ನ್ಯೂಸ್ ರೂಮ್ ನಿಂದ
‘ಮಿಸ್ಸಿಂಗ್’
——–
ಮಿಸ್ಸಿಂಗ್-
ಅಂತಾರಾಷ್ಟ್ರೀಯ ಡಾಕ್ಯುಮೆಂಟರಿ ಫಿಲಂ ಫೆಸ್ಟಿವಲ್ ಗಾಗಿ ಕೇರಳಕ್ಕೆ ಕಾಲಿಟ್ಟ ನಾನು ತಿರುವನಂತಪುರದ ಬೀದಿಗಳಲ್ಲಿ ಅಡ್ಡಾಡುತ್ತಿದ್ದೆ.
ಒಂದು ಬುಕ್ ಸ್ಟಾಲ್ ಮುಂದೆ ಹಾದು ಹೋಗುವಾಗ ಅಲ್ಲಿ ತೂಗು ಹಾಕಿದ್ದ ಮ್ಯಾಗಜೈನ್ ದಿಢೀರನೆ ನನ್ನ ಗಮನ ಸೆಳೆಯಿತು.
ಮುಖಪುಟದಲ್ಲಿ ಮೂವರು ಹುಡುಗಿಯರ ಫೋಟೋ. ಅದರ ಕೆಳಗೆ ದಪ್ಪ ಅಕ್ಷರಗಳಲ್ಲಿ ಏನೋ ಮುದ್ರಿತವಾಗಿತ್ತು.
ಮ್ಯಾಗಜೈನ್ ನತ್ತ ಬೊಟ್ಟು ಮಾಡಿ ‘ಏನದು?’ ಅಂದೆ. ಅಂಗಡಿಯಾತ ಹೇಳಿದ ‘ಕಾಣೆಯಾಗಿದ್ದಾರೆ’ ಅಂತ. ಏನನ್ನಿಸಿತೋ ಭಾಷೆ ಬಾರದಿದ್ದರೂ ಆ ಪತ್ರಿಕೆಯನ್ನು ಕೊಂಡೆ.
ಊರಿಗೆ ವಾಪಸಾದ ನಂತರ ಮಲಯಾಳಂ ಬರುವವರನ್ನು ಎಡತಾಕಿದೆ. ಆಗಲೇ ಇನ್ನಷ್ಟು ಗಾಬರಿಯಾದದ್ದು.
ಮಲಯಾಳಂನ ‘ಪತ್ರಿಕಾರಂಗದಿಂದ ಮೂವರು ಕಾಣೆಯಾಗಿದ್ದಾರೆ’ ಎನ್ನವುದು ಲೇಖನದ ಸಾರಾಂಶ.
ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದ, ಮುಖ್ಯ ಹುದ್ದೆಗಳನ್ನು ನಿಭಾಯಿಸಿದ್ದ, ಪ್ರಮುಖ ಮೀಡಿಯಾ ಕಛೇರಿಗಳಿದ್ದ ಈ ಮೂವರು ಪತ್ರಿಕೋದ್ಯಮಕ್ಕೆ ವಿದಾಯ ಹೇಳಿದ್ದರು. ಬೇರೆ ಎಲ್ಲೋ ಯಾವುದೋ ಕೆಲಸದಲ್ಲಿದ್ದರು.
‘ಮಾಧ್ಯಮಮ್’ ಪತ್ರಿಕೆ ಈ ಸಂಗತಿಯನ್ನು ಕೈಗೆತ್ತಿಕೊಂಡಿತು.
ಯಾಕೆ ಅಷ್ಟು ಚುರುಕಾಗಿದ್ದ, ಒಳ್ಳೆಯ ಹೆಸರು ಮಾಡಿದ್ದ ಹುಡುಗಿಯರು ಪತ್ರಿಕೋದ್ಯಮ ಬಿಟ್ಟು ಹೋದರು? ಪತ್ರಿಕೋದ್ಯಮದ ಸ್ಥಿತಿ ಕಾರಣವೇ? ಪತ್ರಿಕಾಲಯಗಳು ಮಹಿಳಾಪರವಾದ ಆಮ್ಬಿಯೆನ್ಸ್ ಹೊಂದಿಲ್ಲವೇ? ಹೀಗೆ ಹತ್ತು ಹಲವು ಅಂಶಗಳತ್ತ ಮುಖ ಮಾಡಿ ನಿಂತಿತು.
