ಜಿ.ಎನ್ ಮೋಹನ್ ಸ್ಪೆಷಲ್: ಹುಷಾರ್!!—–ನನ್ನ ಬೆಲೆ ಏನು ಅಂತ ಗೊತ್ತಾ ನಿಮಗೆ?’- ಹಾಗೆ ಕೇಳಿದ್ದು ಸ್ಕಾಟ್ ಕಾರ್ನೆ.

ಹುಷಾರ್!!
—————
ನನ್ನ ಬೆಲೆ ಏನು ಅಂತ ಗೊತ್ತಾ ನಿಮಗೆ?’- ಹಾಗೆ ಕೇಳಿದ್ದು ಸ್ಕಾಟ್ ಕಾರ್ನೆ.
ಮಾತೆತ್ತಿದರೆ ಸಾಕು ‘ನನ್ನ ಬೆಲೆ ಏನೂ ಅಂತ ನಿಂಗೇನೋ ಗೊತ್ತು?’ ಎನ್ನುವ ಡೈಲಾಗ್ ಗಳನ್ನು ಕನ್ನಡ ಸಿನೆಮಾಗಳಲ್ಲಿ ಬೇಕಾದಷ್ಟು ಸಲ ಕೇಳಿದ್ದ ನನಗೆ ಕಾರ್ನೆ ಸಹಾ ಹಾಗೆಯೇ ಹತ್ತರಲ್ಲಿ ಹನ್ನೊಂದನೆಯವರಾಗಿಬಿಡುತ್ತಿದ್ದರೇನೋ?.jk-logo-justkannada-logo
ಆದರೆ ಹಾಗೆ ಕೇಳುತ್ತಾ ಇರುವ ವ್ಯಕ್ತಿ ಕ್ಯಾಲಿಫೋರ್ನಿಯಾದವ. ಕನ್ನಡ ಸಿನೆಮಾ ನೋಡಿಯಂತೂ ಈ ಡೈಲಾಗ್ ಕಲಿತಿರುವ ಸಾಧ್ಯತೆ ಇಲ್ಲ. ಹಾಗಾಗಿ ನನ್ನ ಕುತೂಹಲ ಹೆಚ್ಚುತ್ತಾ ಹೋಯಿತು.
ಆತ ಹೇಳಿದ-
‘ನೋಡಿ ನನ್ನ ತೂಕ ಸರಿಸುಮಾರು 90 ಕೆ ಜಿ. ಕೆಂಚನೆಯ ಕೂದಲಿದೆ. ನೀಲಿ ಕಣ್ಣುಗಳಿವೆ. ಒಂದು ಹಲ್ಲೂ ಉದುರಿಲ್ಲ. ನನ್ನ ಥೈರಾಯ್ಡ್ ಗ್ರಂಥಿಗಳು ಅದು ಯಾವ ಕೆಲಸವನ್ನು ಮಾಡಬೇಕೋ ಅದನ್ನು ಸರಿಯಾಗಿ ಮಾಡುತ್ತಿದೆ. 6 ಅಡಿ 2 ಇಂಚು ಎತ್ತರ ಇರುವ ನನ್ನ ಮೈನ ಚರ್ಮ ಹೊಳಪು ಕಳೆದುಕೊಂಡಿಲ್ಲ. ನನ್ನ ಎರಡೂ ಕಿಡ್ನಿಗಳೂ ಸರಿಯಾಗಿ ಕೆಲಸ ಮಾಡುತ್ತಿದೆ. ಆದ್ದರಿಂದ ನನ್ನ ಬೆಲೆ 2,50,000 ಡಾಲರ್’ ಎಂದ. ಆರ್ಥಾತ್ 1.36 ಕೋಟಿ ರೂಪಾಯಿ.
