ಜಿ.ಎನ್ ಮೋಹನ್ ಸ್ಪೆಷಲ್ : ಹಾಗೆ ಕಣ್ಣೀರಾದವರು ಬಸವರಾಜ ಪುರಾಣಿಕ್ ಅವರು..

ಹಾಗೆ ಕಣ್ಣೀರಾದವರು
ಬಸವರಾಜ ಪುರಾಣಿಕ್ ಅವರು..
—–

ಅವರು ಅಕ್ಷರಶಃ ಕಣ್ಣೀರಾಗಿ ಹೋಗಿದ್ದರು..jk-logo-justkannada-logo

ನಾನು ಅವರ ಮನೆಯ ಗೇಟಿನ ಆಗಳಿ ತೆರೆಯುತ್ತಿದ್ದಂತೆಯೇ ಮಹಡಿಯಲ್ಲಿ ಒಂದು ಜೀವ ನಸುನಕ್ಕಿತು. ಅದೇ ಉತ್ಸಾಹದಲ್ಲಿ ಮನೆಯೊಳಗೆ ಇದ್ದ ಮನೆಯೊಡತಿಯನ್ನು ‘ನೋಡು ಬಾ ಇಲ್ಲಿ’ ಎಂದು ಕೂಗಿ ಕರೆಯಿತು. ನಾನು ಮೆಟ್ಟಿಲನ್ನು ಏರಿ ಅವರೆದುರು ನಿಂತಾಗ ಅಕ್ಷರಶಃ ಕಣ್ಣೀರಾಗಿ ಹೋಯಿತು

ಹಾಗೆ ಕಣ್ಣೀರಾದವರು ಬಸವರಾಜ ಪುರಾಣಿಕ್ ಅವರು

ತಮ್ಮ ನಿಡುಗಾಲದಲ್ಲಿ ತನ್ನನ್ನು ನೋಡಲು ಒಬ್ಬ ಬರುತ್ತಾನೆ ಎನ್ನುವುದೇ ಅವರ ಸಂತಸಕ್ಕೆ ಕಾರಣವಾಗಿತ್ತು.

ನಾನು ಹಾಗೂ ಅವರು ಹಾಗೆ ಕೈ ಕುಲುಕಲು ಕಾರಣವಾಗಿದ್ದು ಇನ್ನೊಬ್ಬ ಹಿರಿಯ ಅನ್ನದಾನಯ್ಯ ಪುರಾಣಿಕ್ ಅವರು. ಸ್ವಾತಂತ್ರ್ಯ ಹೋರಾಟಗಾರರೂ, ಬರವಣಿಗೆಯನ್ನು ಪ್ರೀತಿಸಿದವರೂ ಆದ ಅನ್ನದಾನಯ್ಯನವರು ಜೀವನದ ಕೊನೆಯಲ್ಲಿದ್ದರು.

ಆಗ ಮಾಧ್ಯಮ ಲೋಕದ ಹಿರಿಯರಾದ, ‘ಈಟಿವಿ’ ಸಂಸ್ಥೆ ಕಟ್ಟುವಲ್ಲಿ ಮಹತ್ತರ ಜವಾಬ್ದಾರಿ ಹೊತ್ತ ಪವನ್ ಕುಮಾರ್ ಮಾನ್ವಿ ಅವರು ಫೋನ್ ಮಾಡಿ ಈ ಬಗ್ಗೆ ಜನಕ್ಕೆ, ಸರ್ಕಾರಕ್ಕೆ ತಿಳಿಯುವಂತಾಗಬೇಕಲ್ಲ ತುಂಬಾ ಹಿರಿ ಜೀವ ಅದು ಎಂದಿದ್ದರು.

ಹಾಗೆ ಆ ಕೆಲಸಕ್ಕೆ ಮುಂದಾದಾಗ ಅವರ ಸಹೋದರರಾದ ಬಸವರಾಜ ಪುರಾಣಿಕ್ ಅವರ ಹೆಸರು ಮತ್ತೆ ಮತ್ತೆ ಬಂದಿತ್ತು. ‘ಕಾವ್ಯಾನಂದ’ ಎಂದೇ ಹೆಸರಾದ ಸಿದ್ಧಯ್ಯ ಪುರಾಣಿಕ್ ಅವರ ಇಬ್ಬರು ಸಹೋದರರು ಈ ಅನ್ನದಾನಯ್ಯ ಹಾಗೂ ಬಸವರಾಜ ಪುರಾಣಿಕ್ ಅವರು.