ಹೌದಲ್ಲಾ? ಈ ವಿಚಾರ ನಮ್ಮ ಗಮನಕ್ಕೆ ಯಾಕೆ ಬರಲಿಲ್ಲ ಅಂತ ನಾನೂ ದಂಗಾದೆ.
ಮಲಯಾಳಂ ಪತ್ರಿಕೋದ್ಯಮದಲ್ಲಿ ಆಗುತ್ತಿರುವುದು ಆ ಭಾಷೆಗೆ ಮಾತ್ರ ಸಂಬಂಧಪಟ್ಟ ವಿಶೇಷ ಬೆಳವಣಿಗೆಯೇನಲ್ಲ.
ಕನ್ನಡ ಪತ್ರಿಕೋದ್ಯಮ, ಯಾವುದೇ ಭಾಷೆಯ ಪತ್ರಿಕೋದ್ಯಮ, ಇಂಗ್ಲಿಷ್ ಜರ್ನಲಿಸಂ ಹೀಗೆ ಭಾಷೆ, ದೇಶ ಮೀರಿ ಎಲ್ಲೆಡೆ ಇದು ನಿಜ.
ಪತ್ರಿಕೋದ್ಯಮದಿಂದ ಮಹಿಳೆಯರು ಕಾಣೆಯಾಗುತ್ತಿದ್ದಾರೆ. ಆದರೆ ಅದು ಭ್ರೂಣಹತ್ಯೆಯಂತೆ ಸದ್ದಿಲ್ಲದೇ ಆಗಿಹೋಗುತ್ತಿದೆ.
ನಾನು ನ್ಯೂಸ್ ರೂಂಗೆ ಕಾಲಿಟ್ಟಾಗ ಡೈರೆಕ್ಟ್ ಶಿಷ್ಯತ್ವ ಪಡೆಯಬೇಕಾಗಿ ಬಂದದ್ದು ಎನ್. ಗಾಯತ್ರಿ ದೇವಿ ಅವರಿಂದ.
ಅವರ ನೇತೃತ್ವದ ಶಿಫ್ಟ್ ನಲ್ಲಿ ಹಲವು ವರ್ಷ ಕೆಲಸ ಮಾಡಿದ ನನಗೆ ಪತ್ರಿಕೋದ್ಯಮದ ಪಾಠದ ಜೊತೆಗೆ ಮಹಿಳಾವಾದ ಕೂಡಾ ‘ಬಿಲ್ ಕುಲ್ ಮುಫ್ತ್’ ಆಗಿ ಸಿಕ್ಕಿತ್ತು.
ಗಾಯತ್ರಿ ದೇವಿ ರಾಜ್ಯದ ಮಹಿಳಾ ಚಳವಳಿಗೆ ಅಡಿಪಾಯ ಹಾಕಿಕೊಟ್ಟ ಮುಖ್ಯರಲ್ಲೊಬ್ಬರು. ನ್ಯೂಸ್ ರೂಂನಲ್ಲಿ ಮಹಿಳೆಯರಿಗೆ ನೈಟ್ ಶಿಫ್ಟ್ ಇರಬೇಕಾ ಬೇಡವಾ? ಎಳೆ ಮಕ್ಕಳಿಗೆ ಆಫೀಸಿನಲ್ಲಿ ಕ್ರಷ್ ಇರಬೇಕು ಅನ್ನುವ ಹುಮ್ಮಸ್ಸಿನ ಮಾತುಗಳು, ಅದಕ್ಕೆ ತದ್ವಿರುದ್ಧವಾಗಿ ಹಲವರ ಗೊಣಗಾಟಗಳು ಇದ್ದ ದಿನಗಳು ಅವು.