ಇದೇನಪ್ಪಾ ಹೊಸ ಲೆಕ್ಕಾಚಾರ? ಎಂದು ಅಂದುಕೊಳ್ಳುತ್ತಿರುವಾಗಲೇ ಆತ ಇದು ಜಗತ್ತಿನ ಯಾವುದೇ ಮೂಲೆಗೆ ಹೋದರೂ ಮನುಷ್ಯನ ಒಂದೊಂದು ಅಂಗಕ್ಕೆ ಇರುವ ರೇಟು. ನನ್ನ ದೇಹದ ಎಲ್ಲಾ ಅಂಗಗಳನ್ನೂ ಒಟ್ಟು ಮಾಡಿದರೆ ಈಗಿಂದೀಗ ಈ ರೇಟು ಗಿಟ್ಟುತ್ತದೆ ಎಂದ.
ಹಾಗೆ ನಾನು ಆತನ ಪರಿಚಯ ಮಾಡಿಕೊಂಡದ್ದು ಆತ ಬರೆದ ‘ದಿ ರೆಡ್ ಮಾರ್ಕೆಟ್’ ಪುಸ್ತಕದಲ್ಲಿ.
ಒಂದು ಕಾಲಕ್ಕೆ ಆತ ಬೋಧಕನಾಗಿದ್ದ. ವಿದೇಶದ ವಿದ್ಯಾರ್ಥಿಗಳನ್ನು ಕರೆದುಕೊಂಡು ಭಾರತ ಸುತ್ತುತ್ತಾ ಇದ್ದಾಗ ಒಂದು ಅವಘಡ ನಡೆದು ಹೋಯಿತು.
ಆತನ ವಿದ್ಯಾರ್ಥಿನಿಯೊಬ್ಬಳು ಸತ್ತು ಹೋದಳು. ಆ ಅವಘಡ ಅವನ ಲೋಕವನ್ನೇ ಬದಲಿಸಿಹಾಕಿತು.
ಮನುಷ್ಯ ಎನ್ನುವವನು ಒಂದು ದೇಹ ಮಾತ್ರ. ಅದಕ್ಕೆ ಮಾರುಕಟ್ಟೆಯಲ್ಲಿ ಇಷ್ಟು ಬೆಲೆ ಇದೆ ಎಂದು ಗೊತ್ತಾಗಿಹೋಯಿತ್ತು.
ಪರಿಣಾಮವಾಗಿ ಆತ ಜಗತ್ತಿನ ಎಲ್ಲೆಡೆ ಮಾನವನ ದೇಹದ ಅಂಗಾಂಗಗಳ ಬಗ್ಗೆ ಇರುವ ಮಾರಾಟ ಜಾಲವನ್ನು ಬೆನ್ನಟ್ಟಿ ಹೋದ.
ಭಾರತ, ಶ್ರೀಲಂಕಾ, ನೇಪಾಳ, ಭೂತಾನ್, ಮಲೇಶಿಯಾ, ಚೀನಾ, ಆಸ್ಟ್ರೇಲಿಯಾ, ಆಫ್ರಿಕಾ, ಅಮೇರಿಕಾ ಹೀಗೆ ಸುತ್ತುತ್ತಾ ಆತ ಕಂಡುಕೊಂಡಿದ್ದು ವಿಚಿತ್ರ ಲೋಕವನ್ನು.
ದೇಹದ ಇಂಚಿಂಚನ್ನೂ ಕೊಳ್ಳೆ ಹೊಡೆಯಲು ಕಾದು ಕುಳಿತಿರುವವರ ಲೋಕವನ್ನು.
‘ಮಾನವಾ ದೇಹವು ಮೂಳೆ ಮಾಂಸದ ತಡಿಕೆ’ ಅಂದರಲ್ಲಾ ಹಾಗೆ ಮನುಷ್ಯನನ್ನು ಕೇವಲ ಮೂಳೆ, ಮಾಂಸ ಎಂದುಕೊಂಡವರ ಕರಾಳ ಲೋಕವನ್ನು.
