇವನು ಹೊಕ್ಕಿದ್ದಾದರೂ ಯಾವಾಗ ಎಂದು. ಆಗೆಲ್ಲಾ ನಾನು ಕಿ ರಂ ರನ್ನು ದಂತ ಕಥೆಯಾಗಿ ಪರಿವರ್ತಿಸುತ್ತಿದೆ.
ಬೆಂಗಳೂರಿನ ಹೋಟೆಲ್ ಗಳನ್ನು ರಸಾಸ್ವಾದನೆಗೆ ಬಳಸಿಕೊಂಡ ನನಗೆ ಕಾವ್ಯದ ರುಚಿ ಹತ್ತಿದ್ದು ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಕಣ್ಣು ತೆರೆಯುತ್ತಾ ಹೋದ ‘ಕಾವ್ಯ ಮಂಡಲ’ದ ಅಂಗಳದಲ್ಲಿ.
ಕಾವ್ಯ ಮಂಡಲಕ್ಕೆ ನಿಸಾರ್ ಬರುತ್ತಾರೆ ಎಂದೋ, ಎಚ್ ಎಸ್ ಶಿವಪ್ರಕಾಶ್ ಬರುತ್ತಾರೆ ಎಂದೋ ಉತ್ಸಾಹ ತುಂಬಿಕೊಳ್ಳುತ್ತಿದ್ದ ಕಿ ರಂ ಅದಕ್ಕೆ ಬೇಕಾದ ರಂಗ ಸಜ್ಜು ಮಾಡಬೇಕಾದದ್ದನ್ನು ಯೋಚನೆ ಮಾಡಿ ಸಪ್ಪೆಯಾಗುತ್ತಿದ್ದರು.
ಆಗ ನಾವೇ ಅವರ ತೋಳುಗಳಾಗಿ ಕ್ಲಾಸ್ ರೂಮ್ ನ ಡೆಸ್ಕು ಟೇಬಲುಗಳನ್ನು ಎಳೆದಾಡುತ್ತಾ ವೇದಿಕೆಯಾಗಿ ಪರಿವರ್ತಿಸಿಬಿಡುತ್ತಿದ್ದೆವು. ಕಿ ರಂ ಮುಖದಲ್ಲಿ ಮತ್ತೆ ಮಂದಹಾಸ.
ಹೀಗಿರುವಾಗಲೇ ‘ಮಿಲರೇಪ’ವನ್ನೂ, ‘ಸಮಗಾರ ಭೀಮವ್ವ’ಳನ್ನೂ ನಮ್ಮ ಎದೆಯೊಳಗೆ ಗೊತ್ತಿಲ್ಲದಂತೆ ಸುರಿಯುತ್ತಾ ಹೋದರು. ಒಂದು ಭಾನುವಾರದ ಕಾವ್ಯ ಮಂಡಲದಲ್ಲಿ ಎಚ್ ಎಸ್ ಶಿವಪ್ರಕಾಶರ ಕವಿತೆಗಳನ್ನು ಓದಲು ನನಗೇ ಆಹ್ವಾನ ನೀಡಿದರು.
ಆ ವೇಳೆಗೆ ನಾನು ಶಿವಪ್ರಕಾಶರ ಜೊತೆಗೆ ಎಷ್ಟು ಸುತ್ತಿದ್ದೆ ಮತ್ತು ಅವರ ಬಹುತೇಕ ಎಲ್ಲಾ ಕವಿತೆ, ನಾಟಕಕ್ಕೆ ಕಿವಿಯಾಗಿದ್ದೆ. ಎಂದರೆ ನಾನು ನನಗೆ ಗೊತ್ತಿಲ್ಲದಂತೆಯೇ ಥೇಟ್ ಶಿವಪ್ರಕಾಶರ ವಾಚನದ ವಿನ್ಯಾಸದಲ್ಲಿಯೇ ಕವಿತೆಗಳನ್ನು ಓದಿದ್ದೆ.

ಕಿ ರಂ ನಂತರ ಹೇಳಿದ್ದರು ‘ಕವಿತೆಗೆ ಒಂದೇ ದನಿಯಿರುವುದಿಲ್ಲ. ಅದಕ್ಕೆ ನಿನ್ನದೇ ಉಸಿರು ಜೋಡಿಸಿ ನೋಡು’ ಎಂದು. ಆ ಕ್ಷಣದಲ್ಲಿ ಅವರು ನನಗೆ ಕವಿತೆಯನ್ನು ನನ್ನದಾಗಿಸಿಕೊಳ್ಳಲು ಒಂದು ದೊಡ್ಡ ಪಟ್ಟು ಕಲಿಸಿದ ಜಟ್ಟಿಯಂತೆ ಕಂಡಿದ್ದರು.