ಹೀಗಿರುವಾಗಲೇ ಕೈಗೆ ಸಿಕ್ಕಿದ್ದು ವಿಮಲ್ ಬಾಲಸುಬ್ರಹ್ಮಣ್ಯಂ ಅವರ ಪುಸ್ತಕ ‘ಮಿರರ್ ಇಮೇಜ್’. ಇದರ ಬೆನ್ನಲ್ಲೇ ಅಮ್ಮು, ಕಲ್ಪನಾ ಶರ್ಮ ಬರೆದ ‘ಹೂಸ್ ನ್ಯೂಸ್?’, ‘ಮೇಕಿಂಗ್ ನ್ಯೂಸ್’ ಹೀಗೆ ಸಾಲು ಸಾಲು ಪುಸ್ತಕಗಳು.
ಯಾವುದೇ ಇಂಗ್ಲಿಷ್ ಪತ್ರಿಕೆಗೆ speaking to newsmen ಅನ್ನುವ ಬಳಕೆ ಅತಿ ಸಾಮಾನ್ಯ ಎನ್ನುವಂತಾಗಿಹೋಗಿತ್ತು. ಆಗ ದನಿ ಎತ್ತಿದ್ದು ಇದೇ ಲೇಖಕಿಯರು.
ಪುರುಷ ಪತ್ರಕರ್ತರೇ ಗಿಜಿಗುಡುತ್ತಿದ್ದ ಕಾಲ ಬಂದಿತ್ತು. ಆದರೆ ಈಗ ಕಾಲ ಬದಲಾಗಿದೆ. ಮಹಿಳಾ ಪತ್ರಕರ್ತರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಹಾಗಿರುವಾಗ speaking to newsmen ಎಂದರೆ ಏನರ್ಥ? ಬದಲಿಗೆ speaking to newspersons ಅಂತ ಬಳಸಿ ಅನ್ನುವ ಚರ್ಚೆಗಳು ಎದ್ದು ನಿಂತವು.
ಇದನ್ನು ಓದುತ್ತಾ, ಓದುತ್ತಲೇ ನಾನು ಪತ್ರಿಕೋದ್ಯಮ ಎನ್ನುವ ಪುಸ್ತಕದ ಬದನೆಕಾಯಿಯಿಂದ ಆಚೆ ಬಂದು ನಿಜ ಪತ್ರಿಕೋದ್ಯಮದ ‘ಅ ಆ ಇ ಈ’ ಕಲಿಯಲು ಆರಂಭಿಸಿದ್ದೆ.
‘ಹುಡುಗಿಯರನ್ನ ತಗೊಳ್ಳುವಾಗ ನೋಡಿ ತಗೊಳ್ಳಿ, ಅವರು ಖಂಡಿತಾ ಬೇಕು. ಅವರು ಚೆನ್ನಾಗಿ ಕೆಲಸಾ ಕೂಡಾ ಮಾಡ್ತಾರೆ. ಆದರೆ ಅವರನ್ನ ಮೀರಿದ ಮಿತಿಗಳು ಕೆಲಸಕ್ಕೆ ಅಡ್ಡಿಯಾಗುತ್ತೆ’ ಅನ್ನೋ ಕಿವಿಮಾತನ್ನ ರಾಮೋಜಿರಾಯರು ಹೇಳಿದ್ದರು.
ಮಹಿಳಾ ಪತ್ರಕರ್ತರ ಕುರಿತು ಕೆಲವು ವರ್ಷಗಳ ಹಿಂದೆ ಮೀಡಿಯಾ ರಿಪೋರ್ಟ್ ಬಿಡುಗಡೆ ಮಾಡಿದ ಗೆಳತಿ, ‘ಹಿಂದೂ’ ಪತ್ರಿಕೆಯ ಪಾರ್ವತಿ ಮೆನನ್ ಇದೇ ಪ್ರಶ್ನೆ ಎತ್ತಿದರು.