ತರಕಾರಿ ಮಾರ್ಕೆಟ್, ಹಣ್ಣಿನ ಮಾರ್ಕೆಟ್, ಸೊಪ್ಪಿನ ಮಾರ್ಕೆಟ್, ಹೂವಿನ ಮಾರ್ಕೆಟ್ ಇರುವಂತೆಯೇ ಇನ್ನೊಂದು ಮಾರ್ಕೆಟ್ ಸಹಾ ಇದೆ. ಅದು ಈ ‘ರೆಡ್ ಮಾರ್ಕೆಟ್’.
ಇಲ್ಲಿ ಮಾರಾಟಕ್ಕಿರುವುದು ಮೂಳೆ, ತಲೆಬುರುಡೆ, ಕಿಡ್ನಿ, ಕೂದಲು, ಇಡೀ ಮನುಷ್ಯ..
ಕಾರ್ ಗಳನ್ನ, ಸ್ಕೂಟರ್ ಗಳನ್ನ, ಜೆ ಸಿ ಬಿ ಯಂತ್ರಗಳನ್ನ, ಇನ್ನೂ ಬೇಕಾದರೆ ಚಿಪ್ಸ್, ಕೋಲಾಗಳನ್ನ, ಫ್ರಿಡ್ಜ್, ವಾಶಿಂಗ್ ಮೆಷಿನ್ ಗಳನ್ನ ಕಾರ್ಖಾನೆಗಳಲ್ಲಿ ಉತ್ಪಾದಿಸಬಹುದು.
ಆದರೆ ಮನುಷ್ಯನನ್ನು ಉತ್ಪಾದಿಸಲು ಸಾಧ್ಯವೇ? ಅಥವಾ ಮನುಷ್ಯನ ಯಾವುದಾದರೂ ಅಂಗಾಂಗ ವಿಫಲವಾದರೆ ಸ್ಪೇರ್ ಪಾರ್ಟ್ ಗಳನ್ನ ಉತ್ಪಾದಿಸಲು ಸಾಧ್ಯವೇ?
ಹಾಗಾಗಿಯೇ ಮಾನವ ದೇಹ ಎನ್ನುವುದನ್ನೇ ದಂಧೆ ಮಾಡಿಕೊಂಡ ಒಂದು ಭೂಗತ ಲೋಕ ತಲೆ ಎತ್ತಿದೆ.
ಆ ಲೋಕಕ್ಕೆ ಒಬ್ಬ ಮನುಷ್ಯ ಒಬ್ಬ ಮನುಷ್ಯನಾಗಿ ಕಾಣುವುದಿಲ್ಲ. ಬದಲಿಗೆ ಹಲವು ಸ್ಪೇರ್ ಪಾರ್ಟ್ ಗಳನ್ನು ಹೊಂದಿಸಿ ತಯಾರು ಮಾಡಿದ ಒಂದು ರಚನೆಯಾಗಿ ಮಾತ್ರ ಕಾಣುತ್ತಾನೆ.
ಯಾವುದೇ ಗ್ಯಾರೇಜ್ ನಲ್ಲಿ ಒಂದು ಸ್ಕೂಟರ್ ಅನ್ನು ಸಂಪೂರ್ಣವಾಗಿ ಬಿಚ್ಚಿ ಬೇಕಾದದ್ದನ್ನು ರಿಪೇರಿ ಮಾಡಿ ಓವರ್ ಆಯ್ಲಿಂಗ್ ಮಾಡಿ ಹೊಚ್ಚಹೊಸದಾಗಿ ಆಚೆ ಕಳಿಸಿಕೊಡುತ್ತಾರಲ್ಲಾ ಹಾಗೆಯೇ ಮಾನವ ದೇಹವನ್ನು ಸಹಾ ರಿಪೇರಿ ಮಾಡುವ, ಓವರ್ ಆಯ್ಲಿಂಗ್ ಮಾಡುವ ಕರಾಳ ಗ್ಯಾರೇಜ್ ಗಳು ತಲೆ ಎತ್ತಿವೆ.