ಅನ್ನದಾನಯ್ಯನವರು ಇಲ್ಲವಾದರು ಎನ್ನುವುದರೊಂದಿಗೆ ಇಡೀ ಪ್ರಕರಣ ನನ್ನ ಮನದ ಹಿನ್ನೆಲೆಗೆ ಸರಿಯಿತು

ಈ ಮಧ್ಯೆ ಒಂದು ಮೇಲ್ ನನ್ನ ಇನ್ಬಾಕ್ಸ್ ನಲ್ಲಿ ಸದ್ದು ಮಾಡಿತು. ಅದರಲ್ಲಿ ಇದ್ದ ಮೂರ್ನಾಲ್ಕು ಸಾಲುಗಳು ನನ್ನನ್ನು ಆಕರ್ಷಿಸಿಬಿಟ್ಟಿತು.GN Mohan Special.

ಎಸ್ ಚಂದ್ರಶೇಖರ್ ಅವರಿಗೆ ನೊಬೆಲ್ ಘೋಷಣೆಯಾಗುತ್ತದೆ. ಆಗ ಅಮೆರಿಕಾದ ಪತ್ರಿಕೆಗಳೆಲ್ಲಾ ಮುಗಿಬಿದ್ದು ಅವರ ಸಂದರ್ಶನ ನಡೆಸುತ್ತದೆ. ‘ಈಗ ನೊಬೆಲ್ ಬಂದಾಯ್ತಲ್ಲ.. ಇನ್ನು ನಿಮ್ಮ ಮುಂದಿನ ಆಸೆ ಏನು’ ಎಂದು ಕೇಳುತ್ತಾರೆ.

ಎಸ್ ಚಂದ್ರಶೇಖರ್ ವಿಜ್ಞಾನದ ಇನ್ನೇನೋ ಹೇಳುತ್ತಾರೆ ಎಂದು ಎಲ್ಲರೂ ಕಿವಿ ತೆರೆದು ಕುಳಿತಿದ್ದಾಗ ಅವರು ‘ನಾನು ಶೇಕ್ಸ್ ಪಿಯರ್ ನನ್ನ ಓದಬೇಕು’ ಎನ್ನುತ್ತಾರೆ.

”ನನಗೆ ಬಹಳ ದಿನಗಳಿಂದಲೂ ಒಂದು ಇಚ್ಛೆ ಇದೆ. I want to read Shakespeare between the lines. ಈಗ ಆರಾಮಾಗಿ ಓದಬಲ್ಲೆ”.

ಜಗತ್ತು ನಿಬ್ಬೆರಗಾಗುತ್ತದೆ

ಅದನ್ನು ಮೇಲ್ ಮಾಡಿ ನನ್ನ ಗಮನಕ್ಕೆ ತಂದವರು- ಬಸವರಾಜ ಪುರಾಣಿಕ್

ನನಗೋ ಇಂತಹ ಚಿಕ್ ಚಿಕ್ ಸಂಗತಿಗಳಲ್ಲೇ ಮಹಾನ್ ಆಸಕ್ತಿ
ಹಾಗಾಗಿ ಮತ್ತೆ ಅವರಿಗೆ ಬರೆದೆ
ಆಮೇಲೆ..??
-ಥೇಟ್ ಕಥೆ ಹೇಳುವ ಅಜ್ಜನ ಮುಂದೆ ಕೂತ ಮಗು ಕೇಳುವ ಹಾಗೆ

ಬಸವರಾಜ ಪುರಾಣಿಕರಿಂದ ಮತ್ತೊಂದು ಮೇಲ್ ಬಂತು

ಎಸ್ ಚಂದ್ರಶೇಖರ್ ಶೇಕ್ಸ್ ಪಿಯರ್ ನನ್ನ ಓದಬೇಕು ಎಂದು ಸುಮ್ಮನೆ ಹೇಳಿರಲಿಲ್ಲ. ಓದಿದರು. ಓದಿಯೇ ಓದಿದರು

ಅಷ್ಟೇ ಅಲ್ಲ ಸರಿಯಾಗಿ ಆ ಓದನ್ನು ಅರಗಿಸಿಕೊಂಡರು. ಅಷ್ಟೂ ಅಲ್ಲ ಶೇಕ್ಸ್ ಪಿಯರ್, ನ್ಯೂಟನ್ ಹಾಗೂ ಬೀಟೊವನ್ ಸೃಜನಶೀಲತೆಯ ಬಗ್ಗೆ ಬರೆದೂ ಬಿಟ್ಟರು.
1987ರಲ್ಲಿ ಅವರ ಈ ಕೃತಿ ಪ್ರಕಟವಾಯಿತು.:

