ಜಿ.ಎನ್ ಮೋಹನ್ ಸ್ಪೆಷಲ್ : ಅವರು ಜನಸಾಮಾನ್ಯರ’ಎಡಿಟೋರಿಯಲ್’

ಅವರು ಜನಸಾಮಾನ್ಯರ
‘ಎಡಿಟೋರಿಯಲ್’
—-

‘ಅಂಕಲ್ ಮನೆಗೆ ಹೋಗು’ ಅಂತ ಹಕ್ಕೊತ್ತಾಯ
ಮಂಡಿಸಿದ್ದು ಬೆಳ್ತಂಗಡಿಯಿಂದ ಕರೆ ಮಾಡಿದ ರಾಜೇಶ್ವರಿ ಚೇತನ್.

ನಾನು ಪ್ರಕಾಶನ ಕ್ಷೇತ್ರದ ಒಂದು ಮುಖ್ಯ ಸಮಾವೇಶಕ್ಕಾಗಿ ಗೋವಾಗೆ ಬಂದಿದ್ದವನು ಹಾಗೇ ಮಿರಾಮರ್ ನ ಬೀಚ್ ನಲ್ಲಿ ಅಡ್ಡಾಡುತ್ತಿದ್ದೆ.jk-logo-justkannada-logo

ಹಿಂದೆ ಯಾವುದೋ ಕಾರಣಕ್ಕೆ ರಾಜೇಶ್ವರಿ ಅವರು ಮಿರಾಮರ್ ಎಂದು ಪ್ರಸ್ತಾಪ ಮಾಡಿದ್ದು ನನ್ನ ನೆನಪಿನಲ್ಲುಳಿದಿತ್ತು. ಹಾಗಾಗಿ ಫೋನ್ ತಿರುಗಿಸಿದೆ. ‘ಅಲ್ಲಿಂದ ನಾಲ್ಕೇ ನಾಲ್ಕು ಹೆಜ್ಜೆ ಹಾಕಿದರೆ ಅಂಕಲ್ ಮನೆ ಸಿಗುತ್ತದೆ’ ಅಂದಳು.

ಅಷ್ಟೇ ಆಗಿದ್ದಿದ್ದರೆ ನಾನು ಆ ಮಾತನ್ನು ಅಲ್ಲೇ ಮರೆತುಬಿಡುತ್ತಿದ್ದೆನೇನೋ.. ಆದರೆ ಹಾಗೆ ಹೇಳುವಾಗ ಅವಳ ದನಿಯಲ್ಲಿ ಸುಳಿದ ಸಂಭ್ರಮ, ಗೌರವ ನನ್ನನ್ನು ಗೋವಾದಲ್ಲಿ ನನಗೆ ಪರಿಚಯವೇ ಇರದಿದ್ದ ‘ಅಂಕಲ್’ ಮನೆಯ ಬಾಗಿಲು ತಟ್ಟುವಂತೆ ಮಾಡಿತು.

ಬೀಚ್ ಗೆ ಅಂಟಿಕೊಂಡಂತೆಯೇ ಇರುವ ಲೇಕ್ ವ್ಯೂ ಕಾಲೋನಿಯ ‘ಸ್ನೇಹಲ್’ ಮನೆ ಹೊಗುವಾಗ ನಾನು ಹುಸಿ ಗಂಭೀರತೆಯನ್ನು ಮುಖಕ್ಕೆ ತೀಡಿಕೊಂಡಿದ್ದೆ. ೮೫ ದಾಟಿದ ಹಿರಿಯರನ್ನು ಭೇಟಿಯಾಗುತ್ತಿದ್ದೇನೆ ಎನ್ನುವುದು ಇದಕ್ಕೆ ಕಾರಣವಾಗಿತ್ತು.

ಸಿಂಹವನ್ನು ಅದರ ಗವಿಯಲ್ಲಿಯೇ ಕಾಣು ಎನ್ನುವಂತೆ ಹೋಗಿದ್ದ ನನಗೆ ಅಲ್ಲಿ ಕಂಡದ್ದು ನಗೆಮುಗುಳಿನ ಅಂಕಲ್. ಮೀಸೆಯೇನೋ ಗಿರಿಜಾ ಮೀಸೆಯೇ. ಮಾತೂ ಗಂಭೀರವೇ, ಆದರೆ ಮುಖದಲ್ಲಿ ಮಾತ್ರ ಒಂದು ಕ್ಷಣವೂ ಬತ್ತದ ಮುಗುಳ್ನಗು. ‘ಇಷ್ಟು ಹಚ್ಚನೆ ಹಸಿರು ಗಿಡದಿಂ ಎಂತು ಮೂಡಿತು ಬೆಳ್ಳಗೆ!’ ಎನ್ನುವಂತೆ.