ನಿಮ್ಮ ಮನೆಯ ಮಗುವೊಂದು ನಾಪತ್ತೆಯಾಗಿದ್ದರೆ ಹುಷಾರು ಅದನ್ನು ಇದೇ ಕಳ್ಳರು ಕದ್ದೊಯ್ದಿರುವ ಸಾಧ್ಯತೆ ಇದೆ.
ನಿಮ್ಮ ಮನೆಯಲ್ಲಿ ಹಿರಿಯರು ಸತ್ತಿದ್ದರೆ ಅವರನ್ನು ಮಣ್ಣು ಮಾಡಿ ಬಂದು ನೀವು ಸುಸ್ತು ಕಳೆದುಕೊಳ್ಳುವ ಮೊದಲೇ ಸಮಾಧಿಯಿಂದ ಆ ಹೆಣವನ್ನೇ ಎಗರಿಸಿರುತ್ತಾರೆ.
ಆರೋಗ್ಯ ತಪಾಸಣೆಗೆ ಆಸ್ಪತ್ರೆ ಸೇರಿದ್ದೀರಿ ಕತ್ತರಿ ನಿಮ್ಮ ಜೋಬಿಗೆ ಮಾತ್ರವಲ್ಲ, ನಿಮ್ಮ ದೇಹದ ಇನ್ನೂ ಕೆಲವು ಅಂಗಾಂಗಗಳಿಗೂ ಬಿದ್ದಿದೆ.
ಇದು ಕಟ್ಟು ಕಥೆಯಲ್ಲ. ಜಗತ್ತಿನ ನಾನಾ ದೇಶಗಳಲ್ಲಿ ನಡೆಯುತ್ತಿರುವ ಕಳ್ಳತನ ಎನ್ನುತ್ತದೆ ಈ ‘ದಿ ರೆಡ್ ಮಾರ್ಕೆಟ್’
ಇವತ್ತು ಅಮೆರಿಕಾದಲ್ಲಿ ಯಾವುದೋ ಒಂದು ಸಂಸಾರದಲ್ಲಿರುವ ಕೊರತೆಯನ್ನು ಪೂರ್ಣ ಮಾಡಲು ಇಲ್ಲಿನ ಮಗುವನ್ನು ದತ್ತು ನೀಡಲಾಗುತ್ತಿದೆ.
ಆ ಮನೆಯನ್ನು ತಲುಪುವ ಮಗು ಎಷ್ಟೋ ಬಾರಿ ಆಶ್ಚರ್ಯ ಆದರೂ ನಿಜ, ಅದು ಯಾವುದೋ ಊರಿನ ಯಾವುದೋ ಗಲ್ಲಿಯಲ್ಲಿ ಆಟ ಆಡಿಕೊಂಡಿದ್ದ ಮಗು.
ಬೇರೆಯವರ ಕಣ್ಣು ತಪ್ಪಿಸಿ ಕ್ಷಣ ಮಾತ್ರದಲ್ಲಿ ಆ ಮಗುವನ್ನು ಕದ್ದೊಯ್ದು ತನ್ನ ಕರಾಳ ಜಾಲಕ್ಕೆ ದಬ್ಬಿ ಅಮೇರಿಕಾ ತಲುಪಿಸಲಾಗುತ್ತದೆ.
ಒಳ್ಳೆಯ ತಲೆಬುರುಡೆ, ಒಳ್ಳೆಯ ಅಸ್ತಿ ಪಂಜರ, ಒಳ್ಳೆಯ ಮೂಳೆ ಇವುಗಳಿಗಾಗಿ ಸ್ಮಶಾನವನ್ನು ಲೂಟಿ ಮಾಡುವ ಗುಂಪುಗಳೇ ಸೃಷ್ಟಿಯಾಗಿದೆ.
ಹೆಣವನ್ನು ಊಳಿದ ಮರುನಿಮಿಷವೇ ಅಲ್ಲಿಂದ ಕಾಣೆಯಾಗುತ್ತದೆ.