‘ನ್ಯೂಸ್ ರೂಂನಿಂದ ಮಹಿಳೆಯರು ಕಣ್ಮರೆಯಾಗ್ತಿದ್ದಾರೆ ಅಂದ್ರೆ ಅದಕ್ಕೆ ನ್ಯೂಸ್ ರೂಂ ಆಚೆಗಿನ ಒತ್ತಡಗಳು ಕಾರಣ. ಹಾಗಾಗಿ ನ್ಯೂಸ್ ಮಹಿಳೆ ಪರಿಸ್ಥಿತಿ ಸುಧಾರಿಸಬೇಕು ಅಂದ್ರೆ ಸಮಾಜ ಸಹಾ ಸುಧಾರಿಸಬೇಕು’ ಅಂತ.
‘ಈಟಿವಿ’ಗೆ ಕಾಲಿಟ್ಟು ಇನ್ನೂ ತಿಂಗಳುಗಳು ಕಳೆದಿರಲಿಲ್ಲ.
ಮಾರ್ಚ್ 8 -ಅಂತಾರಾಷ್ಟ್ರೀಯ ಮಹಿಳಾ ದಿನಕ್ಕೆ ವಿಶ್ವಸಂಸ್ಥೆಯ ಭಾಗವಾದ ‘ಯುನಿಫೆಮ್’ ಒಂದು ಕರೆ ಕೊಟ್ಟಿತು.
‘ಈ ಒಂದು ದಿನ ಮಹಿಳೆಯರಿಗೆ ಜಾಗ ಬಿಟ್ಟುಕೊಡಿ’ ಅಂತ. ಅದರ ಅರ್ಥ ಇಷ್ಟೇ.. ನೀವು ಪೇಪರ್ನವರಾದರೆ ಇವತ್ತಿನ ಎಡಿಷನ್ ಅನ್ನು ಮಹಿಳೆಯರಿಗೆ ಬಿಟ್ಟುಕೊಡಿ, ಚಾನಲ್ ನವರಾದರೆ ಮಹಿಳೆಯರು ಇವತ್ತಿನ ಬುಲೆಟಿನ್ ರೂಪಿಸಲಿ ಅಂತ.
ಅರೇ! ಯಾಕಾಗಬಾರದು ಅನಿಸಿತು.
ಮಧ್ಯಾಹ್ನದ ಡೆಸ್ಕ್ ಮೀಟಿಂಗ್ ನಲ್ಲಿ ‘ಒಂದು ಹೊಸ ಯೋಚನೆ ಇದೆ. ಇವತ್ತಿನ ಪ್ರೈಮ್ ಬುಲೆಟಿನ್ ನ ಚುಕ್ಕಾಣಿ ಮಹಿಳೆಯರು ಹಿಡೀಬೇಕು ಅಂತ, ಯಾರಾದರೂ ಸಿದ್ಧರಿದ್ದೀರ’ ಅಂದೆ.
ಒಂದು ಕ್ಷಣ ನನ್ನನ್ನೇ ನಂಬಲಾಗಲಿಲ್ಲ. ಎಚ್.ಎಸ್. ಅಪರ್ಣ, ವಿಮಲಾಕ್ಷಿ, ಶ್ರೀದೇವಿ ಹೀಗೇ ಎಲ್ಲರ ಕೈಗಳು ಮೇಲೇರಿದವು.
ಸರಿ ಇನ್ಯಾಕೆ ತಡ ಅಂತ ‘ಗೋ ಅಹೆಡ್’ ಅಂದೆ. ಒಂದು ಕ್ಷಣದ ಹಿಂದೆ ಬಚ್ಚಾಗಳಂತೆ ಕಾಣುತ್ತಿದ್ದ ಹುಡುಗಿಯರು ಡ್ರೈವರ್ ಸೀಟಿನಲ್ಲಿ ಕುಳಿತೇಬಿಟ್ಟರು. ಹುಡುಗರನ್ನೂ ಬೆನ್ನಿಗಿಟ್ಟುಕೊಂಡು.
ತುಂಬಾ ದೂರ ಕ್ರಮಿಸಬೇಕಾದ ರಾಜಧಾನಿ ಎಕ್ಸ್ ಪ್ರೆಸ್ ಎಷ್ಟು ವೇಗದಿಂದ ಸಿಳ್ಳು ಹಾಕುತ್ತಾ, ಎದುರಿನ ಅಡೆತಡೆಗಳನ್ನೆಲ್ಲಾ ದಾಟುತ್ತಾ ದೆಹಲಿಗೆ ನುಗ್ಗೇ ಬಿಡುತ್ತದಲ್ಲಾ ಹಾಗೆ ನುಗ್ಗೇ ಬಿಟ್ಟರು.