Truth and Beauty
Aesthetics and Motivations in Science.
The University of Chicago Press.
ಆ ಕೃತಿಯ ಮೂರನೆಯ ಅಧ್ಯಾಯ,
Shakespeare, Newton and Beethoven-
or Patterns of Creativity

ಹೀಗೆ ಬಸವರಾಜರಿಗೆ ನಾನು ಪ್ರಶ್ನೆ ಕೇಳುತ್ತಲೇ ಇದ್ದೆ ಅವರು ಉತ್ತರಿಸುತ್ತಲೇ ಇದ್ದರು.

ಅವರು ‘ಅವಧಿ’ಯ ಎಷ್ಟು ಒಳ್ಳೆಯ ಓದುಗರಾಗಿದ್ದರೆಂದರೆ ‘ಅವಧಿ’ಯಲ್ಲಿ ಯಾವುದೇ ಒಳ್ಳೆ ಬರಹ ಓದಿದರೂ ನಾನು ಅವರಿಗೆ ಆ ಲೇಖಕರ ನಂಬರ್ ಕೊಡಬೇಕಿತ್ತು. ಅವರು ಆ ಬರಹಗಾರರಿಗೆ ಫೋನ್ ಮಾಡಿ ಮಾತನಾಡುತ್ತಿದ್ದರು. ಅವರ ಬರಹ ಯಾವ ಕಾರಣಕ್ಕೆ ಇಷ್ಟವಾಯಿತು ಅದಕ್ಕೆ ಇನ್ನೂ ಏನು ಪೂರಕ ಓದು ಮಾಡಬಹುದು ಎಂದು ವಿವರಿಸುತ್ತಿದ್ದರು.

ಇದೆಲ್ಲಾ ನೋಡುತ್ತಿದ್ದ ನಾನು ಅರೆ ಇಷ್ಟೊಂದು ಜನರನ್ನು ಹಚ್ಚಿಕೊಳ್ಳುವ ಮನುಷ್ಯ ಅವರನ್ನು ಭೇಟಿಯೂ ಆದರೆ ಇನ್ನೂ ಎಷ್ಟು ಸಂತೋಷ ಪಡುತ್ತಾರೋ ಎಂದುಕೊಂಡು ಒಂದು ದಿನ ಫೋನಾಯಿಸಿದೆ.

ಸಾರ್ ‘ಕಪ್ಪಣ್ಣ ಅಂಗಳದಲ್ಲಿ ಗೋಪಾಲ ವಾಜಪೇಯಿ ಅವರಿಗೆ ನುಡಿ ನಮನವಿದೆ ಬರುತ್ತೀರಾ..

ಆ ಕಡೆಯಿಂದ ಬಸವರಾಜ ಪುರಾಣಿಕರು ನಕ್ಕುಬಿಟ್ಟರು.

‘ನನ್ನ ಮನಸ್ಸಿಗೆ ಉತ್ಸಾಹವಿದೆಯಪ್ಪಾ, ದೇಹಕ್ಕಲ್ಲ..’ ಎಂದರು. ಅವರ ದನಿಯಲ್ಲಿನ ಸಣ್ಣ ನೋವು ನನ್ನನ್ನು ತಾಕಿಬಿಟ್ಟಿತು.

ತಕ್ಷಣ ಹೇಳಿದೆ -ಸಾರ್ ನೀವು ರೆಡಿ ಇರಿ ನಾನೇ ಬರುತ್ತೇನೆ ಹೋಗಿ ಬರೋಣವಂತೆ. ನಿಮ್ಮನ್ನು ಮತ್ತೆ ಮನೆಗೆ ಮುಟ್ಟಿಸುವುದು ನನ್ನ ಜವಾಬ್ದಾರಿ.

ಆ ಕಡೆ ಒಂದಷ್ಟು ಹೊತ್ತು ಮೌನ. ನಂತರ ಕೇಳಿಸಿದ್ದು ನಿಟ್ಟುಸಿರು..

ಆ ನಂತರವೇ ನಾನು ಅವರ ಮನೆಯ ಬಾಗಿಲಲ್ಲಿ ನಿಂತದ್ದು. ಅವರ ಉತ್ಸಾಹ ನನಗೆ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ತಮ್ಮ ಮನೆಯವರ ಮುಂದೆ ಒಂದು ಹೆಮ್ಮೆಯಿಂದ ಓಡಾಡಿದರು. ನನ್ನನ್ನು ಹುಡುಕಿಬರುವವರು ಇನ್ನೂ ಇದ್ದಾರೆ ಎನ್ನುವುದು ಅವರ ವಯಸ್ಸನ್ನು ೨೦ ವರ್ಷವಾದರೂ ಕಡಿಮೆ ಮಾಡಿತ್ತು.