ನಿಮ್ಮ ಕಣ್ಣೆದುರಿಗೆ ಚಿತೆಗೆ ಅಗ್ನಿ ಸ್ಪರ್ಶವಾಗಿದ್ದರೂ ನೀವು ಆ ಕಡೆ ತಿರುಗಿದ ತಕ್ಷಣವೇ ಹೆಣವನ್ನು ಚಿತೆಯಿಂದ ಎಳೆದು ಹಾಕುವ ಕೂಟಗಳಿವೆ.
ರಕ್ತದ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಬಸ್ ನಿಲ್ದಾಣಕ್ಕೆ ಬರುವವರನ್ನು ಒಂದಿಷ್ಟು ಹಣದ ಆಸೆ ತೋರಿಸಿ, ಬರಲಾರದವರನ್ನು ಬಲವಂತವಾಗಿ ಎಳೆದೊಯ್ದು ತಿಂಗಳುಗಟ್ಟಲೆ ಕತ್ತಲ ಕೋಣೆಗಳಲ್ಲಿ ರಕ್ತ ಹೀರುವ ಜಾಲವಿದೆ.
ಮನೆಯಲ್ಲಿನ ಬಡತನ, ಕೊಡಬೇಕಾದ ವರದಕ್ಷಿಣೆ ಬಾಕಿ ಕಿಡ್ನಿಗಳನ್ನೇ ಮಾಯವಾಗುವಂತೆ ಮಾಡುತ್ತಿವೆ.
ನಾಳೆಯ ಜನಾಂಗಕ್ಕೆ ಬೇಕಾದ ಸೂಪರ್ ಔಷಧಿಗಳನ್ನು ತಯಾರಿಸಲು ಮನುಷ್ಯರನ್ನೇ ಪ್ರಯೋಗ ಪಶುವಾಗಿಸುವ ದಂಧೆಯೂ ಇದೆ.
ಇಲಿಗಳ ಮೇಲೆ ಪ್ರಯೋಗ ನಡೆಸಿದ ಕಾಲವನ್ನೂ ದಾಟಿ ಮನುಷ್ಯರ ಮೇಲೂ ಪ್ರಯೋಗ ನಡೆಯುವ, ಅದಕ್ಕಾಗಿ ಜನರನ್ನು ಸರಬರಾಜು ಮಾಡುವ ಕರಾಳ ಜಾಲವಿದೆ.
ಆಸ್ಪತ್ರೆಗೆ ಹೋದ ಗರ್ಬಿಣಿ ಹೆಂಗಸಿಗೆ ಬೇಕಾದ ಚುಚ್ಚ್ಚುಮದ್ದುಗಳ ಜೊತೆ ಈ ರೀತಿಯಲ್ಲಿ ಪ್ರಯೋಗಿಸಬಾರದ ಚುಚ್ಚುಮದ್ದುಗಳನ್ನೂ ಚುಚ್ಚಿ ಕಳಿಸುವ ದುಷ್ಟ ಕೂಟವಿದೆ.
ಸೌಂದರ್ಯ ಉದ್ಯಮ ಎಷ್ಟು ಅಗಾಧವಾಗಿ ಬೆಳೆಯುತ್ತಿದೆಯೆಂದರೆ ಅವರನ್ನು ಇನ್ನಷ್ಟು ಕೊಬ್ಬಿ ಬೆಳೆಸಲು ತಿರುಪತಿಯಿಂದಲೂ ಬಿಲಿಯನ್ ಡಾಲರ್ ಮೌಲ್ಯದ ಕೂದಲು ಹೋಗಿ ಬೀಳುತ್ತಿದೆ.
ಸರ್ಕಾರ-ಆಸ್ಪತ್ರೆಗಳು- ಮಧ್ಯವರ್ತಿಗಳು- ಸರಬರಾಜುದಾರರ ಜಾಲ ಎಷ್ಟು ನಿಕಟವಾಗಿ ಹಾಗೂ ಎಷ್ಟು ಅಗಾಧವಾಗಿ ಬೆಳೆಯುತ್ತಿದೆ ಎಂದರೆ ಮನುಷ್ಯನ ದೇಹ ಎನ್ನುವುದು ಚಿನ್ನ ಅಗೆಯುವ ಕಾರ್ಖಾನೆಯಂತೆ ಕಾಣುತ್ತಿದೆ.