ಬುಲೆಟಿನ್ ಏರ್ ಆಗುವಾಗ ಇಡೀ ನ್ಯೂಸ್ ರೂಂನಲ್ಲಿ ಸಾಸಿವೆ ಬಿದ್ದರೂ ಸದ್ದಾಗುವ ವಾತಾವರಣ. ಕೊನೆ ಬಾಲ್ ನಲ್ಲಿ ಸಿಕ್ಸರ್ ಎತ್ತಬೇಕಾದ ಅನಿವಾರ್ಯತೆ ಇರುವಾಗ ಉಸಿರುಗಟ್ಟಿಬಿಡುತ್ತೇವಲ್ಲಾ ಹಾಗೆ ಎಲ್ಲರೂ ಉಸಿರು ಕಟ್ಟಿ ಕೂತಿದ್ದರು.
ಬುಲೆಟಿನ್ ಮುಗಿಯುತ್ತಿದ್ದಂತೆ ಜೋರು ಚಪ್ಪಾಳೆ.
ಹಲವರು ಈ ಬಚ್ಚಾ ಹುಡುಗಿಯರ ಕೈ ಕುಲುಕಿ ಶುಭಾಶಯ ಹೇಳುತ್ತಿದ್ದರು.
ನಾನು ‘ಇದು ಪ್ರಯೋಗ, ಮುಂದಿನ ದಿನಗಳಲ್ಲಿ ಇದು ವಾಸ್ತವವಾಗಲಿ’ ಎಂದು ಮಾತ್ರ ಹೇಳಿ ಮುಗಿಸಿದೆ.
ಆ ಸಂಭ್ರಮ ನನ್ನ ಕಣ್ಣು ತುಂಬಿ ಎದೆಯಾಳದಲ್ಲಿ ಒಂದು ಪರ್ಮನೆಂಟ್ ಜಾಗ ಹುಡುಕಿಕೊಳ್ಳುತ್ತಿತ್ತು.
ಈ ಬುಲೆಟಿನ್ ಬಿಸಿ ನನಗೆ ಗೊತ್ತಾದದ್ದು ಮರುದಿನ.
ಎರಡು ರಾಜಿನಾಮೆ ಬಂದು ಬಿತ್ತು. ಇನ್ನಷ್ಟು ಬುಲೆಟಿನ್ ಪ್ರೊಡ್ಯೂಸರ್ ಗಳು ಗರಂ ಆಗಿದ್ದರು. ಮೀಟಿಂಗ್ ನಲ್ಲಿ ಒಂದೇ ಪ್ರಶ್ನೆ-ಬುಲೆಟಿನ್ ಅನ್ನೋದು ಏನು ಹುಡುಗಾಟಾನಾ? ಅದಕ್ಕೊಂದು ಟ್ರೈನಿಂಗ್ ಬೇಡವಾ? ನಿನ್ನೆ ಮೊನ್ನೆ ಬಂದವರೂ ಬುಲೆಟಿನ್ ಮಾಡಬಹುದು ಅನ್ನೋದಾದರೆ ನಾವ್ಯಾಕಿರಬೇಕು?
ಆಗ ನನಗೆ ಅರ್ಥವಾಯಿತು ಯಾಕೆ ‘ಯೂನಿಫೆಮ್’ ಈ ಕರೆ ಕೊಟ್ಟಿತು ಅಂತ.
ಬದಲಾವಣೆ ಅನ್ನೋದು ಹೂವಿನ ದಾರಿ ಅಲ್ಲ. ಬುಲೆಟಿನ್ ಅನ್ನುವುದನ್ನು ಬ್ರಹ್ಮವಿದ್ಯೆ ಮಾಡಿ ಕೂಡಿಸಿದ್ದವರು ಮಂತ್ರಕ್ಕೆ ಮಾತ್ರ ಮಾವಿನಕಾಯಿ ಉದುರುತ್ತೆ ಅಂತ ನಂಬಿದ್ದರು.