ನಾನೂ ನನ್ನ ಗಂಭೀರ ಮುಖವಾಡವನ್ನು ಕಿತ್ತು ಎಸೆದವನೇ ಅಂಕಲ್ ಜೊತೆ ಹರಟೆಗಿಳಿದೆ.

ನಾನಿದ್ದ ತಾಸೊಂದರ್ಧದಲ್ಲಿ ನಾವು ಆಡಿದ ಮಾತಿಗೆ ಗಡಿಗೋಡೆ ಇರಲಿಲ್ಲ. ಗೋವಾ ಹೇಗೆ ತನ್ನತನವನ್ನು ಕಳೆದುಕೊಳ್ಳುತ್ತಿದೆ ಎನ್ನುವುದರಿಂದ ಆರಂಭವಾದ ಮಾತು ಜರ್ಮನಿಯನ್ನು ದಾಟಿ, ಇಂಗ್ಲೆಂಡ್ ನ್ನು ಮುಟ್ಟಿ, ಅಮೇರಿಕಾಗೆ ಹೋಗಿ ಬಂತು.

ಚೀನಾದೊಂದಿಗೆ ನಡೆದ ಯುದ್ಧದಿಂದ ಆರಂಭಿಸಿ, ಲೆಬನಾನ್ ಗೆ ಅಮೇರಿಕಾ ಸೈನ್ಯ ಕಳಿಸಿದ್ದು, ರಷ್ಯಾ ಇಲ್ಲದಿದ್ದರೆ ಹೇಗೆ ಅಮೇರಿಕಾ ಲಂಗುಲಗಾಮಿಲ್ಲದ ಕುದುರೆಯಾಗುತ್ತಿತ್ತು ಎಂದು ಮಾತಾಡುತ್ತಾ ಇರಾಕ್ ಪ್ರಜೆಗಳು ತಮ್ಮ ರಾಜನನ್ನೇ ಕೊಂದು ಪ್ರಜಾಪ್ರಭುತ್ವಕ್ಕೆ ದಾರಿ ಮಾಡಬೇಕಾಗಿ ಬಂದದ್ದು, ಮಹಾಯುದ್ಧದ ಕಾರ್ಮೋಡ ಕಾಣಿಸತೊಡಗಿದ್ದ ಕಾಲ.. ಹೀಗೆ ನೂರೆಂಟು ಮಾತುಕತೆ ನಡೆಸಿದೆವು.

ಅರೆ! ವಿದೇಶ ವ್ಯವಹಾರ ಅಂಕಲ್ ಗೆ ಎಷ್ಟು ಚೆನ್ನಾಗಿ ಗೊತ್ತಿದೆ ಎಂದು ನಾನು ಕಣ್ಣು ಬಿಡುತ್ತಿರುವಾಗಲೇ ಅವರು ತಮ್ಮ ಮಾತಿಗೆ ಬೇಂದ್ರೆಯಜ್ಜನನ್ನು ನಡೆಸಿಕೊಂಡು ಬಂದರು.

ಬೇಂದ್ರೆಯವರು ಇವರಿಗೆ ಪತ್ರ ಬರೆಯುತ್ತಿದ್ದುದು, ತಮ್ಮ ಪುಸ್ತಕ ಕಳಿಸಿಕೊಡುತ್ತಿದ್ದುದು, ಇವರೂ ಪುಸ್ತಕ ಓದಿ ಅಭಿಪ್ರಾಯ ತಿಳಿಸುತ್ತಿದ್ದುದು ಎಲ್ಲವನ್ನೂ ಹೇಳತೊಡಗಿದರು.

ನಾನು ನನ್ನ ತೆರೆದ ಬಾಯಿ ಮುಚ್ಚುವ ಮೊದಲೇ ಮಾಸ್ತಿ ಏಕೆ ನನಗೆ ಇಷ್ಟ. ವಿ ಕೃ ಗೋಕಾಕ್ ಯಾಕೆ ಮುಖ್ಯರು, ಕುವೆಂಪು ಕೃತಿಗಳು ಬರಹ ಲೋಕಕ್ಕೆ ತಂದ ಬದಲಾವಣೆ ಏನು ಎನ್ನುವುದರ ಬಗ್ಗೆ ಮಾತನಾಡತೊಡಗಿದರು.

ನಾನು ಅಂದುಕೊಂಡು ಬಂದ ಅಂಕಲ್ ಮುಂಬೈನಲ್ಲಿ ಸಾಕಷ್ಟು ಕೆಲಸ ಮಾಡಿ, ಗೋವಾದಲ್ಲಿ ನೆಲೆಗೊಂಡಿದ್ದ, ಬದುಕಿನಲ್ಲಿ ಬಹುದೂರ ಸಾಗಿ ಬಂದಿದ್ದ ವ್ಯಕ್ತಿ ಮಾತ್ರ.