ಇವತ್ತು ಊರಿಗೆ ಊರೇ ಕಿಡ್ನಿ ಮಾರುವ, ಊರಿಗೆ ಊರೇ ಗರ್ಭದಾನ ಮಾಡುವ, ಊರಿಗೆ ಊರೇ ದೇಹದ ಹಕ್ಕನ್ನು ಬೇರೆಯವರಿಗೆ ಬರೆದು ಕೊಡುವ ಪರಿಸ್ಥಿತಿ ಎದುರಾಗಿದೆ.
ದುರಂತ ಎನ್ನುವುದು ಈ ರೆಡ್ ಮಾರ್ಕೆಟ್ ಗೆ ಹೇಗೆ ಆಹಾರ ಒದಗಿಸುತ್ತದೆ ಎನ್ನುವುದೇ ಮನಮಿಡಿಯುವ ಕಥೆ.
‘ಕಿಡ್ನಿವಾಕ್ಕಂ’ ಎಂದೇ ಹೆಸರಾದ ಒಂದು ಹಳ್ಳಿಯಿದೆ. ತಮಿಳುನಾಡಿಗೆ ಸುನಾಮಿ ಅಪ್ಪಳಿಸಿದಾಗ ನೆಲೆ ಕಳೆದುಕೊಂಡ ಅಲ್ಲಿನ ಪ್ರತಿಯೊಬ್ಬರ ಕಣ್ಣಲ್ಲೂ ಕಣ್ಣೀರಿದೆ.
ಹಾಗಿದೆ ಎಂದು ಗೊತ್ತಾದದ್ದೇ ತಡ ಈ ರೆಡ್ ಮಾರ್ಕೆಟ್ ಕಳ್ಳರು ರಾಜಾರೋಷವಾಗಿಯೇ ಹೆಜ್ಜೆ ಹಾಕಿದರು.
ಇಂತಹ ಕಿಡ್ನಿವಾಕ್ಕಂನಿಂದ ಹಿಡಿದು ನೆರೆಯ ಭೂತಾನದಲ್ಲಿ ರಾಶಿಗಟ್ಟಲೆ ಅಸ್ತಿಪಂಜರ ಸಿಕ್ಕ ಸ್ಥಳಕ್ಕೆ, ಇಡೀ ಜಗತ್ತಿನ ತಲೆಬುರುಡೆ ಕಾರ್ಖಾನೆ ಎಂದು ಕುಖ್ಯಾತಿ ಪಡೆದಿರುವ ಕೊಲ್ಕೊತ್ತಾಗೆ, ರಕ್ತವನ್ನು ಬಲವಂತವಾಗಿ ಕಕ್ಕಿಸಿಕೊಳ್ಳುವ ಗೋರಖಪುರಕ್ಕೆ..
..ತಪಾಸಣೆಗೆ ಬಂದ ಹೆಂಗಸಿಗೆ ಗೊತ್ತಿಲ್ಲದಂತೆ ಇನ್ನೂ ಪ್ರಯೋಗ ನಡೆಸಲಾಗುತ್ತಿರುವ ಔಷಧಿ ಚುಚ್ಚಿ ಹಣೆಯಲ್ಲಿ ಕಣ್ಣು ಉಳ್ಳ ಮಗು ಹುಟ್ಟುವಂತೆ ಮಾಡಿದ ಚೆನ್ನೈ ವರೆಗೆ, ಈ ಎಲ್ಲಾ ಅಂಗಾಂಗಗಳ ಲಾಭ ಪಡೆದ ದೇಶಗಳನ್ನೂ ಸ್ಕಾಟ್ ಕಾರ್ನೆ ಬೆನ್ನತ್ತಿ ಹೋಗಿದ್ದಾರೆ.