ಈ ಹುಡುಗಿಯರು, ಇನ್ನೂ ಆಗತಾನೆ ಕಣ್ಣು ಬಿಡುತ್ತಿದ್ದ ಹುಡುಗಿಯರು ತಮಗೆ ಸಿಕ್ಕ ಕವಣೆ ಕಲ್ಲು, ಕೋಲು ಹಿಡಿದು ಮಾವಿನಕಾಯಿ ಉದುರಿಸಿ ಹಾಕಿದ್ದರು.
ಇವರು ಬರೀ ಮಾವಿನಕಾಯಿ ಉದುರಿಸಿದ್ದರೆ ಯಾರೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲವೇನೋ? ಆದರೆ ಎಷ್ಟೋ ಜನರ ಪ್ರಭಾವಳಿಯನ್ನೂ ಹುಡಿ ಮಾಡಿಹಾಕಿದ್ದರು.
‘ಅರರೆ! ಎನ್ನಯ ಸಮನಾರು? ಈ ಧರೆಯೊಳ್ ಯಾರಿಹರು?’ ಅಂತ ಪ್ರಶ್ನಿಸುತ್ತಿದ್ದವರ ಮುಂದೆ ನಾವೂ ಆಟಕ್ಕಿದ್ದೇವೆ ಅಂತ ಘೋಷಿಸಿಬಿಟ್ಟಿದ್ದರು.
ಆಟದಿಂದ ಆದ ಪ್ರಯೋಜನ ಮಾತ್ರ ದೊಡ್ಡದು. ಮುಂದಿನ ದಿನಗಳಲ್ಲಿ ಈ ಹುಡುಗಿಯರೇ ಪರ್ಮನೆಂಟಾಗಿ ಡ್ರೈವರ್ ಸೀಟಿಗೆ ಬಂದು ಕೂತರು. ಹಾಗೆ ಕೂರಲು ಈ ಆಟ ಅವರಿಗೆ ಸಾಕಷ್ಟು ಕಾನ್ಫಿಡೆನ್ಸ್ ತುಂಬಿತ್ತು.
ಬುಲೆಟಿನ್ ನಲ್ಲಿ ಕಳೆದೇ ಹೋಗಿದ್ದ ಮಹಿಳಾ ಸುದ್ದಿಗಳು ಮತ್ತೆ ಕಾಣತೊಡಗಿದವು. ನ್ಯೂಸ್ ರೂಂನಲ್ಲಿ ಹುಡುಗಿಯರ ಬಗೆಗಿದ್ದ ಕೊಂಕು ಒಂದಿಷ್ಟಾದರೂ ಕಡಿಮೆಯಾಯಿತು.
ರಾಜ್ ಕುಮಾರ್ ಇಲ್ಲವಾದರು. ‘ಈಟಿವಿ’ ಬೆಂಗಳೂರು ಚೀಫ್ ಮ್ಯಾನೇಜರ್ ಸುಬ್ಬಾನಾಯ್ಡು ಫೋನ್ ಮಾಡಿದ್ರು, ‘ಜಾಸ್ತಿ ಲೇಡಿ ರಿಪೋರ್ಟರ್ಸ್ ತಗೊಳ್ಳಬೇಡಿ ಅಂತ ಹೇಳಿದ್ದೆ. ಈಗ ಏನು ಮಾಡ್ತೀರಾ?’ ಅಂದ್ರು.
ರಾಜ್ ಕುಮಾರ್ ನಿಧನದ ನಂತರ ಉಂಟಾದ ದೊಡ್ಡ ಹಾಹಾಕಾರದಲ್ಲಿ ಈ ಹುಡುಗಿಯರೇನು ಮಾಡಲು ಸಾಧ್ಯ ಎನ್ನುವ ಹತಾಶೆ ಅವರ ಮಾತಲ್ಲಿತ್ತು.
‘ಏನು ಮಾಡೋಣ ಹೇಳಿ ಸರ್’ ಅಂತ ಮರುಪ್ರಶ್ನೆ ಮುಂದಿಟ್ಟೆ.