ಮನೆ ತುಂಬಾ ಓಡಾಡಿದರು. ಹಣ್ಣು ಹಂಪಲು ಕೊಟ್ಟರು. ಪತ್ನಿ, ಹೆಸರಾಂತ ವೈದ್ಯೆಯನ್ನು ಪರಿಚಯಿಸಿದರು. ಮಕ್ಕಳ ಬಗ್ಗೆ ಹೇಳಿದರು. ‘ಅವಧಿ’ ಓದುವುದಕ್ಕಾಗಿಯೇ ಲ್ಯಾಪ್ ಟಾಪ್ ಕಲಿತದ್ದು ಅದನ್ನು ಬಳಸುವುದು.. ಹೀಗೆ..

ಆ ನಂತರ ನಾವು ಕಪ್ಪಣ್ಣ ಅಂಗಳ ತಲುಪಿದೆವು. ಎಲ್ಲರಿಗೂ ಪ್ರಶ್ನೆ ಇದು ಯಾರು ನನ್ನೊಂದಿಗೆ.

ನಾನಂತೂ ನಮ್ಮ ಅಜ್ಜ, ಊರಿಂದ ಬಂದಿದ್ದಾರೆ ಎಂದು ಯಾರೂ ನಂಬದ ಮಾತನ್ನು ಆಡುತ್ತಾ ಅವರನ್ನು ಒಳಗೆ ಕರೆದುಕೊಂಡು ಹೋದೆ.

ಗೋಪಾಲ ವಾಜಪೇಯಿ ಬಗ್ಗೆ ನಾವು ನಾಲ್ಕಾರು ಜನ ಮಾತಾಡಿರಬೇಕು ಆಗ ಅವರು ನಾನೂ ಮಾತನಾಡುತ್ತೇನೆ ಎಂದು ಉಸುರಿದಾಗ ನನಗೆ ಅವರಿಗೆ ಬಂದ ಹುಕಿ ನೋಡಿ ಸಂತೋಷವಾಯ್ತು. ವೇದಿಕೆಗೆ ಕರೆದರು.

ನನಗೂ, ನೆರೆದ ಮಂದಿಗೂ ಆಗ ಆಯ್ತು ನೋಡಿ ಬಸವರಾಜ ಪುರಾಣಿಕರ ಸರಿಯಾದ ಪರಿಚಯ.

ಆ ದನಿ, ಸ್ಪಷ್ಟತೆ, ಮಾತಲ್ಲಿನ ರಸಿಕತೆ ಅಷ್ಟೇ ಅಲ್ಲ ಅವರು ತಾವು ಬಾಗಲಕೋಟೆಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದಾಗ ಮೊದಲು ಗೋಪಾಲ ವಾಜಪೇಯಿ ಅವರಿಗೆ ವೇದಿಕೆ ಒದಗಿಸಿದ್ದೂ ‘ದೊಡ್ಡಪ್ಪ’ ನಾಟಕದ ನಟಿ ನಾಟಕದ ದಿನ ಹೊರಗೆ ಬರದಿದ್ದಾಗ ತಾವೇ ಖುದ್ದು ಹೋಗಿ ಕೈ ಮುಗಿದು ಮನೆಯವರನ್ನು ಒಪ್ಪಿಸಿ ಕರೆತಂದು ನಾಟಕ ನಡೆಯುವಂತೆ ಮಾಡಿದ್ದೂ ಎಲ್ಲವನ್ನೂ ವಿವರಿಸುತ್ತಾ ಹೋದರು.

ಸಭೆ ದಂಗಾಗಿತ್ತು

ಆ ನಂತರ, ಅದುವರೆಗೆ ಅವರಿಗೆ ಫೋನ್ ನಂಬರ್ ಮಾತ್ರವಾಗಿದ್ದವರು ಜೀವಂತವಾಗಿ ಅವರ ಕೈ ಕುಲುಕಲು ಸಾಲು ನೆರೆದಾಗ ಅವರ ಸಂತೋಷ ನೋಡಬೇಕಿತ್ತು.