ಆದರೆ ನನ್ನೆದುರು ಇದ್ದದ್ದು ತೆರೆದ ಕಣ್ಣುಗಳಿಂದ ಜಗತ್ತನ್ನು ನೋಡಿದ, ನೆಲದಲ್ಲಿ ಬೇರು ಬಿಟ್ಟು ಆಕಾಶದತ್ತ ರೆಕ್ಕೆ ಹರಡಿದ್ದ ವ್ಯಕ್ತಿ. ಅವರು ಓದಿದ್ದನ್ನು ಅರಗಿಸಿಕೊಂಡಿದ್ದರು. ನಡೆದದ್ದನ್ನು ಮಥಿಸಿ ನೋಡಿದ್ದರು. ಹಾಗಾಗಿಯೇ ಅವರೊಳಗೆ ನನಗೆ ‘ಕಾಲಕ್ಕೆ ಹಿಡಿದ ಕನ್ನಡಿ’ಯೊಂದು ಕಂಡಿತು.

ಹೀಗಿರುವಾಗಲೇ ಒಂದು ಸಂಜೆ ಬೆಳ್ತಂಗಡಿಯಲ್ಲಿ ಚೇತನ್ ಸೋಮೇಶ್ವರ್ ಅವರ ಜೊತೆ ಹರಟೆ ಹೊಡೆಯುತ್ತಿರುವಾಗ ಅವರು ಥಟ್ಟನೆ ಏನೋ ನೆನೆಸಿಕೊಂಡವರಂತೆ ತಮ್ಮ ಕೋಣೆಗೆ ಹೋಗಿ ಒಂದಿಷ್ಟು ನೋಟ್ ಬುಕ್ ಹಿಡಿದುಬಂದರು. ಅದು ಸರಿದು ಹೋದ ಕಾಲದ ತುಣುಕು.GN Mohan Special

ಅಂಕಲ್ ಎಂದೇ ಜನರ ಬಾಯಲ್ಲಿರುವ ಯು ಎಂ ಶ್ರೀಧರ್ ಅವರು ಆ ಕಾಲದ ಎಲ್ಲಾ ಘಟನೆಗಳಿಗೂ ತಮ್ಮದೇ ಭಾಷ್ಯ ಬರೆದಿದ್ದರು. ಆ ಕಾಲದ ವಿದೇಶಿ ಮೈನಿಂಗ್ ಕಂಪನಿಯ ಅಧಿಕಾರಿಯೊಬ್ಬರು ತಮ್ಮೆದುರು ಆಗಿ ಹೋದ ಘಟನೆಗಳಿಗೆ ತಮ್ಮ ನೋಟ್ ಬುಕ್ ಪುಟಗಳಲ್ಲಿ ಬರೆದ ನಾಲ್ಕೈದು ಸಾಲುಗಳು ಅಷ್ಟೇ.

ಅದು ಮುಖ್ಯವಾಗಿ ಕಂಡಿತು ನನಗೆ. ಜವಹರಲಾಲ್ ನೆಹರೂ ಸತ್ತ ದಿನ, ಯುದ್ಧವಾದಾಗಿನ ಭಾವನೆ, ಅಮೇರಿಕಾದ ಅಧ್ಯಕ್ಷನ ಹತ್ಯೆ, ಪೋಪ್ ಜಾನ್ ಪಾಲ್ ಭಾರತದ ನೆಲ ಸ್ಪರ್ಶಿಸಿದ್ದು.. ಹೀಗೆ ಎಷ್ಟೊಂದು ಘಟನೆಗೆ ಅವರು ತಮ್ಮದೇ ‘ಷರಾ’ ಬರೆದಿದ್ದರು.

ಅಂದಿನ ಆಗುಹೋಗುವಿಗೆ ಜನಸಾಮಾನ್ಯನೊಬ್ಬ ಬರೆದ ‘ಎಡಿಟೋರಿಯಲ್’ನಂತೆ ಇದು ನನಗೆ ಕಂಡಿತು.

ಶ್ರೀಧರ್ ಅವರು ಈ ಕೃತಿಯಲ್ಲಿ ಕಾಣುವುದಕ್ಕಿಂತ ದೊಡ್ಡತನ ಹೊಂದಿದವರು. ಮನುಷ್ಯತ್ವಕ್ಕೆ ಸದಾ ತುಡಿದ ಜೀವಿ. ಅನಿಕೇತನದ ಪ್ರಜ್ಞೆ ಹೊಂದಿದವರು. ಆಗಿನ ಕಾಲಕ್ಕೇ ನೂರು ದೇವರನೆಲ್ಲ ಆಚೆ ನೂಕಿ ಬಂದವರು. ಅಷ್ಟೇ ಅಲ್ಲ ತಮ್ಮ ಒಡನಾಟಕ್ಕೆ ಬಂದವರಿಗೆ ಬೆಳಕಿನ ಹಣತೆ ಕೈಗಿಟ್ಟವರು.