ಅವರು ಅಕ್ಕ ಪಕ್ಕದ ಡಿಸ್ಟ್ರೀಕ್ಟ್ ನವರನೆಲ್ಲಾ ಕರೆಸಿಬಿಡಿ. ಇಲ್ಲಾ ಅಂದ್ರೆ ಕಷ್ಟ ಅಂದರು.
ಯಾಕೆ ಕಷ್ಟ? ಅನ್ನೋ ಪ್ರಶ್ನೆ ಆಗಲೇ ನನ್ನ ಮುಂದಿತ್ತು. ಶಾರದಾ ನಾಯಕ್, ಜ್ಯೋತಿ ಇರ್ವತ್ತೂರ್, ಭುವನೇಶ್ವರಿ ಹೀಗೇ ದೊಡ್ಡ ದಂಡೇ ಇತ್ತು.
ಮರುಕ್ಷಣ ಅವರು ಇದ್ದದ್ದು ಬೆಂಕಿ ಹಚ್ಚುತ್ತಿದ್ದವರ, ಗೋಲಿಬಾರ್ ಮಾಡುತ್ತಿದ್ದವರ, ಮೆರವಣಿಗೆಯ ಗೊಂದಲ, ರಾಜಕುಮಾರ್ ಮನೆಯ ಜನಜಂಗುಳಿ ಮಧ್ಯೆ..
ನೂರಾರು ಜನರ ತಳ್ಳಾಟದ ಮಧ್ಯೆ ಪಿಟಿಸಿ ನೀಡುತ್ತಿದ್ದ ಜ್ಯೋತಿ ಇರ್ವತ್ತೂರ್ ಮುಖ ಗಮನಿಸಿದೆ. ‘ಬೆದರಿದ್ದಳಾ’ ಅಂತ.
ಹಾಗೆ ಒಂದು ಕ್ಷಣ ಅಂದುಕೊಂಡಿದ್ದಕ್ಕೆ ನನಗೇ ನಾಚಿಕೆಯಾಗುವಂತೆ ‘ಕ್ಯಾಮೆರಾ ಮ್ಯಾನ್ ಶಿವಪ್ಪ ಅವರೊಂದಿಗೆ ಗಲಭೆಯ ಸ್ಥಳದಿಂದ ಜ್ಯೋತಿ ಇರ್ವತ್ತೂರು’ ಅಂತ ಸೈನ್ ಆಫ್ ಮಾಡಿದಳು.
ಈ ಕಡೆ ನೇರಪ್ರಸಾರಕ್ಕೆ ಬೇಕಾದ ಓಬಿ ವ್ಯಾನ್ ಇರಲಿಲ್ಲ. ಫೀಲ್ಡ್ ನಲ್ಲಿ ಶೂಟ್ ಮಾಡಿದ ವಿಶುಯಲ್ಸ್ ಗಳು ಆಫೀಸಿಗೆ ಬರಲಾಗುತ್ತಿಲ್ಲ.
ಶಾರದಾ ನಾಯಕ್ ಹಲ್ಲು ಕಚ್ಚಿ ನಿಂತೇಬಿಟ್ಟರು. ಇದು ನೇರ ಪ್ರಸಾರ ಅಲ್ಲ ಅಂತ ಯಾರೂ ಹೇಳಲು ಸಾಧ್ಯವಾಗದಂತೆ ರಾಮೋಜಿ ಫಿಲಂ ಸಿಟಿಯ ಸ್ಟುಡಿಯೋಗೆ ವಿಶುವಲ್ಸ್ ಗಳ ಮಹಾಪೂರ ಹರಿಯಿತು.
ಯಾಕೋ ಗಾಂಧಿ ಹೇಳಿದ ಮಾತು ನೆನಪಾಯಿತು-
‘ಹೆಣ್ಣೊಬ್ಬಳು ಕಲಿತರೆ ಶಾಲೆಯೊಂದು ತೆರೆದಂತೆ’ ಅಂತ. ಅದು ಪತ್ರಿಕೋದ್ಯಮಕ್ಕೂ ನಿಜವಾದ ಮಾತು.
—-