ಕಿ ರಂ ಹಾಗೆ ಬಿಟ್ಟುಕೊಟ್ಟ ಗುಟ್ಟುಗಳ ಲೆಕ್ಕ ಇಟ್ಟವರಾರು. ಪ್ರತಿಯೊಬ್ಬರಿಗೂ ಇಂತಹ ಎಷ್ಟೋ ನೆನಪುಗಳನ್ನು ಕೈನಲ್ಲಿಟ್ಟು ಅವರು ನಡೆದು ಹೋದರು.
ನನ್ನ ಮೊದಲ ಕವಿತಾ ಸಂಕಲನ ‘ಸೋನೆ ಮಳೆಯ ಸಂಜೆ’ ಹೊರ ಬಂದಾಗ ವಿಶ್ವವಿದ್ಯಾಲಯ ಹೊರತರುತ್ತಿದ್ದ ಸಾಹಿತ್ಯ ಪತ್ರಿಕೆಗೆ ಪರಿಚಯಿಸಲು ನನ್ನ ಕೃತಿಯನ್ನೇ ಆಯ್ದುಕೊಂಡರು ಎನ್ನುವುದು ನನ್ನ ತುರುಬಿಗೆ ಸಿಕ್ಕ ಗರಿ.
ನನ್ನ ಕನಸಾದ ‘ಮೇಫ್ಲವರ್ ಮೀಡಿಯಾ ಹೌಸ್’ನ ಅಂಗಳಕ್ಕೆ ಬಂದು ಲಂಕೇಶರ ಬಗ್ಗೆ ಹಲವು ಒಳನೋಟಗಳನ್ನು ಕಟ್ಟಿಕೊಟ್ಟದ್ದು, ಶಿವಾಜಿನಗರ ಎನ್ನುವುದು ರಾತ್ರಿಯಾಗುತ್ತಿದ್ದಂತೆ ಮಾಂಸದ ಅಡ್ಡೆಯಾಗುವುದು..
ನಾನು ಪದವಿಯಲ್ಲಿ ವಿದ್ಯಾರ್ಥಿ ಸಂಘದ ಚುನಾವಣೆಗೆ ನಿಂತಾಗ ತಾವೂ ಪ್ರಚಾರದ ಪೋಸ್ಟರ್ ಅಂಟಿಸಿದ್ದು, ನನ್ನ ‘ಪಂಪ ಬಿಕ್ಕುತಾನೆ..’ ಕವಿತೆಯನ್ನು ಅವರ ಕವಿತೆಯೇನೋ ಎಂಬಂತೆ ಮೆರೆಸಿದ್ದು ಎಲ್ಲವೂ ನನ್ನೊಳಗೆ ಇರುವ ಘಮ.
ಹೀಗನ್ನುವಾಗಲೇ ನನಗೆ ಗೆಳೆಯ, ಚಿತ್ರ ನಿರ್ದೇಶಕ ಪರಮೇಶ್ವರ ಗುರುಸ್ವಾಮಿ ಹೇಳಿದ್ದು ನೆನಪಿಗೆ ಬರುತ್ತದೆ. ಅವರಿಗೆ ‘ಘಮ’ದ ಬಗ್ಗೆ ಒಳ್ಳೆಯ ಜ್ಞಾನವಿತ್ತು.
ಅತ್ತರಿನ ಬಗ್ಗೆ ಇದ್ದ ಜ್ಞಾನ ಅವರನ್ನು ಬೆಂಗಳೂರಿನ ನೂರೆಂಟು ಗಲ್ಲಿಗಳನ್ನು ಸುತ್ತಿಸಿತ್ತು, ಹಲವಾರು ಪುಸ್ತಕ ತಿರುವಿ ಹಾಕುವಂತೆ ಮಾಡಿತ್ತು, ಮನೆಯನ್ನು ಒಂದು ಪರಿಮಳದ ಪಲ್ಲಕ್ಕಿಯೇನೋ ಎಂದು ಅನುಮಾನ ಬರುವಂತೆ ಪರಿವರ್ತಿಸುವುದನ್ನು ಕಲಿಸಿತ್ತು. ಅತ್ತರಿನ ಬಗ್ಗೆ ಆ ವೇಳೆಗೆ ಇದ್ದ ಎಲ್ಲಾ ಚಲನಚಿತ್ರಗಳನ್ನು ಸಂಗ್ರಹಿಸಿ ನೋಡುವಂತೆ ಮಾಡಿತ್ತು.
ಕನ್ನಡವನ್ನು ಇನ್ನಷ್ಟು ಪ್ರೀತಿಸುವಂತೆ ಮಾಡಿದ, ಕವಿತೆಯನ್ನು ಇನ್ನಷ್ಟು ಎದೆಗೆ ಹತ್ತಿರವಾಗುವಂತೆ ಮಾಡಿದ ಕಿ ರಂ ಬಗ್ಗೆ ಎಲ್ಲರಿಗೂ ವಿಶೇಷ ಪ್ರೀತಿ. ಅಂತಹ ಘಮ ನಿಮ್ಮೊಳಗೂ ಅರಳಲಿ..