ಈ ದಂಧೆಯ ಕರಾಳ ಕೈಗಳು ಎಲ್ಲೆಲ್ಲಿ ಚಾಚಿದೆಯೋ ಅಲ್ಲೆಲ್ಲಾ ಅಲೆದಾಡಿದ್ದಾರೆ. ದಾಖಲೆಗಳನ್ನು ಕೂಡಿಸಿದ್ದಾರೆ. ಪೊಲೀಸರನ್ನೂ ಅಂತೆಯೇ ದಂಧೆಕೋರರನ್ನೂ ಮಾತನಾಡಿಸಿದ್ದಾರೆ.
ಈ ಮಾನವ ಅಂಗಾಂಗದ ವಾರಸುದಾರರು ಯಾರು ಎನ್ನುವುದು ಅದರ ಪ್ರಯೋಜನ ಪಡೆಯುವ ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಈ ಅಂಗಾಂಗ ವಿನಿಮಯದಲ್ಲಿ ಪಾರದರ್ಶಕತೆ ಇದ್ದಾಗ ಮಾತ್ರ ಈ ದಂಧೆಗೆ ಲಗಾಮು ಹಾಕಲು ಸಾಧ್ಯ.
ಪ್ರತಿಯೊಂದು ಬಾಟಲಿ ರಕ್ತ ಇದು ಯಾರದ್ದು ಎಂದು ಸೂಚಿಸಬೇಕು. ದತ್ತು ಪಡೆಯುವ ಮಗುವಿನ ತಾಯಿ ತಂದೆ ಯಾರು ಎಂದು ಗೊತ್ತಿರಬೇಕು. ಕಿಡ್ನಿ ಇಂತಹವರದ್ದು ಎಂದು ನಮೂದಿಸಿರಬೇಕು. ಅಸ್ತಿಪಂಜರ ಇಂತಹ ಮನೆಯವರದ್ದು ಎನ್ನುವ ದಾಖಲೆ ಇರಬೇಕು.
ಹಾಗಾಗದೆ ಹೋದಲ್ಲಿ ದಿನ ನಿತ್ಯ ಮಕ್ಕಳು ಕಾಣೆಯಾಗುತ್ತಾರೆ. ಪ್ರತಿ ನಿತ್ಯ ಕಿಡ್ನಿಗಳನ್ನು ಬಲವಂತವಾಗಿ ಕತ್ತರಿಸಲಾಗುತ್ತದೆ. ಚಿತ್ರ ವಿಚಿತ್ರ ಮಾರ್ಗಗಳನ್ನು ಈ ದಂಧೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಸ್ಕಾಟ್ ನಿಟ್ಟುಸಿರಿಡುತ್ತಾರೆ.
ಒಮ್ಮ್ಮೆ ಪ್ರವಾಸಕ್ಕೆ ಹೋದಾಗ ದಾರಿಯಲ್ಲಿ ಕುರಿ ಮಂದೆಯೊಂದು ಹಾದುಹೋಗುತ್ತಿತ್ತು.
ನನ್ನ ಜೊತೆಯಲ್ಲಿದ್ದವರೊಬ್ಬರು ‘ಅಯ್ಯಯ್ಯೋ ಎಷ್ಟೊಂದು ಮಟನ್ ಹೋಗುತ್ತಿದೆ ನೋಡಿ’ ಎಂದು ಉದ್ಘಾರ ತೆಗೆದರು.
ಆ ಮಾತಿನಿಂದ ಆದ ಶಾಕ್ ಇನ್ನೂ ಆರಿಲ್ಲ.
ಆಗಲೇ ಸ್ಕಾಟ್ ಕಾರ್ನೆ ಈ ಪುಸ್ತಕ ಮುಂದಿಟ್ಟಿದ್ದಾರೆ.
ಮನುಷ್ಯರೂ ಈಗ ಮಾಂಸವಾಗಿ ಹೋದ ಕಥೆ ಹೇಳಿದ್ದಾರೆ.