ಆಮೇಲೆ ಮತ್ತೆ ನಮ್ಮದು ಮೇಲ್ ಸಂಭಾಷಣೆ. ನನಗೆ ಅದು ಓದು, ಇದು ಓದು ಎಂದು ರೆಫೆರೆನ್ಸ್ ಕಳಿಸುತ್ತಲೇ ಇದ್ದರು. ಅದೆಲ್ಲವೂ ಅಪರೂಪದ ಪುಸ್ತಕಗಳೇ.

ಹಾಗಾಗಿ ನಾನು ಅದನ್ನು ‘ಅವಧಿ’ಯಲ್ಲೂ ಪ್ರಕಟಿಸುತ್ತಾ ಹೋದೆ. ಅವರು ‘ಇಳಿಗಾಲದಲ್ಲಿ ನನಗೆ ನೀನು ಯೌವನ ಕೊಟ್ಟೆ’ ಎನ್ನುತ್ತಿದ್ದರು.

ಆ ನಂತರ ಮತ್ತೆ ನಾನು ಅವರ ಏಕತಾನತೆ ಮುರಿಯಲೆಂದೇ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ಇದ್ದ ಕಾರ್ಯಕ್ರಮಕ್ಕೆ ಕರೆದುಕೊಂಡು ಹೋದೆ. ಅಲ್ಲಿದ್ದ ಪ್ರತಿಯೊಬ್ಬರೂ ಎಷ್ಟು ಮುತುವರ್ಜಿಯಿಂದ ಅವರನ್ನು ನೋಡಿಕೊಂಡರೆಂದರೆ ಅವರಿಗೆ ಇನ್ನೂ ತಾರುಣ್ಯ ಹೆಚ್ಚಾಗಿತ್ತು.

ಕಾರ್ಯಕ್ರಮ ಮುಗಿಸಿ ನೋಡುತ್ತೇನೆ. ಅವರಿಲ್ಲ. ಎಲ್ಲಿ ಹೋದರು ಎಂದು ಹುಡುಕುತ್ತ ಹೊರಗೆ ಬಂದರೆ ಅಲ್ಲಿ ಯುವಕರ ದಂಡು ಅವರೊಡನೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿಬಿದ್ದಿತ್ತು.

ನನಗೋ ಆಶ್ಚರ್ಯ. ಹತ್ತಿರ ಹೋದರೆ ಪುರಾಣಿಕರ ಮುಖ ಅಷ್ಟಗಲ ಅರಳಿ ಹೋಗಿತ್ತು. ನನ್ನನ್ನು ಹತ್ತಿರ ಕರೆದವರೇ ‘ನೋಡು, ನೋಡು ಇವರೆಲ್ಲಾ ನನ್ನ ಸ್ಟೂಡೆಂಡ್ಸ್. ಇವ ನನ್ನ ಮನೆಯಲ್ಲೇ ಊಟ ಮಾಡುತ್ತಿದ್ದ, ಇವ ನಾನು ಊರಿಗೆ ಹೋದರೆ ಮನೆಯಲ್ಲಿ ಕಾವಲಿರುತ್ತಿದ್ದ, ಇವ ತುಂಟ, ಇವ ಶಾಣ್ಯಾ..’ ಎನ್ನುತ್ತಾ ಆ ಕಾಲದ ಹುಡುಗರಾಗಿಬಿಟ್ಟಿದ್ದರು.

ನಾನು ದೂರ ಹೋಗಿ ಕುಳಿತೆ. ತಾಯಿ ಹಕ್ಕಿಯ ಸುತ್ತ ಒಂದು ಗುಂಪು. ಸಾಕಷ್ಟು ಕಲರವ.

ಆ ದಿನ ಮನೆಯ ಬಳಿ ಅವರನ್ನು ಡ್ರಾಪ್ ಮಾಡಿದಾಗ ನನ್ನ ಕೈ ಹಿಡಿದವರು ಬಿಡಲೇ ಇಲ್ಲ. ಮತ್ತೆ ಕಣ್ಣಂಚು ಒದ್ದೆಯಾಗಿತ್ತು.

ಅದು ಕೊನೆ. ಆ ನಂತರ ಅವರು ಆಸ್ಪತ್ರೆ ಸೇರಿದರು. ಆಗ ತಾನೇ ರೆಕ್ಕೆ ಪಡೆಯುತ್ತಿದ್ದ ಹಕ್ಕಿಯೊಂದು ಆಸ್ಪತ್ರೆಯ ಅಂಗಳ ಸೇರಿ ಹೋಗಿತ್ತು ಅವರು ಇಲ್ಲವಾದರು.